ಬಜೆಟ್‌ ಲೊಳಲೊಟ್ಟೆ; ಹೊಸ ಕಾರ್ಯಕ್ರಮಗಳಿಗೆ ಸಂಪನ್ಮೂಲ ಕ್ರೋಢೀಕರಿಸಲು ಹೆಣಗಾಡುತ್ತಿರುವ ಸರ್ಕಾರ

photo credit; basavarajbommai official twitter account

ಬೆಂಗಳೂರು; ಹಿಂದಿನ ಬಜೆಟ್‌ (2022-23)ನಲ್ಲಿ ಒದಗಿಸಿದ್ದ ಒಟ್ಟು ಅನುದಾನದಲ್ಲಿಯೇ 15,460 ಕೋಟಿ ರು.ಗಳನ್ನು ವೆಚ್ಚಕ್ಕೆ ಬಾಕಿ ಉಳಿಸಿಕೊಂಡಿರುವ ಸರ್ಕಾರವು ಇದೀಗ 2023-24ನೇ ಸಾಲಿನ ಆಯವ್ಯಯದಲ್ಲಿ ಹೊಸ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಹೆಣಗಾಡುತ್ತಿದೆ. ಅಲ್ಲದೇ ಹಲವು ಹಳೆಯ ಕಾರ್ಯಕ್ರಮಗಳನ್ನೂ ಕೈಬಿಡುವ ಬಗ್ಗೆಯೂ ಚಿಂತಿಸಿದೆ. ಹಾಗೆಯೆ ಹೆಚ್ಚಿನ ಅನುದಾನ ಬೇಡಿಕೆಯು ಶೇ. 10ರ ಮಿತಿಯೊಳಗೇ ಇರಬೇಕು ಎಂದು ಆರ್ಥಿಕ ಇಲಾಖೆಯು ಎಲ್ಲಾ ಇಲಾಖೆಗಳಿಗೆ ಸೂಚಿಸಿದೆ.

 

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನಪ್ರಿಯ ಬಜೆಟ್‌ ಮಂಡಿಸಲು ಅಣಿಯಾಗುತ್ತಿದ್ದಾರೆ. ಇದರ ಬೆನ್ನಲ್ಲೇ ಹೊಸ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸಂಪನ್ಮೂಲ ಕ್ರೋಢೀಕರಿಸಲು ಕಷ್ಟಸಾಧ್ಯ ಎಂದು ಆರ್ಥಿಕ ಇಲಾಖೆಯು ಅಲವತ್ತುಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.

 

2023-24ನೇ ಸಾಲಿನ ಆಯವ್ಯಯದಲ್ಲಿ ಕಾರ್ಯಕ್ರಮಗಳ ಸೇರ್ಪಡೆ ಮತ್ತು ಇಲಾಖೆಗಳ ಪ್ರಸ್ತಾವನೆಗಳ ಕುರಿತು ಆರ್ಥಿಕ ಇಲಾಖೆಯು 2023ರ ಜನವರಿ 9ರಂದು ಎಲ್ಲಾ ಇಲಾಖೆಗಳಿಗೆ ಹೊರಡಿಸಿರುವ ಟಿಪ್ಪಣಿಯಲ್ಲಿ ಹೊಸ ಕಾರ್ಯಕ್ರಮಗಳ ಕುರಿತಾಗಿ ಸೂಚನೆಗಳನ್ನು ನೀಡಿದೆ. ಆರ್ಥಿಕ ಇಲಾಖೆಯು ಬರೆದಿರುವ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಇಲಾಖೆಗಳು ಹಳೆಯ ಕಾರ್ಯಕ್ರಮಗಳನ್ನು ಕೈಬಿಡದೆ ಹೊಸ ಕಾರ್ಯಕ್ರಮಗಳನ್ನು ಕೈಗೊಂಡಾಗ ಯೋಜನೆಗಳ/ಕಾರ್ಯಕ್ರಮಗಳು ದ್ವಿಗುಣಗೊಳ್ಳುವ ಸಾಧ್ಯತೆ ಇರುತ್ತದೆ. ಜೊತೆಗೆ ಚಾಲ್ತಿಯಲ್ಲಿರುವ ಕಾರ್ಯಕ್ರಮಗಳ ಸಂಖ್ಯೆಯು ಹಾಗೂ ಬೇಕಾಗುವ ಅನುದಾನವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದರಿಂದ ರಾಜ್ಯದಲ್ಲಿ ಹೊಸ ಕಾರ್ಯಕ್ರಮಗಳನ್ನು ಕೈಗೊಳ್ಳಲು ಕಷ್ಟಸಾಧ್ಯವಾಗಿರುತ್ತದೆ. ಇಲಾಖೆಗಳು ಮೊದಲಿಗೆ ಅನುದಾನವನ್ನು ಬದ್ಧತೆಗಳಿಗೆ ಗುರುತಿಸಿಕೊಂಡು ಆ ನಂತರ ಆರ್ಥಿಕ ಇಲಾಖೆಯು ಸೂಚಿಸಿರುವ ಮಿತಿಯೊಳಗೆ ಹೊಸ ಕಾರ್ಯಕ್ರಮಗಳನ್ನು ಪ್ರಸ್ತಾಪಿಸಬೇಕು,’ ಎಂದು ಪತ್ರದಲ್ಲಿ ವಿವರಿಸಿದೆ.

 

ಹಾಗೆಯೇ ಹಳೆಯ ಕಾರ್ಯಕ್ರಮಗಳು ಅಗತ್ಯವಿಲ್ಲವೆಂದು ಕಂಡುಬಂದಲ್ಲಿ ಅವುಗಳನ್ನು ಕೈಬಿಡುವುದು ಒಳಗೊಂಡಂತೆ ತರ್ಕಬದ್ಧ ಕಾರ್ಯಕ್ರಮಗಳು, ಯೋಜನೆಗಳ ಪಟ್ಟಿಯನ್ನೊಳಗೊಂಡ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದೂ ಸೂಚಿಸಿರುವುದು ಪತ್ರದಿಂದ ತಿಳಿದು ಬಂದಿದೆ.

 

2022-23ನೇ ಸಾಲಿನ ಅರ್ಥಿಕ ವರ್ಷಾಂತ್ಯದ ಕೊನೆಯಲ್ಲಿದ್ದರೂ 32 ಇಲಾಖೆಗಳು ಶೇ. 50ರ ಗಡಿಯನ್ನು ದಾಟಿಲ್ಲ. ಕೆಲ ಇಲಾಖೆಗಳು ಶೇ. 30ರ ಗಡಿಯನ್ನೂ ದಾಟಿ ಬಂದಿಲ್ಲ. ಬಹುತೇಕ ಇಲಾಖೆಗಳು ಕಳಪೆ ಪ್ರದರ್ಶನ ತೋರಿವೆ ಎಂಬ ಆರೋಪಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ವಿಧಾನಪರಿಷತ್‌ಗೆ ಒದಗಿಸಿದ್ದ ಪಟ್ಟಿಯು ಹೆಚ್ಚಿನ ಪುಷ್ಠಿ ನೀಡಿದಂತಾಗಿತ್ತು.

 

2022-23ರ ಸಾಲಿನ ಬಜೆಟ್‌ನಲ್ಲಿ ಒಟ್ಟು ಅನುದಾನದಲ್ಲಿಯೆ 15,460 ಕೋಟಿ ಬಾಕಿ ಉಳಿಸಿಕೊಂಡು ಕೇವಲ ಶೇ.47ರಷ್ಟು ಪ್ರಗತಿ ಸಾಧಿಸಿತ್ತು. ಪ್ರಸಕ್ತ ಸಾಲಿನ ಆರ್ಥಿಕ ವರ್ಷ (2022-23) ಪೂರ್ಣಗೊಳ್ಳಲು ಇನ್ನು ಕೇವಲ ಮೂರೇ ಮೂರು ತಿಂಗಳಿದ್ದರೂ ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹಂಚಿಕೆ ಮಾಡಿದ್ದ ಒಟ್ಟು ಅನುದಾನದ ಪೈಕಿ ನವೆಂಬರ್‌ ಅಂತ್ಯದವರೆಗೆ 8,199 ಕೋಟಿ ರು. ಬಿಡುಗಡೆಗೆ ಬಾಕಿ ಉಳಿಸಿಕೊಂಡಿದೆ. ಅದೇ ರೀತಿ 2022-23ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ ಒಟ್ಟು ಕಾರ್ಯಕ್ರಮಗಳ ಪೈಕಿ ಇನ್ನೂ 122 ಕಾರ್ಯಕ್ರಮಗಳಿಗೆ ಚಾಲನೆಯೇ ದೊರೆತಿಲ್ಲ ಎಂಬುದನ್ನು ಸ್ಮರಿಸಬಹುದು.

 

ಜಲಸಂಪನ್ಮೂಲ ಸೇರಿದಂತೆ ಒಟ್ಟು 13 ಇಲಾಖೆಗಳಿಗೆ 2022-23ನೇ ಸಾಲಿನಲ್ಲಿ ನಿಗದಿಪಡಿಸಿದ್ದ ಒಟ್ಟು 81,627.03 ಕೋಟಿ ರು ಪೈಕಿ ಸೆಪ್ಟಂಬರ್‌ ಅಂತ್ಯಕ್ಕೆ ಕೆವಲ 21,698.64 ಕೋಟಿ ರು. ಮಾತ್ರ ಬಿಡುಗಡೆ ಮಾಡಿತ್ತು. ಇದು ಒಟ್ಟು ಅನುದಾನದಲ್ಲಿ ಶೇ. 40ಕ್ಕಿಂತ ಕಡಿಮೆ ಬಿಡುಗಡೆಯಾಗಿತ್ತು. ಇನ್ನೂ 59, 928.39 ಕೋಟಿ ರು. ಬಿಡುಗಡೆಗೆ ಬಾಕಿ ಉಳಿಸಿಕೊಂಡಿತ್ತು.

 

ಕೃಷಿ ಇಲಾಖೆ ಸೇರಿದಂತೆ ಒಟ್ಟು 13 ಇಲಾಖೆಗಳಿಗೆ ಶೇ.40ಕ್ಕಿಂತ ಕಡಿಮೆ ಬಿಡುಗಡೆಯಾಗಿದೆ. ನಗರಾಭಿವೃದ್ಧಿ ಇಲಾಖೆಗೆ ನಿಗದಿಪಡಿಸಿದ್ದ ಒಟ್ಟು 23,191.32 ಕೋಟಿ ರು. ಪೈಕಿ ಸೆಪ್ಟಂಬರ್‌ ಅಂತ್ಯಕ್ಕೆ ಕೇವಲ 5,315.20 ಕೋಟಿ ರು. ಮಾತ್ರ ಬಿಡುಗಡೆಯಾಗಿತ್ತು. ಇನ್ನೂ 17,876.12 ಕೋಟಿ ರ. ಬಿಡುಗಡೆಗೆ ಬಾಕಿ ಉಳಿಸಿಕೊಂಡಿತ್ತು. ಅದೇ ರೀತಿ ಜಲ ಸಂಪನ್ಮೂಲ ಇಲಾಖೆಯಲ್ಲಿ 20,815.53 ಕೋಟಿ ರು. ಪೈಕಿ 6,171.16 ಕೋಟಿ ರು. ಬಿಡುಗಡೆ ಮಾಡಿ 14,644.42 ಕೋಟಿ ರು. ಬಾಕಿ ಉಳಿಸಿಕೊಂಡಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts