671 ಕೋಟಿ ರು. ಯೋಜನೆಯ ಕಡತಗಳು ನಾಶ; ಮಾಹಿತಿ ನೀಡಿದವರಿಂದಲೇ ದಾಖಲೆ ಕೇಳಿದ ಲೋಕಾಯುಕ್ತ

ಬೆಂಗಳೂರು; ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ಅಂತರ್ಜಲ ಅಭಿವೃದ್ಧಿಗಾಗಿ ಮತ್ತು ಕುಡಿಯುವ ನೀರಿನ ಸಲುವಾಗಿ ಕೆರೆಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ 670 ಕೋಟಿ ರು. ಮೊತ್ತದ ಯೋಜನೆಗೆ ಸಂಬಂಧಿಸಿದಂತೆ ಡಿಪಿಆರ್ ಮೂಲ ಕಡತಗಳು ನಾಶವಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಮೊಕದ್ದಮೆ ದಾಖಲು ಮಾಡಿಕೊಳ್ಳಬೇಕಿದ್ದ ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ಮಾಹಿತಿ ನೀಡಿದವರಿಂದಲೇ ದಾಖಲೆಗಳನ್ನು ಕೇಳಿದೆ.

 

ಮೂಲ ಕಡತಗಳು ನಾಶವಾಗಿದೆ ಎಂದು ಶಂಕಿಸಿದ್ದ ಸಾಮಾಜಿಕ ಕಾರ್ಯಕರ್ತ ಎಚ್‌ ಎಂ ವೆಂಕಟೇಶ್‌ ಅವರು ಈ ಕುರಿತು ಲೋಕಾಯುಕ್ತ ಸಂಸ್ಥೆಗೆ ಇ-ಮೈಲ್ ಮೂಲಕ ಮಾಹಿತಿ ನೀಡಿದ್ದರು. ಇದನ್ನು ಪರಿಶೀಲಿಸಿರುವ ಲೋಕಾಯುಕ್ತ ಸಂಸ್ಥೆಯು ಅರ್ಜಿದಾರರು ಪ್ರಪತ್ರ 1 ಮತ್ತು 2ರಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ದೂರು ಸಲ್ಲಿಸಬೇಕು ಎಂದು ಸೂಚಿಸಿದೆ.

 

ಈ ಕುರಿತು ಲೋಕಾಯುಕ್ತ ಸಂಸ್ಥೆಯ ಸಹಾಯಕ ನಿಬಂಧಕ ಪುಟ್ಟರಾಜ ಸಿ ಅವರು ಸಲ್ಲಿಸಿದ್ದ ಟಿಪ್ಪಣಿಯನ್ನು ಉಪ ಲೋಕಾಯುಕ್ತ ಫಣೀಂದ್ರ ಅವರು ಅನುಮೋದಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ನೀರಾವರಿ ಇಲಾಖೆಯಲ್ಲಿ 671 ಕೋಟಿ ರು. ಮೊತ್ತದ ಕಾರ್ಯ ಯೋಜನೆಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಡೆದಿದ್ದು ಸದರಿ ಯೋಜನೆಯ ಕಡತಗಳನ್ನು ಅಧಿಕಾರಿಗಳು ನಾಶಪಡಿಸಿರುತ್ತಾರೆ ಎಂದು ಹಾಗೂ ಯೋಜನೆಗೆ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಜವಾಬ್ದಾರರಾಗಿದ್ದಾರೆ ಎಂದು ಆರೋಪಿಸಿರುವ ವಿಷಯಗಳಿಗೆ ಸಂಬಂಧಿಸಿದಂತೆ ಪೂರಕ ದಾಖಲಾತಿಗಳನ್ನು ಹಾಜರುಪಡಿಸಿರುವುದಿಲ್ಲ. ಹಾಗೂ ದೂರನ್ನು ಕರ್ನಾಟಕ ಲೋಕಾಯುಕ್ತ ನಿಯಮಗಳು 1985ರ ನಿಯಮ 4ರಲ್ಲಿ ಉಪಬಂಧಿಸಿದಂತೆ ಸಲ್ಲಿಸಿರುವುದಿಲ್ಲ. ಆದ್ದರಿಂದ ಅರ್ಜಿದಾರರಿಗೆ ಪ್ರಪತ್ರ 1 ಮತ್ತು 2ರಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ದೂರು ಸಲ್ಲಿಸುವಂತೆ ಸೂಚಿಸುವುದು ಸೂಕ್ತವಾಗಿರುತ್ತದೆ, ‘ ಎಂದು ಲೋಕಾಯುಕ್ತ ಸಂಸ್ಥೆಯು ಅಭಿಪ್ರಾಯಪಟ್ಟಿದೆ.

 

ಲೋಕಾಯುಕ್ತರು ಅನುಮೋದಿಸಿರುವ ಟಿಪ್ಪಣಿ ಪ್ರತಿ

 

ಅದೇ ರೀತಿ ‘ಅರ್ಜಿದಾರರಿಗೆ ಪ್ರಪತ್ರ 1 ಮತ್ತು 2 ರಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ದೂರು ಸಲ್ಲಿಸುವಂತೆ ಸೂಚಿಸುವುದು ಹಾಗೂ ಹೊಸಪೇಟೆಯ ಲೋಕಾಯುಕ್ತ ಉಪಾಧೀಕ್ಷಕರಿಗೆ ಅರ್ಜಿ ಮತ್ತು ಅದರ ಲಗತ್ತುಗಳ ಪ್ರತಿಗಳನ್ನು ಕಳಿಸಿ ವಿಸ್ತೃತ ವರದಿ ಸಲ್ಲಿಸುವಂತೆ ಸೂಚಿಸುವುದು ಸೂಕ್ತವಾಗಿರುತ್ತದೆ, ಎಂದು ಸಹಾಯಕ ನಿಬಂಧಕ ಪುಟ್ಟರಾಜ ಸಿ ಅವರು ಟಿಪ್ಪಣಿ ಹಾಕಿದ್ದಾರೆ. ಇದನ್ನು ಉಪ ಲೋಕಾಯುಕ್ತ ಫಣೀಂದ್ರ ಅವರು ಅನುಮೋದಿಸಿದ್ದಾರೆ.

 

ಪ್ರಕರಣ ಹಿನ್ನೆಲೆ

 

ಕೂಡ್ಲಿಗಿ ತಾಲೂಕಿನ 74ಕೆರೆಗಳಿಗೆ ಅಂತರ್ಜಲ ಅಭಿವೃದ್ಧಿಗಾಗಿ ಮತ್ತು ಕುಡಿಯುವ ನೀರಿನ ಸಲುವಾಗಿ ತುಂಗಭದ್ರಾ ನದಿಯಿಂದ ಕೆರೆಗೆ ನೀರು ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ ಡಿಪಿಆರ್ ಮೂಲ ಕಡತಗಳನ್ನು ಪಡೆಯಲು 2021ರ ಡಿಸೆಂಬರ್‌ 6ರಂದು ಮಾಹಿತಿ ಹಕ್ಕು ಅಧಿನಿಯಮದಲ್ಲಿ ಕಡತಗಳನ್ನು ನೀಡುವಂತೆ ಅರ್ಜಿ ಸಲ್ಲಿಸಿದ್ದರು.

 

ಆದರೆ ಹೂವಿನಹಡಗಲಿ ವ್ಯಾಪ್ತಿಯ ಕಾರ್ಯಪಾಲಕ ಅಭಿಯಂತರರು ಕಡತಗಳನ್ನು ಹಸ್ತಾಂತರಿಸಬೇಕು ಎಂದು ಮುಂಡರಗಿಯ ಏತನೀರಾವರಿ ಯೋಜನೆ ನಿರ್ವಹಿಸುತ್ತಿರುವ ವಿಭಾಗಕ್ಕೆ 2021ರ ಡಿಸೆಂಬರ್‌ 27ರಂದು ಪತ್ರ ಬರೆದು ಕೈತೊಳೆದುಕೊಂಡಿದ್ದಾರೆ. ಮುಂಡರಗಿಯ ಏತನೀರಾವರಿ ಯೋಜನೆಯ ವಿಭಾಗವು ಮೂಲಕಡತಗಳನ್ನು ಇದುವರೆಗೂ ಹಸ್ತಾಂತರಿಸಿಲ್ಲ ಎಂಬುದು ಇಲಾಖೆಯ ಆಂತರಿಕ ವ್ಯವಹಾರ ಪತ್ರಗಳಿಂದ ತಿಳಿದು ಬಂದಿತ್ತು.

 

ಇದಾದ ನಂತರ 2022ರ ಫೆ.23ರಂದು ಹೂವಿನಹಡಗಲಿಯ ಕಾರ್ಯಪಾಲಕ ಅಭಿಯಂತರರು ಮೂಲ ಕಡತಗಳನ್ನು ಹಸ್ತಾಂತರಿಸಬೇಕು ಎಂದು ಬರೆದಿದ್ದ ನೆನಪೋಲೆಗಳಿಗೂ ಯಾವುದೇ ಉತ್ತರ ಬಂದಿಲ್ಲ.

 

‘ಡಿಪಿಆರ್ ಮೂಲ ಕಡತಗಳನ್ನು ಹಸ್ತಾಂತರಿಸಬೇಕು ಎಂದು ಹೂವಿನಹಡಗಲಿ ಪತ್ರ ಬರೆದಿದ್ದರು ಸಹ ಕಡತಗಳನ್ನು ನೀಡಿಲ್ಲ. ಇದರಿಂದ ಅಧಿಕಾರಿಗಳು ವಿಫಲರಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಸಾರ್ವಜನಿಕರ ತೆರಿಗೆ ಹಣದಿಂದ ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಯನ್ನು ಸರ್ಕಾರ ರೂಪಿಸಿದ್ದು ಇದಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದೆ. ಯೋಜನೆಯ ಮೂಲ ಕಡತಗಳು ನಾಶ ಮಾಡಿದ್ದಾರೆ,’ ಎಂದು ಸಾಮಾಜಿಕ ಕಾರ್ಯಕರ್ತ ಎಚ್‌ ಎಂ ವೆಂಕಟೇಶ್‌ ಅವರು ಶಂಕೆ ವ್ಯಕ್ತಪಡಿಸಿದ್ದರು.

 

ಸಾರ್ವಜನಿಕರ ತೆರಿಗೆ ಹಣದಿಂದ ಈ ಯೋಜನೆ ರೂಪುಗೊಂಡಿದೆ. ಯೋಜನೆಗೆ ಸಂಬಂಧಿಸಿದ ಮೂಲ ಕಡತಗಳನ್ನು ನಾಶಪಡಿಸಿರುವ ಮುಂಡರಗಿ ಮತ್ತು ಹೂವಿನಹಡಗಲಿ ಕಾರ್ಯಪಾಲಕ ಅಭಿಯಂತರರು ಹಾಗೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಬೇಕು ಎಂದು ನೀಡಿದ್ದ ದೂರನ್ನೂ ಕಸದಬುಟ್ಟಿಗೆ ಎಸೆದಿದ್ದರು.

 

‘ತಕ್ಷಣ ತಪ್ಪಿತಸ್ಥರ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರದ ಕೋಟ್ಯಾಂತರ ರೂಪಾಯಿಗಳ ಖರ್ಚುವೆಚ್ಚಗಳ ದಾಖಲೆಗಳನ್ನು ಕಣ್ಮರೆ ಮಾಡಿರುವ ಹಿಂದೆ ಭಾರೀ ಭ್ರಷ್ಟಾಚಾರ ಮತ್ತು ಅವ್ಯವಹಾರಗಳು ನಡೆದಿರುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿಯೇ ದಾಖಲೆಗಳು ನಾಶ ಮಾಡಿರುವ ಸಾಧ್ಯತೆ ಹೆಚ್ಚಾಗಿ ಇರುವುದರಿಂದ ಅಧಿಕಾರಿಗಳನ್ನು ತಕ್ಷಣ ಅಮಾನತಿನಲ್ಲಿಟ್ಟು ತನಿಖೆ ಮಾಡಬೇಕು,’ ಎಂದು ವೆಂಕಟೇಶ್‌ ಅವರು ದೂರು ಸಲ್ಲಿಸಿದ್ದರು.

 

ಕೂಡ್ಲಿಗಿಯಲ್ಲಿ 27 ದೊಡ್ಡ ಮತ್ತು 28 ಸಣ್ಣ ಕೆರೆಗಳಿವೆ. ದೊಡ್ಡ ಕೆರೆಗಳ ಒಟ್ಟು ನೀರಿನ ಸಾಮರ್ಥ್ಯ 1455.89 ಎಂಸಿಎಫ್‌ ಇದ್ದರೆ ಸಣ್ಣ ಕೆರೆಗಳ ಸಾಮರ್ಥ್ಯ 278.24 ಎಂಸಿಎಫ್‌ಟಿ ಇದೆ. ಉಳಿದಂತೆ 19 ಸಣ್ಣಪುಟ್ಟ ಕೆರೆಗಳಿವೆ.

 

‘671 ಕೋಟಿ ರು.ಮೊತ್ತದ ಕಾಮಗಾರಿಯ ಕಾರ್ಯಯೋಜನೆಯ ಮೂಲ ಕಡತಗಳು, ಗುತ್ತಿಗೆದಾರರಿಗೆ ನೀಡಿದ ಬಿಲ್‌ಗಳು ಸೇರಿ ಇದಕ್ಕೆ ಸಂಬಂಧಿಸಿದ ಮೂಲ ದಾಖಲೆಗಳು ಇಲಾಖೆಯಲ್ಲಿ ದೊರಕುತ್ತಿಲ್ಲ. ಈ ವಿಚಾರ ಗಮನಕ್ಕೆ ಬಂದ ಕೂಡಲೇ ಲೋಕಾಯುಕ್ತ ಸಂಸ್ಥೆಗೆ ಸಮಗ್ರ ಮಾಹಿತಿ ಇ-ಮೈಲ್ ಮೂಲಕ ಒದಗಿಸಲಾಗಿತ್ತು. ಇದನ್ನಾಧರಿಸಿಯಾದರೂ ಲೋಕಾಯುಕ್ತ ಸಂಸ್ಥೆಯು ತತ್‌ಕ್ಷಣವೇ ಸ್ವಯಂ ಪ್ರೇರಿತ ಮೊಕದ್ದಮೆ ದಾಖಲು ಮಾಡಿಕೊಂಡು ತನಿಖೆಗೆ ಮುಂದಾಗಬೇಕಿತ್ತು. ಅಲ್ಲದೆ ಸಂಬಂಧಪಟ್ಟ ಇಂಜಿನಿಯರ್‌ಗಳಿಗೆ ನೋಟೀಸ್‌ ನೀಡಿ ವಿವರಣೆ ಪಡೆಯಬೇಕಿತ್ತು. ಆದರೆ ನಾನು ಕೊಟ್ಟ ಮಾಹಿತಿಗೆ ನನ್ನ ಬಳಿಯೇ ದಾಖಲೆ ಕೇಳುತ್ತಿದೆ.

 

ಆದರೆ ವಾಸ್ತವದಲ್ಲಿ ಮೂಲ ಕಡತ ಮತ್ತು ದಾಖಲೆಗಳೇ ಇಲ್ಲ ಎಂದು ನಾನು ಮಾಹಿತಿ ಒದಗಿಸಿದ್ದೇನೆ. ಹೀಗಿರುವಾಗ ನಾನು ಎಲ್ಲಿಂದ ದಾಖಲೆಗಳನ್ನು ತಂದು ಲೋಕಾಯುಕ್ತಕ್ಕೆ ಒದಗಿಸಲಿ. ನಾನು ಇಲ್ಲಿ ಸದ್ಯಕ್ಕೆ ಮಾಹಿತಿದಾರನಷ್ಟೇ. ಆದರೆ ಸಂಸ್ಥೆಯು ನನ್ನನ್ನೇ ಅರ್ಜಿದಾರ ಎಂದು ಪರಿಗಣಿಸಿದೆ. ಇದು ನ್ಯಾಯಸಮ್ಮತವಲ್ಲ. ಉತ್ತಮ ಆಡಳಿತ ವ್ಯವಸ್ಥೆ ಮತ್ತು ಅದನ್ನು ರೂಪಿಸುವ ಮಹತ್ತರ ಜವಾಬ್ದಾರಿ ಹೊಂದಿರುವ ಲೋಕಾಯುಕ್ತವು ತನ್ನ ಗುರುತರ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಭಾಸವಾಗುತ್ತಿದೆ,’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಎಚ್‌ ಎಂ ವೆಂಕಟೇಶ್‌

SUPPORT THE FILE

Latest News

Related Posts