ಶಾಲೆಗಳಲ್ಲಿ ಭಗವದ್ಗೀತೆ ಅಭಿಯಾನದ ಹಿಂದೆ ಸೋಂದಾ ಸ್ವರ್ಣಮಲ್ಲಿ ಮಠ?; ಶ್ರೀಗಳ ಪತ್ರ ಬಹಿರಂಗ

ಬೆಂಗಳೂರು; ಸಾಮಾಜಿಕ ಸಾಮರಸ್ಯ, ವ್ಯಕ್ತಿತ್ವ ವಿಕಸನ, ನೈತಿಕತೆಯ ಪುನರುತ್ಥಾನ, ರಾಷ್ಟ್ರೀಯ ಭಾವೈಕ್ಯ ಉದ್ದೇಶಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಶ್ರೀ ಭಗವದ್ಗೀತಾ ಅಭಿಯಾನ ನಡೆಸುವ ಸಂಬಂಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಬಿ ಸಿ ನಾಗೇಶ್‌ ಅವರು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.

 

‘ಪ್ರಸ್ತುತ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದಿದ್ದೇನೆ. ನೈತಿಕ ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಸಲು ಸಮಿತಿ ರಚಿಸಿದ್ದೇವೆ. ಶಿಫಾರಸು ಆಧರಿಸಿ ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರಿಸಲಾಗುವುದು’ ಎಂದು ಸ್ಪಷ್ಟಪಡಿಸಿದ್ದರ ಬೆನ್ನಲ್ಲೇ ಶಿಕ್ಷಣ ಸಂಸ್ಥೆಗಳಲ್ಲಿ ಶ್ರೀ ಭಗವದ್ಗೀತಾ ಅಭಿಯಾನ ನಡೆಸಬೇಕು ಎಂದು ಉತ್ತರ ಕನ್ನಡ ಶಿರಸಿಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನಮ್‌ ಸರ್ಕಾರಕ್ಕೆ ಬರೆದಿದ್ದ ಪತ್ರವು ಬಹಿರಂಗವಾಗಿದೆ.

 

ಈ ಪತ್ರ ಆಧರಿಸಿ ಸಚಿವ ಬಿ ಸಿ ನಾಗೇಶ್‌ ಅವರು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ 2022ರ ಜುಲೈ 22ರಂದು ಟಿಪ್ಪಣಿ ಹೊರಡಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಶಾಲೆಗಳಲ್ಲಿ ಶ್ರೀಮದ್ ಭಗವದ್ಗೀತೆ ಕಲಿಸಲು ಗುಜರಾತ್‌ ರಾಜ್ಯ ಸರಕಾರದ ನಿರ್ಧಾರದ ಮೇಲೆ ಗುಜರಾತ್ ಉಚ್ಚ ನ್ಯಾಯಾಲಯವು ಸರಕಾರದಿಂದ ಸ್ಪಷ್ಟೀಕರಣ ಕೇಳಿರುವ ಬೆನ್ನಲ್ಲೇ ಸಚಿವ ಬಿ ಸಿ ನಾಗೇಶ್‌ ಅವರು ಬರೆದಿರುವ ಪತ್ರವು ಮಹತ್ವ ಪಡೆದುಕೊಂಡಿದೆ.

 

ಟಿಪ್ಪಣಿಯಲ್ಲೇನಿದೆ?

 

ಸಾಮಾಜಿಕ ಸಾಮರಸ್ಯ, ವ್ಯಕ್ತಿತ್ವ ವಿಕಸನ, ನೈತಿಕತೆಯ ಪುನರುತ್ಥಾನ, ರಾಷ್ಟ್ರೀಯ ಭಾವೈಕ್ಯ ಈ ಮೂಲ ಉದ್ದೇಶಗಳೊಂದಿಗೆ ಸ್ವರ್ಣವಲ್ಲೀ ಮಹಾಸಂಸ್ಥಾನಮ್‌ ಭಗವದ್ಗೀತಾ ಅಭಿಯಾನ ನಡೆಸಿಕೊಂಡು ಬರುತ್ತಿದೆ. ರಾಜ್ಯದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ವಿದ್ಯಾಲಯಗಳಲ್ಲಿ ಶ್ರೀ ಭಗವದ್ಗೀತಾ ಅಭಿಯಾನದ ಅಂಗವಾಗಿ ಗೀತಾ ಕಂಠಪಾಠ, ಭಾಷಣ, ರಸಪ್ರಶ್ನೆ ಸ್ಪರ್ಧೆಗಳನ್ನು ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ನಡೆಸಲಾಗುತ್ತಿದ್ದು ಶ್ರೀ ಭಗವದ್ಗೀತಾ ಅಭಿಯಾನವನ್ನು ಮುಂದುವರೆಸಿಕೊಂಡು ಹೋಗಲು ಸೂಚಿಸುವಂತೆ ಕೋರಿರುತ್ತಾರೆ. ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಟಿಪ್ಪಣಿಯಲ್ಲಿ ಸೂಚಿಸಿದ್ದಾರೆ.

 

ಸ್ವರ್ಣವಲ್ಲಿ ಶ್ರೀಗಳ ಪತ್ರದಲ್ಲೇನಿತ್ತು?

 

ಶ್ರೀಮಜ್ಜಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್‌ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಇವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ 2007 ಅಕ್ಟೋಬರ್‌ನಿಂದ ನಿರಂತರವಾಗಿ ರಾಜ್ಯಾದ್ಯಂತ ಶ್ರೀ ಭಗವದ್ಗೀತಾ ಅಭಿಯಾನವನ್ನು ನಡೆಸಿಕೊಂಡು ಬರುತ್ತಿದೆ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಪದವಿಪೂರ್ವ ವಿದ್ಯಾಲಯಗಳಲ್ಲಿ ಶ್ರೀ ಭಗವದ್ಗೀತಾ ಅಭಿಯಾನ ಅಂಗವಾಗಿ ಗೀತಾ ಕಂಠಪಾಠ, ಭಾಷಣ, ರಸಪ್ರಶ್ನೆ ಸ್ಪರ್ಧೆಗಳನ್ನು ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ನಡೆಸಲಾಗುತ್ತಿದೆ. ಈ ವಿಷಯದ ಕುರಿತು 2009ರಲ್ಲಿ ಸರ್ಕಾರದ ಆದೇಶವನ್ನೂ ಪಡೆಯಲಾಗಿದೆ. ಶ್ರೀ ಭಗವದ್ಗೀತಾ ಅಭಿಯಾನವನ್ನು ಮುಂದುವರೆಸಿಕೊಂಡು ಹೋಗಲು ಅನುಕೂಲವಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿ ಈ
ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಬಿ ಸಿ ನಾಗೇಶ್‌ ಅವರಿಗೆ ಬರೆದಿರುವ ಪತ್ರದಲ್ಲಿ ಕೋರಿದ್ದರು.

 

 

ಗುಜರಾತ್‌ನ ಭಾಜಪ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ರಾಜ್ಯದ 6ನೇ ತರಗತಿಯಿಂದ 12ನೇ ತರಗತಿಯವರೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ‘ಶ್ರೀಮದ್ ಭಗವದ್ಗೀತೆ ಸಾರ’ ಕಲಿಸಲು ಮಾರ್ಚ್ ತಿಂಗಳಿನಲ್ಲಿ ಘೋಷಣೆ ಮಾಡಿತ್ತು. ಈ ನಿರ್ಧಾರಕ್ಕೆ ‘ಜಮೀಯತ-ಉಲೇಮಾ-ಏ-ಹಿಂದ್’ ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ಮನವಿ ದಾಖಲಿಸಿತ್ತು. ಈ ಬಗ್ಗೆ ನ್ಯಾಯಾಲಯ ಸರಕಾರದ ಹತ್ತಿರ ಸ್ಪಷ್ಟೀಕರಣ ಕೇಳಿದೆ; ಆದರೆ ಈ ನಿರ್ಧಾರವನ್ನು ರದ್ದುಪಡಿಸಿಲ್ಲ.

 

ನ್ಯಾಯಾಲಯ ಸರಕಾರಕ್ಕೆ ಆಗಸ್ಟ್ ೧೮ ರ ವರೆಗೆ ಅದರ ಅಭಿಪ್ರಾಯ ಮಂಡಿಸಲು ಅವಕಾಶ ನೀಡಿದೆ. ‘ಜಮಿಯತ-ಉಲೇಮಾ-ಏ-ಹಿಂದ್’ ಅರ್ಜಿಯಲ್ಲಿ, ಭಾರತೀಯ ಸಂಸ್ಕೃತಿಯ ಮೌಲ್ಯ ಮತ್ತು ಸಿದ್ದಾಂತ, ಹಾಗೂ ಜ್ಞಾನದ ಪ್ರಣಾಲಿ ಶಾಲೆಯ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿದೆ; ಆದರೆ ಅದರಲ್ಲಿ ಒಂದು ಧರ್ಮದ ಪವಿತ್ರ ಗ್ರಂಥದ ಸಿದ್ಧಾಂತಕ್ಕೆ ಆದ್ಯತೆ ನೀಡುವುದು ಎಷ್ಟರಮಟ್ಟಿಗೆ ಯೋಗ್ಯವಾಗಿದೆ ? ಎಂದು ಪ್ರಶ್ನಿಸಿದ್ದನ್ನು ಸ್ಮರಿಸಬಹುದು.

 

ಶಾಲೆಗಳಲ್ಲಿ ಶೇ 90 ರಷ್ಟು ವಿದ್ಯಾರ್ಥಿಗಳು ಯಾವ ಧರ್ಮಕ್ಕೆ ಸೇರಿರುತ್ತಾರೋ ಆ ಧರ್ಮದ ಅಂಶಗಳನ್ನು ಒಳಗೊಂಡ ನೈತಿಕ ಪಾಠವನ್ನು ಮುಂದಿನ ವರ್ಷದಿಂದ ಬೋಧಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದರು. ಅಲ್ಲದೆ ಮುಂಬರುವ ಶೈಕ್ಷಣಿಕ ವರ್ಷದಿಂದ ಪಂಚತಂತ್ರ, ರಾಮಾಯಣ, ಮಹಾಭಾರತ, ಭಗವದ್ಗೀತೆ ಅಲ್ಲದೆ, ಎಲ್ಲ ಧರ್ಮಗಳ ಉತ್ತಮ ಅಂಶಗಳನ್ನು ಒಳಗೊಂಡ ನೈತಿಕ ಶಿಕ್ಷಣವನ್ನು ಶಾಲೆಗಳಲ್ಲಿ ಪರಿಚಯಿಸಲಾಗುವುದು ಎಂದಿದ್ದರು.

SUPPORT THE FILE

Latest News

Related Posts