ಬೆಂಗಳೂರು; ನಾಲ್ಕು ಕೋಟಿ ವೆಚ್ಚದಲ್ಲಿ ಹಂಪಿ ಉತ್ಸವ ನಡೆಸಲು ಸಜ್ಜಾಗುತ್ತಿರುವ ವಿಜಯನಗರ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳ ನಿರ್ವಹಣೆ, ಆಹಾರ ಪದಾರ್ಥಗಳ ಬಿಲ್ ಬಾಕಿ ಉಳಿಸಿಕೊಂಡಿದೆ. ಅಲ್ಲದೇ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ಇದುವರೆಗೂ ಪಾವತಿ ಮಾಡಿಲ್ಲ.
ಅಷ್ಟೇ ಅಲ್ಲ, ಪರಿಶಿಷ್ಟ ಜಾತಿಯ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಾಸಿಗೆ, ಹೊದಿಕೆ, ಶುಚಿ ಕಿಟ್, ಕ್ಷೌರ, ಸಮವಸ್ತ್ರ, ವೈದ್ಯಕೀಯ ವೆಚ್ಚವನ್ನೂ ನೀಡಿಲ್ಲ ಎಂಬುದು ಬಹಿರಂಗವಾಗಿದೆ.
ವಿಜಯನಗರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯುಂಟಾಗಿದ್ದರೂ ಸಚಿವ ಆನಂದ್‌ಸಿಂಗ್ ಇದರ ಬಗ್ಗೆ ಗಮನಹರಿಸಿಲ್ಲ. ಬದಲಿಗೆ ಹಂಪಿ ಉತ್ಸವಕ್ಕೆ ನಾಲ್ಕು ಕೋಟಿ ರು.ಗಳನ್ನು ಮಂಜೂರು ಮಾಡಿಸಿಕೊಳ್ಳಲು ಮುಖ್ಯಮಂತ್ರಿಗಳ ಮೊರೆ ಹೊಕ್ಕಿದ್ದಾರೆ.
ಇದೇ ಜನವರಿ 27,28 ಮತ್ತು 29ರವರೆಗೆ ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಉತ್ಸವ ನಡೆಸಲು 4.10 ಕೋಟಿ ವೆಚ್ಚ ಮಾಡಲು ಮುಂದಾಗಿರುವ ಹೊತ್ತಿನಲ್ಲಿಯೇ ಅದೇ ಜಿಲ್ಲೆಯ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ವಿದ್ಯಾರ್ಥಿ ನಿಲಯಗಳ ನಿರ್ವಹಣೆ, ಆಹಾರ ಪದಾರ್ಥಗಳ ಬಿಲ್‌ನ್ನೂ ಬಾಕಿ ಇರಿಸಿಕೊಂಡಿರುವುದು ಮುನ್ನೆಲೆಗೆ ಬಂದಿದೆ.
ಈ ಕುರಿತು ವಿಜಯನಗರ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ವಿಜಯನಗರ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ 2022ರ ಡಿಸೆಂಬರ್ 17ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಬಳ್ಳಾರಿ ಜಿಲ್ಲೆಯಿಂದ ವಿಜಯನಗರ ಜಿಲ್ಲೆ ವಿಭಜನೆಗೊಂಡ ನಂತರ ಸಮಾಜ ಕಲ್ಯಾಣ ಇಲಾಖೆಯ ಶೇ.65ರಷ್ಟು ವಿದ್ಯಾರ್ಥಿಗಳು, ವಿದ್ಯಾರ್ಥಿ ನಿಲಯಗಳು ಹಾಗೂ ವಸತಿ ಶಾಲೆಗಳು ವಿಜಯನಗರ ಜಿಲ್ಲೆಗೆ ಒಳಪಟ್ಟಿದ್ದರೂ ಅನುದಾನ ಹಂಚಿಕೆಯಲ್ಲಿ ವಿಜಯನಗರ ಜಿಲ್ಲೆಗೆ ಹಂಚಿಕೆ ಮಾಡಿರುವ ಶೇ.35ರಷ್ಟು ಮಾತ್ರ ಅನುದಾನವು ಅವೈಜ್ಞಾನಿಕವಾಗಿ ಲಿಂಕ್ ಡಾಕ್ಯುಮೆಂಟ್‌ನಲ್ಲಿ ನಿಗದಿಪಡಿಸಿರುವುದು ಪತ್ರದಿಂದ ತಿಳಿದು ಬಂದಿದೆ.
‘ವಿದ್ಯಾರ್ಥಿ ನಿಲಯಗಳ ನಿರ್ವಹಣೆಗೆ ಸಂಬಂಧಿಸಿದಂತೆ ಆಹಾರ ಪದಾರ್ಥಗಳ ಬಿಲ್‌ಗಳ ಪಾವತಿ ಬಹಳಷ್ಟು ಬಾಕಿ ಇದೆ. ಖಾಯಂ ಹಾಗೂ ಹೊರಗುತ್ತಿಗೆ ನೌಕರರ ವೇತನಗಳ ಪಾವತಿಯು ಬಾಕಿ ಇದೆ. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪಾವತಿ ಮಾಡಬೇಕಾಗಿರುವ ಪ್ರೋತ್ಸಾನ ಧನ ಇದುವರೆಗೂ ಪಾವತಿ ಮಾಡಿರುವುದಿಲ್ಲ,’ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಾಸಿಗೆ, ಹೊದಿಕೆ, ಶುಚಿ ಕಿಟ್, ಕ್ಷೌರ, ವೈದ್ಯಕೀಯ ವೆಚ್ಚ, ಶೌಚಾಲಯ ಸ್ವಚ್ಛತೆ, ಸಮವಸ್ತ್ರ, ಸೇರಿದಂತೆ ಇನ್ನಿತರೆ ವೇತನೇತರ ವೆಚ್ಚಗಳಿಗಾಗಿ 1339.76ಲಕ್ಷ ರು. ಪ್ರಸ್ತಾವನೆ ಸಲ್ಲಿಸಿದೆ. ಆದರೆ ಲಿಂಕ್ ಡಾಕ್ಯುಮೆಂಟ್‌ನಲ್ಲಿ ಕೇವಲ 813.56 ಲಕ್ಷ ರು. ನಿಗದಿಪಡಿಸಲಾಗಿದೆ. ಇನ್ನು 526.2 ಲಕ್ಷ ರು. ಕೊರತೆಯಾಗಿರುವುದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಸಲ್ಲಿಸಿರುವ ದಾಖಲೆಗಳಿಂದ ತಿಳಿದು ಬಂದಿದೆ.
2022-23ನೇ ಸಾಲಿನ ಲಿಂಕ್ ಡಾಕ್ಯುಮೆಂಟ್‌ನಲ್ಲಿ ವಿಜಯನಗರ ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಲೆಕ್ಕ ಶೀರ್ಷಿಕೆಯಡಿ ವೇತನ ಮತ್ತು ವೇತನೇತರ ವೆಚ್ಚಗಳಿಗೆ ನಾಮಮಾತ್ರ ಅನುದಾನ ನಿಗದಿಯಾಗಿದೆ. ವಿಜಯನಗರ ಜಿಲ್ಲಾ ಪಂಚಾಯತ್‌ನಿಂದ ಅನುದಾನ ಮರು ಹೊಂದಾಣಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಅರ್ಥಿಕ ಇಲಾಖೆಯಿಂದ ಪ್ರಸ್ತಾಪಿಸದ ಅನುದಾನಕ್ಕೆ ಶೇ. 30ರಷ್ಟು ಅನುದಾನವನ್ನು ಬಳ್ಳಾರಿ ಜಿಲ್ಲೆಯಿಂದ ವಿಜಯನಗರ ಜಿಲ್ಲೆಗೆ ಮರು ಹೊಂದಾಣಿಕೆ ಮಾಡಲು ಆದೇಶಿಸಿದೆ. ಆದರೂ ಸಹ ಕೊರತೆ ಅನುದಾನವನ್ನು ಇದುವರೆಗೂ ಬಿಡುಗಡೆಗೊಳಿಸಿಲ್ಲ ಎಂಬುದು ಪತ್ರದಿಂದ ತಿಳಿದು ಬಂದಿದೆ.
ಇತ್ತ ಜನವರಿ 27, 28, 29 ರವರೆಗೆ ವಿಜಯನಗರ ಜಿಲ್ಲೆಯಲ್ಲಿ 4.10 ಕೋಟಿ ರು. ವೆಚ್ಚದಲ್ಲಿ ಹಂಪಿ ಉತ್ಸವ ನಡೆಸಲು ಜಿಲ್ಲಾಧಿಕಾರಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಎಂಸಿ ಅಂಡ್ ಎ, ನಿರ್ಮಿತಿ ಕೇಂದ್ರ, ಕ್ರೆಡಿಲ್ ಸಂಸ್ಥೆಗಳ ಸೇವೆಯನ್ನು ನೇರವಾಗಿ ಪಡೆಯಲು ಕೆಟಿಪಿಪಿ ಕಾಯ್ದೆಯ ಸೆಕ್ಷನ್ 4 (ಜಿ) ಅಡಿಯಲ್ಲಿ ವಿನಾಯಿತಿ ನೀಡುವ ಪ್ರಸ್ತಾವನೆ ಸಲ್ಲಿಸಿರುವುದು ಗೊತ್ತಾಗಿದೆ.