ಬೆಂಗಳೂರು; ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಕುರುಬರಹಳ್ಳಿ ಗ್ರಾಮದ ಸರ್ವೆ ನಂಬರ್ 89ರಲ್ಲಿನ ಒಟ್ಟು ಗೋಮಾಳ ಜಮೀನಿನಲ್ಲಿ 24 ಎಕರೆ ಮಂಜೂರಿಗೆ ಅರ್ಜಿ ಸಲ್ಲಿಸಿದ್ದ ಜನಸೇವಾ ಟ್ರಸ್ಟ್‌ನ ನಿರ್ಮಲ್‌ಕುಮಾರ್ ಅವರು ಇದೇ ಟ್ರಸ್ಟ್‌ನ ಮತ್ತೊಂದು ಅಂಗ ಸಂಸ್ಥೆಯಾಗಿರುವ ಜನಸೇವಾ ವಿಶ್ವಸ್ಥ ಮಂಡಳಿಯ ಪರವಾಗಿಯೂ 35.33 ಎಕರೆ ಜಮೀನು ಮಂಜೂರಾತಿಗಾಗಿ ಮರು ಮನವಿ ಸಲ್ಲಿಸಿದ್ದರು ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.
ಆರಂಭದಲ್ಲಿ ಅಂದರೆ 2021ರ ಜುಲೈ 15ರಂದು 24.00 ಎಕರೆ ಜಮೀನು ಮಂಜೂರಿಗೆ ಅರ್ಜಿ ಸಲ್ಲಿಸಿ ಆ ನಂತರ 11.33 ಎಕರೆ ಹೆಚ್ಚುವರಿಯಾಗಿ ಸೇರಿಸಿ 2021ರ ಡಿಸೆಂಬರ್ 3ರಂದು ಸಲ್ಲಿಸಿದ್ದ ಮನವಿಯನ್ನು ರಾಜ್ಯ ಬಿಜೆಪಿ ಸರ್ಕಾರವು ಪುರಸ್ಕರಿಸಿರುವುದು ಲಭ್ಯವಿರುವ ದಾಖಲೆಗಳಿಂದ ತಿಳಿದು ಬಂದಿದೆ. ಈ ಸಂಬಂಧ ಕೆಲ ದಾಖಲೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
‘ಈ ಪೂರ್ವದಲ್ಲಿ ಪ್ರಶ್ನಿತ ಸಂಸ್ಥೆಗೆ 24.00 ಎಕರೆಯನ್ನು ಮಂಜೂರು ಮಾಡಲು ಪ್ರಸ್ತಾಪಿಸಲಾಗಿತ್ತು. ಮುಂದುವರೆದು ಸದರಿ ಜನಸೇವಾ ವಿಶ್ವಸ್ಥ ಮಂಡಳಿಯವರು ಮರು ಮನವಿ ಸಲ್ಲಿಸಿ 35.33 ಎಕರೆ ಜಮೀನನ್ನು ಮಂಜೂರು ಮಾಡಲು ಕೋರಿರುತ್ತಾರೆ,’ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಯವರು 2022ರ ಜನವರಿ 29ರಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ತಾವರೆಕೆರೆ ಹೋಬಳಿಯ ಕುರುಬರಹಳ್ಳಿ ಗ್ರಾಮದ ಶೈಕ್ಷಣಿಕ ಉದ್ದೇಶ ಮತ್ತು ಭಾರತೀಯ ಪ್ರಾಚೀನ ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಆರಂಭಿಸಲು ಸರ್ವೆ ನಂಬರ್ 89ರಲ್ಲಿ 35.33 ಎಕರೆ ಜಮೀನು ಮಂಜೂರು ಮಾಡಬೇಕು ಎಂದು ಟ್ರಸ್ಟ್‌ನ ನಿರ್ಮಲ್‌ಕುಮಾರ್ ಅವರು ಕೋರಿಕೆ ಸಲ್ಲಿಸಿದ್ದರು ಎಂಬುದು ದಾಖಲೆಗಳಿಂದ ಗೊತ್ತಾಗಿದೆ. ಎರಡನೇ ಮನವಿಯನ್ನು ಪುರಸ್ಕರಿಸಲು ಸಚಿವ ಆರ್ ಅಶೋಕ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ತಿಳಿದು ಬಂದಿದೆ.
ಇದೇ ಜಮೀನಿನ ಪೈಕಿ (ಕಚೇರಿ ಆದೇಶ ಸಂಖ್ಯೆ;ಎಲ್‌ಎನ್‌ಡಿ(ಎಸ್)ಸಿಆರ್/576/08-09 ದಿನಾಂಕ 14-11-2019) 9.00 ಎಕರೆ ಮತ್ತು (ದಿನಾಂಕ 16-12-2019) 6.00 ಎಕರೆ ಸೇರಿ ಒಟ್ಟು 15.00 ಎಕರೆ ಜಮೀನನ್ನು ಬೆಂಗಳೂರು ನಗರದ ವಿವಿಧ ಪ್ರದೇಶದಲ್ಲಿ ವಾಸಯೋಗ್ಯವಲ್ಲದ ಪ್ರದೇಶಗಳಲ್ಲಿ (ಕೆರೆ ಅಂಗಳ) ಅರಣ್ಯ, ರೈಲ್ವೇ ಹಾಗೂ ಇನ್ನಿತರೆ ನ್ಯಾಯಾಲಯ ಪ್ರಕರಣಗಳು, ಕೊಳಚೆ ಪ್ರದೇಶಗಳ ಶಾಶ್ವತ ಪುನರ್ ವಸತಿಗಾಗಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಕಾಯ್ದಿರಿಸಿ ಆದೇಶ ಹೊರಡಿಸಿದೆ. ಆದರೆ ಈ ಜಮೀನಿನಲ್ಲಿ ಮಂಜೂರು ಮಾಡಿಸಿಕೊಂಡ ಸಂಸ್ಥೆಗಳು ಮಂಜೂರು ಮಾಡಿಸಿಕೊಂಡ ಉದ್ದೇಶಕ್ಕಾಗಿ ಉಪಯೋಗಿಸಿಕೊಂಡಿಲ್ಲ. ಹೀಗಾಗಿ ಹಾಲಿ ಜಮೀನು ಖಾಲಿ ಇದೆಯೇ ಹೊರತು ಅಭಿವೃದ್ದಿಗೊಂಡಿಲ್ಲ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಬರೆದಿದ್ದ ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಎಪ್ಪತ್ತು ಕೋಟಿ ರು. ಬೆಲೆಬಾಳುವ 35.33 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು ಸಂಘ ಪರಿವಾರದ ಅಂಗ ಸಂಸ್ಥೆಯಾಗಿರುವ ಜನಸೇವಾ ಟ್ರಸ್ಟ್‌ಗೆ ಮಂಜೂರು ಮಾಡುವ ಪ್ರಸ್ತಾವನೆಯೇ ತಿರಸ್ಕೃತಗೊಂಡಿತ್ತು. ಗ್ರಾಮಸ್ಥರ ವಿರೋಧದ ನಡುವೆಯೂ ಟ್ರಸ್ಟ್‌ಗೆ ಜಮೀನು ಮಂಜೂರು ಮಾಡಿರುವುದನ್ನು ಸ್ಮರಿಸಬಹುದು.