ಪಿಎಂ ಕಿಸಾನ್‌ ಜಾರಿಗೊಂಡ ನಂತರವೂ ದೇಶದಲ್ಲಿ 16,854, ಕರ್ನಾಟಕದಲ್ಲಿ 3,573 ರೈತರ ಆತ್ಮಹತ್ಯೆ

ಬೆಂಗಳೂರು; ಪಿಎಂ ಕಿಸಾನ್‌, ಪ್ರಧಾನಮಂತ್ರಿ ಫಸಲ್‌ ಭೀಮಾ ಯೋಜನೆ ಸೇರಿದಂತೆ ಇನ್ನಿತರೆ ಯೋಜನೆಗಳು ಜಾರಿಗೊಂಡ ನಂತರವೂ ದೇಶದಾದ್ಯಂತ ಕಳೆದ ಮೂರು ವರ್ಷಗಳಲ್ಲಿ ಒಟ್ಟಾರೆ 16,854 ಮತ್ತು ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ 3,573 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಒಟ್ಟು ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದರೆ ಕರ್ನಾಟಕವು ಎರಡನೇ ಸ್ಥಾನದಲ್ಲಿದೆ.

 

ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡ ಒಟ್ಟು ರೈತರ ಪೈಕಿ ಕಳೆದ ಮೂರು ವರ್ಷಗಳಲ್ಲಿ ಕೇವಲ 462 ರೈತರಿಗೆ ಮಾತ್ರ ಪರಿಹಾರ ಒದಗಿಸಿದೆ. ಬಿಹಾರ ಸೇರಿದಂತೆ ದೇಶದ 11 ರಾಜ್ಯಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಶೂನ್ಯ ವರದಿಯಾಗಿದೆ.

 

ರಾಜ್ಯಸಭೆ ಸದಸ್ಯ ಅನಿಲ್‌ ದೇಸಾಯಿ ಅವರು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು 2023ರ ಫೆ.10ರಂದು ಅಂಕಿ ಅಂಶಗಳನ್ನು ಒದಗಿಸಿದೆ.

 

ರೈತರ ಆತ್ಮಹತ್ಯೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್‌ ಅವರು ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರ ಬೆನ್ನಲ್ಲೇ ರೈತರ ಆತ್ಮಹತ್ಯೆ ಪಟ್ಟಿಯಲ್ಲಿ ಕರ್ನಾಟಕವು ದೇಶದ ಎರಡನೇ ಸ್ಥಾನದಲ್ಲಿರುವುದು ಮುನ್ನೆಲೆಗೆ ಬಂದಿದೆ.

 

ಕೌಟುಂಬಿಕ ಕಾರಣ, ಅನಾರೋಗ್ಯ, ಮಾದಕ, ಕುಡಿತ, ವೈವಾಹಿಕ, ಪ್ರೇಮ ಪ್ರಕರಣ, ದಿವಾಳಿ, ನಿರುದ್ಯೋಗ, ಪರೀಕ್ಷೆಯಲ್ಲಿ ಅನುತ್ತೀರ್ಣ, ಬಡತನ ಮತ್ತು ವೃತ್ತಿಯಲ್ಲಿ ಏರಿಳಿತಗಳು ರೈತರ ಆತ್ಮಹತ್ಯೆಗೆ ಕಾರಣ ಎಂದು ಎಡಿಎಸ್‌ಐ ವರದಿಯನ್ನಾಧರಿಸಿ ಕೇಂದ್ರ ಕೃಷಿ ಸಚಿವಾಲಯವು ಅಂಕಿ ಅಂಶಗಳನ್ನು ರಾಜ್ಯಸಭೆಗೆ ಮಂಡಿಸಿದೆ.

 

2019ರಲ್ಲಿ ಪಿಎಂ ಕಿಸಾನ್‌ ಯೋಜನೆ ಜಾರಿಗೊಂಡಿದ್ದ ವರ್ಷದಲ್ಲೇ ದೇಶದಾದ್ಯಂತ 5,957 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ರಾಜ್ಯಸಭೆಗೆ ಮಂಡಿಸಿರುವ ಉತ್ತರದಿಂದ ತಿಳಿದು ಬಂದಿದೆ.

 

ರೈತರ ಅದಾಯ ಬೆಂಬಲಿಸಲು ಪಿಎಂ ಕಿಸಾನ್‌ ಯೋಜನೆಯ ಅನ್ವಯ ಪ್ರತಿ ರೈತನಿಗೆ ಪ್ರತಿ ವರ್ಷ 6,000 ರು.ನಂತೆ ಒಟ್ಟು ಮೂರು ಕಂತುಗಳಲ್ಲಿ ನೀಡಲಾಗಿದೆ. ದೇಶದ ಒಟ್ಟು 11 ಕೋಟಿ ರೈತರಿಗೆ 2.24 ಲಕ್ಷ ಕೋಟಿ ರು.ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದೆ.

 

ರಾಜ್ಯಸಭೆಗೆ ಮಂಡಿಸಲಾಗಿರುವ ಅಂಕಿ ಅಂಶದ ಉತ್ತರದ ಪ್ರಕಾರ ಕರ್ನಾಟಕದಲ್ಲಿ 2019ರಲ್ಲಿ 1,331, 2020ರಲ್ಲಿ 1,072, 2021ರಲ್ಲಿ 1,170 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯು ರಾಜ್ಯಸಭೆಗೆ ನೀಡಿರುವ ಉತ್ತರದ ಪ್ರಕಾರ 2019-20ರಲ್ಲಿ 1,091, 2020-21ರಲ್ಲಿ 855, 2021-22ರಲ್ಲಿ 915 ರೈತರು ಸೇರಿದಂತೆ ಒಟ್ಟಾರೆ 2,861 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

ಕೇಂದ್ರ ಕೃಷಿ ಇಲಾಖೆಯು 2019, 2020 ಮತ್ತು 2021ರ ಅಂಕಿ ಅಂಶಗಳನ್ನಷ್ಟೇ ರಾಜ್ಯಸಭೆಗೆ ನೀಡಿದೆ. ಕರ್ನಾಟಕದ ಕೃಷಿ ಇಲಾಖೆಯು 2019-20, 2020-21, 2021-22ರ ಅಂಕಿ ಅಂಶಗಳನ್ನು ಒದಗಿಸಿದೆ.

 

ರಾಜ್ಯಸಭೆ ಸದಸ್ಯ ಅನಿಲ್‌ ದೇಸಾಯಿ ಅವರ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಕೃಷಿ ಸಚಿವಾಲಯ

 

ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯು ನೀಡಿರುವ ಉತ್ತರದ ಪ್ರಕಾರ 2019-20ರಿಂದ 2021-22ರಲ್ಲಿ ಒಟ್ಟು 2,861 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ವರದಿಗಳ ಪೈಕಿ 2,377 ರೈತರ ಆತ್ಮಹತ್ಯೆಗಳನ್ನಷ್ಟೇ ಒಪ್ಪಿಕೊಂಡಿದೆ. ಈ ಪೈಕಿ ಕೇವಲ 462 ರೈತರಿಗೆ ಮಾತ್ರ ಪರಿಹಾರ ಒದಗಿಸಿದೆ. 462 ರೈತರ ಆತ್ಮಹತ್ಯೆ ಪ್ರಕರಣಗಳನ್ನು ತಿರಸ್ಕರಿಸಿದೆ. ಇನ್ನು 22 ಪ್ರಕರಣಗಳು ನಿರ್ಧರಿಸಲು ಬಾಕಿ ಇರಿಸಿಕೊಂಡಿರುವುದು ತಿಳಿದು ಬಂದಿದೆ. ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯು ರಾಜ್ಯಸಭೆಗೆ ನೀಡಿರುವ ಉತ್ತರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ರಾಜ್ಯಸಭೆಗೆ ಕರ್ನಾಟಕ ಕೃಷಿ ಇಲಾಖೆ ನೀಡಿರುವ ಉತ್ತರದ ಪ್ರತಿ

 

ಕಳೆದ ಮೂರು ವರ್ಷಗಳಲ್ಲಿ ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ, ತ್ರಿಪುರ, ಜಾರ್ಖಂಡ್‌, ಬಿಹಾರ್‌, ಒಡಿಶಾ, ಗೋವಾ, ಉತ್ತರಾಖಂಡ, ದೆಹಲಿ, ಲಕ್ಷದ್ವೀಪ, ಪುದುಚೇರಿಯಲ್ಲಿ ಒಬ್ಬ ರೈತನೂ ಆತ್ಮಹತ್ಯೆ ಮಾಡಿಕೊಂಡಿಲ್ಲ.

 

ಮಹಾರಾಷ್ಟ್ರದಲ್ಲಿ ಕಳೆದ ಮೂರು ವರ್ಷಗಳಲ್ಲಿ ಒಟ್ಟು 7,887 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಂಧ್ರ ಪ್ರದೇಶದಲ್ಲಿ 1,673, ಅಸ್ಸಾಂನಲ್ಲಿ 191, ಛತ್ತೀಸ್‌ಗಡ್‌ನಲ್ಲಿ 531, ಗುಜರಾತ್‌ 8, ಹಿಮಾಚಲಪ್ರದೇಶದಲ್ಲಿ 31, ಕೇರಳದಲ್ಲಿ 113, ಮಧ್ಯಪ್ರದೇಶದಲ್ಲಿ 494, ಮಣಿಪುರದಲ್ಲಿ 1, ಮೇಘಾಲಯದಲ್ಲಿ 7, ಮಿಜೋರಾಂನಲ್ಲಿ 26, ನಾಗಾಲ್ಯಾಂಡ್‌ನಲ್ಲಿ 1, ಪಂಜಾಬ್‌ನಲ್ಲಿ 584, ರಾಜಸ್ಥಾನದಲ್ಲಿ 2, ಸಿಕ್ಕೀಂನಲ್ಲಿ 14, ತಮಿಳುನಾಡಿನಲ್ಲಿ 146, ತೆಲಂಗಾಣದಲ್ಲಿ 1,309, ಉತ್ತರ ಪ್ರದೇಶದಲ್ಲಿ 208, ಅಂಡೋಮನ್ ನಿಕೋಬಾರ್‌ ದ್ವೀಪದಲ್ಲಿ 13, ಜಮ್ಮುಕಾಶ್ಮೀರದಲ್ಲಿ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿರುವುದು ಉತ್ತರದಿಂದ ತಿಳಿದು ಬಂದಿದೆ.

 

ಪ್ರಧಾನಮಂತ್ರಿ ಫಸಲ್‌ ಭೀಮಾ ಯೋಜನೆಯಡಿಯಲ್ಲಿ ಕಳೆದ 6 ವರ್ಷಗಳಲ್ಲಿ 38 ಕೋಟಿ ರೈತರು ಅರ್ಜಿ ಸಲ್ಲಿಸಿದ್ದರು. 1,30,015 ಕೋಟಿ ಕ್ಲೈಮ್‌ಗಳ ಪೈಕಿ 25,252 ಕೋಟಿ ರು. ಗಳನ್ನು ರೈತರಿಗೆ ನೀಡಲಾಗಿದೆ ಎಂದು ಮಾಹಿತಿ ಒದಗಿಸಿದೆ.

the fil favicon

SUPPORT THE FILE

Latest News

Related Posts