ತರಳಬಾಳು ಕೇಂದ್ರದಲ್ಲಿ ಅಕ್ರಮ ಕಟ್ಟಡ; ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು

ಬೆಂಗಳೂರು; ‘ನಾಗರಿಕ ಸೌಲಭ್ಯ ನಿವೇಶನ ಹಂಚಿಕೆ ನಿಯಮಗಳಿಗೆ ವ್ಯತಿರಿಕ್ತವಾಗಿ ತರಳಬಾಳು ಮಠವು ಆರ್‌ ಟಿ ನಗರದಲ್ಲಿ ಕಾನೂನು ಬಾಹಿರ ಮತ್ತು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ,’ ಎಂದು ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯ ಮುಖ್ಯ ಆಯುಕ್ತರ ವಿರುದ್ಧ ವೆಂಕಟೇಶ್‌ ಜಿ ಬಿ ಎಂಬುವರು ಲೋಕಾಯುಕ್ತಕ್ಕೆ ದೂರು ದಾಖಲಿಸಿರುವುದು ಇದೀಗ ಬಹಿರಂಗವಾಗಿದೆ.

 

ಸಿರಿಗೆರೆಯ ತರಳಬಾಳು ಮಠದ ಡಾ ಶಿವಮೂರ್ತಿ ಶಿವಾಚಾರ್ಯ ಅವರ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಹೂಡಿರುವ ಅಸಲು ದಾವೆಯೊಂದು ವಿಚಾರಣೆಯಲ್ಲಿರುವ ಬೆನ್ನಲ್ಲೇ ಆರ್‌ ಟಿ ನಗರದಲ್ಲಿ ಮಠವು ಕಾನೂನುಬಾಹಿರ ಮತ್ತು ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿದೆ ಎಂದು ಸಲ್ಲಿಕೆಯಾಗಿರುವ ದೂರು(lok/bcd/4345/2022) ಮಹತ್ವಪಡೆದುಕೊಂಡಿದೆ.

 

ಸದ್ಯ ಈ ದೂರು ಲೋಕಾಯುಕ್ತ ಬಿ ಎಸ್‌ ಪಾಟೀಲ್‌ ಅವರ ಬಳಿಯಿದ್ದು, 2022ರ ಡಿಸೆಂಬರ್‌ 7ರಂದು ವಿಚಾರಣೆಗೆ ಬರಲಿದೆ. ಈ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ದೂರಿನಲ್ಲೇನಿದೆ?

 

ಬೆಂಗಳೂರು ಅಭಿವೃದ್ದಿ ಪ್ರಾಧಿಕಾರವು ತರಳಬಾಳು ಬೃಹನ್ಮಠಕ್ಕೆ ಹಂಚಿಕೆ ಮಾಡಿದ್ದ ನಾಗರಿಕ ಸೌಲಭ್ಯ ನಿವೇಶನದಲ್ಲಿ ತರಳಬಾಳು ಕೇಂದ್ರ ಕಟ್ಟಡವನ್ನು ನಿರ್ಮಿಸಲಾಗಿದೆ. ಮೂಲ ಕಟ್ಟಡದ ನಕಾಶೆಯಲ್ಲಿ ನೆಲಮಾಳಿಗೆ (ಬೇಸ್‌ಮೆಂಟ್‌) ವಾಹನ ನಿಲುಗಡೆ ಸೌಲಭ್ಯಕ್ಕೆ ಅನುಮತಿ ತೆಗೆದುಕೊಂಡು ಕಟ್ಟಡವನ್ನು ನಿರ್ಮಿಸಿದ್ದಾರೆ. ಆದರೆ ಈ ಕಟ್ಟಡದ ನಿರ್ಮಾಣವಾದ ದಿನದಿಂದಲೂ ಅಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ.

 

ವಾಹನ್ ಪಾರ್ಕಿಂಗ್‌ಗೆ ಮಹಾನಗರಪಾಲಿಕೆ ಅನುಮತಿ ನೀಡಿರುವ ಸ್ಥಳದಲ್ಲಿ ಅಕ್ರಮವಾಗಿ ಕಲ್ಯಾಣ ಮಂಟಪ, ಅದಕ್ಕೆ ಹೊಂದಿಕೊಂಡಿರುವ ಅಡಿಗೆ ಮನೆ, ಊಟದ ಮನೆ, ಕಲ್ಯಾಣ ಮಂಟಪದ ಕೊಠಡಿಗಳಿಗೆ ಬಳಕೆ ಮಾಡಿಕೊಂಡಿದ್ದಾರೆ. ಇದೇ ಜಾಗದಲ್ಲಿ ಈ ಕಟ್ಟಡದ ಸೆಂಟ್ರಲ್‌ ಏರ್‌ ಕಂಡೀಷನರ್‌ ನಿರ್ವಹಿಸುವ ಡಕ್‌ ರೂಮ್‌ಗಳು ಹಾಗೂ ಯಂತ್ರಗಳ ಕೊಠಡಿಗಳೂ ಇವೆ.

 

ನೆಲಮಾಳಿಗೆಯಲ್ಲಿ ಕಲ್ಯಾಣ ಮಂಟಪ ಮಾಡಿಕೊಂಡಿರುವುದರಿಂದ ಇಲ್ಲಿ ಬರುವ ಜನರ ವಾಹನಗಳಿಗೆ ಪಾರ್ಕಿಂಗ್‌ ಸೌಲಭ್ಯ ಇಲ್ಲದಂತಾಗಿದೆ. ಹೀಗಾಗಿ ಆರ್‌ ಟಿ ನಗರದ ಸಾರ್ವಜನಿಕ ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸುವುದರಿಂದ ಕಿರಿದಾದ ರಸ್ತೆಯು ವಾಹನಗಳಿಂದ ತುಂಬಿ ಹೋಗುತ್ತದೆ. ಈ ವಾಹನಗಳ ಹಾರನ್‌ ಶಬ್ದದಿಂದಾಗಿ ಶಬ್ದಮಾಲಿನ್ಯವೂ ಉಂಟಾಗುತ್ತಿದೆ. ಈ ಭಾಗದಲ್ಲಿ ಸಾರ್ವಜನಿಕರಿಂದ ತುಂಬಾ ತೊಂದರೆಯಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

 

‘ಆದರೆ ಈಗ ಕಟ್ಟಡದ ಮೂರನೇ ಅಂತಸ್ತಿನ ಮೇಲುಗಡೆ ಮತ್ತೊಂದು ಅಂತಸ್ತಿನ ಕಟ್ಟಡವನ್ನು ಅಕ್ರಮವಾಗಿ ಕಾನೂನು ಬಾಹಿರವಾಗಿ ಕಟ್ಟಲು ಮುಂದಾಗಿದ್ದಾರೆ. ಹೊಸದಾಗಿ ಕಟ್ಟಡ ಕಟ್ಟಲು ಮುಂದಾಗಿರುವ ಸ್ಥಳದಲ್ಲಿ ಮತ್ತೊಂದು ಕಲ್ಯಾಣ ಮಂಟಪ ನಿರ್ಮಾಣ ಮಾಡುವ ಉದ್ದೇಶ ಇವರಿಗೆ ಇರುವಂತಿದೆ,’ ಎಂದು ದೂರುದಾರ ವೆಂಕಟೇಶ್‌ ಎಂಬುವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

 

ತರಳಬಾಳು ಕೇಂದ್ರದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದ ಚಿತ್ರ

 

ನಾಗರಿಕ ಸೌಲಭ್ಯ ನಿವೇಶನಕ್ಕೆ ವ್ಯತಿರಿಕ್ತವಾಗಿ ಈ ಸಂಸ್ಥೆಯವರು ಕಾನೂನುಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಇವರು ನಡೆಸುತ್ತಿರುವ ಕಲ್ಯಾಣ ಮಂಟಪವು ಅತ್ಯಂತ ದುಬಾರಿ ಬಾಡಿಗೆಯನ್ನು ಹೊಂದಿದೆ. ಇದು ಸಹ ಸಿ ಎ ಸೈಟ್‌ ನಿಬಂಧನೆಗೆ ವಿರುದ್ಧವಾಗಿದೆ. ಈ ಕಟ್ಟಡವು ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಳಕೆಯಾಗದೇ ಹಣ ಸಂಪಾದನೆ ಮಾಡುವ ಕೆಲಸಕ್ಕೆ ಬಳಕೆಯಾಗುತ್ತಿದೆ ಎಂದು ದೂರಿದ್ದಾರೆ.

 

 

ಅಕ್ರಮ ಮತ್ತು ಕಾನೂನುಬಾಹಿರವಾಗಿ ನಿರ್ಮಾಣ ಮಾಡುತ್ತಿರುವ ನಾಲ್ಕನೇ ಅಂತಸ್ತಿನ ಕಟ್ಟಡ ನಿರ್ಮಾಣದ ಕೆಲಸವನ್ನು ಕೂಡಲೇ ತಡೆಹಿಡಿಯಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ದೂರು ಕೊಟ್ಟಿದ್ದರೂ ಯಾಗವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಲ್ಲದೇ ಅಕ್ರಮ ಮತ್ತು ಕಾನೂನುಬಾಹಿರವಾಗಿ ನಿರ್ಮಿಸುತ್ತಿರುವ ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.

SUPPORT THE FILE

Latest News

Related Posts