ಬೆಂಗಳೂರು; ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನ, ಸಾಮಾಜಿಕ ಭದ್ರತೆ ಯೋಜನೆಗಳು, ನೆರೆ ಪರಿಹಾರ, ಶಾಲಾ ಮಕ್ಕಳಿಗೆ ಗರಿಷ್ಠ ದಿನಗಳವರೆಗೆ ಮೊಟ್ಟೆ ವಿತರಣೆ, ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ, ವೈದ್ಯಕೀಯ ಪರಿಹಾರ ಭತ್ಯೆ ವಿಸ್ತರಣೆ ಸೇರಿದಂತೆ ಇನ್ನಿತರೆ ಯೋಜನೆಗಳಿಗೆ ಆರ್ಥಿಕ ನೆರವು ನೀಡಲು ಆರ್ಥಿಕ ಮಿತವ್ಯಯ, ಆರ್ಥಿಕ ಹೊರೆ ನೆಪವೊಡ್ಡಿ ಕೊಕ್ಕೆ ಹಾಕುವ ಐಎಎಸ್ ಅಧಿಕಾರಿಗಳು ಇದೀಗ ಹೊಸ ವಾಹನ ಖರೀದಿಗಿದ್ದ ಆರ್ಥಿಕ ಮಿತಿಯನ್ನು ಹೆಚ್ಚಿಸಿಕೊಂಡಿದ್ದಾರೆ.
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು,ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರುಗಳಿಗೆ ಹೊಸ ವಾಹನ ಖರೀದಿಸಲು ಈ ಇಂದೆ ನಿಗದಿಪಡಿಸಿದ್ದ ಆರ್ಥಿಕ ಮಿತಿಯನ್ನು ಸಡಿಲಗೊಳಿಸಿದೆ. ಈ ಸಂಬಂಧ 2022ರ ಆಗಸ್ಟ್ 18ರಂದು ಆದೇಶ ಹೊರಡಿಸಲಾಗಿದೆ. ವಿತ್ತ ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರ್ಥಿಕ ಇಲಾಖೆಯ ಅಭಿಪ್ರಾಯವನ್ನು ಅನುಮೋದಿಸಿದ್ದಾರೆ. ಆದೇಶದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರುಗಳು (ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳಾಗಿದ್ದಲ್ಲಿ) ವಾಹನ ಖರೀದಿಸಲು ಈ ಹಿಂದೆ ನಿಗದಿಪಡಿಸಿದ್ದ ಆರ್ಥಿಕ ಮಿತಿಯನ್ನು 14.00 ಲಕ್ಷ ರು.ಗಳಿಂದ 20 ಲಕ್ಷ ರು.ಗಳಿಗೆ ಹೆಚ್ಚಿಸಿರುವುದು ಆದೇಶದಿಂದ ತಿಳಿದು ಬಂದಿದೆ.
ಅದೇ ರೀತಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರುಗಳಿಗೆ 9.00 ಲಕ್ಷ ರು.ಗಳಿಂದ 18.00 ಲಕ್ಷ ರು.ಗಳಿಗೆ ಹೆಚ್ಚಿಸಲಾಗಿದೆ. ಹಾಗೆಯೇ ಜಿಲ್ಲಾ ಹಂತದ ಇತರ ಅಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ಡಿವೈಎಸ್ಪಿಗಳಿಗೆ 6.50 ಲಕ್ಷ ರು ಗಳಿಂದ 12.50 ಲಕ್ಷ ರುಗ.ಳಿಗೆ ಹೆಚ್ಚಿಸಲಾಗಿದೆ. ತಹಶೀಲ್ದಾರ್ ಮತ್ತು ತಾಲೂಕು ಮಟ್ಟದ ಇತರ ಅಧಿಕಾರಿಗಳೀಗೆ 9.00 ಲಕ್ಷ ರು.ಗಳ ಮಿತಿಯಲ್ಲಿಯೇ ಹೊಸ ವಾಹನ ಖರೀದಿಸಲು ಆರ್ಥಿಕ ಮಿತಿ ನಿಗದಿಪಡಿಸಿದೆ.
ಹೊಸ ವಾಹನ ಖರೀದಿಸುವ ಸಂಬಂಧ 2019ರಲ್ಲಿಯೂ ಅರ್ಥಿಕ ಮಿತಿ ನಿಗದಿಗೊಳಿಸಿತ್ತು. ಇದರ ಪ್ರಕಾರ ಇಲಾಖಾ ಮುಖ್ಯಸ್ಥರುಗಳಿಗೆ ವಾಹ ಖರೀದಿಸಲು 6.50 ಲಕ್ಷ ರು ಗಳಿಂದ 9.00 ಲಕ್ಷ ರು.ಗಳಿಗೆ ಹೆಚ್ಚಿಸಲಾಗಿತ್ತು. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು (ಕಾರ್ಯದರ್ಶಿ ಶ್ರೇಣಿ)ಗಳಿಗೆ 9.00 ಲಕ್ಷ ರು.ಗಳಿಂದ 14.00 ಲಕ್ಷ ರು.ಗಳಿಗೆ ಹೆಚ್ಚಿಸಲಾಗಿತ್ತು.