ಬೆಂಗಳೂರು; ಸಂಘಪರಿವಾರದ ಅಂಗಸಂಸ್ಥೆಯಾಗಿರುವ ಜನಸೇವಾ ಟ್ರಸ್ಟ್‌ಗೆ ಕುರುಬರಹಳ್ಳಿಯಲ್ಲಿರುವ 35.33 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು ಮಂಜೂರು ಮಾಡಲು ಹೋಬಳಿಯ ಮೂರು ಗ್ರಾಮಗಳ ಗ್ರಾಮಸ್ಥರು ವಿರೋಧಿಸಿ ತಕರಾರು ಎತ್ತಿದ್ದರು. ಅಲ್ಲದೆ ಸುಮಾರು ಒಂದು ಸಾವಿರ ಜಾನುವಾರುಗಳನ್ನು ಮೇಯಿಸಲು ಈ ಜಮೀನು ಅತ್ಯವಶ್ಯಕವಾಗಿತ್ತು. ಹೀಗಾಗಿ ಯಾವುದೇ ಖಾಸಗಿ ಸಂಘ, ಸಂಸ್ಥೆ, ಟ್ರಸ್ಟ್‌ಗಳಿಗೆ ಜಮೀನು ಮಂಜೂರು ಮಾಡಬಾರದು ಎಂದು ಗ್ರಾಮಸ್ಥರು ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದ್ದರು ಎಂಬ ಅಂಶ ಇದೀಗ ಬಹಿರಂಗವಾಗಿದೆ.
ಗ್ರಾಮಸ್ಥರು ಸಲ್ಲಿಸಿದ್ದ ಕೋರಿಕೆಯನ್ನು ಬದಿಗಿರಿಸಿದ ರಾಜ್ಯ ಬಿಜೆಪಿ ಸರ್ಕಾರವು ಜನಸೇವಾ ಟ್ರಸ್ಟ್‌ಗೆ ಮಂಜೂರು ಮಾಡುವ ಉದ್ದೇಶದಿಂದಲೇ ಜಾನುವಾರುಗಳಿಗಿದ್ದ ಮೇಯುವ ತಾಣವನ್ನೇ ಕಸಿದುಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಜಮೀನು ಮಂಜೂರಾತಿ ಸಂಬಂಧ ಗ್ರಾಮಸ್ಥರ ವಿರೋಧವನ್ನೂ ಲೆಕ್ಕಿಸದೆಯೇ ರಾಜ್ಯ ಬಿಜೆಪಿ ಸರ್ಕಾರವು 70 ಕೋಟಿ ರು. ಬೆಲೆಬಾಳುವ ಜಮೀನನ್ನು ಜನಸೇವಾ ಟ್ರಸ್ಟ್‌ಗೆ ಧಾರೆಯೆರೆದು ಕೊಟ್ಟಿರುವುದು ಇದೀಗ ವಿವಾದಕ್ಕೆ ದಾರಿಮಾಡಿಕೊಟ್ಟಿದೆ.
ಅಲ್ಲದೆ ಗೋವುಗಳ ಸಂರಕ್ಷಣೆ, ಪಾಲನೆಗೆ ರಾಜ್ಯಾದ್ಯಂತ ಗೋಶಾಲೆಗಳನ್ನು ಆರಂಭಿಸಲು ಹೊರಟಿರುವುದು ಮತ್ತು ಗೋವುಗಳನ್ನು ದತ್ತು ತೆಗೆದುಕೊಳ್ಳಲು ಪುಣ್ಯಕೋಟಿ ಎಂಬ ಯೋಜನೆಯನ್ನು ಜಾರಿಗೆ ತರುತ್ತಿರುವ ಹೊತ್ತಿನಲ್ಲಿಯೇ ಜಾನುವಾರುಗಳಿಗೆ ಮೇಯುವ ತಾಣವನ್ನೇ ಜನಸೇವಾ ಟ್ರಸ್ಟ್‌ಗೆ ಮಂಜೂರು ಮಾಡಿರುವುದು ಮುನ್ನೆಲೆಗೆ ಬಂದಿದೆ. ಈ ಸಂಬಂಧ ಕೆಲ ದಾಖಲೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ತಾವರೆಕೆರೆ ಹೋಬಳಿಯ ಕುರುಬರಹಳ್ಳಿ, ಲಕ್ಕುಪ್ಪೆ, ಹೊನ್ನಿಗನಹಟ್ಟಿಯ ಜಾನುವಾರುಗಳನ್ನು ಮೇಯಿಸಲು ಅತ್ಯವಶ್ಯಕ ಪ್ರದೇಶ. ಅದೇ ರೀತಿ ಈ ಮೂರು ಗ್ರಾಮಗಳ ಗ್ರಾಮಸ್ಥರು ರುದ್ರಭೂಮಿಗಾಗಿ ಇದೇ ಗೋಮಾಳ ಭೂಮಿಯನ್ನು ಅವಲಂಬಿಸಿದ್ದರು. ಹಾಗೆಯೇ ರಾಜಸ್ವ ನಿರೀಕ್ಷಕರೂ ಸಹ ವಾಸ್ತವಾಂಶದ ವರದಿಯನ್ನೂ ಸಲ್ಲಿಸಿದ್ದರು ಎಂಬುದು ತಿಳಿದು ಬಂದಿದೆ.
ರಾಜಸ್ವ ನಿರೀಕ್ಷಕರ ವಾಸ್ತವಾಂಶ ವರದಿಯಲ್ಲೇನಿದೆ?
ಕುರುಬರಹಳ್ಳಿ ಗ್ರಾಮದ ಸರ್ವೆ ನಂಬರ್ 89ರಲ್ಲಿ ಒಟ್ಟು ಲಭ್ಯವಿರುವ 35.34 ಎಕರೆ ವಿಸ್ತೀರ್ಣದ ಜಮೀನಿನ ಪೈಕಿ ಸುಮಾರು ಅರ್ಧದಷ್ಟು ಪ್ರದೇಶ ಗುಡ್ಡಗಾಡಿನಿಂದ ಕೂಡಿದೆ. ಈ ಗ್ರಾಮದಲ್ಲಿ ಒಟ್ಟು 352 ದೊಡ್ಡ ಜಾನುವಾರು, 443 ಚಿಕ್ಕ ಜಾನುವಾರು ಸೇರಿ ಒಟ್ಟು 995 ಜಾನುವಾರುಗಳಿವೆ. ಭೂ ಕಂದಾಯ ಅಧಿನಿಯಮಗಳ 97ರ ಅಡಿಯಲ್ಲಿ ಗೋಮಾಳ ಮೀಸಲು ಪ್ರದೇಶ ಕಡಿಮೆ ಇದೆ. ಇಲ್ಲಿನ ರೈತರು ತಮ್ಮ ಸ್ವಂತ ಜಮೀನಿನಲ್ಲಿ ಸಿಗುವ ಮೇವನ್ನುವ್ಯವಸ್ಥೆ ಮಾಡಿಕೊಂಡು ಜಾನುವಾರುಗಳನ್ನು ಸಾಕಿಕೊಂಡಿದ್ದಾರೆ. ಈ ಗ್ರಾಮದಲ್ಲಿ ಪರ್ಯಾಯ ಅರಣ್ಯ ಜಮೀನು ಇಲ್ಲ. ,’ ಎಂದು ರಾಜಸ್ವ ನಿರೀಕ್ಷಕರು 2020ರ ಫೆ.3ರಂದೇ ವಾಸ್ತವಾಂಶ ವರದಿ ಸಲ್ಲಿಸಿದ್ದರು.
ರಾಜಸ್ವ ನಿರೀಕ್ಷಕರು ವರದಿ ಸಲ್ಲಿಸಿ 2 ವರ್ಷಗಳಾದರೂ ಸರ್ಕಾರವು ಇದಾವುದನ್ನೂ ಪರಿಗಣನೆಗೆ ತೆಗೆದುಕೊಂಡಿಲ್ಲ. ಬದಲಿಗೆ ಜನಸೇವಾ ಟ್ರಸ್ಟ್‌ಗೆ ಜಮೀನು ಮಂಜೂರು ಮಾಡುವ ಉದ್ದೇಶದಿಂದಲೇ ವರದಿಯನ್ನು ಕಸದ ಬುಟ್ಟಿಗೆ ಎಸೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
‘ಕುರುಬರಹಳ್ಳಿ, ಲಕ್ಕುಪ್ಪೆ, ಹೊನ್ನಿಗನಹಟ್ಟಿ ಈ ಮೂರು ಗ್ರಾಮಗಳ ಗ್ರಾಮಸ್ಥರು ಈ ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸಲು ಅತ್ಯವಶ್ಯಕ ಪ್ರದೇಶವಾಗಿದ್ದು ಮತ್ತು ರುದ್ರಭೂಮಿ ಅವಶ್ಯಕವಾಗಿರುತ್ತದೆ ಎಂದು ಅಭಿಪ್ರಾಯಿಸಿದ್ದಾರೆ. ಹೀಗಾಗಿ ಈ ಜಮೀನನ್ನು ಯಾವುದೇ ಖಾಸಗಿ ಸಂಘ, ಸಂಸ್ಥೆ, ಟ್ರಸ್ಟ್‌ಗಾಗಿ ಮಂಜೂರು ಮಾಡಬಾರದು ಎಂದು ಗ್ರಾಮಸ್ಥರು ಕೋರಿಕೆ ಸಲ್ಲಿಸಿದ್ದರು,’ ಎಂಬ ಅಂಶವು ಬೆಂಗಳೂರು ನಗರ ಜಿಲ್ಲಾಧಿಕಾರಿ 2022ರ ಜನವರಿ 29ರಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಬರೆದಿದ್ದ ಪತ್ರದಿಂದ ಗೊತ್ತಾಗಿದೆ.
ಎಪ್ಪತ್ತು ಕೋಟಿ ರು. ಬೆಲೆಬಾಳುವ 35.33 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು ಸಂಘ ಪರಿವಾರದ ಅಂಗ ಸಂಸ್ಥೆಯಾಗಿರುವ ಜನಸೇವಾ ಟ್ರಸ್ಟ್‌ಗೆ ಮಂಜೂರು ಮಾಡುವ ಪ್ರಸ್ತಾವನೆಯೇ ತಿರಸ್ಕೃತಗೊಂಡಿದ್ದನ್ನು ಸ್ಮರಿಸಬಹುದು.