20 ಕೋಟಿ ಅವ್ಯವಹಾರ; ವರ್ಷವಾದರೂ ಅಂತಿಮ ತನಿಖಾ ವರದಿ ಸಲ್ಲಿಸದ ಮಂಡಳಿ ನಿರ್ಲಕ್ಷ್ಯ ಬಹಿರಂಗ

photo credit;newsbytes

ಬೆಂಗಳೂರು: ಸಾಬೂನು ತಯಾರಿಸಲು ಬಳಸುವ ಕಚ್ಛಾ ಸಾಮಗ್ರಿಯಾದ ಸೋಪ್ ನೂಡಲ್ಸ್‌ ಖರೀದಿಯಲ್ಲಿ 20 ಕೋಟಿ ಅವ್ಯವಹಾರ ನಡೆದಿದೆ ಎಂಬ ಪ್ರಕರಣ ಕುರಿತು ಅಂತಿಮ ತನಿಖಾ ವರದಿಯು  ವರ್ಷ ಕಳೆದರೂ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.

 

ಈ ಪ್ರಕರಣದ ಕುರಿತು ಪ್ರಾಥಮಿಕ ತನಿಖೆ ನಡೆಸಿದ್ದ ಹಿರಿಯ ಐಎಎಸ್‌ ಅಧಿಕಾರಿ ಗುಂಜನ್‌ ಕೃಷ್ಣ ಅವರು 2021ರ ಮೇ 31ರಂದು ತನಿಖಾ ವರದಿ ಸಲ್ಲಿಸಿದ್ದರು. ಈ ವರದಿ ಕುರಿತು ಅಂತಿಮ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಿದ್ದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅಧ್ಯಕ್ಷರಾಗಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಂಪನಿ ನಿರ್ದೇಶಕರ ಮಂಡಳಿಯು ವರದಿಯನ್ನೇ ಮುಚ್ಚಿ ಹಾಕಲು ಹೊರಟಿದೆ ಎಂಬುದಕ್ಕೆ ಇನ್ನಷ್ಟು ನಿದರ್ಶನಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ವರ್ಷದಿಂದಲೂ ತನಿಖಾ ವರದಿಯನ್ನು ತಮ್ಮ ಬಳಿಯೇ ಇರಿಸಿಕೊಂಡಿರುವ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು 2023ರ ಫೆ. 28ರಂದು ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಾಣಿಜ್ಯ, ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬರೆದಿರುವ ಪತ್ರದ ಪ್ರತಿ

 

ಪತ್ರದಲ್ಲೇನಿದೆ?

 

2021ರ ಮೇ 31ರ ತನಿಖಾ ವರದಿಯಲ್ಲಿ ನಮೂದಿಸಿರುವ ಆರೋಪ ಅಂಶ 2 ಮತ್ತು ಆರೋಪ ಅಂಶ 4ರ ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಮಗಳು ಪ್ರಗತಿಯಲ್ಲಿದ್ದು ಪ್ರಕರಣದಲ್ಲಿ ಅಂತಿಮ ತೀರ್ಮಾನ ತೆಗೆದುಕೊಂಡು ತೆಗೆದುಕೊಂಡ ಕ್ರಮಗಳ ಕುರಿತು ಸರ್ಕಾರಕ್ಕೆ ಅಂತಿಮ ವರದಿಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿರುತ್ತೀರಿ. ಆದರೆ ಒಂದು ವರ್ಷ ಕಳೆದರೂ ಈ ಕುರಿತು ತಮ್ಮಿಂದ ಯಾವುದೇ ಮಾಹಿತಿ, ವರದಿ ಬಂದಿರುವುದಿಲ್ಲ. ಕೂಡಲೇ ವಿವರವಾದ ವರದಿಯನ್ನು ಸ್ಪಷ್ಟ ದಾಖಲೆಗಳೊಂದಿಗೆ ಸರ್ಕಾರಕ್ಕೆ ಕಳಿಸಬೇಕು ಎಂದು ವಾಣಿಜ್ಯ ಮತ್ತುಕೈಗಾರಿಕೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆರ್‌ ಮಂಜುಳ ಅವರು 2023ರ ಫೆ.28ರಂದು ಕೆಎಸ್‌ಡಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶಿಸಿದ್ದಾರೆ.

 

ಪ್ರಕರಣದ ಹಿನ್ನೆಲೆ

 

 

ಸಾಬೂನು ತಯಾರಿಸಲು ಬಳಸುವ ಕಚ್ಛಾ ಸಾಮಗ್ರಿಯಾದ 17 ಸಾವಿರ ಮೆಟ್ರಿಕ್‌ ಟನ್‌ ಪ್ರಮಾಣದ  ಸೋಪ್‌ ನೂಡಲ್ಸ್‌ ಖರೀದಿಸಲು 2019ರಲ್ಲಿ ಟೆಂಡರ್‌ ಕರೆಯಲಾಗಿತ್ತು. ಆದರೆ ಕುಂಟು ನೆಪಗಳನ್ನೊಡ್ಡಿದ್ದ ಅಧಿಕಾರಿಗಳು ಟೆಂಡರ್‌ ಪ್ರಕ್ರಿಯೆಯನ್ನು  5 ಬಾರಿ ಮುಂದೂಡಿದ್ದರು. 6ನೇ ಬಾರಿಗೆ ಪುನಃ ಟೆಂಡರ್‌ ಕರೆದಿದ್ದ ಅಧಿಕಾರಿಗಳು ನೂಡಲ್ಸ್‌ ಪ್ರಮಾಣವನ್ನು 17 ಸಾವಿರ ಮೆಟ್ರಿಕ್‌ ಟನ್‌ನಿಂದ 12 ಸಾವಿರಕ್ಕಿಳಿಸಿದ್ದರು.

 

ಆದರೆ 6ನೇ ಬಾರಿ ಕರೆದಿದ್ದ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲಿಲ್ಲ.  2020ರ ಜನವರಿವರೆಗೆ ಪುನಃ 12 ಸಾವಿರ ಮೆಟ್ರಿಕ್‌ ಟನ್‌ ಟನ್‌ ಪ್ರಮಾಣಕ್ಕೆ ಕರೆಯಲಾಗಿತ್ತಾದರೂ ಏಪ್ರಿಲ್‌, ಆಗಸ್ಟ್‌, ಸೆಪ್ಟಂಬರ್‌ವರೆಗೂ ಈ ಪ್ರಕ್ರಿಯೆ  ಮುಂದುವರೆಯಿತು. ಇದಾದ ನಂತರ ಅದಾನಿ ವಿಲ್‌ಮರ್‌ ಸಂಸ್ಥೆಗೆ ಪ್ರತಿ ಟನ್‌ಗೆ 59 ಸಾವಿರ ರು.ನಂತೆ  ಖರೀದಿ ಆದೇಶ ನೀಡಲಾಗಿತ್ತು ಎಂದು ತಿಳಿದು ಬಂದಿದೆ.

 

 

ಇದಾದ ನಂತರ ಮತ್ತೊಮ್ಮೆ ಟೆಂಡರ್‌ ಕರೆದಿದ್ದ ಅಧಿಕಾರಿಗಳು 6 ಸಾವಿರ ಮೆಟ್ರಿಕ್‌ ಟನ್‌ಗೆ 3 ಎಫ್‌ ಇಂಡಸ್ಟ್ರೀಸ್‌ಗೆ ಪ್ರತಿ ಮೆಟ್ರಿಕ್‌ ಟನ್‌ಗೆ 71,500 ರು.ಗೆ ಖರೀದಿ ಆದೇಶ ನೀಡಿದ್ದರು. ಪುನಃ ಅಕ್ಟೋಬರ್‌ 2020ಕ್ಕೆ ಟೆಂಡರ್‌ ಕರೆದಿದ್ದ ಅಧಿಕಾರಿಗಳು 2020ರ ನವೆಂಬರ್‌ 20ರಂದು ಪ್ರತಿ ಮೆಟ್ರಿಕ್‌ ಟನ್‌ 87,000 ರು.ಗಳಂತೆ, 104 ಕೋಟಿ 40 ಲಕ್ಷ ರು.ಗೆ ಕರ್ನಾಟಕ ಕೆಮಿಕಲ್‌ ಇಂಡಸ್ಟ್ರೀಸ್‌ಗೆ ಖರೀದಿ ಆದೇಶ ನೀಡಲಾಗಿತ್ತು. ಪದೇ ಪದೇ ಟೆಂಡರ್‌ ಕರೆದಿದ್ದ ಅಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು.

 

 

ಕರ್ನಾಟಕ ಕೆಮಿಕಲ್‌ ಮತ್ತು ಕರ್ನಾಟಕ ಅರೋಮಾ ಕಂಪನಿ ಸೋದರ ಸಂಸ್ಥೆಗಳಾಗಿವೆ. ಇವೆರಡೂ ಒಂದೇ ವಿಳಾಸದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ಕೆಮಿಕಲ್‌ ಕಂಪನಿಯು ತನ್ನ ಸೇವಾವಧಿಯಲ್ಲಿ ಎಂದಿಗೂ ಯಾರಿಗೂ 1 ಟನ್‌ನಷ್ಟೂ ಕೂಡ  ನೂಡಲ್ಸ್‌  ಸರಬರಾಜು ಮಾಡಿಲ್ಲ ಎಂದು ನೌಕರರ ಸಂಘವು ದೂರಿನಲ್ಲಿ ವಿವರಿಸಿತ್ತು. ಇಂತಹ ಸಂಸ್ಥೆಗಳಿಗೆ ಆರ್ಥಿಕ ಬಿಡ್‌ನಲ್ಲಿ ಅವಕಾಶ ನೀಡಿ ಕೆಟಿಪಿಪಿ ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಇನ್ನು ನೂಡಲ್ಸ್‌ ಹೊರತುಪಡಿಸಿ ಇನ್ನಿತರೆ ಸಾಮಗ್ರಿಗಳ ಖರೀದಿಗೆ ವಾರ್ಷಿಕ ಟೆಂಡರ್‌ ಕರೆದಿದ್ದ ಅಧಿಕಾರಿಗಳು ನೂಡಲ್ಸ್‌ ಖರೀದಿಗೆ ಮಾತ್ರ  ಪದೇ ಪದೇ ಟೆಂಡರ್‌ ಪ್ರಕ್ರಿಯೆಗಳನ್ನು   ಮುಂದೂಡಿದ್ದು  ಸಂಶಯಗಳಿಗೆ ಕಾರಣವಾಗಿತ್ತು.

 

 

ಅಲ್ಲದೆ ಜಾಗತಿಕ ಮಾರುಕಟ್ಟೆಯಲ್ಲಿ ಪಾನ್‌ ಸೆಂಚುರಿ, ಬಿರ್ಲಾ ಕಂಪನಿ, ಮಲೇಶಿಯಾ, ಕೆಎಲ್‌ಕೆ ಪಾಲ್ಮೋಸಾ, ಇಜೀಲ್‌ ಕೆಮಿಕಲ್ಸ್‌ ಪ್ರೈವೈಟ್‌ ಲಿಮಿಟೆಡ್‌ ಚೆನ್ನೈ, ಕರನೀತ್‌ ಎಂಟರ್‌ಪ್ರೈಸೆಸ್‌ ಇಂಡಿಯಾ ಪ್ರೈವೈಟ್‌ ಲಿಮಿಟೆಡ್‌, ಬೆಂಗಳೂರು ಬಿರ್ಲಾ ಲಿಮಿಟೆಡ್‌, ಮಲೇಷಿಯಾ ಕಂಪನಿ 3ಎಫ್‌ ಇಂಡಸ್ಟ್ರೀಸ್‌ ಇಂಡಿಯಾ ಸೇರಿದಂತೆ ಹಲವು ಕಂಪನಿಗಳು ನೂಡಲ್ಸ್‌ನ್ನು ಕೇವಲ 55ರಿಂದ 60 ಸಾವಿರ ರು.ಗೆ ಮಾರಾಟ ಮಾಡುತ್ತಿದ್ದವು. ಆದರೆ ಕೆಎಸ್‌ಡಿಎಲ್‌ನ ಭ್ರಷ್ಟ ಅಧಿಕಾರಿಗಳು ಕರ್ನಾಟಕ ಕೆಮಿಕಲ್ಸ್‌ ಕಂಪನಿಯಿಂದ ಖರೀದಿಸಿ ಕಂಪನಿಯ ಬೊಕ್ಕಸಕ್ಕೆ ನಷ್ಟಕ್ಕೆ ಕಾರಣರಾಗಿದ್ದರು   ಎಂಬ ಆರೋಪಕ್ಕೆ ಗುರಿಯಾಗಿದ್ದರು.

 

 

ಅವ್ಯವಹಾರದಲ್ಲಿ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಇತರೆ ಅಧಿಕಾರಿಗಳ ವಿರುದ್ಧ ವಿಚಾರಣೆ ಮತ್ತು ತನಿಖೆ ನಡೆಸುವ ಸಲುವಾಗಿ ಸರ್ಕಾರ ತನಿಖಾ/ವಿಚಾರಣಾಧಿಕಾರಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ನೂಡಲ್ಸ್‌ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ 20 ಕೋಟಿ ಅಕ್ರಮದ ಬಗ್ಗೆ 10 ದಿನದ ಒಳಗೆ ವರದಿ ಸಲ್ಲಿಸಲು ಸೂಚಿಸಿತ್ತು.

 

 

 

 

ವಿಶೇಷವೆಂದರೇ  ಸೋಪ್‌ ನೂಡಲ್ಸ್‌ ಖರೀದಿಯಲ್ಲಿ 20.00 ಕೋಟಿಗೂ ಅಧಿಕ ಮೊತ್ತದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಹಿರಿಯ ಐಎಎಸ್‌ ಅಧಿಕಾರಿ ಗುಂಜನ್‌ ಕೃಷ್ಣ ಅವರು ಮೈಸೂರ್‌ ಸ್ಯಾಂಡಲ್‌ ಸೋಪ್‌ ಕಾರ್ಖಾನೆಯ ಆರೋಪಿತ ಅಧಿಕಾರಿಗಳ ವಿರುದ್ಧದ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ವರದಿ ನೀಡಿದ್ದರು.

 

ಸೋಪ್‌ ನೂಡಲ್ಸ್‌ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕುರಿತು ಕಾರ್ಮಿಕ ಸಂಘಟನೆ ದಾಖಲೆ ಸಮೇತ ದೂರು ನೀಡಿದ್ದರೂ ಕ್ರಮಬದ್ಧವಾಗಿ ತನಿಖೆ ನಡೆಸಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಅಧಿಕಾರಿಗಳು ನೀಡಿದ್ದ ಲಿಖಿತ ಉತ್ತರ ಮತ್ತು ಸಮಜಾಯಿಷಿ ಆಧರಿಸಿ ಇಡೀ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ ಎಂಬ ಬಲವಾದ ಆರೋಪ ಕೇಳಿ ಬಂದಿತ್ತು.

ಸೋಪ್‌ ನೂಡಲ್ಸ್‌ ಖರೀದಿ; 20 ಕೋಟಿ ಅವ್ಯವಹಾರ ಪ್ರಕರಣಕ್ಕೆ ಎಳ್ಳು ನೀರು?

ಗುಂಜನ್‌ ಕೃಷ್ಣ ಅವರು ನೀಡಿದ್ದ  ತನಿಖಾ ವರದಿಯನ್ನಾಧರಿಸಿ ‘ದಿ ಫೈಲ್‌’ ಈ ಕುರಿತು ವರದಿ ಪ್ರಕಟಿಸಿತ್ತು.

 

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಂಪನಿ (ಕೆಎಸ್‌ಡಿಎಲ್‌) ಕಚ್ಚಾ ಸಾಮಗ್ರಿಗಳ ಪೈಕಿ ಒಂದಾದ ನೂಡಲ್ಸ್‌ ಖರೀದಿಯಲ್ಲಿ 20.00 ಕೋಟಿಗೂ ಅಧಿಕ ಮೊತ್ತದಲ್ಲಿ ಅವ್ಯವಹಾರ ನಡೆದಿದೆ ಎಂದು ಕಾರ್ಖಾನೆಯ ಕಾರ್ಮಿಕ ಸಂಘಟನೆಯು ದಾಖಲೆ ಸಮೇತ ದೂರು ಸಲ್ಲಿಸಿತ್ತು. ಆದರೂ ತನಿಖಾಧಿಕಾರಿ ಗುಂಜನ್‌ ಕೃಷ್ಣ ಅವರು ಪೂರಕ ದಾಖಲೆಗಳನ್ನು ಸಂಘಟನೆಯು ಹಾಜರುಪಡಿಸಿಲ್ಲ. ದಾಖಲೆಗಳು ಸುಳ್ಳು ಎಂದು ಸಾಬೀತುಪಡಿಸಲು ಯಾವುದೇ ದಾಖಲೆಗಳನ್ನು ಒದಗಿಸಿಲ್ಲ ಎಂದು ಷರಾ ಬರೆದಿದ್ದರು.

‘ಡಿಎಫ್‌ಎ ಸೋಪ್‌ ನೂಡಲ್‌ ಖರೀದಿಯಲ್ಲಿ  20 ಕೋಟಿಗೂ ಅದಿಕ ಅವ್ಯವಹಾರವಾಗಿದೆ ಎಂದು ಆಪಾದಿಸಿ ಯಾವ ರೀತಿ ಅವ್ಯವಹಾರವಾಗಿದೆ ಎಂಬ ಬಗ್ಗೆ ಪೂರಕ ದಾಖಲೆಳನ್ನಾಗಲೀ, ಮಾಹಿತಿಗಳನ್ನಾಗಲಿ ಒದಗಿಸದೇ ಇರುವುದರಿಂದ ತನಿಖೆಗೆ ಸೂಚಿಸಿರುವ ಆರೋಪದ ಅಂಶವು ಸಾಬೀತಾಗಿರುವುದಿಲ್ಲ,’ ಎಂದು ಗುಂಜನ್‌ ಕೃಷ್ಣ ಅವರು ಹೇಳಿದ್ದು  ವರದಿಯಿಂದ ತಿಳಿದು ಬಂದಿತ್ತು.

ಕರ್ನಾಟಕ ಕೆಮಿಕಲ್‌ ಕಂಪನಿಯು ತನ್ನ ಸೇವಾವಧಿಯಲ್ಲಿ ಎಂದಿಗೂ ಯಾರಿಗೂ 1 ಟನ್‌ನಷ್ಟೂ ನೂಡಲ್ಸ್‌ ಕೂಡ ಸರಬರಾಜು ಮಾಡಿಲ್ಲ. ಇಂತಹ ಕಂಪನಿಗೆ ಖರೀದಿ ಆದೇಶ ನೀಡಿದ್ದರ ಹಿಂದೆಯೂ ಕಿಕ್‌ ಬ್ಯಾಕ್‌ ಆರೋಪ ಕೇಳಿ ಬಂದಿದ್ದನ್ನು ಸ್ಮರಿಸಬಹುದು.

 

 

ಈ ಕುರಿತು ಸೂಕ್ತ ತನಿಖೆ ನಡೆಯದ ಕಾರಣ ಐಎಎಸ್‌ ಅಧಿಕಾರಿಗಳ ಲಾಬಿಯಿಂದಾಗಿ ಮುಚ್ಚಿ ಹೋಗಿತ್ತು. ಆದರೀಗ ಪ್ರಶಾಂತ್‌ ಮಾಡಾಳುವಿನೊಂದಿಗೇ ಅರೋಮಾ ಕಂಪನಿಯ ಇಬ್ಬರು ಸಿಬ್ಬಂದಿಯನ್ನೂ ಬಂಧಿಸಿರುವುದರಿಂದ 20 ಕೋಟಿ ಅವ್ಯವಹಾರ ನಡೆದಿದೆ ಎನ್ನಲಾಗಿರುವ ಈ  ಪ್ರಕರಣಕ್ಕೀಗ ಮರು ಜೀವ ದೊರೆತಂತಾಗಿತ್ತು.

 

ಕರ್ನಾಟಕ ಕೆಮಿಕಲ್‌ ಮತ್ತು ಕರ್ನಾಟಕ ಅರೋಮಾ ಕಂಪನಿ ಸೋದರ ಸಂಸ್ಥೆಗಳಾಗಿವೆ. ಇವೆರಡೂ ಒಂದೇ ವಿಳಾಸದಲ್ಲಿ ಕಾರ್ಯನಿರ್ವಹಿಸುತ್ತಿತ್ತು.  ಇಂತಹ ಸಂಸ್ಥೆಗಳಿಗೆ ಆರ್ಥಿಕ ಬಿಡ್‌ನಲ್ಲಿ ಅವಕಾಶ ನೀಡಿ ಕೆಟಿಪಿಪಿ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ ಎಂದು ಕೆಎಸ್‌ಡಿಎಲ್‌  ನೌಕರರ ಸಂಘವು ನೀಡಿದ್ದ ದೂರನ್ನಾಧರಿಸಿ ಸೂಕ್ತ ತನಿಖೆ ನಡೆಸದೆಯೇ ಪ್ರಕರಣವನ್ನು  ಈಗಾಗಲೇ    ಮುಚ್ಚಿ ಹಾಕಿದೆ.

 

ಲೋಕಾಯುಕ್ತ ಪೊಲೀಸರು ಪ್ರಶಾಂತ್ ಮಾಡಾಳು ಅವರನ್ನು ಬಲೆಗೆ ಕೆಡವಲು ಹೋದ ಸಂದರ್ಭದಲ್ಲೂ ಅರೋಮಾ ಕಂಪನಿಯ  ಸಿಬ್ಬಂದಿ ಇದ್ದರು. ಲೋಕಾಯುಕ್ತ ಸಂಸ್ಥೆಯ ಮೂಲಗಳ ಪ್ರಕಾರ ಅರೋಮಾ ಕಂಪನಿಯ ಇಬ್ಬರು ಸಿಬ್ಬಂದಿ ಒಟ್ಟು 90 ಲಕ್ಷ (ತಲಾ 45 ಲಕ್ಷ) ರು.ಗಳನ್ನು ಪ್ರಶಾಂತ್‌ ಅವರಿಗೆ ನೀಡಲು ತಂದಿದ್ದರು. ಹೀಗಾಗಿ ಅರೋಮಾ ಕಂಪನಿಯ ಇಬ್ಬರ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದೆಯಲ್ಲದೇ ಈ ಇಬ್ಬರನ್ನೂ ಬಂಧಿಸಿರುವುದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts