ಅಬಕಾರಿ ಹಗರಣ; ಪ್ರಭಾವಿ ರಾಜಕಾರಣಿಯೊಬ್ಬರ ಪುತ್ರನ ಹೆಸರು ಆಡಿಯೋದಲ್ಲಿ ಪ್ರಸ್ತಾಪ

photo credit;thenewindianexpress

ಬೆಂಗಳೂರು; ಮುಂಬೈ ಮೂಲದ ಕೆ ಎನ್‌ ರಿಸೋರ್ಸ್‌ ಪ್ರೈ ಲಿಮಿಟೆಡ್‌ಗೆ 2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ನಿಯಮ ಉಲ್ಲಂಘಿಸಿ ರಫ್ತು ಮಾಡಲು ಅನುಮತಿ ನೀಡಲಾಗಿದೆ ಎಂದು ಕೇಳಿ ಬಂದಿರುವ ಆರೋಪಗಳ ನಡುವೆಯೇ ಅನುಮತಿ ನೀಡುವ ಪ್ರಕ್ರಿಯೆಯಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರ ಪುತ್ರ ಮತ್ತು ಸಚಿವರೊಬ್ಬರ ಹೆಸರು ಪ್ರಸ್ತಾಪವಾಗಿರುವ ಆಡಿಯೋವೊಂದು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕಾಕಂಬಿ ರಫ್ತಿಗೆ ಸಂಬಂಧಿಸಿದಂತೆ ‘ದಿ ಫೈಲ್‌’ 2022ರ ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ಆರ್‌ಟಿಐ ಅಡಿಯಲ್ಲಿ ದಾಖಲೆಗಳನ್ನಾಧರಿಸಿ ವರದಿ ಪ್ರಕಟಿಸಿತ್ತು. ಈ ನಡುವೆ ಇದೇ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರ ಪುತ್ರ ಮತ್ತು ಸಚಿವರೊಬ್ಬರ ಹೆಸರು ಪ್ರಸ್ತಾಪವಾಗಿರುವ ಆಡಿಯೋ ಚರ್ಚೆಗೆ ಕಾರಣವಾಗಿದೆ.

 

ಈ ಆಡಿಯೋವನ್ನು ‘ದಿ ಫೈಲ್‌’ ಖಚಿತಪಡಿಸಿಕೊಂಡಿಲ್ಲ. ಹಾಗಾಗಿ ಆಡಿಯೋದಲ್ಲಿರುವ ಸಂಭಾಷಣೆಯನ್ನು ಪ್ರಕಟಿಸುತ್ತಿಲ್ಲ. ಆದರೆ ಇದೇ ಪ್ರಕರಣದ ಕುರಿತು ‘ದಿ ಫೈಲ್‌’ ಮೂರು ವರದಿಗಳನ್ನು ಪ್ರಕಟಿಸಿರುವುದರಿಂದ ಅದರ ಮುಂದುವರಿಕೆ ಭಾಗವಾಗಿ ಪ್ರಭಾವಿ ರಾಜಕಾರಣಿಯೊಬ್ಬರ ಪುತ್ರ ಮತ್ತು ಸಚಿವರೊಬ್ಬರ ಹೆಸರು ಪ್ರಸ್ತಾಪವಾಗಿದೆ ಎಂದಷ್ಟೇ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ಮುಂಬೈ ಮೂಲದ ಕಂಪನಿಯ ಏಜೆಂಟ್‌ ಎಂದು ಹೇಳಲಾದ ಒಬ್ಬ ವ್ಯಕ್ತಿಯು ಮತ್ತೊಂದು ಕಂಪನಿಯ ಸಾಗಾಣಿಕೆದಾರನೊಬ್ಬನ ಜತೆ ನಡೆದಿರುವ ಈ ಮಾತುಕತೆಯಲ್ಲಿ ಸಚಿವರೊಬ್ಬರು ಮತ್ತು ಪ್ರಭಾವಿ ರಾಜಕಾರಣಿಯೊಬ್ಬರ ಪುತ್ರನ ಹೆಸರು ಹಲವು ಬಾರಿ ಪ್ರಸ್ತಾಪವಾಗಿರುವುದು ಲಭ್ಯವಿರುವ ಆಡಿಯೋದಿಂದ ತಿಳಿದು ಬಂದಿದೆ.

 

‘ಕಾಕಂಬಿ ರಫ್ತಿಗೆ ಅನುಮತಿ ಕೊಡಿಸುವುದರ ಹಿಂದೆ ಪ್ರಭಾವಿ ರಾಜಕಾರಣಿಯೊಬ್ಬರ ಪುತ್ರನೇ ನೇರವಾಗಿ ಕಂಪನಿಯನ್ನು ಸಂಪರ್ಕಿಸಿದ್ದರು. ನೇರವಾಗಿ ಅವರೊಬ್ಬರೇ ಮಾತನಾಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಯಾರನ್ನೂ ಭಾಗಿಯಾಗಿಸಿಲ್ಲ. ಲಾಜಿಸ್ಟಿಕ್ಸ್‌ ಕಂಪನಿಯ ಹೆಸರನ್ನೂ ಪ್ರಸ್ತಾಪಿಸಿರುವ ಕಂಪನಿಯ ಏಜೆಂಟ್‌, ದಾಖಲಾತಿಗಳ ಬಗ್ಗೆ ಅಷ್ಟೊಂದು ಗಮನ ಹರಿಸಿಲ್ಲ ಎಂದು ಹೇಳಿರುವುದು ಆಡಿಯೋದಿಂದ ತಿಳಿದು ಬಂದಿದೆ.

 

ಹಾಗೆಯೇ ಸಚಿವ ಮತ್ತು ಪ್ರಭಾವಿ ರಾಜಕಾರಣಿಯ ಪುತ್ರನೇ ಮಾಡಿಸಿಕೊಟ್ಟಿದ್ದಾರೆ ಎಂದು ಆಡಿಯೋದಲ್ಲಿ ಪ್ರಸ್ತಾಪವಾಗಿದೆ. ಹಣದ ಕುರಿತು ಪ್ರಸ್ತಾಪವಾಗಿದೆಯಾದರೂ ಎಷ್ಟು ಹಣ ಎಂಬುದನ್ನು,’ ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ.

 

ಹೊರ ರಾಜ್ಯದ ಕಾಕಂಬಿ ರಫ್ತುದಾರರು ಮತ್ತು ಕಂಪನಿಗಳು ರಾಜ್ಯದ ಕಾಕಂಬಿಯನ್ನು ಗೋವಾ ಮತ್ತು ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಿಗೆ ರಫ್ತು ಮಾಡಲು ಸಲ್ಲಿಸಿದ್ದ ಪ್ರಸ್ತಾವನೆಗಳನ್ನು ಹಿಂದಿನ ಸರ್ಕಾರಗಳು ತಿರಸ್ಕರಿಸಿದ್ದವು. ಆದರೆ ಹಾಲಿ ಸರ್ಕಾರವು ಗುಜರಾತ್‌ ಮತ್ತು ಮಹಾರಾಷ್ಟ್ರ ಬಂದರು ಮೂಲಕ ರಫ್ತು ಮಾಡುವ ಮಹಾರಾಷ್ಟ್ರ ಮೂಲದ ಕೆ ಎನ್‌ ರಿಸೋರ್ಸ್‌ ಪ್ರೈ ಲಿಮಿಟೆಡ್‌ಗೆ 2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ಎತ್ತುವಳಿ ಮಾಡಿ ರಫ್ತು ಮಾಡಲು ಅನುಮತಿ ಪಡೆದುಕೊಳ್ಳುವುದರ ಹಿಂದೆ ಅಧಿಕಾರ ದುರುಪಯೋಗ ಮಾತ್ರವಲ್ಲದೇ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿದ್ದವು.

 

ಪರವಾನಿಗೆ ಇಲ್ಲದಿದ್ದರೂ ಮರೆಮಾಚಿದ್ದ ಅಧಿಕಾರಿಗಳು ಮುಂಬೈ ಮೂಲದ ಕಂಪನಿಗೆ ಕಾಕಂಬಿ ರಫ್ತುಮಾಡಲು ಅನುಮತಿ ನೀಡಲಾಗಿದೆ ಎಂದು ‘ದಿ ಫೈಲ್‌’ ನವೆಂಬರ್‌ 30ರಂದು ಆರ್‌ಟಿಐ ದಾಖಲೆಗಳನ್ನಾಧರಿಸಿ ವರದಿ ಪ್ರಕಟಿಸಿತ್ತು.

 

ಅಬಕಾರಿ ಹಗರಣ; ಪರವಾನಿಗೆ ಇಲ್ಲದಿದ್ದರೂ ಮರೆಮಾಚಿ ಮುಂಬೈ ಕಂಪನಿಗೆ ಕಾಕಂಬಿ ರಫ್ತಿಗೆ ಅನುಮತಿ

 

ಅಬಕಾರಿ ಆಯುಕ್ತರ ಕಚೇರಿಯು ಸಲ್ಲಿಸಿದ್ದ ಪ್ರಸ್ತಾವನೆ ಮೇಲೆ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್‌ ಮತ್ತು ಕಾರ್ಯದರ್ಶಿ ಡಾ ಏಕ್‌ರೂಪ್‌ಕೌರ್‌ ಅವರೂ ಸೇರಿದಂತೆ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಕಂಪನಿಯು ಎಂ 2 ಲೈಸೆನ್ಸ್‌ ಇಲ್ಲದಿರುವ ಅಂಶವನ್ನು ಪ್ರಸ್ತಾವನೆಯಲ್ಲಿನ ಕಡತದಲ್ಲಿ ಎಲ್ಲಿಯೂ ನಮೂದಿಸಿಲ್ಲ ಮತ್ತು ದಾಖಲಿಸಿಲ್ಲ ಎಂದು ಆರ್‌ಟಿಐ ದಾಖಲೆಗಳನ್ನಾಧರಿಸಿ ವರದಿ ಪ್ರಕಟಿಸಿತ್ತು.

 

ಕರಡು ಪತ್ರವನ್ನು ತಯಾರಿಸಿರುವ ಆರ್ಥಿಕ ಇಲಾಖೆಯು ಎಂ 2 ಲೈಸೆನ್ಸ್‌ ಇಲ್ಲದಿರುವುದರ ಕುರಿತು ಇ-ಆಫೀಸ್‌ ಕಡತದಲ್ಲಿ ಎಲ್ಲಿಯೂ ಚರ್ಚೆ ನಡೆಸದಿರುವುದು ಸಂಶಯಗಳಿಗೆ ಕಾರಣವಾಗಿದೆ. ಈ ಬೆಳವಣಿಗೆ ನಡುವೆಯೇ ಪ್ರಭಾವಿ ರಾಜಕಾರಣಿಯೊಬ್ಬರ ಪುತ್ರ ಮತ್ತು ಸಚಿವರೊಬ್ಬರು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಲಭ್ಯವಾಗಿರುವ ಆಡಿಯೋ ರಾಜಕಾರಣದ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

SUPPORT THE FILE

Latest News

Related Posts