ಐದು ನಿಮಿಷದ ಕಿರುಚಿತ್ರ ನಿರ್ಮಾಣಕ್ಕೆ 4.50 ಕೋಟಿ ಖರ್ಚು?; ಜಿಮ್‌ ಹೆಸರಿನಲ್ಲಿ ನಡೆದಿದೆ ಲೂಟಿ

ಬೆಂಗಳೂರು; ಬಂಡವಾಳ ಆಕರ್ಷಿಸುವ ನೆಪದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಉನ್ನತ ಅಧಿಕಾರಿಗಳು ಹಲವಾರು ಬಾರಿ ವಿದೇಶ ಪ್ರವಾಸ ನಡೆಸಿರುವ ಬೆನ್ನಲ್ಲೇ ಸಮಾವೇಶಕ್ಕೆ ಸಂಬಂಧಿಸಿದಂತೆ ಕೇವಲ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಐದೇ ಐದು ನಿಮಿಷದ ಕಿರು ಚಿತ್ರ ನಿರ್ಮಾಣಕ್ಕಾಗಿ 4.50 ಕೋಟಿ ರು. ಖರ್ಚು ಮಾಡಲು ಮುಂದಾಗಿರುವುದನ್ನು ‘ದಿ ಫೈಲ್‌’ ಇದೀಗ ಹೊರಗೆಡವುತ್ತಿದೆ.

 

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಹೆಸರಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಉನ್ನತ ಅಧಿಕಾರಿಗಳು ಸರ್ಕಾರದ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುತ್ತಿದೆ ಎಂಬ ಗುರುತರವಾದ ಆರೋಪಗಳು ಕೇಳಿ ಬಂದಿರುವ ಹೊತ್ತಿನಲ್ಲೇ ಕಿರುಚಿತ್ರ ನಿರ್ಮಾಣಕ್ಕೆ 4.50 ಕೋಟಿ ರು. ನೀಡಲು ಹೊರಟಿರುವುದು ವಿವಾದಕ್ಕೆ ಕಾರಣವಾಗಿದೆ.

 

ಕಿರುಚಿತ್ರ ನಿರ್ಮಾಣ ಸಂಸ್ಥೆಯೊಂದರ ಜೊತೆಗೆ ಒಡಂಬಡಿಕೆ ಮಾಡಿಕೊಂಡಿರುವ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಅಧಿಕಾರಿಗಳು ಸಚಿವ ಮುರುಗೇಶ್‌ ಆರ್‌ ನಿರಾಣಿ ಅವರೊಂದಿಗೆ ಸಮಾಲೋಚನೆಯನ್ನೇ ನಡೆಸಿಲ್ಲ ಎಂಬುದು ತಿಳಿದು ಬಂದಿದೆ. ಈ ಕುರಿತು ಖುದ್ದು ಸಚಿವ ನಿರಾಣಿ ಅವರೇ 2022ರ ಅಕ್ಟೋಬರ್‌ 21ರಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ನಿರಾಣಿ ಬರೆದಿರುವ ಪತ್ರದಲ್ಲೇನಿದೆ?

 

ನವೆಂಬರ್‌ 2,3 ಮತ್ತು 4 , 2022ರಂದು ಇನ್ವೆಷ್ಟ್‌ ಕರ್ನಾಟಕ 2022 ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಿದ್ದು ಸಮಾವೇಶಕ್ಕೆ ಸಂಬಂಧಪಟ್ಟಂತೆ ಒಂದು ಕಿರುಚಿತ್ರವನ್ನು ನಿರ್ಮಿಸಲು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಕ್ರಮಕೈಗೊಂಡಿದ್ದು ಸದರಿ ಕಿರುಚಿತ್ರ ನಿರ್ಮಾಣಕ್ಕಾಗಿ ಚಿತ್ರ ನಿರ್ಮಾಣ ಸಂಸ್ಥೆಯೊಂದಿಗೆ ಸುಮಾರು 4.50 ಕೋಟಿಯಷ್ಟು ಮೌಲ್ಯದ ಒಡಂಬಡಿಕೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿರುತ್ತದೆ.

 

ಸುಮಾರು 5 ನಿಮಿಷದ ಕಿರು ಚಿತ್ರ ನಿರ್ಮಾಣಕ್ಕೆ 4.50 ಕೋಟಿಯಷ್ಟು ಮೌಲ್ಯ ನಿಗದಿಪಡಿಸಿರುವುದು ತುಂಬಾ ಹೆಚ್ಚಾಗಿರುವುದು ಕಂಡು ಬರುತ್ತದೆ. ಒಂದು ಪಕ್ಷ ಇಲಾಖೆಯು ಮೇಲ್ಕಂಡ ಮೌಲ್ಯಕ್ಕೆ ಒಡಂಬಡಿಕೆ ಮಾಡಿಕೊಂಡು ಕಾರ್ಯಾದೇಶ ನೀಡಿರುವುದು ನಿಜವೇ ಆದಲ್ಲಿ ಇಷ್ಟೊಂದು ಹೆಚ್ಚು ಮೌಲ್ಯಕ್ಕೆ ನಿಗದಿಪಡಿಸಿದ ಒಡಂಬಡಿಕೆಯು ಇಂದಿನ ಪರಿಸ್ಥಿತಿಗೆ ಅಗತ್ಯ ಹಾಗೂ ಸೂಕ್ತವಿರುವುದಿಲ್ಲವೆಂದು ಭಾವಿಸಿದೆ.

 

ಸದರಿ ಒಡಂಬಡಿಕೆಯ ಕಾರ್ಯಾದೇಶವನ್ನು ವಜಾಕರಿಸಲು ಸೂಚಿಸಿದೆ. ಮುಂದುವರೆದು ಇನ್ನು ಮುಂದೆ ಇಂತಹ ಪ್ರಕರಣಗಳಲ್ಲಿ ಇಲಾಖಾ ಸಚಿವರು ಹಾಗೂ ಅನುಭವಿಗಳು ಜೊತೆಗೆ ಸಮಾಲೋಚನೆ, ಚರ್ಚೆ ನಡೆಸಿ ತೀರ್ಮಾನ ಕೈಕೊಳ್ಳಬೇಕು ಎಂದು ನಿರಾಣಿ ಅವರು ಸೂಚಿಸಿದ್ದಾರೆ.

 

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಹೆಸರಿನಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಲು ಸಜ್ಜಾಗಿರುವ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಧಿಕಾರಿಗಳು ಕೆಟಿಪಿಪಿ ಕಾಯ್ದೆಯಿಂದ ಆ ಎಲ್ಲಾ ಕಾರ್ಯಕ್ರಮಗಳನ್ನು ಹೊರಗಿಟ್ಟಿದ್ಧಾರೆ. 4(ಜಿ) ವಿನಾಯಿತಿ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ಲೂಟಿ ಮಾಡುತ್ತಿದ್ದಾರೆ. ಆದರೆ ಇದಾವುದೂ ಸಚಿವರ ಗಮನಕ್ಕೆ ಬಂದಿಲ್ಲ ಎಂದು ಗೊತ್ತಾಗಿದೆ.

SUPPORT THE FILE

Latest News

Related Posts