ಬೆಂಗಳೂರು; ‘ಇಲ್ಲಿಗೆ ಭೇಟಿ ನೀಡುವ ಎಲ್ಲಾ ಉನ್ನತ ಅಧಿಕಾರಿಗಳಿಗೆ ಮಾಸಿಕವಾಗಿ ಒಂದು ಲಕ್ಷ, ಎರಡು ಲಕ್ಷ ರು.ಗಳನ್ನು ಅಧಿಕಾರಿಗಳ ದರ್ಜೆಗೆ ತಕ್ಕಂತೆ ಲಂಚ ನೀಡುತ್ತಿದ್ದೇನೆ. ನೀವುಗಳು ಯಾವುದೇ ದೂರು ನೀಡಿದರೂ ಏನನ್ನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ಆಧಿಕಾರಿಗಳು ಇಲ್ಲಿಗೆ ಬರುವುದು ಮಾಮೂಲಿ ಲಂಚ ಪಡೆಯಲೇ ಹೊರತು ನಿಮ್ಮ ಯೋಗಕ್ಷೇಮ ವಿಚಾರಿಸಲು ಅಲ್ಲ. ಯಾವನಾದರೂ ದೂರು ನೀಡುವ ಸಾಹಸ ಮಾಡಿದರೇ ಬಾಲಬಿಚ್ಚಿದರೆ ಅಂತಹವರ ಮನೆ ಮಠ ಮಾರಿಸುತ್ತೇನೆ. ಹೆಂಡತಿ ಮಕ್ಕಳನ್ನು ಅಡಮಾನ ಇರಿಸುತ್ತೇನೆ. ನೀವುಗಳು ಸಾಯುವವರೆಗೂ ಜೈಲಿನಲ್ಲೇ ಕೊಳೆಯವಂತೆ ಮಾಡುತ್ತೇನೆ,’
ಹೀಗೆಂದು ಖೈದಿಗಳಿಗೆ ಬೆದರಿಸಿದ್ದಾರೆ ಎಂಬ ಗುರುತರವಾದ ಆರೋಪಕ್ಕೆ ತುಮಕೂರು ಜಿಲ್ಲಾ ಕಾರಾಗೃಹದ ಅಧೀಕ್ಷಕರು ಗುರಿಯಾಗಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿ ತುಮಕೂರು ಜಿಲ್ಲಾ ಉಸ್ತುವಾರಿಯನ್ನೂ ಹೊತ್ತಿದ್ದಾರೆ. ಮತ್ತು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಅವರೂ ಇದೇ ತುಮಕೂರು ಜಿಲ್ಲೆಯವರು. ಹೀಗಿದ್ದರೂ ಜಿಲ್ಲಾ ಕಾರಾಗೃಹದ ಖೈದಿಗಳಿಂದಲೂ ಹಣ ವಸೂಲಿ, ಹಣ ನೀಡದಿದ್ದರೇ ಮಾನಸಿಕ ಹಿಂಸೆ, ದೌರ್ಜನ್ಯ, ಶೋಷಣೆ ಸೇರಿದಂತೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದರೂ ಯಾವುದೇ ಕ್ರಮ ವಹಿಸಿಲ್ಲ ಎಂದು ತಿಳಿದು ಬಂದಿದೆ.
ದೌರ್ಜನ್ಯ, ಹಣ ವಸೂಲಿ, ಲಂಚಗುಳಿತನದ ಬಗ್ಗೆ ಖೈದಿಗಳು ತಮ್ಮ ಹೆಸರು, ನಂಬರ್ ಸಹಿತ ತುಮಕೂರು ಜಿಲ್ಲಾಧಿಕಾರಿ ಸೇರಿದಂತೆ ಹಲವರಿಗೆ ಪತ್ರ ಬರೆದಿದ್ದಾರೆ. 7 ಪುಟಗಳನ್ನೊಳಗೊಂಡಿರುವ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಈ ಕುರಿತು ‘ದಿ ಫೈಲ್’ಗೆ ಪ್ರತಿಕ್ರಿಯೆ ನೀಡಿರುವ ತುಮಕೂರು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಅವರು ‘ಪತ್ರವು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಬಂದಿದೆ. ತಮಗೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ, ಪರಿಶೀಲಿಸುತ್ತೇನೆ,’ ಎಂದಷ್ಟೇ ಮಾಹಿತಿ ಹಂಚಿಕೊಂಡರು.
‘ಇವೆಲ್ಲಕ್ಕೂ ಮಿಗಿಲಾಗಿ ನಿಮಗೆ ಏನೇ ಆದರೂ ಹೇಳುವವರು ಕೇಳುವವರೂ ಯಾರೂ ಇಲ್ಲ. ನಿಮ್ಮನ್ನು ಹೊಡೆದುಕೊಂದು ಪ್ರಕರಣವನ್ನು ಮುಚ್ಚಿ ಹಾಕಿ ಜೀರ್ಣೀಸಿಕೊಳ್ಳುವ ಶಕ್ತಿ, ಅಧಿಕಾರ ಹಣ ನನ್ನಲ್ಲಿ ಇದೆ ಎಂದು ಅಧೀಕ್ಷಕರು ಬೆದರಿಕೆ ಹಾಕಿರುತ್ತಾರೆ. ಎಲ್ಲಾ ಅಧಿಕಾರಿಗಳು ಅಧೀಕ್ಷಕರ ಬಳಿ ಲಂಚ ಪಡೆಯುತ್ತಾರೆ ಎಂಬ ಅಧೀಕ್ಷಕರ ಹೇಳಿಕೆಯನ್ನು ನಂಬಲು ಅಸಾಧ್ಯವಾದರೂ ಈ ಕಾರಾಗೃಹದಲ್ಲಿ ನಡೆದಂತಹ ಸನ್ನಿವೇಶಗಳಿಗೂ ಅಧೀಕ್ಷಕರ ಹೇಳಿಕೆಗಳಿಗೂ ನೋಡಿದರೆ ನಿಜವೇನೋ ಎಂಬ ಅನುಮಾನವು ನಮ್ಮಲ್ಲಿ ಗೋಚರಿಸತೊಡಗಿವೆ,’ ಎಂದು ಅಸಹಾಯಕತೆ ವ್ಯಕ್ತಪಡಿಸಿರುವುದು ಖೈದಿಗಳ ಪತ್ರದಿಂದ ಗೊತ್ತಾಗಿದೆ.
ನ್ಯಾಯಾಲಯಗಳ ಆದೇಶದಂತೆ ಬಿಡುಗಡೆ ಹೊಂದಬೇಕಾದ ಬಂಧಿಗಳು ಸಹ ಬಿಡುಗಡೆ ಆಗಬೇಕಾದ ಸಂದರ್ಭದಲ್ಲಿ ಕಾರಾಗೃಹದ ನ್ಯಾಯಾಂಗ ವಿಭಾಗದಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಹಣ ನೀಡಬೇಕು ಎಂದು ಖೈದಿಗಳು ಪತ್ರದಲ್ಲಿ ಆರೋಪಿಸಿದ್ದಾರೆ. ‘ಹಣವನ್ನು ನೀಡದಿದ್ದಲ್ಲಿ ಯಾವುದಾದರೂ ನೆಪ ಹೇಳಿ ಆ ವ್ಯಕ್ತಿಯನ್ನು ಬಿಡುಗಡೆಗೊಳಿಸದೇ ಬಂದಿಗಳಿಂದ ಅಥವಾ ಸಂಬಂಧಿ ಮೂಲಕ ಹಣವನ್ನು ಪಡೆದ ನಂತರದಲ್ಲಿ ಬಿಡುಗಡೆ ಮಾಡುತ್ತದೆ. ಸರ್ಕಾರವು ಉಚಿತ ಸಂದರ್ಶನಕ್ಕೆ ವ್ಯವಸ್ಥೆ ಮಾಡಿದ್ದರೂ ಒಬ್ಬ ವ್ಯಕ್ತಿ ಸಂದರ್ಶನಕ್ಕೆ ಹೋದಾಗ ಒಮ್ಮೆಗೆ 200 ರು.ಗಳಗಳನ್ನು ಒಳಗಿನಿಂದ ಪಡೆದು ಹೊರಗೆ ಬಂಧಿಗಳ ಸಂಬಂಧಿಗಳಿಂದಲೂ ಹಣ ಪಡೆಯುತ್ತಿರುತ್ತಾರೆ,’ ಎಂದು ಖೈದಿಗಳು ಪತ್ರದಲ್ಲಿ ಆಪಾದಿಸಿದ್ದಾರೆ.
ಅಲ್ಲದೇ ನ್ಯಾಯಾಧೀಶರು ಸೇರಿದಂತೆ ಇನ್ನಿತರೆ ಉನ್ನತ ಅಧಿಕಾರಿಗಳು ಕಾರಾಗೃಹಕ್ಕೆ ಭೇಟಿ ನೀಡುವುದನ್ನು ಮೊದಲೇ ಖಚಿತಪಡಿಸಿಕೊಳ್ಳುವ ಅಧೀಕ್ಷಕರು, ಅವರುಗಳು ಬರುವ ಮುಂಚಿತವಾಗಿಯೇ ಕಾರಾಗೃಹದ ಅಧಿಕಾರಿಗಳು ಭೇಟಿ ನೀಡಿ ಯಾವುದೇ ದೂರು ನೀಡಬಾರದು, ಒಂದು ವೇಳೆ ದೂರು ನೀಡಿದಲ್ಲಿ ನಿಮಗೆ ಕಾನೂನು ಸಲಹೆ ದೊರೆಯದಂತೆ ಮಾಡುವುದಾಗಿ ಬೆದರಿಸುತ್ತಾರೆ ಎಂದೂ ಆರೋಪಿಸಲಾಗಿದೆ.
‘ತಮ್ಮ ಮೇಲಿರುವ ಅಲಿ ಪ್ರಕರಣಗಳಿಗೆ ತೊಂದರೆ ನೀಡುವುದಾಗುವುದ ಏಳಿರುವ ಅಧೀಕ್ಷಕರು ಆದೇಶವನ್ನುತಿಳಿಸಿರುತ್ತಾರೆ. ಆದ್ದರಿಂದ ನಾವುಗಳೂ ಭಯಗೊಂಡು ಎಲ್ಲಿ ನಮ್ಮ ಪ್ರಕರಣಗಳಿಗೆ ತೊಂದರೆಯುಂಟು ಮಾಡುವವರು ಎಂಬ ಭಯದಲ್ಲಿ ಭೇಟಿ ನೀಡಿರುವಂತಹ ಅಧಿಕಾರಿಗಳಿಗೆ ದೂರುಗಳನ್ನು ನೀಡಿರುವುದಿಲ್ಲ. ,’ ಎಂದು ಖೈದಿಗಳು ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.
ಕಾರಾಗೃಹದಲ್ಲಿ ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಸ್ಥಾಪಿಸಿರುವ 5 ಪ್ರತ್ಯೇಕ ಸೆಲ್‌ಗಳಿಲ್ಲಿರುವ ಖೈದಿಗಳಿಂದಲೂ ಒಂದು ತಿಂಗಳಿಗೆ ಒಂದು ಕೊಠಡಿಗೆ ಪ್ರವೇಶ ಶುಲ್ಕವೆಂದು 10,000 ರು.ಗಳನ್ನು ಮಾಸಿಕ 6,000 ರು.ಗಳಂತೆ ಹಣ ಪಡೆದು ಕೆಲವು ಬಂಧಿಗಳಿಗೆ ಬಾಡಿಗೆ ನೀಡಿದ್ದಾರೆ ಎಂದು ಅಧೀಕ್ಷಕರ ವಿರುದ್ಧ ದೂರಿನಲ್ಲಿ ವಿವರಿಸಿದ್ದಾರೆ.
‘ಕ್ವಾರಂಟೈನ್ ಬ್ಯಾರಕ್‌ನ ಕೊಠಡಿಗಳಿಗೆ ಬದಲಾಗಲು ಒಬ್ಬ ಬಂಧಿಗೆ 1,000 ರು, ಹಾಗೂ ಅದಕ್ಕೂ ಹೆಚ್ಚಿನ ಹಣವನ್ನು ಅಧೀಕ್ಷಕರು ನೇಮಿಸಿರುವರಿಗೆ ನೀಡಬೇಕು. ಹಣ ನೀಡದೇ ಇದ್ದ ಸಂದರ್ಭದಲ್ಲಿ ಬಂಧಿಗಳಿಗೆ ಸಂದರ್ಶನದ ಸಮಯದಲ್ಲಿ ಕುಟುಂಬದವರಿಂದ ಹಣ ಪಡೆದು ನಂತರದಲ್ಲಿ ಬ್ಯಾರಕ್‌ನ ಕೊಠಡಿಗೆ ಬದಲಾಯಿಸಿರುತ್ತಾರೆ,’ ಎಂದು ಖೈದಿಗಳು ಪತ್ರದಲ್ಲಿ ಆರೋಪಿಸಿದ್ದಾರೆ.