ಸ್ಕಿಲ್‌ ಲ್ಯಾಬ್‌ ಶುಲ್ಕ ವಸೂಲು; ಎಂಜಿನಿಯರಿಂಗ್‌ ಕಾಲೇಜುಗಳ ಪಟ್ಟಿಗೆ ಮಣಿಯುವುದೇ ಸರ್ಕಾರ?

photo credit-thebengalurulive

ಬೆಂಗಳೂರು; ಎಂಜಿನಿಯರಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಶುಲ್ಕವನ್ನು ಪ್ರಸಕ್ತ ಸಾಲಿನವರೆಗೆ ಶೇ.10ರಷ್ಟು ಹೆಚ್ಚಿಸಲು ಅನುಮತಿ ನೀಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್‌ ಅಶ್ವಥ್‌ನಾರಾಯಣ್‌ ಅವರು ಹೇಳಿಕೆ ನೀಡಿದ್ದಾರಾದರೂ ಸಭೆಯಲ್ಲಿ ದಾಖಲಾಗಿರುವ ನಡವಳಿ ಪ್ರಕಾರ 2022-23ನೇ ಶೈಕ್ಷಣಿಕ ವರ್ಷದಿಂದ 2 ವರ್ಷಗಳವರೆಗೂ ಶೇ.10ರ ಹೆಚ್ಚಳ ಶುಲ್ಕವನ್ನು ವಿದ್ಯಾರ್ಥಿಗಳು ಪಾವತಿಸಬೇಕಿದೆ.

 

ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ತೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಅಧಿನಿಯಮ 2006ರಲ್ಲಿನ ಸೀಟು ಹಂಚಿಕೆ ಮತ್ತು ಬೋಧನ ಶುಲ್ಕವನ್ನು ನಿಗದಿಗೊಳಿಸುವ ಸಂಬಂಧ 2022ರ ಜೂನ್‌ 22ರಂದು ಸಚಿವ ಅಶ್ವಥ್‌ನಾರಾಯಣ್‌ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಸಭೆಯ ನಂತರ ವಿವರ ಒದಗಿಸಿದ್ದ ಸಚಿವ ಅಶ್ವಥ್‌ನಾರಾಯಣ್‌ ಅವರು ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಮಾತ್ರ ಬೋಧನಾ ಶುಲ್ಕವನ್ನು ಶೇ.10ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದರು.

 

ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದ ಸಭೆಯು ‘ ಕರ್ನಾಟಕ ಅನುದಾನರಹಿತ ಖಾಸಗಿ ಇಂಜಿನಿಯರಿಂಗ್‌ ಕಾಲೇಜುಗಳ ಸಂಘದ ಎಲ್ಲಾ ಅಹವಾಲುಗಳ ಬಗ್ಗೆ ಚರ್ಚಿಸಿದ ನಂತರ ಅಂತಿಮವಾಗಿ 2022-23ನೇ ಶೈಕ್ಷಣಿಕ ವರ್ಷದಿಂದ 2 ವರ್ಷಗಳಿಗೆ ಮಾತ್ರ ಬೋಧನಾ ಶುಲ್ಕದಲ್ಲಿ ಶೇ. 10ರಷ್ಟು ಹೆಚ್ಚಿಸಲು ತೀರ್ಮಾನಿಸಲಾಗಿದೆ,’ ಎಂಬುದು ಸಭೆ ನಡವಳಿಯಿಂದ ತಿಳಿದು ಬಂದಿದೆ. ನಡವಳಿ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅದೇ ರೀತಿ ಸ್ಕಿಲ್‌ ಲ್ಯಾಬ್‌ ಶುಲ್ಕವನ್ನು ಕಾಲೇಜುಗಳು ನೇರವಾಗಿ ಪಡೆಯುವ ಬಗ್ಗೆಯೂ ಅನುದಾನರಹಿತ ಖಾಸಗಿ ಇಂಜಿನಿಯರಿಂಗ್‌ ಕಾಲೇಜುಗಳ ಸಂಘವು ಬೇಡಿಕೆ ಇರಿಸಿದೆ. ಈ ಸಂಬಂಧ ಸಭೆಯಲ್ಲಿ ಚರ್ಚೆ ನಡೆದಿದೆಯಾದರೂ ಸ್ಕಿಲ್‌ ಲ್ಯಾಬ್‌ ಸೌಲಭ್ಯವನ್ನು ಪಡೆಯುವುದು ವಿದ್ಯಾರ್ಥಿಗಳ ವಿವೇಚನೆಗೆ ಬಿಡಬೇಕು ಮತ್ತು ವಿದ್ಯಾರ್ಥಿಗಳು ಇಚ್ಛೆಗೆ ಅನುಗುಣವಾಗಿಯೇ ಶುಲ್ಕವನ್ನು ಮುಂದುವರೆಸುವುದು ಸೂಕ್ತ ಎಂದು ಸಚಿವ ಅಶ್ವಥ್‌ನಾರಾಯಣ್‌ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ಕಾಲೇಜುಗಳು ಹೊಂದಿರುವ ಸೌಲಭ್ಯ ಪರಿಗಣಿಸಿ ವರ್ಗೀಕರಣ ಮಾಡುವ ಮೂಲಕ ಸ್ಕಿಲ್‌ ಲ್ಯಾಬ್‌ ಶುಲ್ಕವನ್ನು ನಿಗದಿಪಡಿಸಬೇಕು. ಹಾಗೆಯೇ ಇದನ್ನು ಸರ್ಕಾರದ ಮಟ್ಟದಲ್ಲಿ ಪ್ರಕಟಿಸಲು ಸಭೆಯು ಸಮ್ಮತಿ ವ್ಯಕ್ತಪಡಿಸಿರುವುದು ಸಭೆ ನಡವಳಿಯಿಂದ ಗೊತ್ತಾಗಿದೆ.

 

‘ಕಳೆದ ಮೂರು ವರ್ಷಗಳಿಂದ ಇಂಜಿನಿಯರಿಂಗ್‌ ಮತ್ತು ಆರ್ಕಿಟೆಕ್ಚರ್‌ ಕೋರ್ಸ್ಗಳ ಬೋಧನಾ ಶುಲ್ಕವನ್ನು ಹೆಚ್ಚಿಸಿಲ್ಲ. ಕಳೆದ ವರ್ಷ (22-09-2021) ಉನ್ನತ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯ ನಿರ್ಣಯದಂತೆ ಪ್ರತಿ ವರ್ಷ ಬೋಧನಾ ಶುಲ್ಕದಲ್ಲಿ ಶೇ. 10ರಷ್ಟು ಹೆಚ್ಚು ಮಾಡುವಂತೆ ಮತ್ತುಈ ಸಂಬಂಧ ಮುಂದಿನ 5 ವರ್ಷಗಳವರೆಗೆ ಸಮ್ಮತಾಭಿಪ್ರಾಯ ಒಡಂಬಡಿಕೆ ಮಾಡಿಕೊಳ್ಳಬೇಕು,’ಎಂದು ಕರ್ನಾಟಕ ಅನುದಾನರಹಿತ ಖಾಸಗಿ ಇಂಜಿನಿಯರಿಂಗ್‌ ಕಾಲೇಜುಗಳ ಸಂಘದ ಉಪಾಧ್ಯಕ್ಷರು ಸಭೆಯ ಗಮನಕ್ಕೆ ತಂದಿದ್ದರು.

 

ಅಲ್ಲದೆ ಕೆಲವೇ ಕೆಲವು ಇಂಜಿನಿಯರಿಂಗ್‌ ಕಾಲೇಜುಗಳಿಗೆ ಮಾತ್ರ 20,000 ರು.ಗಳನ್ನು ಸ್ಕಿಲ್‌ ಲ್ಯಾಬ್ ಶುಲ್ಕ ಪಡೆಯಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸ್ಥಳೀಯ ವಿಚಾರಣೆ ಸಮಿತಿಯು ಶಿಫಾರಸ್ಸು ಮಾಡಿದೆ. ಈ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ. ಸಭೆಯಲ್ಲಿ ಮಾತನಾಡಿರುವ ಕರ್ನಾಟಕ ಅನುದಾನರಹಿತ ಖಾಸಗಿ ಇಂಜಿನಿಯರಿಂಗ್‌ ಕಾಲೇಜುಗಳ ಸಂಘದ ಸದಸ್ಯ ಮಂಜುನಾಥ ಭಂಡಾರಿ ಅವರು ‘ಈಗಾಗಲೇ ಸ್ವಾಯತ್ತ ಸ್ಥಾನಮಾನ, ನ್ಯಾಕ್‌, ಎನ್‌ಬಿಎ ಹೊಂದಿರುವ ಇಂಜಿನಿಯರಿಂಗ್‌ ಕಾಲೇಜುಗಳು ನೇರವಾಗಿ 20,000 ರು.ಗಳ ಸ್ಕಿಲ್‌ ಲ್ಯಾಗ್‌ ಶುಲ್ಕವನ್ನು ಪಡೆಯಲು ಅನುಮತಿ ನೀಡಬೇಕು,’ ಎಂದು ಕೋರಿರುವುದು ನಡವಳಿಯಿಂದ ಗೊತ್ತಾಗಿದೆ.

 

ಇದಕ್ಕೆ ಉತ್ತರಿಸಿರುವ ವಿಟಿಯುನ ಪ್ರಾದೇಶಿಕ ನಿರ್ದೇಶಕರು ‘ ಕಳೆದ ವರ್ಷ ಆನ್‌ಲೈನ್‌ ಮೂಲಕ ಕೋರಿಕೆ ಬಂದ ಇಂಜಿನಿಯರಿಂಗ್‌ ಕಾಲೇಜುಗಳಿಗೆ ವಿಶ್ವವಿದ್ಯಾಲಯದ ಸ್ಥಳೀಯ ವಿಚಾರಣೆ ಸಮಿತಿಯು ಭೇಟಿ ನೀಡಿ ಸಮಿತಿಯು ಹೊಂದಿರುವ ಸೌಲಭ್ಯಗಳನ್ನು ಪರಿಗಣಿಸಿ ಸ್ಕಿಲ್‌ ಲ್ಯಾಬ್‌ ಶುಲ್ಕವನ್ನು ನಿಗದಿಮಾಡಲು ಶಿಫಾರಸ್ಸು ಮಾಡುತ್ತಿದೆ. ಅಲ್ಲದೆ ಸಂಬಂಧಿಸಿದ ಇಂಜನಿಯರಿಂಗ್‌ ಕಾಲೇಜುಗಳು ಹೊಂದಿರುವ ಪಠ್ಯಕ್ರಮವನ್ನು ಪರಿಗಣಿಸುವುದು ಸೂಕ್ತವೆಂದು ,’ ಎಂದು ಸಭೆಯ ಗಮನಕ್ಕೆ ತಂದಿರುವುದು ತಿಳಿದು ಬಂದಿದೆ. ಇದಕ್ಕೆ ಮಂಜುನಾಥ ಭಂಡಾರಿ ಅವರು ಪ್ರಬಲವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

 

ಇದೇ ವೇಳೆ ಸಭೆಯಲ್ಲಿ ಹಾಜರಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಾರ್ಯನಿರ್ವಾಹಕ ನಿರ್ದೇಶಕ ‘ವಿದ್ಯಾರ್ಥಿಗಳು ಸಿಇಟಿ ಕೌನ್ಸಲಿಂಗ್‌ ಮೂಲಕ ಪ್ರವೇಶಾತಿ ಪಡೆಯುವ ಸಂದರ್ಭದಲ್ಲಿಯೇ ಸುಮಾರು ಶೇ. 70ರಷ್ಟು ವಿದ್ಯಾರ್ಥಿಗಳಿಂದ ಸ್ಕಿಲ್‌ ಲ್ಯಾಬ್‌ ಶುಲ್ಕ ಪಡೆಯಲಾಗುತ್ತಿದೆ,’ ಎಂದು ಮಾಹಿತಿ ಒದಗಿಸಿದ್ದಾರೆ.

the fil favicon

SUPPORT THE FILE

Latest News

Related Posts