ಬೆಂಗಳೂರು; ಬಸವನಗುಡಿಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಕೇಳಿದ್ದ ಪ್ರಶ್ನೆಯೊಂದಕ್ಕೆ ನಟ ಚೇತನ್ ಅವರು ನಟ ಉಪೇಂದ್ರ ಅವರು ಸಾಮಾಜಿಕ ಅಸಮಾನತೆ ಕುರಿತು ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ವಿಶ್ಲೇಷಣೆಗೆ ಒಳಪಡಿಸಿದ್ದರು ಎಂಬುದು ಇದೀಗ ಬಹಿರಂಗವಾಗಿದೆ.
ಭೂತಾರಾಧನೆ ಕುರಿತು ನಟ ಚೇತನ್ ವ್ಯಕ್ತಪಡಿಸಿದ್ದ ಅಭಿಪ್ರಾಯಗಳು ವಿವಾದ ಸ್ವರೂಪ ಪಡೆದುಕೊಂಡಿರುವ ಬೆನ್ನಲ್ಲೇ ‘ಬೆಂಕಿಗೆ ತುಪ್ಪ ಸುರಿಯೋ ಕೆಲಸ ನಾನು ಮಾಡಲ್ಲ’ ಎಂದು ಉಪೇಂದ್ರ ಅವರು ನೀಡಿದ್ದ ಪ್ರತಿಕ್ರಿಯೆ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸಾಮಾಜಿಕ ಅಸಮಾನತೆ ಕುರಿತು ಉಪೇಂದ್ರ ಅವರು ಹಿಂದೊಮ್ಮೆ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಚೇತನ್ ಅವರು ತನಿಖಾಧಿಕಾರಿ ಮುಂದೆ ಉಲ್ಲೇಖಿಸಿದ್ದರು ಎಂಬುದು ಮುನ್ನೆಲೆಗೆ ಬಂದಿದೆ.
ಚೇತನ್ ವಿರುದ್ಧ ಈ ಸಂಬಂಧ ‘ದಿ ಫೈಲ್’ ಆರ್‌ಟಿಐ ಅಡಿಯಲ್ಲಿ 338 ಪುಟಗಳನ್ನು ಪಡೆದಿದೆ. 2021ರ ಜೂನ್ 22ರಂದು ನಡೆದ ವಿಚಾರಣೆಯಲ್ಲಿನ ಪ್ರಶ್ನೋತ್ತರದ ಆಯ್ದ ಭಾಗವನ್ನು ಇಲ್ಲಿ ಕೊಡಲಾಗಿದೆ.
ತನಿಖಾಧಿಕಾರಿ; ನೀವು ವಿಡಿಯೋದಲ್ಲಿ ಬ್ರಾಹ್ಮಣ್ಯ ಪುರೋಹಿತಶಾಹಿ ಹಾಗೂ ವೈದಿಕ ಎಂಬ ಮಾತುಗಳನ್ನು ಆಡಿದ್ದು ಯಾವ ಉದ್ದೇಶಗಳನ್ನು ಇಟ್ಟುಕೊಂಡು ಮಾತುಗಳನ್ನು ಆಡಿರುತ್ತೀರಿ?
ಚೇತನ್; ಅನೇಕರು ಜಾತಿ ಬಗ್ಗೆ ಮಾತನಾಡಬಾರದು ಎಂದು ಹೇಳುತ್ತಿದ್ದಾರೆ. ಜಾತಿ ದೌರ್ಜನ್ಯವನ್ನು ಮುಚ್ಚಿ ಹಾಕಲು ನೋಡುತ್ತಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುವುದೇ ನನ್ನ ಉದ್ದೇಶ. ಬ್ರಾಹ್ಮಣ್ಯದ ಬೇಧಭಾವವನ್ನು ಕಿತ್ತು ಹಾಕುವುದು ನನ್ನ ಉದ್ದೇಶ.
ತನಿಖಾಧಿಕಾರಿ; ನಿಮ್ಮನ್ನು ಒಂದು ಜಾತಿ ಬಗ್ಗೆ ಮಾತನಾಡಬಾರದು ಎಂದು ಯಾರಾದರೂ ತಡೆಯುತ್ತಿದ್ದಾರೆಯೇ?
ಚೇತನ್; ಅನೇಕರಿಂದ ಜಾತಿ ಬಗ್ಗೆ ಮಾತನಾಡದಂತೆ ಬೆದರಿಕೆ ಕರೆಗಳು ಎಷ್ಟೋ ವರ್ಷಗಳಿಂದ ಬರುತ್ತಿವೆ. ಸೆಲೆಬ್ರಿಟಿಗಳೂ ಸಹ ಜಾತಿ ವ್ಯವಸ್ಥೆ ಬಗ್ಗೆ ಮಾತನಾಡಬಾರದು ಎಂದು ಮಾಧ್ಯಮಗಳಲ್ಲಿ ಹಲವು ಬಾರಿ ಹೇಳಿಕೊಂಡಿರುತ್ತಾರೆ. ಈ ಸಂದರ್ಭದಲ್ಲಿ ಸಾವಿರಾರು ವರ್ಷಗಳಿಂದ ಬಂದ ಬ್ರಾಹ್ಮಣ್ಯದ ವ್ಯವಸ್ಥಿತ ಮನಸ್ಥಿತಿಯನ್ನು ಪ್ರಶ್ನಿಸುವಂತೆ ಜನರನ್ನು ಜಾಗೃತಿ ಮೂಡಿಸುವುದು ನನ್ನ ಉದ್ದೇಶ.
ತನಿಖಾಧಿಕಾರಿ; ಈ ರೀತಿ ಹೇಳಿಕೆ ನೀಡಿದ್ದೀರಲ್ಲಾ, ಇದು ಒಂದು ಒಂದು ವರ್ಗದ ಜನರಿಗೆ ನೋವುಂಟಾಗುತ್ತದೆ ಎಂಬುದು ತಿಳಿದಿರಲಿಲ್ಲವೇ?
ಚೇತನ್; ಇಲ್ಲ. ಇದು ಒಂದು ವರ್ಗಕ್ಕೆ ಸೀಮಿತವಾಗಿರುವುದಿಲ್ಲ. ನಾನು ಹಲವು ಬಾರಿ ಹೇಳಿದ್ದೇನೆ. ನಾನು ಹೇಳಿರುವ ಹೇಳಿಕೆಯು ಒಂದು ವರ್ಗಕ್ಕೆ ಸೀಮಿತವಾಗಿರುವುದಿಲ್ಲ. ವಿಡಿಯೋಗಳಲ್ಲಿಯೂ ಸಹ ಈ ಹಿಂದೆಯೂ ಇದನ್ನು ಸ್ಪಷ್ಟಪಡಿಸಿರುತ್ತೇನೆ. ಸಮಾಜದಲ್ಲಿರುವ ಪ್ರತಿಯೊಬ್ಬರೂ ಸಹ ಬ್ರಾಹ್ಮಣ್ಯ ವ್ಯವಸ್ಥೇಲಿ ಪಾಲುದಾರರು. ಬೇರೆ ಬೇರೆ ರೀತಿಯಲ್ಲಿ ಮುಂದುವರೆಸುತ್ತಿದ್ದಾರೆ. ಪ್ರತಿ ಜಾತಿಯಲ್ಲಿಯೂ ಹಾಗೂ ಧರ್ಮದಲ್ಲಿಯೂ ಇದನ್ನು ಮುಂದುವರೆಸುತ್ತಿದ್ದಾರೆ.
ತನಿಖಾಧಿಕಾರಿ; ನೀವು ತಿಳಿಸಿರುವ ವಿಚಾರವು ನಿಮ್ಮ ಮೇಲೆ ಪರಿಣಾಮ ಬೀರುವ ಬಗ್ಗೆ ತಿಳಿದಿರುತ್ತದೆಯೇ? ಈ ರೀತಿ ಮಾತನಾಡಿದರೆ ಸಮಾಜದಲ್ಲಿ ಒಂದು ನಿರ್ದಿಷ್ಟ ವರ್ಗ ನಿಮ್ಮ ವಿರುದ್ಧ ಪ್ರತಿಭಟಿಸುವ ಬಗ್ಗೆ ತಿಳಿದಿರಲಿಲ್ಲವೇ?
ಚೇತನ್; ನನ್ನ ವಿರುದ್ಧ ಪ್ರತಿಭಟಿಸುವ ಬಗ್ಗೆ ನನಗೆ ತಿಳಿದಿರಲಿಲ್ಲ. ಸಮಾಜಕ್ಕೆ ಒಳಿತನ್ನು ಮಾಡುವ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ರರ ತತ್ವ ನನಗೆ ಸರಿ ಎನ್ನಿಸಿದ್ದರಿಂದ ನಾನು ಇದನ್ನು ಮಾಡುತ್ತಿದ್ದೇನೆ. ಇದರಿಂದ ಯಾವುದೇ ಒಂದು ಸಮುದಾಯ ನನ್ನ ವಿರುದ್ಧ ಪ್ರಕರಣ ದಾಖಲಿಸುವ ಬಗ್ಗೆ ನಾನು ಅಂದುಕೊಂಡಿರಲಿಲ್ಲ. ಇದುವರೆಗೂ ನನ್ನ ಹೋರಾಟದ ಬಗ್ಗೆ ಯಾವುದೇ ಕೇಸು ದಾಖಲಾಗಿರುವುದಿಲ್ಲ. ನಾನು ಯಾವಾಗಲೂ ಸೈದ್ದಾಂತಿಕವಾಗಿ ಸ್ಪಷ್ಟವಾಗಿ ಮಾತನಾಡುತ್ತಿದ್ದು ನನ್ನ ವಿರುದ್ಧ ಯಾವುದೇ ಕೇಸು ದಾಖಲಿಸುವ ಬಗ್ಗೆ ತಿಳಿದಿರಲಿಲ್ಲ.
ತನಿಖಾಧಿಕಾರಿ; ನೀವು ವಿಡಿಯೋದಲ್ಲಿ ಒಂದು ವಿಚಾರ ಸ್ಪಷ್ಟಪಡಿಸುತ್ತೀರಿ. ಸಾಮಾಜಿಕ ಅಸಮಾನತೆ ಇಲ್ಲ ಎನ್ನುವುದನ್ನು ಯಾರು ಹೇಳಿದರು?
ಚೇತನ್; ಒಬ್ಬ ಸಿನಿಮಾ ಸೆಲೆಬ್ರಿಟಿ ಹಾಗೂ ರಾಜಕೀಯಕ್ಕೆ ಬಂದಿರುವ ವ್ಯಕ್ತಿ ಬ್ರಾಹ್ಮಣ್ಯ ಮತ್ತು ಜಾತಿ ಬಗ್ಗೆ ಮಾತನಾಡಿದಾಗ ತಿಳಿಸುತ್ತಾರೆ. ನಾವೆಲ್ಲರೂ ಒಂದು ತೋಟದ ಬೇರೆ ಬೇರೆ ಜಾತಿಯ ಗಿಡಗಳ ತರ. ಈ ಬೇರೆ ಬೇರೆ ಜಾತಿಯ ಗಿಡಗಳಿಗೆ ಬೇಕಾಗಿರುವುದು ಒಂದೇ ಅದು ನೀರು. ಆ ನೀರೇ ಆರ್ಥಿಕ ಸಬಲೀಕರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುತ್ತಾರೆ. ಈ ಉದಾಹರಣೆಯಲ್ಲಿ ಜಾತಿಜಾತಿ ಗಿಡಗಳಾಗಿದ್ದರೂ ಸಹ ಸಾಮಾಜಿಕ ಅಸಮಾನತೆ ಇಲ್ಲ ಎಂಬುವ ಈ ಉದಾಹರಣೆ ಮುಖಾಂತರ ನಮಗೆ ಹೇಳಲು ಪ್ರಯತ್ನಿಸಿದ್ದು, ಈ ಕಾರಣದಿಂದ ಸಾಮಾಜಿಕ ಅಸಮಾನತೆ ಈಗಲೂ ಜೀವಂತವಿದೆ ಎಂಬುದನ್ನು ಅಂಕಿ ಅಂಶಗಳನ್ನು ಇಟ್ಟುಕೊಂಡು ನಾನೇ ನೋಡಿ ಕೆಲಸ ಮಾಡಿರುವ ಕರ್ನಾಟಕದ ಹಾಗೂ ದೇಶದ ಅನೇಕ ಉದಾಹರಣೆಗಳನ್ನು ಇಟ್ಟುಕೊಂಡು ಮಾತನಾಡಿದ್ದೇನೆ.
ತನಿಖಾಧಿಕಾರಿ; ಆ ಸೆಲೆಬ್ರಿಟಿ ಯಾರು?
ಚೇತನ್; ಕನ್ನಡ ಚಿತ್ರನಟ ರಾಜಕೀಯ ಪಕ್ಷ ಕಟ್ಟಿರುವ ಉಪೇಂದ್ರರವರು ಸಾಮಾಜಿಕ ಅಸಮಾನತೆ ಇಲ್ಲ ಎಂದು ಉದಾಹರಣೆ ಮೂಲಕ ಹೇಳಿದವರಾಗಿರುತ್ತಾರೆ.
ತನಿಖಾಧಿಕಾರಿ; ನಿಮಗೆ ಜೀವ ಬೆದರಿಕೆ ಬಂದಿರುತ್ತದೆ ಎಂದು ಹೇಳಿರುತ್ತೀರಿ. ಇದು ನಿಜಾನಾ?
ಚೇತನ್; ಹೌದು ನನಗೆ ಜೀವ ಬೆದರಿಕೆ ಇದೆ.
ತನಿಖಾಧಿಕಾರಿ; ಪುರೋಹಿತಶಾಹಿ ವರ್ಗ ಎಂದು ವಿಡಿಯೋದಲ್ಲಿ ಮಾತನಾಡಿದದು ಯಾರನ್ನು ಕುರಿತು ಈ ಹೇಳಿಕೆ ನೀಡಿರುತ್ತೀರಿ?
ಚೇತನ್; ಪ್ರೀಸ್ಟ್‌ಲೀ ಕ್ಲಾಸಸ್ ಎಂದು ಹೇಳುವ ಮಾತು ಇದ್ದು ಅಂತಹವರು ದೇವರೊಂದಿಗೆ ನೇರವಾಗಿ ಸಂಪರ್ಕ ಹೊಂದುತ್ತಾರೋ ಅಂತಹವರು ಪ್ರೀಸ್ಟ್‌ಲೀ ಕ್ಲಾಸಸ್‌ಗೆ ಸೇರುತ್ತಾರೆ. ಪುರೋಹಿತಶಾಹಿ ಎಂದರೆ ಅರ್ಚಕರು, ಮೌಲ್ವಿಗಳು ಮತ್ತು ಪಾದ್ರಿಗಳು ಈ ವರ್ಗದಲ್ಲಿ ಬರುತ್ತಾರೆ. ಬಹುಜನರಲ್ಲೂ ಸಹ ದೇವರ ಹೆಸರಿನಲ್ಲಿ ಮಾತನಾಡುವವರು ಅಂತಹ ವರ್ಗಕ್ಕೆ ಸೇರುತ್ತಾರೆ. ಯಾರೂ ದೇವರೊಂದಿಗೆ ನೇರವಾಗಿ ಮಾತನಾಡುವ ಪೂಜೆ ಮಾಡುವ ಹಾಗೂ ಮಧ್ಯವರ್ತಿಯಾಗಿ ಮಾಡುವವರು ಇದ್ದಾರೋ ಅಂತಹವರು ಪುರೋಹಿತಶಾಹಿ ವರ್ಗದಡಿಯಲ್ಲಿ ಬರುತ್ತಾರೆ.
ತನಿಖಾಧಿಕಾರಿ; ಜನಿವಾರ ಹಾಕಿಕೊಳ್ಳುವವರು ಮಾತ್ರ ಬ್ರಾಹ್ಮಣರು ಅಂತ ನೀವು ಹೇಳುತ್ತಿದ್ದೀರಿ. ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರು ಹೊರತುಪಡಿಸಿ ಉಳಿದವರೆಲ್ಲರೂ ಕನಿಷ್ಟರು ಎಂಬ ಮನಸ್ಥಿತಿ ಎಂಬಂತೆ ಹೇಳಿಕೆ ನೀಡುತ್ತಿದ್ದೀರಿ ಹೌದೇ?
ಚೇತನ್; ಈ ಬ್ರಾಹ್ಮಣ್ಯದ ವ್ಯವಸ್ಥೆಯಲ್ಲಿ ಜನಿವಾರವನ್ನು ಹಾಕಿಕೊಳ್ಳುವವರು ಜಾಸ್ತಿ ಶ್ರೇಷ್ಠ ಉಳಿದವರು ಕನಿಷ್ಟ ಎಂಬ ಅರ್ಥದಲ್ಲಿ ಬರುತ್ತದೆ. ಯಾರು ಜನಿವಾರದ ಮನಸ್ಥಿತಿಯನ್ನು ಇಟ್ಟುಕೊಂಡಿದ್ದಾರೋ ಅಂತಹವರು ಶ್ರೇಷ್ಠತೆಯನ್ನು ಹೊಂದಿರುತ್ತಾರೆ. ಜನಿವಾರ ಹಾಕಿಕೊಳ್ಳುವ ಗಂಡಸರು ಶ್ರೇಷ್ಠ ಎಂಬ ಮನಸ್ಥಿತಿಯನ್ನು ಬರೀ ಜನಿವಾರ ಹಾಕಿಕೊಳ್ಳುವವರ ನಡುವೆ ಇಲ್ಲ.
ತನಿಖಾಧಿಕಾರಿ; ಹಾಗಾದರೆ ಜನಿವಾರ ಹಾಕಿಕೊಳ್ಳುವವರು ಇದಕ್ಕೆ ಏಕೆ ಕಾರಣರಾಗುತ್ತಾರೆ? ನೀವು ಚಿತ್ರನಟ ಆಗಿದ್ದು ಹಾಗೂ ಯಾವುದೇ ನಿಮ್ಮನ್ನು ಚಿತ್ರನಟ ಅಂದುಕೊಂಡರೆ ಅದು ಅವರ ವೈಯಕ್ತಿಕ ಆಗುತ್ತದೆ ಅಲ್ಲವೇ?
ಚೇತನ್; ದಿನಾಂಕ 07-01-2021ರಂದು ಬಿಜೆಪಿ ಸರ್ಕಾರ ಸ್ಟೇಟ್ ಬ್ರಾಹ್ಮಿನ್ ಡೆವಲಪ್‌ಮೆಂಟ್ ಬೋರ್ಡ್ ಅಂದರೆ ಬ್ರಾಹ್ಮಣ ಮಹಿಳೆ ಯಾವುದಾದರೂ ಬ್ರಾಹ್ಮಣ ಪೂಜಾರಿಗಳನ್ನು ಮದುವೆಯಾದರೆ ಅವರಿಗೆ 3 ಲಕ್ಷ ರುಪಾಯಿಗಳನ್ನು ಪರಿಹಾರ ಸಿಗುತ್ತದೆ ಎಂದು ಕಾನೂನು ಮಾಡಿದ್ದಾರೆ. ಇದು ನಮ್ಮ ಸಂವಿಧಾನದ ಸಾಮಾಜಿಕ ನ್ಯಾಯ ಆಶಯಗಳಿಗೆ ಧಕ್ಕೆಯುಂಟಾಗುವಂತೆ ಮಾಡುತ್ತದೆ. ಎಷ್ಟೋ ವರ್ಷಗಳಿಂದ ಸಾಮಾಜಿಕ ಸವಲತ್ತುಗಳನ್ನು ಪಡೆದಂತಹ ಬ್ರಾಹ್ಮಣ ವರ್ಗಕ್ಕೆ ಪುನಃ ಹೆಚ್ಚಿನ ಸಾಮಾಜಿಕ ಹಾಗೂ ಆರ್ಥಿಕ ಸವಲತ್ತುಗಳನ್ನು ನೀಡಿದಂತಾಗುತ್ತದೆ.
ತನಿಖಾಧಿಕಾರಿ; ಇದು ಹೇಗೆ ಸಂವಿಧಾನಕ್ಕೆ ಧಕ್ಕೆಯಾಗುತ್ತದೆ?
ಚೇತನ್; ಇದು ಒಂದು ನ್ಯಾಯದ ದೃಷ್ಟಿಯಲ್ಲಿ ತಪ್ಪಾಗುತ್ತದೆ. ಯಾರ್ಯಾರು ಸಾವಿರಾರು ವರ್ಷಗಳಿಂದ ಸಾಮಾಜಿಕ ಸವಲತ್ತುಗಳನ್ನುಪಡೆದಿದ್ದಾರೋ ಅಂತಹವರಿಗೆ ಇನ್ನೂ ಹೆಚ್ಚಿನ ಘನತೆ, ಗೌರ ಕೊಡುವಂತಹ ಯೋಜನೆ. ಬ್ರಾಹ್ಮಣ್ಯ ಎನ್ನುವ ವ್ಯವಸ್ಥೆಯನ್ನು ಬಲಪಡಿಸುವಂತಹ ವ್ಯವಸ್ಥಿತ ಯೋಜನೆ. ಇದನ್ನು ಸರ್ಕಾರವೇ ಮಾಡುತ್ತಿದೆ.
ತನಿಖಾಧಿಕಾರಿ; ಒಂದು ನಿರ್ದಿಷ್ಟ ಜಾತಿ, ಅವರಿಗೆ ಹೆಚ್ಚಿನ ವರಮಾನ ಇರುವುದಿಲ್ಲ. ಅಂತಹರ ಮದುವೆಯನ್ನು ಪ್ರೋತ್ಸಾಹ ಮಾಡಲು ಸರ್ಕಾರ ಒಂದು ಯೋಜನೆ ರೂಪಿಸಿದರೇ ಅದಕ್ಕೂ ಬ್ರಾಹ್ಮಣ್ಯಕ್ಕೂ ಏನು ಸಂಬಂಧ?
ಚೇತನ್; ಯಾವಾಗ ಇದೇ ಶ್ರೇಣಿಕೃತ ಅಸಮಾನತೆಯ ಬ್ರಾಹ್ಮಣ್ಯದಲ್ಲಿ ಕರ್ನಾಟಕದಲ್ಲಿ ಕೋಟ್ಯಂತರ ಜನ ಇವತ್ತಿವೂ ಒಂದು ಹುಟ್ಟಿನಿಂದ ಅವರನ್ನು ಅಮಾನವೀಯವಾಗಿ ವರ್ತಿಸುತ್ತಾ ಬಂದ ಸಮಾಜವನ್ನು ಬದಲಾಯಿಸದೇ ಯಾರಿಗೆ ಸಮಾಜದಲ್ಲಿ ಒಂದು ರೀತಿಯ ಗೌರವ ಇದೆಯೋ ಅಂತಹವರನ್ನು ಇನ್ನೂ ಗೌರವಿಸುತ್ತಾ ಬಂದಿದೆ. ಅರ್ಚಕರು ಎಂದರೆ ಅದು ಬ್ರಾಹ್ಮಣ ಜಾತಿಯ ಅರ್ಚಕರು. ಬೇರೆ ಜಾತಿಯ ಅರ್ಚಕರು ಆಗಿರುವುದಿಲ್ಲ.
ತನಿಖಾಧಿಕಾರಿ; ಹಾಗಾದರೆ ನೀವು ನಿಮ್ಮ ಹೇಳಿಕೆಯಲ್ಲಿ ಬೊಟ್ಟು ಮಾಡುತ್ತಿರುವುದು ಬ್ರಾಹ್ಮಣರನ್ನು ಮಾತ್ರ?
ಚೇತನ್; ಖಂಡಿತ ಅಲ್ಲ. ಈ ವ್ಯವಸ್ಥೆಯ ಸಂಬಂಧ ಬ್ರಾಹ್ಮಣರನ್ನು ಬೊಟ್ಟು ಮಾಡಿರುವುದು ನಿಜ. ಬ್ರಾಹ್ಮಣ್ಯದ ಶ್ರೇಣಿಕೃತ ವ್ಯವಸ್ಥೆಯಲ್ಲಿರೋ ಸವಲತ್ತು ಪಡೆದಿರೋ ಸಮುದಾಯಗಳಿಗೆ ಗಟ್ಟಿ ಮಾಡಿಕೊಂಡು ಬರುತ್ತಿದ್ದಾರೆ. ಈ ಬ್ರಾಹ್ಮಣ ವ್ಯವಸ್ಥೆ, ಅವರ ಪರವಾಗಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ನಿಜವಾಗಲೂ ಬಲಹೀನರಿಗೆ ಅವಕಾಶ ವಂಚಿತರಿಗೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಈ ಸರ್ಕಾರಗಳು ನ್ಯಾಯ ಒದಗಿಸುತ್ತಿಲ್ಲ. ಈ ಬ್ರಾಹ್ಮಣ್ಯ ವ್ಯವಸ್ಥೆಯನ್ನು ಬಲಪಡಿಸುತ್ತಿದ್ದಾರೆ.
ತನಿಖಾಧಿಕಾರಿ; ಹಾಗಾದರೇ ನೀವು ಹೇಳೋ ಪ್ರಕಾರ ಬ್ರಾಹ್ಮಣರಿಗೆ ಕೊಡತ್ತಿರೋ ಸೌಲಭ್ಯ ಅಸಂವಿಧಾನಿಕವೇ?
ಚೇತನ್; ಸಾಮಾಜಿಕ ನ್ಯಾಯದ ದೃಷ್ಟಿಯಲ್ಲಿ ಅಸಂವಿಧಾನಿಕವೇ ಆಗಿರುತ್ತದೆ.
ತನಿಖಾಧಿಕಾರಿ; ಬ್ರಾಹ್ಮಣ್ಯದ ರೀತಿಯಲ್ಲಿಯೇ ಗೌಡಿಕೆ ಮತ್ತು ಪಾಳೇಗಾರಿಕೆ ಸಹ ಆಧ್ಯಾತ್ಮಿಕ ಭಯೋತ್ಪಾದನೆಯೇ?
ಚೇತನ್; ಈ ಸಮಾಜದಲ್ಲಿ ನಾವು ಪ್ರತಿಯೊಂದಿಗೆ ವಿಚಾರಕ್ಕೂ ಬೈನರಿಯೊಂದಿಗೆ ಹುಡುಕುತ್ತೇವೆ. ಎಸ್ ಆರ್ ನೋ, ಬಿಜೆಪಿ ಆರ್ ಕಾಂಗ್ರೆಸ್, ಹಿಂದೂ ಆರ್ ಮುಸ್ಲಿಂ ಎಂಬ ರೀತಿಯಲ್ಲಿ ವಿಚಾರಗಳನ್ನು ಹುಡುಕುತ್ತೇವೆ. ಬೈನರಿಗೆ ಸಂಪೂರ್ಣವಾಗಿ ಉತ್ತರ ನೀಡಲು ಆಗುವುದಿಲ್ಲ. ಬಿಡಿಸಿ ಹೇಳುತ್ತೇನೆ.
ಆಧ್ಯಾತ್ಮಿಕ ಭಯೋತ್ಪಾದನೆ ಎನ್ನುವುದು ಮೂರೂವರೆ ಸಾವಿರ ವರ್ಷಗಳಿಂದಲೂ ಇದೆ. ಆ ಆಧ್ಯಾತ್ಮಿಕ ಭಯೋತ್ಪಾದನೆ ನಮ್ಮ ಸಮಾಜದ ವ್ಯವಸ್ಥೆಯಲ್ಲಿ ಜೀವಂತವಾಗಿ ಉಳಿದುಕೊಂಡು ಬಂದಿದೆ. ಇದರ ನಂತರವೂ ಅನೇಕ ರೀತಿಯ ಬಂಡವಾಳಶಾಹಿ ವ್ಯವಸ್ಥೆ, ಭೂ ಮಾಲೀಕತ್ವದ ವ್ಯವಸ್ಥೆ, ವಸಾಹತುಶಾಹಿವ್ಯವಸ್ಥೆ. ಈ ರೀತಿಯಲ್ಲಿ ಅನೇಕ ರೀತಿಯಲ್ಲಿ ದಬ್ಬಾಳಿಕೆ ದೌರ್ಜನ್ಯದ ವ್ಯವಸ್ಥೆ ಒಂದಾದ ಮೇಲೊಂದರಂತೆ ದಾಳಿ ಮಾಡುತ್ತಾ ಬಂದಿದೆ.
ಗೌಡಿಕೆ ಎಂದರೆ ಆಧ್ಯಾತ್ಮಿಕ ದಬ್ಬಾಳಿಕೆ ಎನ್ನಲು ಆಗುವುದಿಲ್ಲ. ಆದರೆ ಗೌಡಿಕೆಗೇಕೆ ಆಧ್ಯಾತ್ಮಿಕ ಭಯೋತ್ಪಾದನೆ ಸಂಬಂಧವಿದೆ. ಆಧ್ಯಾತ್ಮಿಕ ಭಯೋತ್ಪಾದನೆ ಎಂದು ಏನನ್ನು ಸ್ಪಷ್ಟೀಕರಣ ಮಾಡಿದ್ದೇನೆ. ಮೂರೂವರೆ ಸಾವಿರ ವರ್ಷಗಳಿಂದ ಅದಕ್ಕೂ ಮುಂಚಿತವಾಗಿ 10 ಸಾವಿರ ವರ್ಷಗಳಿಂದ ಪುರುಷ ಪ್ರಧಾನ ವ್ಯವಸ್ಥೆ ಇದೆ. ಬ್ರಾಹ್ಮಣ್ಯದ ವ್ಯವಸ್ಥೆ, ಬಂಡವಾಳಶಾಹಿ ವ್ಯವಸ್ಥೆ, ವಸಾಹತುಶಾಹಿ ವ್ಯವಸ್ಥೆ, ಭೂ ಮಾಲೀಕತ್ವದ ವ್ಯವಸ್ಥೆ ಇದೆ. ಈ ರೀತಿ ಎಲ್ಲಾ ಸೇರಿ ನಮ್ಮ ಭಾರತ ದೇಶದ ದಬ್ಬಾಳಿಕೆಗೆ ಕಾರಣವಾಗಿದೆ.
ತನಿಖಾಧಿಕಾರಿ; ನಿಮ್ಮ ಹೇಳಿಕೆಯಿಂದ ನಿರ್ದಿಷ್ಟ ಬ್ರಾಹ್ಮಣ ಸಮುದಾಯದ ಜನರುಗಳ ಮನಸ್ಸಿಗೆ ಬೇಜಾರಾಗಿದೆ. ಆ ಸಮುದಾಯದ ಜನರುಗಳ ಪ್ರತಿಭಟನೆ ಮಾಡಿ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದರಿಂದ ಸಮಾಜದಲ್ಲಿ ಅಶಾಂತಿ ಉಂಟಾಗಿದ್ದು ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಚೇತನ್; ನಾನು ಸ್ಪಷ್ಟವಾಗಿ ನನ್ನ ವಿಡಿಯೋಗಳಲ್ಲಿ ಹಾಗೂ ಪೋಸ್ಟ್‌ಗಳಲ್ಲಿ ಹೇಳಿರುವಂತೆ ಬ್ರಾಹ್ಮಣರ ಹಾಗೂ ಯಾವುದೇ ಜಾತಿ ಜನಾಂಗದವರಿಗೆ ಬ್ರಾಹ್ಮಣ್ಯ ಸೀಮಿತವಾಗಿರುವುದಿಲ್ಲ. ಎಲ್ಲಾ ಜಾತಿ ಜನಾಂಗಗಳಲ್ಲೂ ಬ್ರಾಹ್ಮಣ್ಯ ಜೀವಂತವಾಗಿದೆ. ಎಲ್ಲಾ ಜಾತಿಯವರು ಮತ್ತು ಅನೇಕ ಧರ್ಮದವರು ಕೂಡ ಬ್ರಾಹ್ಮಣ್ಯ ಅನ್ನೋ ವ್ಯವಸ್ಥೆ ಪಾಲಿಸಿಕೊಂಡು ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಈ ರೀತಿಯ ಬ್ರಾಹ್ಮಣ್ಯದ ದಬ್ಬಾಳಿಕೆ ದೌರ್ಜನ್ಯಕ್ಕೆ ದೇವರು ದಿಂಡ್ರು ಧರ್ಮಗಳನ್ನು ಪ್ರಶ್ನೆ ಮಾಡುತ್ತೀವೋ ಮತ್ತು ಯಾರು ಈ ಬ್ರಾಹ್ಮಣ್ಯವನ್ನು ವಿರೋಧಿಸುತ್ತೀವೋ ಈ ಬ್ರಾಹ್ಮಣ್ಯದಿಂದ ನಮಗೆ ಬಹಳ ನೋವಾಗಿದೆ. ಸಂವಿಧಾನದ ಅಡಿಯಲ್ಲಿ ನಮಗೆ ಹಕ್ಕುಗಳಿವೆ. ನಾವು ಪ್ರಜಾಪ್ರಭುತ್ವವನ್ನು ಉಳಿಸುತ್ತಿರೋದು, ಅಹಿಂಸಾ ಮಾರ್ಗದಿಂದ ನಮ್ಮ ವಿಚಾರಗಳನ್ನು ನಮ್ಮ ಹೋರಾಟಗಳನ್ನು ನಮ್ಮ ಸಮಾಜಸೇವೆಗಳನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದು ಮುಂದೆಯೂ ಮಾಡುತ್ತೇವೆ.