ಬೆಂಗಳೂರು; ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿಗಳನ್ನಾಗಿ ನೇಮಕ ಮಾಡುವ ಸಂಬಂಧ ಕಾನೂನು ಮತ್ತು ಸಂಸದೀಯ ಸಚಿವರು ಮತ್ತು ರಾಜ್ಯ ಸರ್ಕಾರವು ಮಾಡಿದ್ದ ಶಿಫಾರಸ್ಸನ್ನು ಬದಿಗಿರಿಸಿದ್ದ ರಾಜ್ಯಪಾಲರು ಸರ್ಕಾರವು ಶಿಫಾರಸ್ಸು ಮಾಡದೇ ಇದ್ದ ಅಭ್ಯರ್ಥಿಯನ್ನು ಕುಲಪತಿಯನ್ನಾಗಿ ನೇಮಕ ಮಾಡಿದ್ದರು ಎಂಬುದು ಇದೀಗ ದಾಖಲೆ ಸಹಿತ ಬಹಿರಂಗವಾಗಿದೆ.
ಕುಲಪತಿಗಳ ನೇಮಕಕ್ಕೆ 6-7 ಕೋಟಿ ಹಣದ ವ್ಯವಹಾರ ನಡೆದಿದೆ ಎಂಬ ಗುರುತರವಾದ ಆರೋಪವನ್ನು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಆಡಿದ್ದ ಮಾತುಗಳು ವಿಶ್ವವಿದ್ಯಾಲಯ ಮತ್ತು ಶೈಕ್ಷಣಿಕ ವಲಯದಲ್ಲಿ ಹೆಚ್ಚು ಚರ್ಚೆಗಳಾಗುತ್ತಿರುವ ಹೊತ್ತಿನಲ್ಲಿಯೇ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಕುಲಪತಿ ಹುದ್ದೆಗೆ ರಾಜ್ಯ ಸರ್ಕಾರ ಮಾಡಿದ್ದ ಶಿಫಾರಸ್ಸನ್ನು ರಾಜ್ಯಪಾಲರು ಬದಿಗಿರಿಸಿದ್ದರು ಎಂಬುದು ಇದೀಗ ಮುನ್ನೆಲೆಗೆ ಬಂದಿದೆ. ಈ ಸಂಬಂಧ ‘ದಿ ಫೈಲ್’ಗೆ ಕೆಲ ದಾಖಲೆಗಳು ಲಭ್ಯವಾಗಿವೆ.
ಕುಲಪತಿ ಹುದ್ದೆಗೆ ನೇಮಕ ಮಾಡುವ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಸಮಾಲೋಚನೆ ನಡೆಸಬೇಕು ಎಂಬ ಅಧಿನಿಯಮವಿದ್ದರೂ ಶೋಧನಾ ಸಮಿತಿಯು ಮಾಡಿದ್ದ ಆಯ್ಕೆಪಟ್ಟಿಯಲ್ಲಿ ರಾಜ್ಯ ಸರ್ಕಾರವು ಮಾಡಿದ್ದ ಶಿಫಾರಸ್ಸನ್ನು ರಾಜ್ಯಪಾಲರು ಪುರಸ್ಕರಿಸದಿರುವುದೂ ಚರ್ಚೆಗೆ ಗ್ರಾಸವಾಗಿದೆ.
ಭೂಪಾಲ್‌ನಲ್ಲಿರುವ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ ವಿ ವಿಜಯಕುಮಾರ್ ಅಧ್ಯಕ್ಷತೆಯಲ್ಲಿ ರಚಿತವಾಗಿದ್ದ ಶೋಧನಾ ಸಮಿತಿಯು ಅಶೋಕ್ ರಾಮಪ್ಪ ಪಾಟೀಲ್, ಡಾ ಬಸವರಾಜು ಸಿ, ಪ್ರೊ ನಂದಿಮಠ ಓಂಪ್ರಕಾಶ್ ವೀರಯ್ಯ ಅವರನ್ನೊಳಗೊಂಡ ಆಯ್ಕೆಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.
ಈ ಪೈಕಿ ಆರ್ಹತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯ ತತ್ವದಡಿಯಲ್ಲಿ ಕಾನೂನು ಸಂಸದೀಯ ಸಚಿವ ಜೆ ಸಿ ಮಾಧುಸ್ವಾಮಿ ಅವರು ಪ್ರೊ ನಂದಿಮಠ ಓಂಪ್ರಕಾಶ್ ವೀರಯ್ಯ ಅವರನ್ನು ಕುಲಪತಿ ಹುದ್ದೆಗೆ ಶಿಫಾರಸ್ಸು ಮಾಡಿದ್ದರು. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಅನುಮೋದಿಸಿದ್ದರು ಎಂಬುದು ದಾಖಲೆಯಿಂದ (NO LAW 55 KLM 2022) ತಿಳಿದು ಬಂದಿದೆ.
ಆದರೆ ರಾಜ್ಯಪಾಲರು ಪ್ರೊ ನಂದಿಮಠ ಓಂಪ್ರಕಾಶ್ ವೀರಯ್ಯ ಅವರ ಬದಲಿಗೆ ಡಾ ಸಿ ಬಸವರಾಜು ಎಂಬುವರನ್ನು ನೇಮಕಗೊಳಿಸಿದ್ದರು.
ಕುಲಪತಿ ಹುದ್ದೆಗೆ ನೇಮಕ ಮಾಡುವಾಗ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರು ಅರ್ಹತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವವನ್ನು ಅನುಸರಿಸಬೇಕು. ಇದನ್ನು ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ಮತ್ತು ಒಪ್ಪಿಗೆಯನ್ನೂ ಪಡೆಯಬೇಕು. ಆದರೆ ಕಾನೂನು ವಿಶ್ವವಿದ್ಯಾಲಯ ಕುಲಪತಿ ಹುದ್ದೆಗೆ ನೇಮಕ ಪ್ರಕ್ರಿಯೆ ಸಂದರ್ಭದಲ್ಲಿ ಈ ಪ್ರಕ್ರಿಯೆಗಳು ನಡೆದಿಲ್ಲ ಎಂಬುದು ಲಭ್ಯವಿರುವ ದಾಖಲೆಯಿಂದ ತಿಳಿದು ಬಂದಿದೆ.
ಪ್ರೊ ಡಾ ಜಿ ಆರ್ ಜಗದೀಶ್, ಪ್ರೊ ಎಸ್ ಯು ಕೆ ಪಾಟೀಲ್, ಪ್ರೊ ಬಿ ಎಸ್ ರೆಡ್ಡಿ, ಡಾ ರಮೇಶ್, ಶರತ್ ಬಾಬು, ಡಾ ಶಿವಾನಂದ ಹೆಚ್, ಪ್ರೊ ವೆಂಕಟಚಲಾ ಜಿ ಹೆಗ್ಡೆ ಅವರು ಸೇರಿದಂತೆ ಒಟ್ಟು 10 ಮಂದಿ ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು.