ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಗೆ ಕಡೆಗೂ ಆದೇಶ ಪ್ರಕಟ; ಆದರೆ ದಿನಕ್ಕೊಮ್ಮೆ ಅಲ್ಲ, ವಾರಕ್ಕೊಮ್ಮೆ

ಬೆಂಗಳೂರು; ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 1ರಿಂದ 8ನೇ ತರಗತಿಗಳವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 46 ದಿನಗಳವರೆಗೆ ಪೂರಕ ಪೌಷ್ಠಿಕಾಂಶದ ರೂಪದಲ್ಲಿ ಮೊಟ್ಟೆ ಅಥವಾ ಚಿಕ್ಕಿಯನ್ನು ವಿತರಿಸಲು ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ಶಿಕ್ಷಣ ಇಲಾಖೆಯು 100 ದಿನಗಳಿಗೆ ಮೊಟ್ಟೆ ವಿತರಿಸಲು ಕೋರಿದ್ದ ಅನುಮತಿಯನ್ನು ತಿರಸ್ಕರಿಸಿದ್ದ  ಆರ್ಥಿಕ ಇಲಾಖೆಯು ಕೇವಲ 46 ದಿನಗಳಿಗಷ್ಟೇ ಅನುಮತಿ ನೀಡಿತ್ತು. ಹೀಗಾಗಿ ರಾಜ್ಯದ ಎಲ್ಲಾ ಶಾಲೆಗಳ ಮಕ್ಕಳಿಗೆ ವಾರಕ್ಕೊಮ್ಮೆ ಒಂದು ಬಾರಿ ಮಾತ್ರ ಮೊಟ್ಟೆ ದೊರೆತಂತಾಗಿದೆ.

 

100 ದಿನಗಳವರೆಗೆ ಮಧ್ಯಾಹ್ನ ಉಪಹಾರ ಯೋಜನೆಯಡಿ ಮೊಟ್ಟೆ ವಿತರಿಸಲು ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಭಾಗಶಃ ಒಪ್ಪಿಕೊಂಡಿದ್ದ ಆರ್ಥಿಕ ಇಲಾಖೆಯು 100 ದಿನಗಳ ಬದಲಿಗೆ ಕೇವಲ 46 ದಿನಗಳವರೆಗೆ ಮೊಟ್ಟೆ ನೀಡಲು ಅನುಮೋದನೆ ನೀಡುತ್ತಿದ್ದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2022ರ ಜುಲೈ 18 ರಂದು ಈ ಸಂಬಂಧ ಆದೇಶ ಹೊರಡಿಸಿದೆ. ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಜುಲೈ 16ರಂದು ಸರ್ಕಾರ ಹೊರಡಿಸಿರುವ ಆದೇಶದ ಪ್ರತಿ

 

‘2022-23ನೇ ಸಾಲಿನಲ್ಲಿ ಪ್ರಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ್‌ ಯೋಜನೆ (ಮಧ್ಯಾಹ್ನ ಉಪಹಾರ ಯೋಜನೆ) ಚಟುವಟಿಕೆಗಳಡಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 1ರಿಂದ 8ನೇ ತರಗತಿಗಳವರೆಗೆ ವ್ಯಾಸಂಗ ಮಾಡುತ್ತಿರುವ ಫಲಾನುಭವಿ ವಿದ್ಯಾರ್ಥಿಗಳಿಗೆ ಪ್ರತಿ ವಿದ್ಯಾರ್ಥಿಗೆ ಒಂದು ದಿನ ಘಟಕ ವೆಚ್ಚ 6 ರು.ನಂತೆ 46 ದಿನಗಳವರೆಗೆ ಪೂರಕ ಪೌಷ್ಠಿಕಾಂಶ ರೂಪದಲ್ಲಿ ಮೊಟ್ಟೆ ಅಥವಾ ಚಿಕ್ಕಿಯನ್ನು ವಿತರಿಸಬೇಕು,’ ಎಂದು ಆದೇಶದಲ್ಲಿ ಸೂಚಿಸಲಾಗಿದೆ.

 

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ಅಥವಾ ಇತರೆ ಪೌಷ್ಠಿಕ ಆಹಾರ ಪದಾರ್ಥವನ್ನು ವಿತರಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಶಿಕ್ಷಣ ಇಲಾಖೆಯ ಪ್ರಸ್ತಾವನೆ ಪ್ರಕಾರ 100 ದಿನಕ್ಕೆ ಮೊಟ್ಟೆ ವಿತರಿಸಲು ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದರೆ ಶಾಲಾ ಮಕ್ಕಳಿಗೆ ಮೂರು ದಿನಕ್ಕೊಮ್ಮೆ ಮೊಟ್ಟೆ ಸೇವಿಸಬಹುದಿತ್ತು. ಆದರೀಗ ಆರ್ಥಿಕ ಇಲಾಖೆಯು ಈಗ 46 ದಿನಗಳಿಗಷ್ಟೇ ಅನುಮತಿ ನೀಡಿರುವುದರಿಂದ ಶೈಕ್ಷಣಿಕ ವರ್ಷದಲ್ಲಿ 240 ದಿನಗಳು ಶಾಲೆ ನಡೆಯುವ ಲೆಕ್ಕಾಚಾರದ ಪ್ರಕಾರ ಶಾಲಾ ಮಕ್ಕಳಿಗೆ ವಾರಕ್ಕೊಂದು ಮೊಟ್ಟೆ ದೊರೆಯಲಿದೆ.

 

ಮೊಟ್ಟೆ ವಿತರಣೆಗೆ ಹೊರಡಿಸಿರುವ ಆದೇಶದ ಪ್ರತಿ

 

 

ಆರ್ಥಿಕ ಇಲಾಖೆಯು ನೀಡಿರುವ ಅನುಮತಿಗೆ ಸಚಿವ ಬಿ ಸಿ ನಾಗೇಶ್‌ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ. ರಾಜ್ಯದೆಲ್ಲೆಡೆ ಅಪೌಷ್ಠಿಕತೆಯಿಂದ ಮಕ್ಕಳು ನರಳುತ್ತಿರುವಾಗ ಕನಿಷ್ಠ ಮೂರು ದಿನಕ್ಕೊಮ್ಮೆಯಾದರೂ ಮೊಟ್ಟೆ ವಿತರಣೆಗಾದರೂ ಅನುಮತಿ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಒತ್ತಡ ಹೇರಿಲ್ಲ.

 

ಬೀದರ್‌, ಬಳ್ಳಾರಿ, ವಿಜಯನಗರ, ಕಲ್ಬುರ್ಗಿ, ಕೊಪ್ಪಳ, ರಾಯಚೂರು, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿಯೂ 46 ದಿನಗಳವರೆಗೆ ಮೊಟ್ಟೆ ಅಥವಾ ಚಿಕ್ಕಿ ವಿತರಿಸಲು ಮುಂದಿನ ಮೂರು ತಿಂಗಳ ಅವಧಿಗೆ ಅನುದಾನ ವಿತರಿಸಲಾಗಿದೆ. ಈ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ 1ರಿಂದ 8ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 46 ದಿನಗಳವರೆಗೆ ಅನುದಾನವನ್ನು (ಲೆಕ್ಕ ಶೀರ್ಷಿಕೆ; 2202-00-101-0-21(2202-01-196-6-01)  ನಿಧಿ-1ರಲ್ಲಿಉಳಿಕೆಯಾಗಿರುವ  547.63 ಕೋಟಿ ರು.  ಅನುದಾನದಿಂದ ಭರಿಸಲು ಅನುಮೋದನೆ ಕೋರಿತ್ತು.

 

46 ದಿನಗಳಿಗೆ ಮೊಟ್ಟೆ ಆಥವಾ ಮೊಟ್ಟೆಯನ್ನು ಸ್ವೀಕರಿಸದ ವಿದ್ಯಾರ್ಥಿಗಳಿಗೆ ಇತರೆ ಪೌಷ್ಠಿಕ ಆಹಾರ ಪದಾರ್ಥವನ್ನು ವಿತರಿಸಲು ಪ್ರತಿ ವಿದ್ಯಾರ್ಥಿಗೆ ಒಂದು ದಿನದ ಘಟಕ ವೆಚ್ಚ 6 ರು.ನಂತೆ ಒಟ್ಟಾರೆ 4494.29 ಲಕ್ಷ ರು.ಗಳಿಗೆ ಅನುಮೋದನೆ ದೊರೆತಿತ್ತು. ಈ ಪೈಕಿ 2696.58 ಲಕ್ಷ ರು. ಕೇಂದ್ರದ ಪಾಲಿನ ಅನುದಾನವಾಗಿದ್ದರೆ 1797.72 ಲಕ್ಷ ರು. ಗಳನ್ನು ರಾಜ್ಯ ಸರ್ಕಾರ ಭರಿಸಲಿದೆ.

ಸಮವಸ್ತ್ರವಿಲ್ಲ, ಪಠ್ಯಪುಸ್ತಕವಿಲ್ಲ, 4 ಜಿಲ್ಲೆಗಳ 7 ಲಕ್ಷ ಮಕ್ಕಳಿಗೆ ಮೊಟ್ಟೆಯೂ ಇಲ್ಲ

 

2022-23ನೇ ಸಾಲಿಗೆ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಜೊತೆಗೆ ಪೂರಕ ಪೌಷ್ಠಿಕ ಆಹಾರದ ರೂಪದಲ್ಲಿ ಆಯ್ದ ದಿನಗಳಂದು ಮೊಟ್ಟೆ/ಬಾಳೆಹಣ್ಣು/ಚಿಕ್ಕಿ ಪದಾರ್ಥಗಳ್ನು 100 ದಿನಗಳ ಅವಧಿಗೆ ಒದಗಿಸಲು 34711.55 ಲಕ್ಷ ರು.ಗಳಿಗೆ ಅನುಮೋದನೆ ಕೋರಿತ್ತು. ಆದರೆ ಆರ್ಥಿಕ ಇಲಾಖೆಯು 46 ದಿನಗಳಿಗಷ್ಟೇ ಅನುಮೋದನೆ ನೀಡಿದ್ದನ್ನು ಸ್ಮರಿಸಬಹುದು. ಈ ಕುರಿತು ‘ದಿ ಫೈಲ್‌’-ವಾರ್ತಾಭಾರತಿಯು ವರದಿ ಪ್ರಕಟಿಸಿತ್ತು.

ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೆ 100 ದಿನಗಳವರೆಗೆ ಮೊಟ್ಟೆ ವಿತರಣೆಗಿಲ್ಲ ಸಮ್ಮತಿ; 46 ದಿನಕ್ಕಷ್ಟೇ ಅನುಮತಿ

 

ರಾಜ್ಯದ ಶೇ 32ರಷ್ಟು ಮಕ್ಕಳು ಕಡಿಮೆ ತೂಕ ಹಾಗೂ ಕುಂಠಿತ ಬೆಳವಣಿಗೆ ಹೊಂದಿದ್ದು, ಶೇ 45.2ರಷ್ಟು ಮಕ್ಕಳು ಮತ್ತು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು 2020–21ರ ‘ನೀತಿ ಆಯೋಗ’ದ ವರದಿಯಲ್ಲಿ ವಿವರಿಸಿತ್ತು. ಹೀಗಾಗಿ ಅಪೌಷ್ಠಿಕತೆಯಿಂದ ಬಳಲುತ್ತಿದ್ದ ಮಕ್ಕಳಿಗೆ ಮೊಟ್ಟೆ ನೀಡುವ ಕಾರ್ಯಕ್ರಮ ಜಾರಿಗೊಂಡಿತ್ತು.

the fil favicon

SUPPORT THE FILE

Latest News

Related Posts