ಜಾಹೀರಾತು ಫಲಕ; ತೃಪ್ತಿಕರವಾಗಿ ಪ್ರತಿನಿಧಿಸದ ಬಿಬಿಎಂಪಿ ವಕೀಲರು, ಮಾಫಿಯಾದೊಂದಿಗೆ ಶಾಮೀಲಾದರೇ?

ಬೆಂಗಳೂರು; ಬೆಂಗಳೂರಿನ ಸೌಂದರ್ಯ ಮತ್ತು ಸೌಂದರ್ಯವನ್ನು ಹಾಳುಗೆಡುವುತ್ತಿರುವ ವಿವಿಧ ರೀತಿಯ ಜಾಹೀರಾತು ಫಲಕ, ಹೋರ್ಡಿಂಗ್‌ಗಳನ್ನು ಅಳವಡಿಸುವ ಸಂಬಂಧ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆ ಪ್ರಕರಣದಲ್ಲಿ ಬಿಬಿಎಂಪಿ ವಕೀಲರು ತೃಪ್ತಿಕರವಾಗಿ ಪ್ರತಿನಿಧಿಸುತ್ತಿಲ್ಲ ಎಂಬ ಅಂಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ಅವರ ಪ್ರಧಾನ ಕಾರ್ಯದರ್ಶಿ ತಂದಿರುವುದು ಇದೀಗ ಬಹಿರಂಗವಾಗಿದೆ.

 

ಔಟ್‌ಡೋರ್‌ ಅಡ್ವೈರ್ಟೈಸಿಂಗ್‌ ಅಸೋಸಿಯೇಷನ್‌ ದಾಖಲಿಸಿರುವ ಪ್ರಕರಣವು ಇಂದು (ಪ್ರಕರಣ ಸಂಖ್ಯೆ; WP 3458/2020 – ನವೆಂಬರ್‌ 28,2022) ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿರುವ ಬೆನ್ನಲ್ಲೇ ಬಿಬಿಎಂಪಿ ವಕೀಲರು ಪ್ರಕರಣವನ್ನು ತೃಪ್ತಿಕರವಾಗಿ ಪ್ರತಿನಿಧಿಸುತ್ತಿಲ್ಲ ಎಂಬುದು ಜಾಹೀರಾತು ಮಾಫಿಯಾ ಬಿಬಿಎಂಪಿ ವಕೀಲರ ಮೇಲೂ ಹಿಡಿತ ಮತ್ತು ಪ್ರಭಾವ ಹೊಂದಿದೆ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದಂತಾಗಿದೆ.

 

ಹೊರಾಂಗಣ ಜಾಹೀರಾತು ಹೋರ್ಡಿಂಗ್ಸ್‌ಗಳ ಪ್ರದರ್ಶನ ಕುರಿತಂತೆ ಹೈಕೋರ್ಟ್‌ನಲ್ಲಿ ಹಲವು ರಿಟ್‌ ಅರ್ಜಿಗಳು ವಿಚಾರಣೆ ನಡೆಯುತ್ತಿವೆ. ಈ ಪೈಕಿ WP 3458/2020 ಅರ್ಜಿಯನ್ನು ಇದೇ ರೀತಿಯ ಪ್ರಕರಣದೊಂದಿಗೆ ವಿಲೀನಗೊಳಿಸಲು ವಕೀಲರು ಮನವಿ ಮಾಡಬೇಕು. ಮತ್ತು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (WP No 57990/2017) ಹೈಕೋರ್ಟ್‌ನಲ್ಲಿ. (PIL WP NO 57990/2017) ನೊಂದಿಗೆ ಹೊಸ ಜಾಹೀರಾತು ಹೋರ್ಡಿಂಗ್‌ಗಳು ಅಥವಾ ಅಸ್ತಿತ್ವದಲ್ಲಿರುವ ಬೈಲಾ ಕಾನೂನುಗಳಿಗೆ ಯಾವುದೇ ತಿದ್ದುಪಡಿಗಳನ್ನು ಅನುಮತಿಸುವುದು ಸರ್ಕಾರಕ್ಕೆ ಅನುಚಿತವಾಗಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗೆ ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ.

 

ಹೈಕೋರ್ಟ್‌ ಆದೇಶದಂತೆ ಜಾಹೀರಾತು ಫಲಕಗಳನ್ನು ನಿಷೇಧಿಸಿದ್ದರೂ ಈಗಲೂ ಖಾಸಗಿ ಆಸ್ತಿಗಳಲ್ಲಿ ಅಕ್ರಮವಾಗಿ ಹೋರ್ಡಿಂಗ್‌ಗಳನ್ನು ಸ್ಥಾಪಿಸಲಾಗಿದೆ. ಇವುಗಳನ್ನು ತೆಗೆದುಹಾಕಿಲ್ಲ. ಹೊಸ ಹೋರ್ಡಿಂಗ್‌ಗಳಿಗೆ ಅನುಮತಿ ನೀಡುವ ಪ್ರಕ್ರಿಯೆಯಲ್ಲಿ ಬಿಬಿಎಂಪಿ ಅಧಿಕಾರಿಗಳೇ ಜಾಹೀರಾತುದಾರರೊಂದಿಗೆ ಶಾಮೀಲಾಗಿದ್ದಾರೆ ಎಂಬುದನ್ನೂ ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ ಎಂದು ತಿಳಿದು ಬಂದಿದೆ.

 

ಖಾಸಗಿ ಆಸ್ತಿಗಳ ಮೇಲೆ ಹೋರ್ಡಿಂಗ್‌ಗೆ ಅನುಮತಿ ನೀಡಬಾರದು ಎಂದು ಬಿಜೆಪಿ ಪ್ರಣಾಳಿಕೆ ಸಮಿತಿಯ ಉಸ್ತುವಾರಿ ಹೊತ್ತಿದ್ದ ಮತ್ತು ರಾಜ್ಯ ಸರ್ಕಾರದಲ್ಲಿ ಪ್ರಸ್ತುತ ಸಚಿವರಾಗಿರುವ ಡಾ ಅಶ್ವತ್ಥ್ ನಾರಾಯಣ್ ಅವರು ಭಾರತೀಯ ಜನತಾ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದೆ. ಅದೇ ರೀತಿ ಬಿಬಿಎಂಪಿ ಮಾಜಿ ಮೇಯರ್ ಗೌತಮ್ ಕುಮಾರ್ ಅವರು ಬೆಂಗಳೂರಿನ ಸುಂದರೀಕರಣವನ್ನು ನಿರ್ವಹಿಸಲು ಖಾಸಗಿ ಆಸ್ತಿಗಳ ಮೇಲಿನ ಜಾಹೀರಾತು ಹೋರ್ಡಿಂಗ್‌ಗಳಿಗೆ ಅನುಮತಿ ನೀಡಬಾರದು ಎಂದು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂಬ ಅಂಶವನ್ನು ಟಿಪ್ಪಣಿಯಲ್ಲಿ ನಮೂದಿಸಿದ್ದಾರೆ.

 

ಖಾಸಗಿ ಕಟ್ಟಡಗಳ ಮೇಲೆ ನಿರ್ಮಿಸಲಾದ ಬೃಹತ್ ರಚನೆಗಳು ರಚನಾತ್ಮಕವಾಗಿ ಹೊಂದಿಲ್ಲ. ಹೀಗಾಗಿ ಪಾದಚಾರಿಗಳು ಮತ್ತು ವಾಹನ ಚಾಲಕರಿಗೆ ಅಪಾಯವನ್ನುಂಟುಮಾಡುತ್ತದೆ. ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಇತ್ಯಾದಿಗಳಿಂದ ಹೊಸ ಹೋರ್ಡಿಂಗ್‌ಗಳ ಅನುಮತಿಯ ಬಗ್ಗೆ ಮಾಧ್ಯಮಗಳಲ್ಲಿ ಟೀಕಿಸುತ್ತಿದ್ದಾರೆ. ಬೃಹತ್ ಗಾತ್ರದ ಹೋರ್ಡಿಂಗ್‌ಗಳು ಖಾಸಗಿ ಆಸ್ತಿಗಳು ಮತ್ತು ಕಟ್ಟಡಗಳ ಮೇಲೆ ಸ್ಟೀಲ್ ಅಸ್ಥಿಪಂಜರಗಳಾಗಿ ನಿಂತಿವೆ, ಇದು ಒಂದು ರೀತಿಯಲ್ಲಿ ದೃಷ್ಟಿ ಮಾಲಿನ್ಯವಾದಂತಾಗಿದೆ ಎಂದೂ ಟಿಪ್ಪಣಿಯಲ್ಲಿ ವಿವರಿಸಿದ್ದಾರೆ.

 

ಕರ್ನಾಟಕ ರಾಜ್ಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಈಗಲೂ 100ft x50ft ಹೋರ್ಡಿಂಗ್‌ಗಳನ್ನು ಸ್ಥಾಪಿತವಾಗಿದೆ. ಸ್ಮಶಾನಗಳು, ಕ್ರೀಡಾಂಗಣಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸಹ ಹೋರ್ಡಿಂಗ್‌ಗಳನ್ನು ಸ್ಥಾಪಿಸಲಾಗಿದೆ. ಸಾವಿರಾರು ಅಕ್ರಮ ಹೋರ್ಡಿಂಗ್‌ಗಳನ್ನು ಹಾಕಿರುವ ಜಾಹೀರಾತುದಾರರು ಮತ್ತು ಆಸ್ತಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.

 

ಅಕ್ರಮ ಹೋರ್ಡಿಂಗ್ ಮಾಲೀಕರು ಬಿಬಿಎಂಪಿಗೆ ಜಾಹೀರಾತು ತೆರಿಗೆ ಪಾವತಿಸದೆ ವಂಚಿಸಿರುವ ಕಾರಣ ಬಿಬಿಎಂಪಿಗೆ 50 ಕೋಟಿ ನಷ್ಟವಾಗಿದೆ. 1700 ಜಾಹೀರಾತು ಫಲಕಗಳನ್ನು ಅನುಮತಿ ನೀಡಿದ್ದರೂ ಜಾಹೀರಾತುದಾರರು ಖಾಸಗಿ ಆಸ್ತಿಗಳ ಮೇಲೆ 8000 ಜಾಹೀರಾತು ಫಲಕ, ಹೋರ್ಡಿಂಗ್‌ಗಳನ್ನು ಕಾನೂನುಬಾಹಿರವಾಗಿ ಸ್ಥಾಪಿಸಿದ್ದಾರೆ ಎಂದು ಜಾಹೀರಾತು ಮಾಫಿಯಾದ ಪ್ರಾಬಲ್ಯವನ್ನು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದಾರೆ.

 

ನಗರದಲ್ಲಿ ಎಲ್ಲ ರೀತಿಯ ವಾಣಿಜ್ಯ ಜಾಹೀರಾತು ಹೋರ್ಡಿಂಗ್ಸ್‌, ಫ್ಲೆಕ್ಸ್‌, ಬ್ಯಾನರ್‌ಗಳಿಗೆ ಅವಕಾಶ ಕಲ್ಪಿಸಲು ‘ಬಿಬಿಎಂಪಿ ಜಾಹೀರಾತು ನಿಯಮಗಳು-2019’ ಜಾರಿಗೆ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆಯಲು ರಾಜ್ಯ ಸರಕಾರ ತೀರ್ಮಾನಿಸಿತ್ತು.

 

ಜಾಹೀರಾತು ಮಾಫಿಯಾಗೆ ಮಣಿದಿದ್ದ ಬಿಜೆಪಿ ಸರಕಾರ, ಮೂರು ವರ್ಷಗಳ ಬಳಿಕ ಮತ್ತೆ ನಗರದಲ್ಲಿ ಹೋರ್ಡಿಂಗ್ಸ್‌ ಅಳವಡಿಕೆಗೆ ಅನುಮತಿ ನೀಡಿ ಜು. 26ರಂದು ಅಧಿಸೂಚನೆ ಹೊರಡಿಸಿತ್ತು. ಮುಖ್ಯಮಂತ್ರಿ ಹುದ್ದೆಗೆ ಬಿ.ಎಸ್‌.ಯಡಿಯೂರಪ್ಪ ರಾಜೀನಾಮೆ ನೀಡುವ ಮುನ್ನ ಜಾಹೀರಾತು ಹೋರ್ಡಿಂಗ್ಸ್‌ಗೆ ಅವಕಾಶ ಕಲ್ಪಿಸುವ ಕಡತಕ್ಕೆ ಸಹಿ ಹಾಕಿದ್ದು ವಿವಾದಕ್ಕೆ ಕಾರಣವಾಗಿತ್ತು.

 

ಜಾಹೀರಾತು ಏಜೆನ್ಸಿಗಳು ಹೋರ್ಡಿಂಗ್ಸ್‌ ಅಳವಡಿಕೆಗೆ ಅನುಮತಿ ಪಡೆಯಲು ಕಳೆದ ಮೂರು ವರ್ಷಗಳಿಂದಲೂ ಸರಕಾರದ ಮೇಲೆ ಸಾಕಷ್ಟು ಒತ್ತಡ ಹೇರುತ್ತಿದ್ದವು. ಇವರ ಲಾಬಿಗೆ ಮಣಿದ ಬಿಜೆಪಿ ಸರಕಾರ ಖಾಸಗಿ ಮತ್ತು ವಾಣಿಜ್ಯ ಉದ್ದೇಶದ ಜಾಹೀರಾತು ಫಲಕಗಳನ್ನು ಅಳವಡಿಸಲು ಒಪ್ಪಿಗೆ ನೀಡಿತ್ತು. ಇದಕ್ಕೆ ಬಿಜೆಪಿಯಲ್ಲೇ ಅಪಸ್ವರ ಕೇಳಿಬಂದಿತ್ತು. ಸಾಮಾಜಿಕ ಹೋರಾಟಗಾರರಿಂದಲೂ ತೀವ್ರ ವಿರೋಧ ವ್ಯಕ್ತವಾಗಿದ್ದನ್ನು ಸ್ಮರಿಸಬಹುದು.

 

‘ಈಗಾಗಲೇ ಜಾಹೀರಾತು ಕೇಸಿಗೆ ಸಂಬಂಧಪಟ್ಟ ಹಾಗೆ ಅಸಮರ್ಪವಕವಾಗಿ ಹಾಗೂ ಬಿಬಿಎಂಪಿ ವಕೀಲರು ಗೈರು ಹಾಜರು ಆಗುತ್ತಿರುವ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರು ವಿಶೇಷ ಆಯುಕ್ತರ ಗಮನಕ್ಕೆ ತಂದಿದ್ದೇನೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ಖಾಸಗಿ ಆಸ್ತಿಗಳ ಮೇಲೆ ಅಲ್ಲಲ್ಲಿ ಜಾಹೀರಾತು ಕಂಡುಬರುತ್ತದೆ. ಈ ಜಾಹೀರಾತು ಮಾಫಿಯಾ ದೊಂದಿಗೆ ಕೆಲ ಬಿಬಿಎಂಪಿ ಅಧಿಕಾರಿಗಳು ಶಾಮೀಲಾಗಿರೋದು ಸ್ಪಷ್ಟವಾಗಿರುತ್ತದೆ. ಆದ್ದರಿಂದ ಬಿಬಿಎಂಪಿ ಮುಖ್ಯ ಆಯುಕ್ತರು ತಕ್ಷಣವೇ ಕ್ರಮ ಕೈಗೊಳ್ಳಬೇಕು,’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಸಾಯಿದತ್ತ.

SUPPORT THE FILE

Latest News

Related Posts