ನಾಡಗೀತೆ ತಿರುಚಿದ ಪ್ರಕರಣ; ಆದಿಚುಂಚನಗಿರಿ ಮಠಕ್ಕೆ ದೌಡಾಯಿಸಿದ ಸಚಿವ ಬಿ ಸಿ ನಾಗೇಶ್‌

ಬೆಂಗಳೂರು; ಕುವೆಂಪು ವಿರಚಿತ ನಾಡಗೀತೆಯನ್ನು ತಿರುಚಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆಯುತ್ತಿದ್ದಂತೆ ಇತ್ತ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಅವರು ಆದಿಚುಂಚನಗಿರಿ ಮಠಕ್ಕೆ ದೌಡಾಯಿಸಿದ್ದಾರೆ.

 

ರೋಹಿತ್‌ ಚಕ್ರತೀರ್ಥ ವಜಾಗೊಳಿಸುವ ಕುರಿತು ನಿರ್ಮಲಾನಂದನಾಥ ಸ್ವಾಮೀಜಿ ಇರಿಸಿಸದ್ದ ಬೇಡಿಕೆ ಕುರಿತು ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದರ ಬೆನ್ನಲ್ಲೇ ಸಚಿವ ಬಿ ಸಿ ನಾಗೇಶ್‌ ಅವರು ಮಠಕ್ಕೆ ದೌಡಾಯಿಸಿರುವುದು ಕುತೂಹಲ ಮೂಡಿಸಿದೆ.
ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿರುವ ಅಂಶಗಳ ಕುರಿತು ನಿರ್ಮಲಾನಂದನಾಥ ಸ್ವಾಮೀಜಿ ಅವರ ಗಮನಕ್ಕೆ ತಂದು ಸಮರ್ಥನೆ ಮಾಡಿಕೊಂಡಿದ್ದಾರೆ ಎಂದು ಸಚಿವರ ಕಚೇರಿ ಮೂಲಗಳು ‘ದಿ ಫೈಲ್‌’ಗೆ ತಿಳಿಸಿವೆ.

 

‘ನಿರ್ಮಲಾನಂದನಾಥ ಶ್ರೀಗಳು ಕುವೆಂಪು ಅವರಿಗೆ ಸಂಬಂಧಿಸಿದಂತೆ ಗಂಭೀರವಾದ ವಿಚಾರವನ್ನು ಮುಂದಿಟ್ಟಿದ್ದಾರೆ. ಆ ಕುರಿತು ಶಿಕ್ಷಣ ಸಚಿವರ ಜತೆ ಸಭೆ ನಡೆಸುತ್ತೇನೆ. ಚರ್ಚೆಗೆ ಬರುವಂತೆ ಸಚಿವರಿಗೆ ಈಗಾಗಲೇ ಸೂಚಿಸಿದ್ದೇನೆ. ಚರ್ಚಿಸಿದ ಬಳಿಕ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು.

 

ರಾಜ್ಯ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿರುವ ರೋಹಿತ್‌ ಚಕ್ರತೀರ್ಥ ಅವರು ನಾಡಗೀತೆ ಮತ್ತು ಕುವೆಂಪು ಕುರಿತು ತಮ್ಮ ಫೇಸ್‌ ಬುಕ್‌ ಖಾತೆಯಲ್ಲಿ ಬರಹವೊಂದನ್ನು ಪ್ರಕಟಿಸಿದ್ದರು. ಚಕ್ರತೀರ್ಥ ಅವರು ಕುವೆಂಪು ಮತ್ತು ನಾಡಗೀತೆಯನ್ನು ಅವಮಾನಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದರು. ಕುವೆಂಪು ಮತ್ತು ನಾಡಗೀತೆಯನ್ನು ನಿಂದಿಸಿದವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ನಿರ್ಮಲಾನಂದನಾಥ ಸ್ವಾಮೀಜಿಯೂ ಒತ್ತಾಯಿಸಿದ್ದರು.

SUPPORT THE FILE

Latest News

Related Posts