ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ; ಮುರುಘಾ ಶರಣರ ಬಂಧಿಸದ ಪೊಲೀಸರಿಂದಲೇ ನ್ಯಾಯದ ಅವಹೇಳನ

ಬೆಂಗಳೂರು; ಅಪ್ರಾಪ್ತ ಮಕ್ಕಳ ಮೇಲೆ ತೀವ್ರ ರೀತಿಯ ಲೈಂಗಿಕ ದೌರ್ಜನ್ಯ ಎಸಗಿರುವ ಗುರುತರ ಆರೋಪಗಳಿದ್ದರೂ ಪ್ರಕರಣದ ಒಂದನೆ ಆರೋಪಿ ಮುರುಘಾ ಶರಣರನ್ನು ಬಂಧಿಸುವಲ್ಲಿನ ವೈಫಲ್ಯತೆ ಮಾತ್ರವಲ್ಲದೇ ನ್ಯಾಯವನ್ನು ಅತಿ ಕೆಟ್ಟದಾಗಿ ಅವಹೇಳನ ಮಾಡಿರುವ ಗಂಭೀರ ಆರೋಪಕ್ಕೆ ಚಿತ್ರದುರ್ಗ ಜಿಲ್ಲಾ ಪೊಲೀಸರು ಗುರಿಯಾಗಿದ್ದಾರೆ.

 

ಈ ಅಪರಾಧಗಳು ಜಾಮೀನುರಹಿತವಾದ ಸಂಜ್ಞೇಯ ಅಪರಾಧಗಳಾಗಿವೆ. ಅಲ್ಲದೆ ಮಕ್ಕಳು ಬಹಳ ಕಾಲ ಆರೋಪಿಗಳ ಅಧೀನದಲ್ಲಿದ್ದು ಅವರಿಂದ ಬೆದರಿಕೆಗೆ ಒಳಗಾಗುವ ಸ್ಥಿತಿಯಲ್ಲಿದ್ದಾರೆ, ಆರೋಪಿಗಳು ಸಾಕ್ಷ್ಯಗಳನ್ನು ನಾಶ ಮಾಡಬಲ್ಲ ಪ್ರಭಾವಿಗಳಾಗಿದ್ದಾರೂ ಆರೋಪಿಗಳನ್ನು ಬಂಧಿಸದೇ ಇರುವುದಕ್ಕೆ ಜನವಾದಿ ಸೇರಿದಂತೆ ಇನ್ನಿತರೆ ಮಹಿಳಾ ಸಂಘಟನೆಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಜಂಟಿ ಮನವಿ ಸಲ್ಲಿಸಿದ್ದಾರೆ. ಈ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಮೈನರ್ ಮಕ್ಕಳ ಮೇಲೆ ತೀವ್ರ ರೀತಿಯ ಲೈಂಗಿಕ ದೌರ್ಜನ್ಯ ಎಸಗಿರುವ ಗಂಭೀರ ಆರೋಪ ಅವರ ಮೇಲೆ ಇದ್ದಾಗ್ಯೂ ಸಹ ಅವರನ್ನು ಬಂಧಿಸಲು ಪೊಲೀಸರು ವಿಫಲರಾಗಿರುವುದು ನ್ಯಾಯದ ಅತಿಕೆಟ್ಟ ಅವಹೇಳನವಾಗಿದೆ. ಈ ಅಪರಾಧಗಳು ಜಾಮೀನುರಹಿತವಾದ ಸಂಜ್ಞೇಯ ಅಪರಾಧಗಳಾಗಿವೆ; ಮಕ್ಕಳು ಬಹಳ ಕಾಲ ಆರೋಪಿಗಳ ಅಧೀನದಲ್ಲಿದ್ದು ಅವರಿಂದ ಬೆದರಿಕೆಗೆ ಒಳಗಾಗುವ ಸ್ಥಿತಿಯಲ್ಲಿದ್ದಾರೆ, ಆರೋಪಿಗಳು ಸಾಕ್ಷ್ಯಗಳನ್ನು ನಾಶ ಮಾಡಬಲ್ಲ ಪ್ರಭಾವಿಗಳಾಗಿದ್ದಾರೆ,’ ಎಂದು ಮನವಿಯಲ್ಲಿ ಸಂಘಟನೆಗಳು ಪ್ರಸ್ತಾಪಿಸಿವೆ.

 

ಮನವಿಯಲ್ಲೇನಿದೆ?

 

ಸಂತ್ರಸ್ತ ಮಕ್ಕಳಲ್ಲಿ ಒಬ್ಬಳು ದಲಿತ ಸಮಯದಾಯಕ್ಕೆ ಸೇರಿದವಳು ಎಂದು ವರದಿಯಾಗಿದೆ. ಕೂಡಲೇ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಕ್ರಮ ಜರುಗಿಸಬೇಕು, ಆಪಾದಿತರ ವಿರುದ್ಧ ಈ ಕಾಯ್ದೆಯಡಿಯ ನಿಯಮಗಳಂತೆ ಕಲಂಗಳನ್ನು ಸಹ ಸೇರಿಸಬೇಕು ಹಾಗೂ ಮಕ್ಕಳಿಗೆ ಪುನರ್ವಸತಿ ಮತ್ತು ರಕ್ಷಣೆ ನೀಡಬೇಕು.

 

ಸಂತ್ರಸ್ತರನ್ನು ನ್ಯಾಯೋಚಿತ ಮತ್ತು ಗೌರವಯುತವಾಗಿ ನಡೆಸಿಕೊಳ್ಳುವುದು, ಜಾಮೀನು ಅರ್ಜಿ ವಿಚಾರಣೆಯ ಟಿಪ್ಪಣಿಗಳನ್ನು ಒದಗಿಸುವುದು, ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳುವುದು ಮುಂತಾಗಿ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಎಲ್ಲ ನಿಯಮಗಳನ್ನೂ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಆಡಳಿತಗಳು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.

 

ಈ ಅಪರಾಧದ ಕುರಿತು ನ್ಯಾಯೋಚಿತವಾದ, ತ್ವರಿತವಾದ ಹಾಗೂ ನಿಷ್ಪಕ್ಷಪಾತವಾದ ತನಿಖೆ ನಡೆಯಬೇಕು, ಮಕ್ಕಳಿಗೆ, ಅವರ ಪೋಷಕರಿಗೆ ಹಾಗೂ ಎಲ್ಲ ಸಾಕ್ಷಿದಾರರಿಗೆ ಅಗತ್ಯ ರಕ್ಷಣೆ ನೀಡಬೇಕು, ಮಕ್ಕಳ ಮತ್ತು ಅವರ ಪೋಷಕರ ಗೋಪ್ಯತೆಯನ್ನು ರಕ್ಷಿಸಬೇಕು, ಹಾಗೂ ಎಲ್ಲ ಆರೋಪಿಗಳನ್ನೂ ತಕ್ಷಣ ಬಂಧಿಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.

 

ಇದೇ ಮನವಿಯಲ್ಲಿ ಸಂಘಟನೆಗಳು ಕಾನೂನಿನ 16 ಅಂಶಗಳನ್ನು ಉಲ್ಲೇಖಿಸಿವೆ.

 

ಪೋಕ್ಸೊ ಕಾಯ್ದೆಯ ಕಲಂ 6, 5 ಎಲ್ ಮತ್ತು 17 ಹಾಗೂ ಐಪಿಸಿಯ 376(2)(ಎನ್), 376(3) ಹಾಗೂ 149 ಇವುಗಳಡಿಯ ಅಪರಾಧಗಳು ಒಳಗೊಂಡಿವೆ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಯ ಮೇಲೆ ವಿವಿಧ ರೀತಿಯ ಲೈಂಗಿಕ ಅತ್ಯಾಚಾರಗಳನ್ನು 2019ರ ಜನವರಿಯಿಂದ 2022ರ ಜೂನ್ ನಡುವೆ ಪದೇಪದೇ ನಡೆಸಲಾಗಿದೆ ಎನ್ನುವುದು ಗಮನಾರ್ಹ. ಈ ಅಪರಾಧಗಳು ‘ಹೇಯ’ ಅಪರಾಧಗಳಾಗಿದ್ದು ಅದಕ್ಕಾಗಿ 20 ವರ್ಷಗಳಿಗಿಂತ ಕಮ್ಮಿಯಿಲ್ಲದ ಕಠಿಣ ಶಿಕ್ಷೆಯನ್ನು ವಿಧಿಸಬಹುದಲ್ಲದೆ ಅದನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲು ಕಾಯ್ದೆಯಲ್ಲಿ ಅವಕಾಶವಿದೆ.

 

1) ಪ್ರಕರಣದ ಮಾಹಿತಿ ಬಂದ ತಕ್ಷಣವೇ ಎಫ್‌ಐಆರ್ ದಾಖಲಿಸಿ ಅದರ ಪ್ರತಿಯನ್ನು ದೂರುದಾರರಿಗೆ ಉಚಿತವಾಗಿ ನೀಡಬೇಕು. ನಂತರ ಮಕ್ಕಳನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ದು, ಅದರ ಮಾದರಿಗಳನ್ನು ತಕ್ಷಣವೇ ಫಾರೆನ್ಸಿಕ್ ಪ್ರಯೋಗಾಲಯಕ್ಕೆ ಕಳಿಸಿ ಕೊಡಬೇಕು [rule 4(3)(ಎ)(ಬಿ)(ಸಿ)(ಡಿ) r/w rule 6.]

 

ಪ್ರಸ್ತುತ ಪ್ರಕರಣದಲ್ಲಿ ಈ ನಿಯಮವನ್ನು ಪಾಲಿಸಲಾಗಿದೆಯೆ ಎಂಬುದು ಸ್ಪಷ್ಟವಿಲ್ಲ. ವೈದ್ಯಕೀಯ ತಪಾಸಣೆಯು ಮಗುವಿನ ಖಾಸಗಿತನವನ್ನು ರಕ್ಷಿಸಬೇಕು ಹಾಗೂ ತಪಾಸಣೆಯ ವೇಳೆ ‘ಎರಡು ಬೆರಳುಗಳ ಪರೀಕ್ಷೆ’ಯನ್ನು ನಡೆಸಬಾರದು.

 

2) ಮಗುವಿನ ಹೇಳಿಕೆಯನ್ನು ಅವರ ಮನೆಯಲ್ಲಿ ಅಥವಾ ಅವರು ಸಾಮಾನ್ಯವಾಗಿ ವಾಸಿಸುವಲ್ಲಿ ಇಲ್ಲವೇ ಮಗು ಆಯ್ಕೆ ಮಾಡುವ ಸ್ಥಳದಲ್ಲಿ ದಾಖಲಿಸಿಕೊಳ್ಳಬೇಕು. ಆ ಸಮಯದಲ್ಲಿ, ಸಬ್ ಇನ್‌ಸ್ಪೆಕ್ಟರ್ ದರ್ಜೆಗಿಂತ ಕಮ್ಮಿಯಿಲ್ಲದ ಮಹಿಳಾ ಅಧಿಕಾರಿಯು ಯೂನಿಫಾರಂ ಅಲ್ಲದ ನಾಗರಿಕ ಉಡುಪಿನಲ್ಲಿ ಹಾಜರಿರಬೇಕು [ಸೆಕ್ಷನ್ 24(1) ಮತ್ತು (2).]

 

3) ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯು, ಮಕ್ಕಳು ಆರೋಪಿಯೊಂದಿಗೆ ಯಾವ ರೀತಿಯಲ್ಲೂ ಸಂಪರ್ಕಕ್ಕೆ ಬರದಂತೆ ಹಾಗೂ ಅವರ ಗುರುತು ಸಾರ್ವಜನಿಕ ಮಾಧ್ಯಮಗಳಿಗೆ ಗೊತ್ತಾಗದಂತೆ ಜಾಗ್ರತೆ ವಹಿಸಬೇಕು [ಸೆಕ್ಷನ್ 24(3) ಮತ್ತು(5).]

 

4) ಅಪರಾಧವು ಮಗು ವಾಸಿಸುವ ಮನೆ ಅಥವಾ ಅದೇ ಕಟ್ಟಡದಲ್ಲಿ ನಡೆದಿದೆ ಎಂಬ ಸಂದೇಹವಿದ್ದಲ್ಲಿ ‘ವಿಶೇಷ ಬಾಲಾಪರಾಧ ಘಟಕ’ವು (SJPU) ಮಗುವನ್ನು ‘ಮಕ್ಕಳ ಹಿತರಕ್ಷಣಾ ಸಮಿತಿ'(CWC)ಯ ಮುಂದೆ 24 ಗಂಟೆಯೊಳಗೆ ಹಾಜರುಪಡಿಸಬೇಕು [ನಿಯಮ 4(4).] ಇದನ್ನು ನಿರ್ಧರಿಸುವಾಗ SJP ಘಟಕದವರು ಮಗುವಿನ ಹಿತಾಸಕ್ತಿಯನ್ನು ಗರಿಷ್ಠ ಮಟ್ಟಕ್ಕೆ ರಕ್ಷಿಸಬೇಕು ಹಾಗೂ ಮಗುವಿನ ತಾಯ್ತಂದೆ/ಪೋಷಕರು ಇಲ್ಲವೇ ಮಗುವಿನ ನಂಬಿಕಸ್ತರಿಗೆ ತಿಳಿಸಬೇಕು. ನಂತರ CWCಯು ಮಗುವನ್ನು ಸದರಿ ಸ್ಥಳದಿಂದ ಬೇರ್ಪಡಿಸಿ, ರಕ್ಷಣಾ ಗೃಹ ಅಥವಾ ಮಕ್ಕಳ ವಸತಿಯಲ್ಲಿ ಇರಿಸುವ ಅಗತ್ಯವಿದೆಯೆ ಎಂಬುದನ್ನು 3 ದಿನದೊಳಗೆ ನಿರ್ಧರಿಸಬೇಕು. [ನಿಯಮ 4(5).]

 

5) ಈ ಎಲ್ಲ ಪ್ರಕ್ರಿಯೆಗಳಲ್ಲಿ CWCಯು ಮಕ್ಕಳಿಗೆ ಒಬ್ಬರು ಬೆಂಬಲದ ವ್ಯಕ್ತಿಯನ್ನು ಒದಗಿಸಬಹುದು [ನಿಯಮ 4(8)]; ಅವರು ಮಕ್ಕಳು ನೀಡುವ ಮಾಹಿತಿಗಳನ್ನು ಗೋಪ್ಯವಾಗಿಡಬೇಕು ಮತ್ತು ಅವರಿಗೆ ಎಲ್ಲ ಅಗತ್ಯ ಮಾಹಿತಿಗಳನ್ನು ಒದಗಿಸಬೇಕು [4(9)].

 

6) ವೈದ್ಯಕೀಯ ತಪಾಸಣೆಯನ್ನು CrPC 1973ರ 164ಎ ಕಲಮಿನಡಿ ಮಹಿಳಾ ವೈದ್ಯರೊಬ್ಬರು ಮಗುವಿನ ತಾಯ್ತಂದೆ ಅಥವಾ ನಂಬಿಕಸ್ತರೊಬ್ಬರ ಸಮಕ್ಷಮದಲ್ಲಿ ನಡೆಸಬೇಕು [ಸೆ. 27].

 

7) ತನ್ನ ಆಯ್ಕೆಯ ವಕೀಲರೊಬ್ಬರ ನೆರವು ಪಡೆಯುವ ಹಕ್ಕು ಮಗುವಿಗೆ ಇರುತ್ತದೆ; ಒಂದು ವೇಳೆ ಇಂಥ ನೆರವು ಒದಗಿಸಲು ‘ಲೀಗಲ್ ಸರ್ವಿಸಸ್ ಪ್ರಾಧಿಕಾರ’ಕ್ಕೆ ಸಾಧ್ಯವಿಲ್ಲದಿದ್ದಲ್ಲಿ ಒಬ್ಬರು ಆಪ್ತ ಸಲಹೆಗಾರ (ಕೌನ್ಸೆಲ್)ರನ್ನು ಒದಗಿಸಬೇಕು [ಸೆ. 40 r/w rule 4(3)(ಎಫ್)]. ಇಂಥ ಸಲಹೆಗಾರರ ಸೌಲಭ್ಯ ಅಥವಾ ಬೆಂಬಲದ ಸೌಲಭ್ಯ ಇರುವುದನ್ನು ಮಗುವಿನ ತಾಯ್ತಂದೆ/ಪೋಷಕರು/ನಂಬಿಕಸ್ತರಿಗೆ ತಿಳಿಸಬೇಕು ಹಾಗೂ ಅಂಥವರನ್ನು ಸಂಪರ್ಕಿಸಲು ನೆರವಾಗಬೇಕು [ನಿಯಮ 4(3)(ಡಿ)(ಎಫ್) ಮತ್ತು 4(14)(15)]. CWCಯು ಇಂಥ ಕಾನೂನು ನೆರವು ಮತ್ತು ಬೆಂಬಲ ಒದಗಿಸಲು ಲೀಗಲ್ ಸರ್ವಿಸಸ್ ಪ್ರಾಧಿಕಾರಕ್ಕೆ ಶಿಫಾರಸು ಮಾಡಬಹುದು [ನಿ. 7].

 

8) ದೆಹಲಿ ಮನೆಗೆಲಸದ ಮಹಿಳೆಯರ ವೇದಿಕೆ ವರ್ಸಸ್ ಭಾರತ ಸರ್ಕಾರ (1955) 1 SCC 14 ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಇದರಲ್ಲಿ, ಸಂತ್ರಸ್ತೆಯ ವಕೀಲರು ಆಕೆಗೆ ಪ್ರಕರಣವನ್ನು ವಿವರಿಸಿ ಆಕೆಯನ್ನು ಸಜ್ಜುಗೊಳಿಸುವುದು, ಪೊಲೀಸ್ ಠಾಣೆಯಲ್ಲಿ ಕಾನೂನು ನೆರವು, ವಕೀಲರ ಮೂಲಕ ತನ್ನನ್ನು ಪ್ರತಿನಿಧಿಸುವುದು, ಲಭ್ಯವಿರುವ ವಕೀಲರ ಪಟ್ಟಿ – ಈ ಮಾಹಿತಿಗಳನ್ನು ಒದಗಿಸುವುದು ಇವೆಲ್ಲವೂ ಸೇರಿವೆ. ಸಂತ್ರಸ್ತೆಯ ಗುರುತನ್ನು ಗೋಪ್ಯವಾಗಿ ಇರಿಸಬೇಕು.

 

9) CWCಯು ಮಕ್ಕಳಿಗೆ ಆಹಾರ, ಬಟ್ಟೆ, ಪ್ರಯಾಣ ಸೌಲಭ್ಯ ಹಾಗೂ ನಗದು ಪರಿಹಾರದ ಶಿಫಾರಸು ಬಂದಲ್ಲಿ ಒಂದು ವಾರದೊಳಗೆ ಅಂಥ ನಗದು ಪರಿಹಾರ, ಈ ಎಲ್ಲಾ ವಿಶೇಷ ಪರಿಹಾರಗಳನ್ನೂ ಒದಗಿಸಬಹುದು [ನಿಯಮ 8].

 

10) ಪೋಕ್ಸೊ ಕಾಯ್ದೆ 2012ರ ಅನುಷ್ಠಾನವನ್ನು ಮಾನಿಟರ್ ಮಾಡುವ ಹೊಣೆ ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ/ರಾಜ್ಯ ಆಯೋಗದ್ದಾಗಿದೆ [ಸೆಕ್ಷನ್ 44 r/w rule 12].

 

11) ಪೊಲೀಸರು ಮಕ್ಕಳಿಗೆ ಭದ್ರತೆ ಮತ್ತು ರಕ್ಷಣೆ ಒದಗಿಸಿ ಅವರನ್ನು ಆಪಾದಿತರಿಂದ ದೂರ ಇರಿಸಬೇಕು. ಸಂತ್ರಸ್ತ ಮಗು ಮತ್ತು ಕುಟುಂಬಕ್ಕೆ ‘ಸಾಕ್ಷಿಗಳ ರಕ್ಷಣಾ ಸ್ಕೀಮ್ 2018’ರ ಅನ್ವಯ ರಕ್ಷಣೆ ಒದಗಿಸಬೇಕು.

 

12) ಮಕ್ಕಳ ಹಕ್ಕುಗಳ ರಕ್ಷಣೆಯ ರಾಜ್ಯ ಆಯೋಗವು ಹೊರಡಿಸಿರುವ ‘ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳನ್ನು ನಿಭಾಯಿಸುವ ವಿಧಾನ’ವನ್ನು ಅನುಸರಿಸಬೇಕು. ಮಹಿಳಾ ಪೊಲೀಸ್ ಅಧಿಕಾರಿ ಅಥವಾ ಸಾಮಾಜಿಕ ಕಾರ್ಯಕರ್ತೆಯ ಇರುವಿಕೆ, ಮಗುವಿಗೆ ಎಲ್ಲಾ ಮಾಹಿತಿ ಒದಗಿಸುವುದು, ಮಗುವಿನೊಂದಿಗೆ ಯಾವುದೇ ದೈಹಿಕ ಸಂಪರ್ಕ ಹೊಂದದಿರುವುದು, ಆಕ್ರಮಣಕಾರಿ ರೀತಿಯಲ್ಲಿ ಮಾತಾಡದಿರುವುದು, ನಾಗರೀಕ ಉಡುಗೆ ತೊಡುವುದು, ಗೋಪ್ಯತೆಯ ರಕ್ಷಣೆ ಮುಂತಾಗಿ ಪೊಲೀಸರು ಮಗುವಿನೊಂದಿಗೆ ಸ್ನೇಹಪೂರ್ಣವಾದ ನಡವಳಿಕೆಗಳನ್ನು ಅನುಸರಿಸುವುದರಿಂದ ತನಿಖೆಗೆ ಹಿತಕರವಾದ ವಾತಾವರಣ ಉಂಟಾಗುತ್ತದೆ.

 

13) ಬೀಬಿ ಆಯೇಶಾ ಖಾನಮ್ ಮತ್ತು ಇತರರು ವರ್ಸಸ್ ಒಕ್ಕೂಟ ಸರ್ಕಾರ (W.P. ನಂ. 2318/2022, ತಾರೀಖು 23.2.2022) ಪ್ರಕರಣದ ಪ್ಯಾರಾ 17ರಲ್ಲಿ ಕರ್ನಾಟಕ ಹೈಕೋರ್ಟು, “ಆಪಾದಿತರು ಸಲ್ಲಿಸುವ ಜಾಮೀನು ಅರ್ಜಿ ಅಥವಾ ಇನ್ನಾವುದೇ ಅರ್ಜಿಗಳ ಬಗ್ಗೆ ತನಿಖಾಧಿಕಾರಿ ಅಥವಾ SJPUದವರು ಸಂತ್ರಸ್ತೆಗೆ/ಆಕೆಯ ರಕ್ಷಕರಿಗೆ ಮಾಹಿತಿ ನೀಡಿ ಅದರ ಒಂದು ಪ್ರತಿಯನ್ನು ಅವರಿಗೆ ಇಲ್ಲವೇ ಅವರ ವಕೀಲರಿಗೆ ನೀಡಬೇಕು. ಯಾವುದೇ ಹಿಯರಿಂಗ್ ಬಗ್ಗೆ ಅವರಿಗೆ ನೋಟೀಸ್ ನೀಡಬೇಕು, ಬರಹದಲ್ಲಿ ಸಕಾರಣವನ್ನು ಒದಗಿಸದೆ ಹಾಗೂ ನೋಟೀಸ್ ನೀಡದೆ ಅವರ ಗೈರುಹಾಜರಿಯಲ್ಲಿ ಆಪಾದಿತರ ಅರ್ಜಿಯ ಹಿಯರಿಂಗ್ ನಡೆಸಕೂಡದು’ ಎಂದು ಹೇಳಿದೆ.

 

14) ಕೇರಳ ರಾಜ್ಯ ವರ್ಸಸ್ ರಶೀದ್ ಪ್ರಕರಣದಲ್ಲಿ (AIR 2019 SC 721) ಸುಪ್ರೀಂ ಕೋರ್ಟ್ ಸೂಚಿಸಿರುವಂತೆ, ವಿಚಾರಣೆಯನ್ನು ಖಾಸಗಿಯಾಗಿ (ಇನ್ ಕ್ಯಾಮೆರಾ) ನಡೆಸಬೇಕು ಹಾಗೂ ಮಾಹಿತಿಯನ್ನು ದಾಖಲಿಸಿದ ಎರಡು ತಿಂಗಳೊಳಗಾಗಿ ಪೂರ್ಣಗೊಳಿಸಬೇಕು.

 

15) ಸಂತ್ರಸ್ತರಿಗೆ ಪರಿಹಾರ ಪಡೆಯುವ ಹಕ್ಕಿದೆ, ಇದನ್ನು ಲೀಗಲ್ ಅರ್ವಿಸಸ್ ಅಥಾರಿಟಿಯು ತಕ್ಷಣ ಒದಗಿಸಬೇಕು.

 

16) ಪೋಕ್ಸೋ ಪ್ರಕರಣಗಳ ತ್ವರಿತ ವಿಚಾರಣೆಗೆ ಸಂಬಂಧಿಸಿ ಸುಪ್ರೀಂ ಕೋರ್ಟು ಅಲಖ್ ಅಲೋಕ್ ಶ್ರೀವಾಸ್ತವ ವರ್ಸಸ್ ಭಾರತ ಒಕ್ಕೂಟ (AIR 2018 SC 244) ಪ್ರಕರಣದಲ್ಲಿ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಬೇಕು. ನಿರ್ದಿಷ್ಟವಾಗಿ, ತನಿಖೆ ಸರಿಯಾದ ರೀತಿಯಲ್ಲಿ ನಡೆಯುವಂತೆ ಮತ್ತು ಸಾಕ್ಷಿಗಳನ್ನು ನಿಗದಿತ ದಿನಗಳಂದು ಹಾಜರುಪಡಿಸುವಂತೆ ನೋಡಿಕೊಳ್ಳುವುದಕ್ಕಾಗಿ ಡಿಜಿಪಿಯವರು ಒಂದು ವಿಶೇಷ ಕಾರ್ಯಪಡೆ ರಚಿಸಬೇಕು ಎಂದು ಸಂಘಟನೆಗಳು ಮನವಿಯಲ್ಲಿ ಒತ್ತಾಯಿಸಿವೆ.

SUPPORT THE FILE

Latest News

Related Posts