ರಾಜೀವ್‌ಗಾಂಧಿ ಗ್ರಾಮೀಣ ವಿದ್ಯುತ್‌ ಯೋಜನೆಯಲ್ಲೂ ಗುತ್ತಿಗೆದಾರರಿಗೆ ಹೆಚ್ಚಿನ ಮೊತ್ತ ಪಾವತಿ

ಬೆಂಗಳೂರು; ದೀನದಯಾಳು ಉಪಾಧ್ಯಾಯ ಗ್ರಾಮೀಣ ವಿದ್ಯುತ್‌, ಸೌಭಾಗ್ಯ ಯೋಜನೆಯಡಿಯಲ್ಲಿ ಗುತ್ತಿಗೆದಾರರಿಗೆ ಅರ್ಥಿಕವಾಗಿ ಲಾಭ ಮಾಡಿಕೊಡುವ ಮೂಲಕ ಅಕ್ರಮಕ್ಕೆ ದಾರಿಮಾಡಿಕೊಟ್ಟಿದ್ದ ಹಿಂದಿನ ಕಾಂಗ್ರೆಸ್‌ ಸರ್ಕಾರವು ರಾಜೀವ್‌ಗಾಂಧಿ ಗ್ರಾಮೀಣ ವಿದ್ಯುತ್‌ ಯೋಜನೆಯಡಿಯಲ್ಲಿಯೂ ಗುತ್ತಿಗೆದಾರರಿಗೆ ಹೆಚ್ಚಿನ ಮೊತ್ತವನ್ನು ಪಾವತಿಸಿತ್ತು ಎಂಬುದನ್ನು ಮಹಾಲೆಕ್ಕಪರಿಶೋಧಕರು (ಸಿಎಜಿ) ಪತ್ತೆ ಹಚ್ಚಿದ್ದಾರೆ.

 

ಟೆಂಡರ್‌ನಲ್ಲಿ ಭಾಗಿಯಾಗಿದ್ದ ಗುತ್ತಿಗೆದಾರರು ಅನೇಕ ದಾಖಲೆಗಳನ್ನು ಸಲ್ಲಿಸಿರಲಿಲ್ಲ. ತಾಂತ್ರಿಕ ಮೌಲ್ಯಮಾಪನಕ್ಕೆ ಅರ್ಹವಾಗಿರಲಿಲ್ಲ. ಆದರೂ ಆದೇಶ ಪಡೆದುಕೊಂಡಿದ್ದ ಗುತ್ತಿಗೆದಾರರು ನಡೆಸಿದ್ದ ಕಾಮಗಾರಿಯೂ ನಿಕೃಷ್ಟಮಟ್ಟದಿಂದ ಕೂಡಿತ್ತು. ನಿಗದಿತ ದಿನಾಂಕ ಮೀರಿದ್ದರೂ ಗುತ್ತಿಗೆ ಅವಧಿಯು ವಿಸ್ತರಣೆಗೊಂಡಿತ್ತು ಎಂಬ ಸಂಗತಿಯನ್ನೂ ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

 

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ವಿದ್ಯುದ್ದೀಕರಣಕ್ಕೆ ನಿಗದಿಪಡಿಸಿದ್ದ ವೆಚ್ಚಕ್ಕಿಂತಲೂ ಅಧಿಕ ವೆಚ್ಚವನ್ನು ಮಾಡಲಾಗಿತ್ತು. 2014-15ರಿಂದ 2016-17ನೇ ಸಾಲಿನಲ್ಲಿ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ, ಚಾಮರಾಜನಗರ ಮೈಸೂರು ವಿದ್ಯುತ್‌ ಸರಬರಾಜು ಕಂಪನಿಯು ಬಡತನ ರೇಖೆಗಿಂತ ಕಡಿಮೆ ಇದ್ದ ಒಟ್ಟು 1,27,500 ಕುಟುಂಬಗಳಿಗೆ 53.93 ಕೋಟಿ ರು. ವೆಚ್ಚದಲ್ಲಿ ವಿದ್ಯುದ್ದೀಕರಣಗೊಳಿಸಲು ಯೋಜನೆ ಕೈಗೆತ್ತಿಕೊಂಡಿತ್ತು.

 

ವಿದ್ಯುತ್‌ ಸಂಪರ್ಕ ಪಡೆಯುವ ಫಲಾನುಭವಿ ಕುಟುಂಬಕ್ಕೆ ಅನುಮೋದನೆಗೊಂಡಿದ್ದ 3,000 ರು.ಗಳಿಗಿಂತ ಅಧಿಕ ದರದಲ್ಲಿ ಅಂದರೆ 4,121.12 ರು ಮತ್ತು 6,660 ರು.ಗಳ ಲೆಕ್ಕ ಹಾಕಿ ಗುತ್ತಿಗೆ ಕಂಪನಿಗಳಿಗೆ ಪಾವತಿಸಿತ್ತು. ಚಾಮರಾಜನಗರ ಮೈಸೂರು ವಿದ್ಯುತ್‌ ಸರಬರಾಜು ಕಂಪನಿಯು ಸಂಪರ್ಕ ಒಂದಕ್ಕೆ ಅನುಮೋದಿತ ವೆಚ್ಚದ ಶೇ.222ರಷ್ಟಿತ್ತು. ಬೆಸ್ಕಾಂ ಮತ್ತು ಚೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 3.18 ಕೋಟಿ ರು. ಅಧಿಕ ವೆಚ್ಚವನ್ನು ಭರಿಸಿತ್ತು ಎಂಬುದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ಮೈಸೂರು ಮತ್ತು ಮಂಡ್ಯ ಜಿಲ್ಲೆಯಲ್ಲಿಯೂ ರಾಜೀವ್‌ಗಾಂಧಿ ಗ್ರಾಮೀಣ ವಿದ್ಯುತ್‌ ಯೋಜನೆ ಗುತ್ತಿಗೆ ಪಡೆದಿದ್ದ ಶ್ರೀಶ್ವರ್‌ ಎಲೆಕ್ಟ್ರಿಕಲ್ಸ್‌ ಪ್ರೈವೈಟ್‌ ಲಿಮಿಟೆಡ್‌ ಕಂಪನಿಯು ಕಾಮಗಾರಿಗಳನ್ನು ಪೂರ್ಣಗೊಳಿಸದಿದ್ದ ಕಾರಣ ಸಹಾಯಧನವೂ ನಷ್ವವಾಗಿತ್ತು.ಈ ಕಂಪನಿಗೆ 26.49 ಕೋಟಿ ಮತ್ತು 17.73 ಕೋಟಿ ರು. ಮೊತ್ತಕ್ಕೆ ಆದೇಶವನ್ನು 2014ರ ನವೆಂಬರ್‌ನಲ್ಲಿ ನೀಡಲಾಗಿತ್ತು.

 

ಮೈಸೂರಿನಲ್ಲಿ ಬಡತನ ರೇಖೆಗಿಂತ ಕೆಳಗಿದ್ದ 14,274 ಕುಟುಂಬಗಳಿಗೆ ವಿದ್ಯುದ್ದೀಕರಣಗೊಳಿಸಲು ಆದೇಶದಲ್ಲಿ ಹೇಳಲಾಗಿತ್ತಾದರೂ ಸಮೀಕ್ಷೆಯ ಸಮಯದಲ್ಲಿ ಅದನ್ನು 10,602 ಕುಟುಂಬಗಳಿಗೆ ಪರಿಷ್ಕರಿಸಲಾಗಿತ್ತು. ಮಂಡ್ಯದಲ್ಲಿ ಬಡತನ ರೇಖೆಗಿಂತ ಕೆಳಗಿದ್ದ 10,824 ಕುಟುಂಬಗಳನ್ನು ಸಮೀಕ್ಷೆ ಸಮಯದಲ್ಲಿ 8,222ಕ್ಕೆ ಪರಿಷ್ಕರಿಸಲಾಗಿತ್ತು.

 

ಈ ಎರಡೂ ಗುತ್ತಿಗೆಗಳನ್ನು ಪಡೆದಿದ್ದ ಶ್ರೀಶ್ವರ್‌ ಎಲೆಕ್ಟ್ರಿಕಲ್ಸ್ಸ್ ಪ್ರೈವೈಟ್‌ ಲಿಮಿಟೆಡ್‌ ಕಂಪನಿಯು ತಾಂತ್ರಿಕ ಮೌಲ್ಯಮಾಪನ ವೇಳೆಯಲ್ಲಿ ದಾಖಲೆಗಳನ್ನೇ ಸಲ್ಲಿಸಿರಲಿಲ್ಲ. ಆದರೂ ಟೆಂಡರ್‌ ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿದ್ದ ಮೈಸೂರು ವಲಯದ ಮುಖ್ಯ ಇಂಜಿನಿಯರ್‌ ಕಂಪನಿಯು ತಾಂತ್ರಿಕ, ವಾಣಿಜ್ಯ ಷರತ್ತುಗಳನ್ನು ಪೂರೈಸಿದ್ದಿತು ಎಂದು ಷರಾ ಬರೆದಿದ್ದರು. ಈ ಮೂಲಕ ಕರ್ನಾಟಕ ಸಾರ್ವಜನಿಕ ಖರೀದಿಗಳು/ಸೇವೆಗಳನ್ನು ಪಡೆದುಕೊಳ್ಳುವಲ್ಲಿ ರೂಪಿಸಿರುವ ಪಾರದರ್ಶಕತೆ ನಿಯಮಗಳು 2000ದ ನಿಯಮ 24ರ ಅನುಸಾರ ಆಗಿರಲಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

 

ಇದೇ ಕಂಪನಿಯು ಚಾಮರಾಜನಗರ ವಿದ್ಯುತ್‌ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ನಡೆಸಿದ್ದ ಕಾಮಗಾರಿಯು ನಿಕೃಷ್ಟಮಟ್ಟದಿಂದ ಕೂಡಿತ್ತು ಎಂದು ಸಿಎಜಿಯು ಪರಿಶೋಧನೆ ವೇಳೆಯಲ್ಲಿ ಗಮನಿಸಿದೆ. ನಿಗದಿತ ದಿನಾಂಕದಿಂದ 3 ವರ್ಷಗಳು ಕಳೆದ ನಂತರವೂ ಮೈಸೂರಿನಲ್ಲಿ 10,602 ಕುಟುಂಬಗಳ ಪೈಕಿ 6,141ಕ್ಕೆ ಹಾಗೂ ಮಂಡ್ಯದಲ್ಲಿ 8,222 ಕುಟುಂಬಗಳ ಪೈಕಿ ಕೇವಲ 5,123 ಕುಟುಂಬಗಳಿಗಷ್ಟೇ ವಿದ್ಯುದ್ದೀಕರಣ ಮಾಡಲಾಗಿತ್ತು.

 

ಹಾಗೆಯೇ ಮೂಲಸೌಕರ್ಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಶೇ. 2.53ರಷ್ಟು ಹಾಗೂ ಮಂಡ್ಯದಲ್ಲಿ ಶೇ.21.08ರಷ್ಟು ಮಾತ್ರ ಪ್ರಗತಿ ಆಗಿತ್ತು. ಕಾಲಮಿತಿಗಳನ್ನು ಉಲ್ಲಂಘಿಸಿದ್ದರೂ ಗುತ್ತಿಗೆಯನ್ನು ಪೂರ್ಣಗೊಳಿಸಲು ನಿಗದಿತ ದಿನಾಂಕದಿಂದ (2016 ನವೆಂಬರ್‌) ನಾಲ್ಕು ವರ್ಷಗಳು ಕಳೆದ ನಂತರ ಜನವರಿ 2020ರಲ್ಲಿ ರದ್ದುಗೊಳಿಸಲಾಗಿತ್ತು.

 

‘ಗುತ್ತಿಗೆದಾರರು ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ತಪ್ಪಿತಸ್ಥರಾಗಿದ್ದರಿಂದ ಹಾಗೂ ಗುತ್ತಿಗೆಯನ್ನು ರದ್ದುಗೊಳಿಸುವಲ್ಲಿ ಚೆಸ್ಕಾಂನಿಂದ ಆಗಿದ್ದ ವಿಳಂಬದಿಂದಾಗಿ 26.36 ಕೋಟಿ ರು. ಮೌಲ್ಯದ ಕಾಮಗಾರಿಗಳನ್ನು ಕಾರ್ಯಗತಗೊಳಿಸಿರಲಿಲ್ಲ. ರಾಜೀವ್‌ಗಾಂಧಿ ಗ್ರಾಮೀಣ ವಿದ್ಯುತ್‌ ಯೋಜನೆಯಡಿ ಭರಿಸಲಾದ ವೆಚ್ಚದ ಶೇ. 90ರಷ್ಟು ದರ ಸಹಾಯಧನಕ್ಕೆ ಅನುವು ಮಾಡಿಕೊಟ್ಟಿತ್ತು. ಗುತ್ತಿಗೆದಾರರಿಂದ ವಸೂಲಾತಿ ಮಾಡಲು ಪ್ರಸ್ತಾಪಿಸಲಾಗಿದ್ದ 4.75 ಕೋಟಿ ಮೊತ್ತದಷ್ಟು ನಷ್ಟವನ್ನು ಹೊಂದಾಣಿಕೆ ಮಾಡಿಕೊಂಡ ನಂತರವೂ 18.97 ಕೋಟಿ ಮೊತ್ತದಷ್ಟು ಸಹಾಯಧನವನ್ನು ಉಪಯೋಗಿಸಿಕೊಳ್ಳುವ ಅವಕಾಶವನ್ನೂ ಕಳೆದುಕೊಂಡಿತು,’ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

SUPPORT THE FILE

Latest News

Related Posts