ಬೆಂಗಳೂರು; ನಿಗದಿತ ವೆಚ್ಚಗಳನ್ನು ವಸೂಲು ಮಾಡಲು ಸಾಧ್ಯವಾಗದಿರುವುದು ಮತ್ತು ಕೆಪಿಸಿಎಲ್‌ನ ಬಾಕಿಗಳನ್ನು ಪಾವತಿಸುವಲ್ಲಿನ ವಿಫಲವಾಗಿರುವುದು ಸೇರಿದಂತೆ ಇನ್ನಿತರೆ ಕಾರಣಗಳಿಂದಾಗಿ ದುರ್ಬಲ ಹಣಕಾಸಿ ಪರಿಸ್ಥಿತಿ ಎದುರಿಸುತ್ತಿರುವ ರಾಜ್ಯದ ವಿದ್ಯುತ್ ಕಂಪನಿಗಳು (ಎಸ್ಕಾಂಗಳು) ರಾಜ್ಯದ ಹಣಕಾಸಿನ ಮೇಲೆ ಅಪಾಯಗಳನ್ನು ತರುವ ಸಾಧ್ಯತೆ ಇದೆ ಎಂದು ವಿತ್ತೀಯ ನಿರ್ವಹಣೆ ಪರಿಶೀಲನಾ ಸಮಿತಿಯು ಮುನ್ಸೂಚನೆ ನೀಡಿದೆ.
ಆಯವ್ಯಯದ ಜತೆಯಲ್ಲಿ ಮಂಡನೆಯಾಗಿರುವ 2023-27ರ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಎಸ್ಕಾಂಗಳ ಹಣಕಾಸಿನ ಪರಿಸ್ಥಿತಿ ಮೇಲೆ ಬೆಳಕು ಚೆಲ್ಲಲಾಗಿದೆ. ಎಸ್ಕಾಂಗಳ ಸುಧಾರಣೆ ಕುರಿತು ಇಂಧನ ಸಚಿವ ವಿ ಸುನಿಲ್‌ಕುಮಾರ್ ಅವರು ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರ ಬೆನ್ನಲ್ಲೇ ಮಧ್ಯಮಾವಧಿ ವಿತ್ತೀಯ ಯೋಜನೆಯು ನೀಡಿರುವ ವರದಿಯಲ್ಲಿ ಎಸ್ಕಾಂಗಳ ಕಾರ್ಯನಿರ್ವಹಣೆ ಕುರಿತು ಬೆಳಕು ಚೆಲ್ಲಿರುವುದು ಮುನ್ನೆಲೆಗೆ ಬಂದಿದೆ.
‘ರಾಜ್ಯ ವಿದ್ಯುತ್ ಕಂಪನಿಗಳ ದುರ್ಬಲ ಹಣಕಾಸು ಪರಿಸ್ಥಿತಿಯು ರಾಜ್ಯದ ಹಣಕಾಸಿನ ಮೇಲೆ ಅಪಾಯಗಳನ್ನು ತರುವ ಸಾಧ್ಯತೆ ಇರುತ್ತದೆ. ರಾಜ್ಯ ಸರ್ಕಾರವು ವಿದ್ಯುತ್ ಕಂಪನಿಗಳ ಮತ್ತು ಕೆಪಿಸಿಎಲ್‌ನ ಸಾಲಗಳಿಗೆ 30,895 ಕೋಟಿ ರು.ಗಳ ಖಾತರಿ ನಿಡಿದೆ. ಈ ಕಂಪನಿಗಳು ಸಾಲವನ್ನು ಮರು ಪಾವತಿಸಲು ವಿಫಲವಾದರೆ ಇಂತಹ ಖಾತರಿಗಳ ಕಾರಣದಿಂದ ಒಟ್ಟು ಸಾಲದ ಹೊಣೆಗಾರಿಕೆಯು ರಾಜ್ಯ ಸರ್ಕಾರದ ಮೇಲೆ ಬೀಳುತ್ತದೆ,’ ಎಂದು ವಿವರಿಸಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಡಿಸೆಂಬರ್ 2022ರವರೆಗೆ ವಿದ್ಯುತ್ ಸರಬರಾಜು ಕಂಪನಿಗಳ ಎಲ್‌ಪಿಎಸ್ ಬಾಕಿಗಳಿಗಾಗಿ 13,709 ಕೋಟಿ ರುಗಳೂ ಸೇರಿದಂತೆ 17,465 ಕೋಟಿ ರು.ಗಳ ಖಾತರಿ ನೀಡಿದೆ. ಈ ಖಾತರಿಗಳು ಸಾದಿಲ್ವಾರು ಹೊಣೆಗಾರಿಕೆಗಳಾಗಿದ್ದು ಖಾತರಿ ಪಡೆದ ವಿದ್ಯುತ್ ಕಂಪನಿಗಳು ಮರುಪಾವತಿ ಮಾಡದಿದ್ದಲ್ಲಿ ಸಂಪೂರ್ಣ ಸಾಲ ಮರುಪಾವತಿ ಹೊಣೆಗಾರಿಕೆಯು ರಾಜ್ಯ ಸರ್ಕಾರದ ಮೇಲೆ ಬೀಳುತ್ತದೆ ಎಂದು ವಿತ್ತೀಯ ನಿರ್ವಹಣೆ ಪರಿಶೀಲನಾ ಸಮಿತಿಯು ಎಚ್ಚರಿಸಿರುವುದು ವರದಿಯಿಂದ ಗೊತ್ತಾಗಿದೆ.
‘ರಾಜ್ಯವು ರಾಜ್ಯ ಉದ್ದಿಮೆಗಳಿಗೆ ವಿತರಿಸಿದ ಖಾತರಿಗಳಿಂದ ಉದ್ಭವಿಸುವ ಹೊಣೆಗಾರಿಕೆಗಳನ್ನು ಪೂರೈಸುವುದಕ್ಕಾಗಿ ಖಾತರಿ ನಿಧಿಯನ್ನು ರೂಪಿಸಿದೆ. ರಾಜ್ಯ ಸರ್ಕಾರವು ಡಿಸೆಂಬರ್ 2022ರವರೆಗೆ ವಿತರಿಸಿದ ಖಾತರಿಗಳ ಬಾಕಿ ಮೊತ್ತವು (ಬಡ್ಡಿ ಸೇರಿದಂತೆ) 36,657 ಕೋಟಿ ರು>ಗಾಇದೆ. ಇದು ಹಿಂದಿನ ಎರಡನೇ ವರ್ಷದ ರಾಜಸ್ವ ಸ್ವೀಕೃತಿಗಳ ಶೇ.21.7ರಷ್ಟಿದೆ,’ ಎಂದು ವರದಿಯಲ್ಲಿ ವಿವರಿಸಲಾಗಿದೆ.
ವಿದ್ಯುತ್ ಉತ್ಪಾದಕ, ಪ್ರಸರಣ ಕಂಪನಿಗಳಿಗೆ ಎಸ್ಕಾಂಗಳು ವಿದ್ಯುತ್ ಖರೀದಿ ಬಾಕಿ ರೂಪದಲ್ಲಿ 16,323 ಕೋಟಿ ರು.ಗಳಷ್ಟಿದೆ. 2022ರ ಡಿಸೆಂಬರ್ ಅಂತ್ಯಕ್ಕೆ 30,554 ಕೋಟಿ ರು. ಎಸ್ಕಾಂಗಳ ಬಾಕಿ ಸಾಲ ಇದೆ. ಅಲ್ಲದೇ ಎಸ್ಕಾಂಗಳ ಸಂಚಿತ ನಷ್ಟವು 2022ರ ಮಾರ್ಚ್ ಅಂತ್ಯಕ್ಕೆ 14,413 ಕೋಟಿ ರು.ಗಳಷ್ಟಿದೆ.
‘ಕೆಪಿಸಿಎಲ್‌ನ ಬಾಕಿಗಳನ್ನು ಪಾವತಿಸುವಲ್ಲಿನ ಎಸ್ಕಾಂಗಳ ವೈಫಲ್ಯದಿಂದಾಗಿ ಕೆಪಿಸಿಎಲ್‌ನ ಕಾರ್ಯಾಚರಣೆಗಳಿಗೆ ತೊಡಕು ಉಂಟಾಗಿದೆ. ಮತ್ತು ಕೆಪಿಸಿಎಲ್‌ನ ಬಾಕಿ ಸಾಲಗಳು 31,258 ಕೋಟಿ ರುಗಳಿಗೆ ಏರಲು ಕಾರಣವಾಗಿದೆ,’ ಎಂದು ಸಮಿತಿಯು ವರದಿಯಲ್ಲಿ ವಿಶ್ಲೇಷಿಸಿದೆ.
ಮಧ್ಯಮಾವಧಿ ವಿತ್ತೀಯ ಯೋಜನೆ ವರದಿ ಪ್ರಕಾರ ಎಸ್ಕಾಂಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ನಿಗದಿತ ವೆಚ್ಚಗಳನ್ನು ವಸೂಲು ಮಾಡಲು ಸಾಧ್ಯವಾಗದೇ ಇರುವುದು, ಕ್ರಾಸ್ ಸಬ್ಸಿಡೈಸೇಷನ್ ಮಟ್ಟ ಹೆಚ್ಚಿರುವುದು, ಹೆಚ್ಚಿನ ವಿದ್ಯುತ್ ದರದ ವಿದ್ಯುತ್ ಖರೀದಿಗೆ ಮತ್ತು ಹೆಚ್ಚು ಪಾವತಿಸುವಂತಹ ಗ್ರಾಹಕರು ಮುಕ್ತ ಬಳಕೆ/ಬಂಧಿತ ಉತ್ಪಾದನೆಯ ಕಡೆ ಹೊರಳುತ್ತಿರುವುದು ಎಸ್ಕಾಂಗಳನ್ನು ನಷ್ಟ ಮತ್ತು ಸಮಸ್ಯೆಗಳಿಗೆ ದೂಡಿವೆ.