ಶರಣರ ವಿರುದ್ಧ ಪೋಕ್ಸೋ ಮೊಕದ್ದಮೆ; ತುಟಿ ಬಿಚ್ಚದ ಸಿದ್ದರಾಮಯ್ಯ,ಅಂತರ ಕಾಯ್ದುಕೊಂಡ ಕಾಂಗ್ರೆಸ್‌

ಸಾಂಕೇತಿಕ ಚಿತ್ರ

ಬೆಂಗಳೂರು; ಶಾಲಾ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯದ ಪ್ರಭಾವಿ ಮಠಗಳಲ್ಲೊಂದಾದ ಚಿತ್ರದುರ್ಗದ ಮುರುಘಾ ಮಠದ ಡಾ ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದರೂ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್‌, ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್‌, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಆದಿಯಾಗಿ ಯಾವೊಬ್ಬ ನಾಯಕರೂ ಇದುವರೆಗೂ ತುಟಿ ಬಿಚ್ಚಿಲ್ಲ.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮುರುಘಾ ಶರಣರ ಪರ ವಕಾಲತ್ತು ವಹಿಸಿರುವ ಹೊತ್ತಿನಲ್ಲಿಯೇ ‘ಕರ್ನಾಟಕ ಸರ್ಕಾರ ಮತ್ತು ಎಲ್ಲಾ ರಾಜಕೀಯ ಪಕ್ಷಗಳ ಒತ್ತಡ ಮತ್ತು ಹಸ್ತಕ್ಷೇಪ ಇಲ್ಲದಂತೆ ನೋಡಿಕೊಳ್ಳಬೇಕು. ಹೆಣ್ಣುಮಕ್ಕಳಿಗೆ ನ್ಯಾಯ ದೊರಕುವಂತಾಗಬೇಕು. ಈ ಪ್ರಕರಣವನ್ನು ಕರ್ನಾಟಕದ ಹೊರಗೆ ವರ್ಗಾಯಿಸಿದರೆ ನ್ಯಾಯದ ಹಿತಾಸಕ್ತಿ ಕಾಪಾಡಿದಂತಾಗುತ್ತದೆ,’ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಲೆಹರ್‌ಸಿಂಗ್‌ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದರೂ ದಲಿತ, ಹಿಂದುಳಿದವರ ಧ್ವನಿ ಎಂದು ಬಿಂಬಿಸಿಕೊಂಡಿರುವ ಕಾಂಗ್ರೆಸ್‌ ಈ ಪ್ರಕರಣದಿಂದ ಅಂತರ ಕಾಯ್ದುಕೊಂಡಿರುವುದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

 

ಶರಣರ ವಿರುದ್ಧ ಎಫ್‌ಐಆರ್‌ ದಾಖಲಾಗಿ 48 ಗಂಟೆಗಳು ಕಳೆದರೂ ದೌರ್ಜನ್ಯಕ್ಕೆ ಒಳಗಾದ ಬಾಲಕಿಯರಿಂದ ಇದುವರೆಗೂ ಸಿಆರ್‌ಪಿಸಿ 164 ಹೇಳಿಕೆ ಪಡೆದುಕೊಳ್ಳುವಲ್ಲಿ ಪೊಲೀಸರು ಅನುಸರಿಸುತ್ತಿರುವ ವಿಳಂಬ ತಂತ್ರದಿಂದಾಗಿ ಶರಣರಿಗೆ ನಿರೀಕ್ಷಣಾ ಜಾಮೀನು ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಷಡ್ಯಂತ್ರ ಅಡಗಿದೆ ಎಂದು ಖುದ್ದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿಕೆ ನೀಡುವ ಮೂಲಕ ಶರಣರನ್ನು ರಕ್ಷಿಸಲಿದೆ ಎಂಬ ಪರೋಕ್ಷ ಸಂದೇಶ ರವಾನಿಸಿದ್ದರೂ ಪ್ರತಿಪಕ್ಷ ಕಾಂಗ್ರೆಸ್‌ ಕನಿಷ್ಠ ಹೇಳಿಕೆಯನ್ನೂ ಬಿಡುಗಡೆ ಮಾಡಿಲ್ಲ.

 

ಅಷ್ಟೇ ಅಲ್ಲ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಈ ಪ್ರಕರಣ ನಡೆದಿದ್ದರೂ ಪ್ರತಿಪಕ್ಷ ನಾಯಕ, ಕೆಪಿಸಿಸಿ ಅಧ್ಯಕ್ಷ ಇದರಿಂದ ಅಂತರ ಕಾಯ್ದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವದಲ್ಲಿ ಭಾಗಿಯಾಗಿದ್ದ ರಾಹುಲ್‌ ಗಾಂಧಿ ಅವರನ್ನು ಚಿತ್ರದುರ್ಗದ ಮುರುಘಾ ಮಠಕ್ಕೆ ಕರೆದೊಯ್ದು ಮುರುಘಾ ಶರಣರಿಂದ ಲಿಂಗ ದೀಕ್ಷೆ ಕೊಡಿಸಿದ್ದರು. ಇದಾದ ಕೆಲವೇ ದಿನಗಳಲ್ಲೇ ಶರಣರ ವಿರುದ್ಧ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿರುವುದು ವಿಶೇಷ.

 

ಅಲ್ಲದೆ ಲೈಂಗಿಕ ದೌರ್ಜನಕ್ಕೆ ಒಳಗಾದ ವಿದ್ಯಾರ್ಥಿನಿಯರ ಪೈಕಿ ಒಬ್ಬರು ದಲಿತ ಸಮುದಾಯ ಮತ್ತೊಬ್ಬರು ಹಿಂದುಳಿದ ವರ್ಗ ಸಮುದಾಯಕ್ಕೆ ಸೇರಿದವರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಡಿಯಲ್ಲಿಯೂ ಶರಣರ ವಿರುದ್ಧ ದೂರು ದಾಖಲಾಗಿದೆ. ಇಷ್ಟೆಲ್ಲಾ ಬೆಳವಣಿಗೆ ನಡೆದಿದ್ದರೂ ಕಾಂಗ್ರೆಸ್‌ನಲ್ಲಿರುವ ಪ್ರಿಯಾಂಕ್‌ ಖರ್ಗೆ, ಡಾ ಜಿ ಪರಮೇಶ್ವರ್‌, ಡಾ ಎಚ್‌ ಸಿ ಮಹದೇವಪ್ಪ ಆದಿಯಾಗಿ ಯಾವೊಬ್ಬ ದಲಿತ ಮುಖಂಡರೂ ಮೌನ ಮುರಿಯದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮಕ್ಕೆ ಒತ್ತಾಯಿಸಿದರೆ ಲಿಂಗಾಯತ ಸಮುದಾಯದ ವಿರೋಧಕ್ಕೆ ತುತ್ತಾಗಬಹುದು ಎಂಬ ಭೀತಿಯೂ ಪ್ರತಿಪಕ್ಷ ಕಾಂಗ್ರೆಸ್‌ನಲ್ಲಿ ಕಾಡತೊಡಗಿದೆ. ಹೀಗಾಗಿಯೇ ದಲಿತ ಮತ್ತು ಹಿಂದುಳಿದ ಸಮುದಾಯಕ್ಕೆ ಸೇರಿದ ಶಾಲಾ ಬಾಲಕಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯವಾಗಿದ್ದರೂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ ಕೆ ಶಿವಕುಮಾರ್‌, ಎಂ ಬಿ ಪಾಟೀಲ್‌, ಡಾ ಜಿ ಪರಮೇಶ್ವರ್‌, ಪ್ರಿಯಾಂಕ್‌ ಖರ್ಗೆ ಆದಿಯಾಗಿ ಬಹುತೇಕ ಮುಖಂಡರು ಮುಗುಮ್ಮಾಗಿದ್ದಾರೆ.

 

ಚಿತ್ರದುರ್ಗದ ಮುರುಘಾ ಮಠದ ಡಾ ಶಿವಮೂರ್ತಿ ಶರಣರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೂ ಅತ್ಯಂತ ನಿಕಟ ಸಂಪರ್ಕವಿರಿಸಿಕೊಂಡಿದ್ದಾರೆ. ಕಾಂಗ್ರೆಸ್‌ ಅವಧಿಯಲ್ಲಿಯೂ ಮುರುಘಾ ಮಠಕ್ಕೆ ಕೋಟ್ಯಂತರ ರುಪಾಯಿ ಅನುದಾನ ಮಂಜೂರಾಗಿತ್ತು. ಸಿದ್ದರಾಮಯ್ಯ ಅವರು ಅಹಿಂದ ಸಂಘಟನೆ ಕಟ್ಟಿದ್ದ ಸಂದರ್ಭದಲ್ಲಿ ಬೆಂಗಳೂರಿನ ಹೃದಯ ಭಾಗದಲ್ಲಿ ಮುರುಘಾ ಮಠಕ್ಕೆ ಸೇರಿದ್ದ ಕಟ್ಟಡದಲ್ಲಿಯೇ ಕಚೇರಿಗೆ ಸ್ಥಳಾವಕಾಶ ನೀಡಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts