ಸೌಭಾಗ್ಯ ವಿದ್ಯುತ್‌ ಯೋಜನೆ ಕಾಮಗಾರಿಗೆ ಅನುಮೋದನೆ ಇರದಿದ್ದರೂ ಅನುಷ್ಠಾನ;ಗುತ್ತಿಗೆದಾರರಿಗೆ ಅಧಿಕ ಪಾವತಿ

photo credit-india today

ಬೆಂಗಳೂರು; ಸೌಭಾಗ್ಯ ಯೋಜನೆಯಡಿ 4.75 ಕೋಟಿ ರು ಮೊತ್ತದ ಗ್ರಾಮೀಣ ವಿದ್ಯುದ್ದೀಕರಣ ಕಾಮಗಾರಿಗಳನ್ನು ಅನುಮೋದನೆ ಇಲ್ಲದೆಯೇ ಕಾರ್ಯಗತಗೊಳಿಸಿದ್ದ ಇಂಧನ ಇಲಾಖೆಯು ಲೆಕ್ಕಪತ್ರಗಳ ಕೈಪಿಡಿಯನ್ನು ಉಲ್ಲಂಘಿಸಿತ್ತು ಎಂಬುದನ್ನು ಸಿಎಜಿ ವರದಿಯು ಬಹಿರಂಗಗೊಳಿಸಿದೆ.

 

ಪೂರ್ವಭಾವಿ ಯೋಜನೆ ಹಾಗೂ ಅಂದಾಜುಗಳನ್ನು ಸಕ್ಷಮ ಪ್ರಾಧಿಕಾರವು ಅನುಮೋದಿಸಬೇಕು. ಅನುಮೋದಿಸದ ಹೊರತು ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಾರದು. ಅನುಮೋದಿತ ಅಂದಾಜಿನಲ್ಲಿ ನಿರ್ದಿಷ್ಟವಾಗಿ ಅನುವು ಮಾಡದಿರುವ ಕಾಮಗಾರಿಗಳ ಐಟಂಗಳನ್ನು ಪರಿಷ್ಕೃತ ಅಂದಾಜು ಅಥವಾ ಪೂರಕ ಅಂದಾಜನ್ನು ಅನುಮೋದಿಸದ ಹೊರತು ಕೈಗೆತ್ತಿಕೊಳ್ಳಬಾರದು ಎಂದು ಲೆಕ್ಕಪತ್ರಗಳ ಕೈಪಿಡಿ ಸಂಪುಟ 2ರಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಆದರೆ ಇದನ್ನು ಇಂಧನ ಇಲಾಖೆಯು ನೇರಾನೇರ ಉಲ್ಲಂಘಿಸಿದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

 

‘ರಾಯಚೂರು ಜಿಲ್ಲೆಯ ಮಾನ್ವಿ, ರಾಯಚೂರು, ದೇವದುರ್ಗ, ಸಿಂಧನೂರು ತಾಲೂಕು ವ್ಯಾಪ್ತಿಯಲ್ಲಿ ಸೌಭಾಗ್ಯ ಯೋಜನೆ ಅಡಿಯಲ್ಲಿ ಗ್ರಾಮೀಣ ವಿದ್ಯುದ್ದೀಕರಣ ಕಾಮಗಾರಿಗಳಿಗೆ ಸಂಬಂಧಿಸಿದಂತೆ 4.75 ಕೋಟಿ ರು ಅನುದಾನ ಒದಗಿಸಲಾಗಿತ್ತು. ಈ ಕಾಮಗಾರಿಗಳಿಗೆ ಕಾರ್ಯನಿರ್ವಾಹಕ ಇಂಜಿನಿಯರ್‌, ಅಧೀಕ್ಷಕ ಇಂಜಿನಿಯರ್‌ ಮತ್ತು ಮುಖ್ಯ ಇಂಜಿನಿಯರ್‌ರಿಂದ ಅಂದಾಜುಗಳಿಗೆ ಪೂರ್ವಾನುಮೋದನೆ ಪಡೆದುಕೊಳ್ಳದೆಯೇ ಕಾರ್ಯಗತಗೊಳಿಸಲಾಗಿತ್ತು,’ ಎಂಬುದು ಲೆಕ್ಕಪರಿಶೋಧನೆ ವೇಳೆ ಪತ್ತೆಯಾಗಿದೆ.

 

ಅದೇ ರೀತಿ ಬೀದರ್‌ ಜಿಲ್ಲೆಯಲ್ಲಿಯೂ ಸೌಭಾಗ್ಯ ಯೋಜನೆಯಡಿಯಲ್ಲಿ 9,432 ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ವಿದ್ಯುದ್ದೀಕರಣಗೊಳಿಸಲು 17.17 ಕೋಟಿ ರು. ಮೌಲ್ಯಕ್ಕೆ ಮಹದೇವ್‌ ಪ್ರೀಸ್ಪೆಸ್ಸ್‌ಡ್‌ ಪ್ರಾಡಕ್ಟ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ಗುತ್ತಿಗೆ ನೀಡಲಾಗಿತ್ತು. ಕಾಮಗಾರಿ ಆದೇಶ ಪಡೆದ ಮೂರು ತಿಂಗಳ ಒಳಗೇ ಈ ಕುಟುಂಬಗಳಿಗೆ ಅಂದರೆ 2019ರ ಫೆಬ್ರುವರಿ ಅಂತ್ಯಕ್ಕೆ ವಿದ್ಯುದ್ದೀಕರಣ ಸೌಲಭ್ಯವನ್ನು ಪೂರ್ಣಗೊಳಿಸಬೇಕಿತ್ತು. ಆದರೆ ಈ ಕಾಮಗಾರಿಗಳು ವಿಳಂಬವಾಗಿದ್ದರಿಂದ 2020ರ ಮಾರ್ಚ್‌ನಲ್ಲಿ 9.78 ಕೋಟಿ ರು.ವೆಚ್ಚದಲ್ಲಿ ಪೂರ್ಣಗೊಂಡಿದ್ದವು.

 

ಆದರೆ ಗುತ್ತಿಗೆದಾರರು ಮತ್ತು ಸಂಬಂಧಿತ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಸಹಿ ಮಾಡಿದ್ದ ಜಂಟಿ ಸರಕು ಸಾಮಗ್ರಿಗಳು ಮತ್ತು ಮುಖ್ಯ ಇಂಜಿನಿಯರ್‌ ಅವರು ಅನುಮೋದಿಸಿದ್ದಂತಹ (ಜನವರಿ 2021) ದಾಖಲೆಗಳಲ್ಲಿ ವ್ಯತ್ಯಯವಾಗಿದ್ದವು. ಇದು ಗುತ್ತಿಗೆದಾರರಿಗೆ ಅಧಿಕ ಪ್ರಮಾಣದಲ್ಲಿ ಪಾವತಿಗೆ ಕಾರಣವಾಗಿತ್ತು ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

 

242 ಕುಟುಂಬಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ 23,34,993 ರು. ಮೊತ್ತವನ್ನು ಅಧಿಕವಾಗಿ ಪಾವತಿಸಲಾಗಿತ್ತು. ಅಲ್ಲದೆ ಪ್ರಮಾಣೀಕರಿಸಿದ್ದ 9,426 ಕುಟುಂಬಗಳಿಗೆ ಪ್ರತಿಯಾಗಿ 9,668 ಕುಟುಂಬಗಳು ಎಂದು ನಮೂದಿಸಲಾಗಿತ್ತು. ಆದರೆ ಮುಖ್ಯ ಇಂಜನಿಯರ್‌ ಅವರು ಯಾವುದೇ ಅಧಿಕ ಪ್ರಮಾಣದಲ್ಲಿ ಪಾವತಿಯಾಗಿರಲಿಲ್ಲ ಎಂದು ಸಮಜಾಯಿಷಿ ನೀಡಿದ್ದರೂ ಸಹ ಲೆಕ್ಕಪರಿಶೋಧನೆಯಲ್ಲಿ ಗಮನಿಸಿದ್ದ ಅಂಶಗಳಿಗೆ ಯಾವುದೇ ಉತ್ತರಗಳನ್ನು ನೀಡಿರಲಿಲ್ಲ.

the fil favicon

SUPPORT THE FILE

Latest News

Related Posts