‘ಅಕ್ರಮ ಫಲಾನುಭವಿ’ ಆರೋಪಿತ ಅಧಿಕಾರಿಯೇ ಕೆಪಿಎಸ್ಸಿಗೆ ಕಾರ್ಯದರ್ಶಿ: ವಿವಾದದ ವರ್ಗಾವಣೆ

ಬೆಂಗಳೂರು; 1999ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿಯಲ್ಲಿ ಅಕ್ರಮ ಫಲಾನುಭವಿ’ ಎಂದೇ ಹೈಕೋರ್ಟ್‌ನ ಸತ್ಯಶೋಧನಾ ಸಮಿತಿ ವರದಿಯಲ್ಲಿ ಗುರುತಿಸಲಾಗಿರುವ ಬಾಗಲಕೋಟೆಯ ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ ಕೆ ರಾಜೇಂದ್ರ ಅವರನ್ನೇ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕಾರ್ಯದರ್ಶಿಯನ್ನಾಗಿ ವರ್ಗಾವಣೆ ಮಾಡಿರುವ ಸರ್ಕಾರವು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.

 

ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌, ಸಹಾಯಕ ಪ್ರಾಧ್ಯಾಪಕರ ನೇಮಕಾತಿ, ಎಫ್‌ಡಿಎ, ಎಸ್‌ಡಿಎ ನೇಮಕಾತಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಪ್ರತಿಪಕ್ಷ ಮತ್ತು ಆಡಳಿತ ಪಕ್ಷದ ನಡುವೆ ಆರೋಪ ಪ್ರತ್ಯಾರೋಪಗಳ ಸುರಿಮಳೆಯ ನಡುವೆಯೇ ಕಳಂಕಿತ ಅಧಿಕಾರಿಯನ್ನೇ ಆಯೋಗಕ್ಕೆ ಕಾರ್ಯದರ್ಶಿಯನ್ನಾಗಿ ನೇಮಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

1998, 1999 ಮತ್ತು 2004ನೇ ಸಾಲಿನಲ್ಲಿ ವಾಮಮಾರ್ಗದ ಮೂಲಕ ನೇಮಕವಾಗಿದ್ದ ಅಧಿಕಾರಿಗಳ ನೇಮಕಾತಿ ಮತ್ತು ಅವರಿಗೆ ಐಎಎಸ್‌ಗೆ ನೀಡಿದ್ದ ಬಡ್ತಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಖಲೀಲ್‌ ಅಹ್ಮದ್‌ ಮತ್ತಿರರು ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಅದಿನ್ನೂ ವಿಚಾರಣೆಗೆ ಬಾಕಿ ಇದೆ. ಹೀಗಿದ್ದರೂ ಅದೇ ಸಾಲಿನಲ್ಲಿ ಅಕ್ರಮ ಫಲಾನುಭವಿ ಎಂದೇ ಸತ್ಯಶೋಧನೆ ಸಮಿತಿ ವರದಿಯಲ್ಲಿ ಗುರುತಿಸಲಾಗಿರುವ ಕ್ಯಾಪ್ಟನ್‌ ಡಾ ಕೆ ರಾಜೇಂದ್ರ ಅವರನ್ನು ಆಯೋಗಕ್ಕೆ ಕಾರ್ಯದರ್ಶಿಯನ್ನಾಗಿ ವರ್ಗಾವಣೆ ಮಾಡಿರುವುದಕ್ಕೆ ಬಲವಾದ ಆಕ್ಷೇಪಗಳು ವ್ಯಕ್ತವಾಗಿವೆ.

 

1999ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿಯಲ್ಲಿ ಗಂಭೀರ ಸ್ವರೂಪದ ಅಕ್ರಮಗಳು ನಡೆದಿದ್ದವು ಎಂದು ಸಿಐಡಿ ತನಿಖಾ ವರದಿ ಸಲ್ಲಿಸಿತ್ತು. ಈ ವರದಿ ಆಧರಿಸಿ ಸರ್ಕಾರವು ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಖಲೀಲ್‌ ಅಹ್ಮದ್‌ ಮತ್ತಿತರರು ಹೈಕೋರ್ಟ್‌ ಮೆಟ್ಟಿಲೇರಿದ್ದರಿಂದ ಇಡೀ ಅಕ್ರಮದ ಸತ್ಯಾಸತ್ಯತೆ ತಿಳಿಯಲು ಹೈಕೋರ್ಟ್‌ ತನ್ನ ಕಣ್ಗಾವಲಿನಲ್ಲಿಯೇ ಸತ್ಯಶೋಧನೆ ಸಮಿತಿಯನ್ನೂ ರಚಿಸಿತ್ತು.

 

ಈ ಸಮಿತಿ ನೀಡಿದ್ದ ವರದಿಯಲ್ಲಿಯೂ ಕ್ಯಾಪ್ಟನ್‌ ಡಾ ಕೆ ರಾಜೇಂದ್ರ ಅವರನ್ನು ಅಕ್ರಮ ಫಲಾನುಭವಿ ಎಂದೇ ಗುರುತಿಸಲಾಗಿತ್ತು. ಇವರಿಗೆ ಆಯೋಗದ ಅಂದಿನ ಅಧ್ಯಕ್ಷರಾಗಿದ್ದ ಡಾ ಎಚ್‌ ಎನ್‌ ಕೃಷ್ಣ ಅವರು ವ್ಯಕ್ತಿತ್ವ ಪರೀಕ್ಷೆಯಲ್ಲಿ ಅಸಹಜ ಅಂಕಗಳನ್ನು ನೀಡಿದ್ದರು ಎಂದು ವರದಿಯಲ್ಲಿ ವಿವರಿಸಲಾಗಿತ್ತು.

 

2005ರ ಆಗಸ್ಟ್‌ 13ರಂದು ನಡೆದಿದ್ದ ವ್ಯಕ್ತಿತ್ವ ಪರೀಕ್ಷೆಯಲ್ಲಿ ಕ್ಯಾಪ್ಟನ್‌ ಡಾ ಕೆ ರಾಜೇಂದ್ರ ಅವರಿಗೆ ಆಯೋಗದ ಅಂದಿನ ಅಧ್ಯಕ್ಷ ಡಾ ಎಚ್‌ ಎನ್‌ ಕೃಷ್ಣ ಅವರೊಬ್ಬರೇ 200ಕ್ಕೆ 194 ಅಂಕಗಳನ್ನು ಕರುಣಿಸಿದ್ದರು. ಉಳಿದ ಸದಸ್ಯರು ಕ್ರಮವಾಗಿ 125, 110, 165, 100, 150 ಅಂಕ ನೀಡಿದ್ದರು ಎಂಬುದು ಸತ್ಯಶೋಧನೆ ಸಮಿತಿ ವರದಿಯಿಂದ ತಿಳಿದು ಬಂದಿದೆ.

 

ಸತ್ಯಶೋಧನಾ ಸಮಿತಿ ಸಲ್ಲಿಸಿರುವ ವರದಿ ಪ್ರತಿ

 

‘ನೇಮಕಾತಿಯಲ್ಲಿ ಅಕ್ರಮ ಫಲಾನುಭವಿ ಎಂದು ಗುರುತಿಸಲಾಗಿರುವ ರಾಜೇಂದ್ರ ಅವರನ್ನು ಕಾರ್ಯದರ್ಶಿಯನ್ನಾಗಿ ನೇಮಿಸಿರುವುದು ಸಾಕ್ಷ್ಯಗಳ ನಾಶವಾಗುವ ಸಾಧ್ಯತೆಗಳಿವೆ,’ ಎಂಬ ಆರೋಪ ಕೇಳಿ ಬಂದಿದೆ.

 

1998, 1999 ಮತ್ತು 2004ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ವ್ಯಾಪಕವಾಗಿ ಅಕ್ರಮಗಳು ನಡೆದಿದ್ದವು. ಈ ಸಂಬಂಧ ಖಲೀಲ್‌ ಅಹ್ಮದ್‌ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದ ಎನ್‌ ಕುಮಾರ್‌ ಅವರ ಪೀಠವು ಈ ನೇಮಕಾತಿಗಳು ಸಂವಿಧಾನಬಾಹಿರವಾಗಿ ನಡೆದಿವೆ ಎಂದು ಉಲ್ಲೇಖಿಸಿದ್ದರು. ಅಲ್ಲದೆ ಈ ಮೂರು ಸಾಲಿನ ನೇಮಕಾತಿಯ ಆಯ್ಕೆಪಟ್ಟಿಯನ್ನು ಪರಿಷ್ಕರಿಸಬೇಕು ಮತ್ತು ಅದನ್ನು 1;20 (ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯಪರೀಕ್ಷೆಗೆ) ಮತ್ತು 1;5 (ವ್ಯಕ್ತಿತ್ವ ಪರೀಕ್ಷೆ) ಅನುಪಾತದ ಪ್ರಕಾರ ಹೊಸದಾಗಿ ಪಟ್ಟಿಯನ್ನು ಪ್ರಕಟಿಸಬೇಕು ಎಂದು ತೀರ್ಪು ನೀಡಿತ್ತು.

 

ಆದರೆ ಸರ್ಕಾರವು 6 ವರ್ಷಗಳಾದರೂ ಮೂರನೇ ಮೌಲ್ಯಮಾಪನ ಅಂಕಗಳು ಮತ್ತು 2014 ನವೆಂಬರ್‌ 11ರಂದು ಕೆಪಿಎಸ್ಸಿಯು ಹೈಕೋರ್ಟ್‌ಗೆ ಸಲ್ಲಿಸಿದ್ದ ಪಟ್ಟಿಯನ್ನು ಮಾತ್ರ ಪರಿಷ್ಕರಿಸಿದೆ. ಆದರೆ 1999 ಮತ್ತು 2004ನೇ ಸಾಲಿನ ನೇಮಕಾತಿ ಪಟ್ಟಿಯನ್ನು ಇದುವರೆಗೂ ಪರಿಷ್ಕರಿಸಿಲ್ಲ.

 

ಹೈಕೋರ್ಟ್‌ ಆದೇಶದ ಮೇರೆಗೆ ಆಯೋಗವು 1998ನೇ ಸಾಲಿನ ಪಟ್ಟಿಯನ್ನು ಪರಿಷ್ಕರಿಸಿದ್ದನ್ನು ಪ್ರಶ್ನಿಸಿ ಎಚ್‌ ಎನ್‌ ಗೋಪಾಲಕೃಷ್ಣ, ಎಚ್‌ ಬಸವರಾಜೇಂದ್ರ, ಕವಿತಾ ಮನ್ನಿಕೇರಿ, ಪಿ ವಸಂತಕುಮಾರ್‌, ಎನ್‌ ಶಿವಶಂಕರ್‌, ಕರಿಗೌಡ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿತ್ತು. ಅಲ್ಲದೆ ಈ ಅಧಿಕಾರಿಗಳಿಗೆ ಐಎಎಸ್‌ ಗೆ ಬಡ್ತಿಯನ್ನು ನೀಡುವಾಗ ಸುಪ್ರೀಂ ಕೋರ್ಟ್‌ ನೀಡುವ ತೀರ್ಪಿಗೆ ಬದ್ಧರಾಗಿರಬೇಕು ಎಂಬ ಷರತ್ತು ಬದ್ಧ ಒಪ್ಪಿಗೆ ನೀಡಿತ್ತು. ಇವರೆಲ್ಲರ ಮೇಲ್ಮನವಿ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ತಿರಸ್ಕೃತವಾದರೂ ಈಗಲೂ ಐಎಎಸ್‌ ಹುದ್ದೆಯಲ್ಲಿಯೇ ಮುಂದುವರೆಯುತ್ತಿದ್ದಾರೆ.

 

ಇದಲ್ಲದೆ ಇದೇ ಅಧಿಕಾರಿಗಳು ಕೆಎಟಿಯಲ್ಲಿಯೂ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನೂ ಕೆಎಟಿ ವಜಾಗೊಳಿಸಿದೆ. ಇಷ್ಟೆಲ್ಲಾ ತೀರ್ಪುಗಳು ಪ್ರಕಟವಾದರೂ ಸರ್ಕಾರ ಮಾತ್ರ ಯಾವ ತೀರ್ಪನ್ನೂ ಅನುಷ್ಠಾನಗೊಳಿಸಿಲ್ಲ.

SUPPORT THE FILE

Latest News

Related Posts