ಬೆಂಗಳೂರು; ತಾಯಿ ಕಾರ್ಡ್ ಮತ್ತು ಆಧಾರ್ ಕಾರ್ಡ್ ಇಲ್ಲ ಎಂದು ತುಮಕೂರಿನ ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಲು ನಿರಾಕರಿಸಿದ್ದು ಮತ್ತು ಪ್ರಾಥಮಿಕ ಚಿಕಿತ್ಸೆ ನೀಡದೆಯೇ ದಾಖಲಾತಿಗಳಿಗಾಗಿ ಕಾಲಹರಣ ಮಾಡಿದ್ದರಿಂದಲೇ ಹೆರಿಗೆ ನೋವಿನಿಂದ ಬಳಲುತ್ತಿದ್ದ ಅನಾಥ ಮಹಿಳೆ ಮತ್ತು ಅವಳಿ ಶಿಶುಗಳು ಮೃತಪಟ್ಟಿವೆ ಎಂದು ಲೋಕಾಯುಕ್ತ ತನಿಖಾ ತಂಡ ವರದಿ ಸಲ್ಲಿಸಿದೆ.
ಈ ಪ್ರಕರಣದಲ್ಲಿ ವೈದ್ಯಾಧಿಕಾರಿಗಳು ಮತ್ತು ವೈದ್ಯಕೀಯ ಸಿಬ್ಬಂದಿಯ ಅಮಾನವೀಯತೆಯೂ ಬಹಿರಂಗವಾಗಿದೆ. ಅಮಾನವೀಯತೆಯಿಂದ ನಡೆದುಕೊಂಡ ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯನ್ನು ಕರ್ತವ್ಯಲೋಪ ಮತ್ತು ದುರ್ನಡತೆ ಆರೋಪದ ಮೇರೆಗೆ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಕೈತೊಳೆದುಕೊಂಡಿದ್ದಾರೆ ಎಂದೂ ವರದಿಯಲ್ಲಿ ವಿವರಿಸಲಾಗಿದೆ.
ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ನಡೆದ ಈ ಅಮಾನವೀಯ ಪ್ರಕರಣ ಕುರಿತು ತನಿಖೆ ನಡೆಸಬೇಕು ಎಂದು ನೈಜ ಹೋರಾಟಗಾರರ ವೇದಿಕೆಯ ಹೆಚ್ ಎಂ ವೆಂಕಟೇಶ್ ಮತ್ತಿತರರು ಬರೆದಿದ್ದ ಪತ್ರವನ್ನಾಧರಿಸಿ ತನಿಖೆ ಕೈಗೊಂಡಿದ್ದ ಲೋಕಾಯುಕ್ತ ಸಂಸ್ಥೆಯು ಈ ಪ್ರಕರಣದಲ್ಲಿ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ ನ್ಯೂನತೆಗಳನ್ನು ಹೊರಗೆಡವಿದೆ. ಲೋಕಾಯುಕ್ತ ತನಿಖಾ ತಂಡ ಸಲ್ಲಿಸಿರುವ ತನಿಖಾ ವರದಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಜಿಲ್ಲಾಸ್ಪತ್ರೆಗೆ ಕಸ್ತೂರಿ ಅವರು 2022ರ ನವಂಬರ್ 2ರ ರಾತ್ರಿ 9-30 ಗಂಟೆಗೆ ಚಿಕಿತ್ಸೆಗೆಂದು ಬಂದಿದ್ದು ಮತ್ತು ಚಿಕಿತ್ಸೆ ಪಡೆಯದೇ ವಾಪಸಡ್ ಹೋಗಿರುವ ಬಗ್ಗೆ ಲೋಕಾಯುಕ್ತ ತನಿಖಾ ತಂಡವು ಆಸ್ಪತ್ರೆಯ ಸಿಸಿ ಕ್ಯಾಮರಾ ಮತ್ತು ದಾಖಲಾತಿಗಳನ್ನು ಪರಿಶೀಲಿಸಿರುವುದು ವರದಿಯಿಂದ ಗೊತ್ತಾಗಿದೆ.
ಪ್ರಾಥಮಿಕ ಚಿಕಿತ್ಸೆ ನೀಡಿರಲಿಲ್ಲ
‘ಮೃತ ಗರ್ಭಿಣಿ ಕಸ್ತೂರಿ ಅವರು ಹೊಟ್ಟೆ ನೋವು ಎಂದು 2022ರ ನವೆಂಬರ್ 2ರ ರಾತ್ರಿ 9-30 ಗಂಟೆ ಸಮಯದಲ್ಲಿ ಹೆರಿಗೆ ವಾರ್ಡ್‌ಗೆ ಹೋಗಿ ಡಾ ರೀನಾಷರಿ ಅವರನ್ನು ಮತ್ತು ಸ್ಟಾಪ್ ನರ್ಸ್‌ಗಳನ್ನು ಚಿಕಿತ್ಸೆ ನೀಡಬೇಕು ಎಂದು ಕೋರಿದ್ದರು. ಡಾ ರೀನಾಷರಿ ಮತ್ತು ಸ್ಟಾಪ್ ನರ್ಸ್ ಗರ್ಭೀಣಿ ಮಹಿಳೆಯನ್ನು ಕುಳ್ಳಿರಿಸಿ ಪ್ರಾಥಮಿಕ ಚಿಕಿತ್ಸೆ ನೀಡದೇ ಏನೋ ದಾಖಲಾತಿಗಳನ್ನು ಕೇಳುತ್ತ ಕಾಲಹರಣ ಮಾಡಿದ್ದರಿಂದ ಮನನೊಂದು ಗರ್ಭಿಣಿ ಮಹಿಳೆಯು ಆಸ್ಪತ್ರೆಯಿಂದ ವಾಪಸ್ ಹೋಗಿರುವುದು ಕಂಡು ಬಂದಿರುತ್ತದೆ,’ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಚಿಕಿತ್ಸೆಗೆ ಯತ್ನಿಸಿರಲೇ ಇಲ್ಲ
‘ಕಸ್ತೂರಿ ಅವರು ಹೆರಿಗೆ ವಾರ್ಡ್‌ಇಂದ ಹೊರಕ್ಕೆ ಬಂದಾಗ ಡ್ಯೂಟಿ ಡಾಕ್ಟರ್ ಉಷಾ ಅವರು ಬಂದಿದ್ದರು. ಇವರು ಸಹ ಗರ್ಭೀಣಿ ಮಹಿಳೆಯೊಂದಿಗೆ ಮಾತನಾಡಿ ಚಿಕಿತ್ಸೆ ನೀಡುವ ಪ್ರಯತ್ನ ಮಾಡಿರುವುದಿಲ್ಲ. ಕನಿಷ್ಟ ಪಕ್ಷ ಇವರು ಮಾತನಾಡಿರುವುದೂ ಕಂಡು ಬಂದಿರುವುದಿಲ್ಲ,’ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಸೌಜನ್ಯವನ್ನೇ ಮರೆತರು.
ಹೆರಿಗೆ ವಾರ್ಡ್‌ನಲ್ಲಿದ್ದ ಸ್ಟಾಪ್ ನರ್ಸ್‌ಗಳಾದ ಯಶೋಧ, ಸವಿತಾ, ದಿವ್ಯಭಾರತಿ,ವೇದಾವತಿ ಅವರು ಸಹ ಕಸ್ತೂರಿ ಅವರನ್ನು ಕುಳ್ಳಿರಿಸಿ ಮಾತನಾಡಿರಲಿಲ್ಲ. ಪ್ರಾಥಮಿಕ ಚಿಕಿತ್ಸೆ ನೀಡುವ ಪ್ರಯತ್ನವನ್ನೂ ಮಾಡದೆಯೇ ರೋಗಿಯೊಂದಿಗೆ ಸೌಜನ್ಯದಿಂದ ನಡೆದುಕೊಂಡಿರುವುದಿಲ್ಲ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ತನಿಖಾಧಿಕಾರಿ ನೀಡಿರುವ ಅಭಿಪ್ರಾಯವಿದು
ತುಂಬು ಗರ್ಭೀಣಿ ಕಸ್ತೂರಿ ಅವರು 2022ರ ನವೆಂಬರ್ 2ರಂದು ರಾತ್ರಿ 9-30ಕ್ಕೆ ಹೊಟ್ಟೆ ನೋವು ಎಂದು ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್‌ಗೆ ಹೋಗಿ ಅಲ್ಲಿದ್ದ ಡಾ ರೀನಾ ಷರಿ, ಸ್ಟಾಪ್ ನರ್ಸ್ ಯಶೋಧ, ಸವಿತಾ, ದಿವ್ಯಭಾರತಿ, ವೇದಾವತಿ ಇವರನ್ನು ಚಿಕಿತ್ಸೆ ನೀಡುವಂತೆ ಕೋರಿಕೊಂಡರೂ ಸಹ ಇವರು ತುರ್ತು ಪರಿಸ್ಥಿತಿಯಲ್ಲಿ ಇಲ್ಲಸಲ್ಲದ ದಾಖಲಾತಿಗಳನ್ನು ಕೇಳಿ ಕಾಲಹರಣ ಮಾಡಿದ್ದರು.
ಕಸ್ತೂರಿ ಅವರು ಮನನೊಂದು ಆಸ್ಪತ್ರೆಯಿಂದ ಹೊರಕ್ಕೆ ಬಂದು ದಿಕ್ಕು ತೋಚದೇ ಹಾಗೂ ತನ್ನ ಹತ್ತಿರ ಹಣ ಇಲ್ಲದ ಕಾರಣ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ಇರುವುದರಿಂದ ವಾಪಡ್ ತನ್ನ ವಾಸದ ಮನೆಗೆ ಹೋಗಿ ಮನೆಯಲ್ಲಿಯೇ ಇದ್ದಾಗ 2022ರ ನವೆಂಬರ್ 2ರಂದು ರಾತ್ರಿ ವೇಳೆಯಲ್ಲಿ ಒಂದು ಗಂಡು ಮಗುವಿಗೆ ಜನ್ಮ ನೀಡಿ ಮತ್ತೊಂದು ಗಂಡು ಮಗು ಮೃತಳ ಮರ್ಮಾಂಗದಿಂದ ಅರ್ಧಂಬರ್ಧ ಹೊರಬಂದು ತೀವ್ರ ರಕ್ತಸ್ರಾವವಾಗಿ ಪ್ರಸವ ವೇದನೆ ತಾಳಲಾರದೇ ತಾಯಿ ಮಗು ಮೃತಪಟ್ಟಿರುತ್ತಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
‘ಕಸ್ತೂರಿ ಅವರಿಗೆ ಸುಮಾರು 6-7 ವರ್ಷದ ಶಂಕರಿ ಎಂಬ ಒಂದು ಹೆಣ್ಣುಮಗುವಿದ್ದು ಈಗ ಆ ಹೆಣ್ಣುಮಗು ಅನಾಥೆಯಾಗಿದೆ. ಡಾ ಉಷಾ, ಡಾ ರೀನಾಷರಿ, ಸ್ಟಾಪ್ ನರ್ಸ್ ಯಶೋಧ, ಸವಿತಾ, ದಿವ್ಯಭಾರತಿ, ವೇದಾವತಿ ಅವರು ಕಸ್ತೂರಿ ಅವರೊಂದಿಗೆ ಅಮಾನವೀಯವಾಗಿ ನಡೆದುಕೊಂಡಿರುತ್ತಾರೆ. ಆದ್ದರಿಂದ ಇವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು,’ ಎಂದು ತನಿಖಾಧಿಕಾರಿ ರವೀಶ್ ಸಿ ಆರ್ ವರದಿಯಲ್ಲಿ ಶಿಫಾರಸ್ಸು ಮಾಡಿದ್ದಾರೆ.
ತುಮಕೂರು ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು, ಡಾ ಉಷಾ, ಯಶೋಧ ಬಿ ವೈ, ಸವಿತ, ದಿವ್ಯಭಾರತಿ, ಶುಶ್ರೂಧಿಕಾರಿಗಳನ್ನು ಕರ್ತವ್ಯಲೋಪ ಹಾಗೂ ದುರ್ನಡತೆ ತೋರಿದ್ದಾರೆ ಎಂಬ ಕಾರಣದಿಂದ ಅವರನ್ನು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಸುಮ್ಮನಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.