ಮುಕ್ತ ವಿವಿ ವಿದ್ಯಾರ್ಥಿಗಳ ಶುಲ್ಕ ದುರ್ಬಳಕೆ; 16 ವರ್ಷಗಳ ಬಳಿಕ ಸಿಬಿಐ ತನಿಖೆಗೆ ಮುಂದಾದ ಸರ್ಕಾರ

ಬೆಂಗಳೂರು; ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದೊಂದಿಗೆ (ಕೆಎಸ್‌ಒಯು) ದೇಶದಾದ್ಯಂತ ಒಡಂಬಡಿಕೆ ಮಾಡಿಕೊಂಡಿದ್ದ ಸಂಸ್ಥೆಗಳು ವಿದ್ಯಾರ್ಥಿಗಳ ಶುಲ್ಕವನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರಕರಣವನ್ನು ಸಿಬಿಐ ವಹಿಸುವ ಸಂಬಂಧ ರಾಜ್ಯ ಸರ್ಕಾರವು ಪ್ರಕ್ರಿಯೆಗಳನ್ನು ಆರಂಭಿಸಿದೆ.

 

ಈ ಪ್ರಕರಣ ಸಂಬಂಧ ಸಿಬಿಐ ಸಂಸ್ಥೆಯು 2006ರ ಆಗಸ್ಟ್‌ 2ರಂದೇ ಪತ್ರ ಬರೆದಿದ್ದರೂ ಯಾವುದೇ ಪ್ರಕ್ರಿಯೆಗಳೂ ನಡೆದಿರಲಿಲ್ಲ. ಆದರೀಗ 16 ವರ್ಷಗಳ ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸಲು ಮುಂದಾಗಿರುವುದು ಇದೀಗ ಬಹಿರಂಗವಾಗಿದೆ.

 

2009-10ನೇ ಸಾಲಿನಿಂದ 2015-16ರವರೆಗೆ ವಿದ್ಯಾರ್ಥಿಗಳಿಂದ ಸ್ವೀಕರಿಸಿದ್ದ ಶುಲ್ಕವನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರಕರಣವನ್ನು ಸಿಬಿಐಗೆ ವಹಿಸುವ ಪೂರ್ವದಲ್ಲಿ ವಿವರಗಳನ್ನು ಬಯಸಿರುವ ಒಳಾಡಳಿತ ಇಲಾಖೆ(ಅಪರಾಧಗಳು)ಯು ಉನ್ನತ ಶಿಕ್ಷಣ ಇಲಾಖೆಗೆ 2022ರ ಆಗಸ್ಟ್‌ 23ರಂದು ಪತ್ರ ಬರೆದಿದೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಕರ್ನಾಟಕ ರಾಜ್ಯ ಮುಕ್ತ ವಿವಿದೊಂದಿಗೆ ದೇಶದೆಲ್ಲೆಡೆ ಒಡಂಬಡಿಕೆ ಮಾಡಿಕೊಂಡಿರುವ ಸಂಸ್ಥೆಗಳು 2009-10ನೇ ಸಾಲಿನಿಂದ 2015-16ನೇ ಸಾಲಿನವರೆಗೆ ವಿದ್ಯಾರ್ಥಿಗಳಿಂದ ಸ್ವೀಕರಿಸಿರುವ ಶುಲ್ಕವನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರಕರಣವನ್ನು ಸಿಬಿಐಗೆ ವಹಿಸುವ ಪೂರ್ವದಲ್ಲಿ ವಿವರಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಒಳಾಡಳಿತ ಇಲಾಖೆಗೆ ಕಳಿಸಿಕೊಡಬೇಕು,’ ಎಂದು ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮುಹಮ್ಮದ್‌ ಇಬ್ರಾಹಿಂ ಅವರು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.

 

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಸೇರಿದಂತೆ ಇನ್ನಿತರ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಉನ್ನತ ಶಿಕ್ಷಣ ಇಲಾಖೆ ಹಿಂಜರಿಯುತ್ತಿದೆ. ಇದರ ಬೆನ್ನಲ್ಲೇ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅಕ್ರಮ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕೇ ಬೇಡವೇ ಎಂಬ ಕುರಿತು ಕರ್ನಾಟಕ ವಿಧಾನಸಭೆಯ ಅಧೀನ ಶಾಸನ ರಚನಾ ಸಮಿತಿ ಚರ್ಚಿಸಿತ್ತು.

 

 

ವಿಶ್ವವಿದ್ಯಾಲಯದ ಅಕ್ರಮ ಪ್ರಕರಣಗಳ ಕುರಿತು ತನಿಖಾ ಸಂಸ್ಥೆ ಮತ್ತು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯ ವಿಚಾರಣೆ ಸಮಿತಿ ಆರೋಪಿತರ ವಿರುದ್ಧ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿರುವವರ ಪೈಕಿ ರಾಜಕೀಯ ಹಿನ್ನೆಲೆಯ ಆರೋಪಿತ ಅಧಿಕಾರಿಗಳು ತೆರೆಮರೆಯಲ್ಲಿ ಸರ್ಕಾರದ ಮಟ್ಟದಲ್ಲಿ ಸರಿದೂಗಿಸುತ್ತಿರುವ ಬೆನ್ನಲ್ಲೇ ಅಧೀನ ಶಾಸನ ರಚನಾ ಸಮಿತಿಯೂ  ಬಿರುಸಿನ ಚರ್ಚೆ ನಡೆಸಿರುವುದು ವಿಶ್ವವಿದ್ಯಾಲಯ ಮತ್ತು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿತ್ತು.

 

 

ಶಾಸಕ ಎಸ್‌ ಎ ರಾಮದಾಸ್‌ ಅಧ್ಯಕ್ಷತೆಯಲ್ಲಿದ್ದ ಕರ್ನಾಟಕ ವಿಧಾನಸಭೆ ಅಧೀನ ಶಾಸನಾ ರಚನೆ ಸಮಿತಿ 2020 ರ ಜನವರಿ 14ರಂದು ನಡೆಸಿದ್ದ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿತ್ತು.

 

 

ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅಕ್ರಮ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿ  ಬಿ ಐ  ತನಿಖೆ  ಕುರಿತು ಸಮರ್ಥಿಸಿಕೊಂಡಿದ್ದ ಸಮಿತಿ ಅಧ್ಯಕ್ಷ ಎಸ್‌ ಎ ರಾಮದಾಸ್‌  ಈ ಪ್ರಕರಣವು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಅನ್ಯ ರಾಜ್ಯಗಳು  ಮತ್ತು ಅನ್ಯ ರಾಷ್ಟ್ರಗಳಲ್ಲಿಯೂ  ಸಂಯೋಜನೆ  ಕೇಂದ್ರಗಳು ಮತ್ತು ಅಧ್ಯಯನ ಕೇಂದ್ರಗಳು ಇರುವ ಕಾರಣ ಅಂತರರಾಜ್ಯ ಮತ್ತು  ಅಂತಾರಾಷ್ಟ್ರೀಯ ವ್ಯವಹಾರಗಳನ್ನು ತನಿಖೆ ಮಾಡಲು ರಾಜ್ಯದ ಯಾವುದೇ ತನಿಖಾ ಸಮಿತಿಗೂ ಕಷ್ಟವಾಗುತ್ತದೆ. ಆದ್ದರಿಂದ ಇದನ್ನು ಸಿಬಿಐಗೆ ವಹಿಸಲಾಗುತ್ತದೆ ಎಂದು ವರದಿಯೊಂದನ್ನು ಉಲ್ಲೇಖಿಸಿ  ಸಮಿತಿಯಲ್ಲಿ  ಚರ್ಚಿಸಿರುವುದು ದಾಖಲೆಗಳಿಂದ  ತಿಳಿದು ಬಂದಿದೆ.

ಮುಕ್ತ ವಿ.ವಿ. ಅಕ್ರಮ; ಸಿಬಿಐ ತನಿಖೆಯತ್ತ ಅಧೀನ ಶಾಸನ ರಚನಾ ಸಮಿತಿ ಒಲವು?

 

ದೇಶ ಮತ್ತು ವಿದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲುದಾರಿಕೆಯಲ್ಲಿ ವಿವಿಧ ಕೋರ್ಸ್‌ಗಳನ್ನು ಅಕ್ರಮವಾಗಿ ಆರಂಭಿಸಿದ ಆರೋಪಕ್ಕೆ ಗುರಿಯಾಗಿದ್ದರು. ಇಂತಹ ಆರೋಪಗಳು ಕೆ ಎಸ್ ರಂಗಪ್ಪ ಅವರ ನಂತರ ಕುಲಪತಿ ಆಗಿದ್ದ ಪ್ರೊ.ಎಂ.ಜಿ.ಕೃಷ್ಣನ್ ಅವರ ವಿರುದ್ಧವೂ ಕೇಳಿ ಬಂದಿತ್ತು.

 

 

230ಕ್ಕೂ ಹೆಚ್ಚು ಖಾಸಗಿ ಸಂಸ್ಥೆಗಳ ಜತೆ ಕೆಎಸ್‌ಒಯು ಒಡಂಬಡಿಕೆ ಮಾಡಿಕೊಂಡಿತ್ತಲ್ಲದೆ ಈ ಸಂಸ್ಥೆಗಳು ದೇಶದಾದ್ಯಂತ 5 ಸಾವಿರಕ್ಕೂ ಹೆಚ್ಚು ಅಧ್ಯಯನ ಕೇಂದ್ರಗಳನ್ನು ತೆರೆದಿದ್ದವು. ಈ ಹಿನ್ನೆಲೆಯಲ್ಲಿ ಯುಜಿಸಿ ಮುಕ್ತ ವಿ.ವಿ.ಯ ಮಾನ್ಯತೆ ರದ್ದುಪಡಿಸಿತ್ತು.

 

 

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಕೆ.ಎಸ್‌.ರಂಗಪ್ಪ ಅವರು ಕುಲಪತಿ ಆಗಿದ್ದಾಗ ಖಾಸಗಿ ಸಂಸ್ಥೆಗಳೊಂದಿಗೆ ಅಕ್ರಮ ಒಪ್ಪಂದ ಆರೋಪ, ಕಟ್ಟಡ ಕಾಮಗಾರಿ ಮತ್ತು  ಅಕ್ರಮ ನೇಮಕಾತಿ ಹಗರಣ ನಡೆದಿದೆ ಎಂದು ನಿವೃತ್ತ ನ್ಯಾಯಾಧೀಶರ  ನೇತೃತ್ವದ ತನಿಖಾ ಸಮಿತಿ ಹೊರಗೆಡವಿತ್ತು.

 

 

ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಪ್ರೊ ಕೆ ಎಸ್‌ ರಂಗಪ್ಪ ಮತ್ತು ಪ್ರೊ  ಎಂ ಜಿ ಕೃಷ್ಣನ್‌  ಅವರ ವಿರುದ್ಧ ಕೇಳಿ ಬಂದಿದ್ದ ಒಟ್ಟು 14 ಆರೋಪಗಳ ಬಗ್ಗೆ ತನಿಖೆಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಡಾ.ಕೆ ಭಕ್ತವತ್ಸಲ ಸಮಿತಿ ರಚಿಸಿದ್ದರು. ಈ ಸಮಿತಿಯು 2 ಸಂಪುಟಗಳಲ್ಲಿ, 612 ಪುಟಗಳನ್ನು ಒಳಗೊಂಡ ವರದಿ ಸಲ್ಲಿಸಿತ್ತು.

 

 

ಅಲ್ಲದೆ ಕಂಪ್ಯೂಟರ್‌ ಮತ್ತಿತರ ಉಪಕರಣಗಳ ಖರೀದಿಗಾಗಿ ಮುಂಬೈ ಮೂಲದ ಕಂಪನಿ ಜತೆ ಅಕ್ರಮ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೂ  ಪ್ರೊ.ಕೆ.ಎಸ್.ರಂಗಪ್ಪ ಗುರಿಯಾಗಿದ್ದರು. ಈ ಆರೋಪದ ಕುರಿತು ತನಿಖೆಗೆ ರಾಜ್ಯಪಾಲರು ನೇಮಿಸಿದ್ದ ಪ್ರತ್ಯೇಕ ಸಮಿತಿ ವಿಚಾರಣೆ ನಡೆಸಿ ₹ 54 ಲಕ್ಷದ ಅಕ್ರಮ ನಡೆದಿದೆ ಎಂದು ವರದಿಯಲ್ಲಿ ಹೇಳಿತ್ತು. ಆದರೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಚ್‌ ಡಿ ಕುಮಾರಸ್ವಾಮಿ ಅವಧಿಯಲ್ಲಿ ವರದಿ ಆಧರಿಸಿ ಕ್ರಮ ಕೈಗೊಂಡಿರಲಿಲ್ಲ.

 

 

ಅಲ್ಲದೆ ಮುಕ್ತ ವಿಶ್ವವಿದ್ಯಾಲಯದಲ್ಲಿ ಸರಣಿ ರೂಪದಲ್ಲಿ ನಡೆದಿದೆ ಎನ್ನಲಾಗಿರುವ ವಿವಿಧ ಅಕ್ರಮಗಳ  ಕುರಿತು ವಿಧಾನಪರಿಷತ್‌ನ ಸದಸ್ಯರಾಗಿದ್ದ ಗೋ ಮಧುಸೂದನ್‌ ಅವರು ಸದನದ  ಒಳಗೆ ಮತ್ತು ಹೊರಗೆ ಆರೋಪಿಸಿದ್ದರು. ಈ ಸಂಬಂಧ ಪ್ರೊ ಕೆ ಎಸ್ ರಂಗಪ್ಪ ಮತ್ತು ಗೋ ಮಧುಸೂದನ್‌ ನಡುವೆ ಆರೋಪ, ಪ್ರತ್ಯಾರೋಪಗಳು ಕೇಳಿ ಬಂದಿದ್ದವು.

SUPPORT THE FILE

Latest News

Related Posts