ಬಸವಣ್ಣನಿಗೆ ಉಪನಯನ, ಲಿಂಗದೀಕ್ಷೆ, ಅಷ್ಟಮಠಗಳ ಉಲ್ಲೇಖಿಸಿ ಲಿಂಗಾಯತ ಮಠಗಳ ಹೆಸರಿಸದ ಚಕ್ರತೀರ್ಥ

ಬೆಂಗಳೂರು; ರಾಷ್ಟ್ರಕವಿ ಕುವೆಂಪು ಅವರನ್ನು ನಿಂದಿಸಿ ತೀವ್ರ ಟೀಕೆಗೆ ಒಳಗಾಗಿರುವ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಇದೀಗ ತನ್ನದೇ ಅಧ್ಯಕ್ಷತೆಯಲ್ಲಿರುವ ಸಮಿತಿಯು 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಬಸವೇಶ್ವರರು ಶೈವ ಗುರುಗಳಿಂದ ಲಿಂಗದೀಕ್ಷೆ ಪಡೆದರು, ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು ಮತ್ತು ಲಿಂಗಾಯತ ಮಠಗಳನ್ನು ಹೆಸರಿಸದೇ ಕೇವಲ ಅಷ್ಟಮಠಗಳನ್ನು ಹೆಸರಿಸಿ ಪರಿಷ್ಕರಿಸಿರುವುದು ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

 

ಕುವೆಂಪು ಅವರನ್ನು ನಿಂದಿಸಿದ್ದಕ್ಕೆ ಒಕ್ಕಲಿಗ ಸಮುದಾಯ ಪ್ರಭಾವಿ ಮಠ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಮತ್ತು ಒಕ್ಕಲಿಗರ ಅಧಿಕಾರಿ ಮತ್ತು ನೌಕರರ ಸಂಘವು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿ ರೋಹಿತ್‌ ಚಕ್ರತೀರ್ಥರನ್ನು ಸಮಿತಿಯಿಂದಲೇ ವಜಾಗೊಳಿಸಬೇಕು ಎಂದು ಪತ್ರ ಬರೆದಿರುವ ಬೆನ್ನಲ್ಲೇ ಬಸವೇಶ್ವರ ಕುರಿತಾಗಿಯೂ ತಪ್ಪು ಮಾಹಿತಿಯನ್ನು ಪಠ್ಯದಲ್ಲಿ ಸೇರಿಸಿರುವುದು ಲಿಂಗಾಯತ ಸಮುದಾಯದಿಂದಲೂ ತೀವ್ರ ಟೀಕೆಗೆ ಗುರಿಯಾಗಿದೆ.

 

ಬಸವೇಶ್ವರರ ಕುರಿತಾಗಿ ತಪ್ಪು ಮಾಹಿತಿಯನ್ನು ಸೇರಿಸಿರುವ ಕುರಿತು ಪಠ್ಯದ ಪುಟಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೂ ಲಿಂಗಾಯತ ಸಮುದಾಯಕ್ಕೆ ಸೇರಿರುವ ಹಲವು ಮಠಗಳು ಮತ್ತು ಮಠಾಧೀಶರು ಮೌನ ವಹಿಸಿದ್ದಾರೆ. ಈ ಕುರಿತೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

 

ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕ

 

ಪಠ್ಯದಲ್ಲಿ ಅಷ್ಟಮಠಗಳ ಕುರಿತು ಉಲ್ಲೇಖಿಸಿರುವ ಬಗ್ಗೆಯೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ರಾಜ್ಯದಲ್ಲಿ ಲಿಂಗಾಯತರ ಸಾವಿರಾರು ಮಠಗಳಷ್ಟೇ ಅಲ್ಲದೆ ದರ್ಗಾಗಳು, ಗುರುದ್ವಾರ, ಚರ್ಚುಗಳಿದ್ದರೂ ಇವುಗಳ ಹೆಸರುಗಳನ್ನು ಪ್ರಸ್ತಾಪಿಸದ ಸಮಿತಿ ವಿರುದ್ಧ ಟೀಕೆ ವ್ಯಕ್ತವಾಗಿದೆ.

 

ಪಠ್ಯದಲ್ಲೇನಿದೆ?

 

ಬಸವೇಶ್ವರರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ಮಾದರಸ ಮತ್ತು ಮಾದಲಾಂಬಿಕೆಯ ಪುತ್ರರು. ಸಂಸ್ಕೃತ ಮತ್ತು ಕನ್ನಡಗಳನ್ನು ಕಲಿತು ತಮ್ಮ ಉಪನಯನವಾದ ನಂತರ ಕೂಡಲ ಸಂಗಮಕ್ಕೆ ನಡೆದರು. ಅಲ್ಲಿ ಶೈವ ಗುರುಗಳ ಸಾನಿಧ್ಯದಲ್ಲಿ ಲಿಂಗದೀಕ್ಷೆಯನ್ನು ಪಡೆದು ಧ್ಯಾನ ಸಾಧನೆ ಮಾಡಿದರು. ಇವರು ವೀರಶೈವ ಮತವನ್ನು ಅಭಿವೃದ್ದಿಪಡಿಸಿದರು. ತಮ್ಮ ಕಾರ್ಯದಕ್ಷತೆಯಿಂದ ಕಲಚೂರಿ ಅರಸ ಬಿಜ್ಜಳನ ಭಂಡಾರದ ಅಧಿಕಾರಿಯಾಗಿದ್ದರು. ಇದೇ ಕಾಲದಲ್ಲಿ ತಮ್ಮ ಧಾರ್ಮಿಕ, ಸಾಮಾಜಿಕ ಚಳವಳಿಯನ್ನು ಬಸವಣ್ಣನವರು ಮಂಗಳವೇಡೆಯಲ್ಲಿ ಆರಂಭಿಸಿದರು.

 

ಲಿಂಗದೀಕ್ಷೆ, ಉಪನಯನ ಅಂಶ ಇರುವ ಪಠ್ಯದ ಪುಟದ ಪ್ರತಿ

 

ಶಿವಶರಣನಾದವನು ಜಾತಿ ಭೇದವನ್ನು ಮಾಡಬಾರದು, ಪರಿಶುದ್ಧ ಭಕ್ತಿಯೇ ಶಿವನನ್ನು ಸೇರುವ ನಿಜವಾದ ಮಾರ್ಗವೆಂಬುದಾಗಿ ಪ್ರತಿಪಾದಿಸಿದರು. ಪ್ರತಿಯೊಬ್ಬ ಮನುಷ್ಯನು ದುಡಿದು ತಿನ್ನಬೇಕು. ವೃತ್ತಿಗಳಲ್ಲಿ ಹಿರಿದು-ಕಿರಿದು ಎಂಬುದಿಲ್ಲ ಎಂದು ಸಾರಿದರು. ಸಮಾಜದ ಸ್ವಾವಲಂಬನೆ ಕಾಯಕ ತತ್ವವನ್ನು ಪ್ರತಿಪಾದಿಸಿದರು. ಬಸವಣ್ಣವರ ಉದ್ದೇಶ ಜನರಲ್ಲಿ ದುಡಿಮೆಯ ಸಮಸ್ಕೃತಿ ಬೆಳೆಸುವುದಾಗಿತ್ತು. ಕಾಯಕವೇ ಕೈಲಾಸ ಎಂದು ಸಾರಿದ ಬಸವಣ್ಣನವರು ಈ ತತ್ವವನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಿದರು. ಬಸವಣ್ಣ ಬೋಧಿಸಿದ ತತ್ವವನ್ನು ಶಕ್ತಿ ವಿಶಿಷ್ಟಾದ್ವೈತ ಎನ್ನಲಾಗುತ್ತದೆ.

 

ಈ ಕುರಿತು ಖ್ಯಾತ ಸಾಹಿತಿ ರಂಜಾನ್‌ ದರ್ಗಾ ಅವರು ಸಾಮಾಜಿಕ ಜಾಲತಾಣದಲ್ಲೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಬಸವಣ್ಣನವರು ವೀರಶೈವ ಧರ್ಮ ಸುಧಾರಕರೆಂದು ಪಠ್ಯದಲ್ಲಿ ಹೇಳಲಾಗಿದೆ. “ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ” ಎಂದು ಹೇಳಿದ ಬಸವಣ್ಣನವರು ವೇದಾಗಮಗಳಿಂದ ಕೂಡಿದ ವೀರಶೈವ ಧರ್ಮವನ್ನು ಸುಧಾರಿಸಲು ಹೋಗುವರೆ ಎಂದು ಪ್ರಶ್ನಿಸಿದ್ದಾರೆ.

 

ಬಸವಣ್ಣನವರು ಲಿಂಗ, ಜಾತಿ, ವರ್ಣ, ವರ್ಗಗಳಿಲ್ಲದ ಲಿಂಗಾಯತ ಧರ್ಮ ಎಂಬ ಪರ್ಯಾಯ ಧರ್ಮವನ್ನು ಸ್ಥಾಪಿಸಿದರು. ಕಾಯಕವೆ ಕೈಲಾಸ” ಎಂದು ಹೇಳಿದ್ದು ಆಯ್ದಕ್ಕಿ ಮಾರಯ್ಯನವರು. ಬಸವಣ್ಣನವರೇ ಇಷ್ಟಲಿಂಗದ ಜನಕರು. “ನಿನ್ನ ನಾನರಿಯದ ಮುನ್ನ ನೀನೆಲ್ಲಿ ಇದ್ದೆ? ಎನ್ನೊಳಗಿದ್ದು ನಿನ್ನ ತೋರಲಿಕೆ ನೀನೇ ರೂಪಾದೆ.” ಎಂದು ಸ್ವತಃ ಬಸವಣ್ಣನವರೇ ತಿಳಿಸಿದ್ದಾರೆ ಎಂದು ವಿವರಿಸಿದ್ದಾರೆ.

 

“ಬಸವಣ್ಣನ ಉದರದಲ್ಲಿ ಹುಟ್ಟಿತ್ತು ಲಿಂಗ” ಎಂದು ಚನ್ನಬಸವಣ್ಣನವರು ಹೇಳುವ ಮೂಲಕ, ಬಸವಣ್ಣನವರೇ ಇಷ್ಟಲಿಂಗದ ಜನಕರು ಎಂದು ಸೂಚಿಸಿದ್ದಾರೆ. ಅಲ್ಲಮ ಮುಂತಾದ ಶರಣರು ಇದನ್ನೇ ಪ್ರತಿಪಾದಿಸಿದ್ದಾರೆ. ಅವರಿಗೆ ಯಾವ ಗುರು ಇಷ್ಟಲಿಂಗ ದೀಕ್ಷೆ ಕೊಡಲು ಸಾಧ್ಯ? ಇದ್ದರಲ್ಲವೆ ಕೊಡೋದು. ಮಕ್ಕಳ ತಲೆಯಲ್ಲಿ ಅಜ್ಞಾನ ತುಂಬಬಾರದು,’ ಎಂದು ಹೇಳಿದ್ದಾರೆ.

 

ಬಸವಣ್ಣನವರು ಶೈವಗುರುಗಳ ಸಾನಿಧ್ಯಲ್ಲಿ ಲಿಂಗದೀಕ್ಷೆ ಪಡೆದರು ಎಂದು ಪಠ್ಯದಲ್ಲಿ ಬರೆಯಲಾಗಿದೆ. ಸಾನಿಧ್ಯ ವಹಿಸಿದ್ದ ಶೈವಗುರು ಯಾರು, ದೀಕ್ಷೆ ಕೊಟ್ಟವರು ಯಾರು, ಲಿಂಗದೀಕ್ಷೆ ಕೊಡಲು ಲಿಂಗವಾದರೂ ಬೇಕಲ್ಲವೆ, ಬಸವಣ್ಣನವರು ವಿದ್ಯಾರ್ಜನೆ ಮಾಡುವಾಗ ಇಷ್ಟಲಿಂಗ ಎಲ್ಲಿತ್ತು, ಆಗ ಇದ್ದದ್ದು ಸ್ಥಾವರಲಿಂಗಗಳು ಮತ್ತು ಚರಲಿಂಗಗಳು ಮಾತ್ರ ಎಂದು ರಂಜಾನ್‌ ದರ್ಗಾ ಅವರು ವಿವರಿಸಿದ್ದಾರೆ.
ಪಠ್ಯದಲ್ಲಿ ಅಷ್ಟಮಠಗಳ ಉಲ್ಲೇಖವಿದೆ. ಲಿಂಗಾಯತರ ಸಾವಿರಾರು ಮಠಗಳಿವೆ. ಅದೇ ರೀತಿ ದರ್ಗಾಗಳು, ಗುರುದ್ವಾರ, ಚರ್ಚುಗಳಿವೆ. ಇವುಗಳ ಹೆಸರುಗಳೇಕೆ ಇಲ್ಲ? ಅದೆಲ್ಲ ಇರಲಿ. ವಿದ್ಯಾರ್ಥಿಗಳು ಇವನ್ನೆಲ್ಲ ಕಟ್ಟಿಕೊಂಡು ಏನು ಮಾಡಬೇಕು ಎಂದೂ ಪ್ರಶ್ನಿಸಿದ್ದಾರೆ.

 

ಅಲ್ಲದೆ ‘ಬಸವಣ್ಣನವರು ಉಪನಯನ ನಂತರ ವೀರಶೈವ ಗುರುಗಳಿಂದ ಲಿಂಗದೀಕ್ಷೆ ಪಡೆದರು ಎಂದು ಸೇರಿಸಿರುವ ಸಮಿತಿಯು ಅಬ್ಬಾ!? ಬಸವಣ್ಣರು ತನ್ನ ಅಕ್ಕಳಿಗೂ ಉಪನಯನ ಮಾಡಿ ಎಂದು ಅದಕ್ಕೊದ್ದು ಹೋದವರು. ಬಸವಣ್ಣನವರು ಉಪನಯನವೇ ಮಾಡಿಕೊಳ್ಳಲಿಲ್ಲ. ಬಸವಣ್ಣರಿಗಿಂತ ಮೊದಲು ಇಷ್ಟಲಿಂಗ ಇರಲೇ ಇಲ್ಲ,’ ಎಂದೂ ಶಿವಕುಮಾರ ಉಪ್ಪಿನ ಅವರು ಹೇಳಿದ್ದಾರೆ.

 

ಪಠ್ಯಪುಸ್ತಕದಲ್ಲಿ ಟಿಪ್ಪುವಿನ ಕುರಿತಾದ ಮಹತ್ವದ ಸಂಗತಿಗಳನ್ನು ಸಮಿತಿಯು ಕೈಬಿಟ್ಟಿತ್ತು. ರಾಕೆಟ್‌ ತಂತ್ರಜ್ಞಾನ, ಶೃಂಗೇರಿ ಮಠಕ್ಕೆ ನೀಡಿದ ದೇಣಿಗೆ, ರೇಷ್ಮೆ ವ್ಯವಸಾಯ ಪಾಠಾಂಶವನ್ನು ಕೈಬಿಟ್ಟಿತ್ತು. ಇದಲ್ಲದೆ ಸಿಂಧೂ ಜತೆಗೆ ಸರಸ್ವತಿ ಸೇರ್ಪಡೆ ಮಾಡಿದ್ದ ಸಮಿತಿಯು ಸ್ವಾತಂತ್ರ್ಯ ಸಂಗ್ರಾಮ ಪಠ್ಯದಲ್ಲಿ ದಂಗೆ ಎಂಬ ಪದವನ್ನು ಕಿತ್ತೊಗೆದಿತ್ತು.

 

ಪಠ್ಯ ಪರಿಷ್ಕರಣೆಯಿಂದಾಗಿ 2.5 ಕೋಟಿ ರು. ನಷ್ಟವಾಗಿತ್ತು. ಅಲ್ಲದೆ 6.76 ಲಕ್ಷ ಪುಸ್ತಕಗಳು ಅನುಪಯುಕ್ತವಾಗಿದ್ದವಲ್ಲದೆ ಹರಾಜಿಗೂ ನಕಾರ ವ್ಯಕ್ತವಾಗಿತ್ತು. 6ರಿಂದ 10ನೇ ತರಗತಿವರೆಗಿನ ಸಮಾಜ ವಿಜ್ಞಾನ ಪಠ್ಯ ಪುಸ್ತಕವನ್ನು ಪರಿಷ್ಕರಿಸಿರುವ ರೋಹಿತ್‌ ಚಕ್ರತೀರ್ಥ ಸಮಿತಿಗೆ ಪಿಯು ಇತಿಹಾಸ ಪಠ್ಯಪುಸ್ತಕವನ್ನು ಪರಿಷ್ಕರಿಸಲು ವಹಿಸಲು ಸರ್ಕಾರ ಸೂಚಿಸಿತ್ತು. ಮಾಜಿ ಶಿಕ್ಷಣ ಸಚಿವ ಎಸ್‌ ಸುರೇಶ್‌ಕುಮಾರ್‌ ಅವರು ರೋಹಿತ್‌ ಚಕ್ರತೀರ್ಥ ಅವರನ್ನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಲು ಸೂಚಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts