ಬೆಂಗಳೂರು; ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ಗೆಜೆಟೆಡ್ ಪ್ರೊಬೇಷನರಿ ಸೇರಿದಂತೆ ವಿವಿಧ ಹುದ್ದೆಗಳ ಪರೀಕ್ಷೆ ನಂತರ ವ್ಯಕ್ತಿತ್ವ ಪರೀಕ್ಷೆಗೂ ಮುನ್ನ ನಡೆಯುವ ದಾಖಲಾತಿ ಪರಿಶೀಲನೆ ಮತ್ತು ಪ್ರಮಾಣೀಕರಿಸುವ ಪ್ರಕ್ರಿಯೆಯು ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಖುದ್ದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿಯೇ ಬಾಯ್ಬಿಟ್ಟಿದ್ದಾರೆ.
ವ್ಯಕ್ತಿತ್ವ ಪರೀಕ್ಷೆಗೂ ಮುನ್ನ ನಡೆಯುವ ದಾಖಲಾತಿ ಪರಿಶೀಲನೆ ವೇಳೆಯಲ್ಲಿಯೇ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಹೇಳಿರುವುದು ಕರ್ನಾಟಕ ಲೋಕಸೇವಾ ಆಯೋಗದ ಮತ್ತೊಂದು ಮುಖವನ್ನು ತೆರೆದಿಟ್ಟಂತಾಗಿದೆ.
ಕರ್ನಾಟಕ ವಿಧಾನಮಂಡಲದ ಅಧೀನ ಶಾಸನ ರಚನಾ ಸಮಿತಿಯು 2021ರ ಜನವರಿ 12ರಂದು ನಡೆಸಿದ್ದ ಸಭೆ ವೇಳೆಯಲ್ಲಿ ಹಾಜರಿದ್ದ ಇಲಾಖೆಯ ಕಾರ್ಯದರ್ಶಿ ಈ ಸಂಗತಿಯನ್ನು ಸಭೆಯ ಮುಂದಿಟ್ಟಿದ್ದಾರೆ. ಸಭೆಯ ನಡವಳಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಹೋಟಾ ಸಮಿತಿ ಶಿಫಾರಸ್ಸಿಗೆ ಸಂಬಂಧಿಸಿದಂತೆ ವಿಧಾನಪರಿಷತ್ ಸದಸ್ಯ ಅ ದೇವೇಗೌಡ ಅವರು ಕೆಪಿಎಸ್‌ಸಿ ಸುಧಾರಣೆ ಬಗ್ಗೆ ಗಮನ ಸೆಳೆದಿದ್ದರು. ಆ ಸಂದರ್ಭದಲ್ಲಿ ಇಲಾಖೆಯ ಕಾರ್ಯದರ್ಶಿ ಅವರು ದಾಖಲಾತಿ ಪರಿಶೀಲನೆ ಪ್ರಕ್ರಿಯೆಯು ಭ್ರಷ್ಟಾಚಾರಕ್ಕೆ ಹೇಗೆ ನಾಂದಿ ಹಾಡುತ್ತಿದೆ ಎಂಬುದನ್ನು ವಿವರಿಸಿದ್ದಾರೆ.
‘ಕೆಪಿಎಸ್‌ಸಿಯವರು ಏನು ಮಾಡುತ್ತಾರೆಂದರೆ ಪ್ರತಿಯೊಂದು ಅಪ್ಲಿಕೇಶನ್‌ಗಳನ್ನು ಅವರೇ ವೆರಿಫೈ ಮಾಡುತ್ತಾರೆ. ಇಲ್ಲಿ ಡಿಲೇ ಆಗುತ್ತಿದೆ. ಅದರ ಜತೆಗೆ ಡಾಕ್ಯುಮೆಂಟ್ ವೆರಿಫಿಕೇಷನ್‌ಗೋಸ್ಕರ ಕ್ಯಾಂಡಿಡೇಟ್ಸ್‌ಗಳನ್ನು ಕರೆದಾಗ ಕರೆಪ್ಷನ್‌ಗೆ ಅವಕಾಶವಾಗುತ್ತದೆ,’ ಎಂದು ಹೇಳಿರುವುದು ನಡವಳಿಯಲ್ಲಿ ದಾಖಲಾಗಿದೆ.
ಅಭ್ಯರ್ಥಿಗಳು ಸಲ್ಲಿಸುವ ಅರ್ಜಿಗಳನಷ್ಟೇ ಪರಿಶೀಲಿಸಬೇಕಿದ್ದ ಆಯೋಗವು ದಾಖಲಾತಿಗಳನ್ನೂ ಪರಿಶೀಲಿಸಿ ಪ್ರಮಾಣೀಕರಿಸುತ್ತಿದೆ. ಇದಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ತಕರಾರು ಎತ್ತಿದ್ದಾರೆ. ‘ನೀವು ಅಪ್ಲಿಕೇಷನ್‌ಗಳನ್ನು ಸ್ಕ್ಯುಟನಿ ಮಾಡಿ. ಆದರೆ ಯಾರು ನೇಮಕಾತಿ ಪ್ರಾಧಿಕಾರವಾಗಿದ್ದಾರೋ ಅವರೇ ದಾಖಲಾತಿಗಳನ್ನು ಪರಿಶೀಲನೆ ಮಾಡಲಿ. ಆಗ ಅರ್ಜಿಗಳ ಸಂಖ್ಯೆಯೂ ಕಡಿಮೆಯಾಗುತ್ತದೆ,’ ಎಂದು ಹೇಳಿರುವುದು ನಡವಳಿಯಿಂದ ಗೊತ್ತಾಗಿದೆ.
ಅಲ್ಲದೆ ಅಭ್ಯರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ, ಕನ್ನಡ ಮಾಧ್ಯಮ, ಮಾಜಿ ಸೈನಿಕ, ಅಂಗವಿಕಲ ಸೇರಿದಂತೆ ಇನ್ನಿತರೆ ಪ್ರಮಾಣಪತ್ರ, ದಾಖಲಾತಿಗಳನ್ನು ಆಯೋಗವು ಎಲ್ಲಾ ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತಿರುವುದರಿಂದ ನೇಮಕಾತಿ ಪ್ರಕ್ರಿಯೆಯೂ ತಡವಾಗುತ್ತಿದೆ. ದಾಖಲಾತಿಗಳ ಪರಿಶೀಲನೆಯನ್ನು ಸಂಬಂಧಪಟ್ಟ ಇಲಾಖೆಯವರೇ ಮಾಡಿದರೆ ಶೀಘ್ರವಾಗಿ ನೇಮಕಾತಿ ಮಾಡಲು ಅವಕಾಶವಾಗುತ್ತದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಯೊಬ್ಬರು.
ಅರ್ಜಿ ಸಲ್ಲಿಸುವ ಕಡೆಯ ದಿನಾಂಕದ ಮುನ್ನ ಪ್ರಮಾಣಪತ್ರಗಳನ್ನು ಪಡೆದು ತೆಗೆದಿಟ್ಟುಕೊಂಡಿರಬೇಕು. ಕೆಲವೊಂದನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬಹುದು. ಭೌತಿಕವಾಗಿದ್ದಲ್ಲಿ ಅದನ್ನು ಅರ್ಜಿಯಲ್ಲಿ ಲಗತ್ತಿಸುವ ಅವಕಾಶವಿದೆ. 2005ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆ ಸಂದರ್ಭದಲ್ಲಿ ಹಲವು ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಕಡೆಯ ದಿನಾಂಕದ ನಂತರ ಪಡೆದ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದರು. ಆದರೂ ದಾಖಲಾತಿ ಪರಿಶೀಲನೆ ವೇಳೆಯಲ್ಲಿ ಕೆಪಿಎಸ್‌ಸಿ ಅಧಿಕಾರಿಗಳಿಗೆ ಅಪಾರ ಮೊತ್ತದ ಲಂಚವನ್ನು ಪಾವತಿಸಿ ನೇಮಕಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಆರೋಪವೂ ಇದೆ.
ದಾಖಲೆ, ಪ್ರಮಾಣಪತ್ರಗಳ ನೈಜತೆ, ಸಕ್ಷಮ ಪ್ರಾಧಿಕಾರಿಯ ಸಹಿ, ಮೊಹರು, ಜಾತಿ ಪ್ರಮಾಣಪತ್ರಗಳಿಗೆ ಸಂಬಂಧಿಸಿದಂತೆ ಆಯೋಗವು ನಿರ್ದಿಷ್ಟ ನಮೂನೆ ಅಥವಾ ಮಾದರಿಯನ್ನು ನೀಡಿರುತ್ತದೆ. ಇದೇ ಪ್ರಕಾರವಾಗಿ ಅಭ್ಯರ್ಥಿಗಳು ಸಲ್ಲಿಸಬೇಕು. ಒಂದೊಮ್ಮೆ ಈ ಪ್ರಕಾರವಾಗಿ ದಾಖಲಾತಿ, ಪ್ರಮಾಣಪತ್ರಗಳು ಇಲ್ಲದಿದ್ದಲ್ಲಿ ಅಂತಹ ದಾಖಲಾತಿ, ಪ್ರಮಾಣಪತ್ರಗಳನ್ನು ತಿರಸ್ಕರಿಸಲಾಗುತ್ತದೆ. ಆದರೆ ವ್ಯವಹಾರ ಕುದುರಿಸಿದರೆ ಆಯೋಗವು ನಿಗದಿಪಡಿಸಿರುವ ಮಾದರಿಯಲ್ಲಿಯೇ ಸ್ಥಳದಲ್ಲಿಯೇ ಅಭ್ಯರ್ಥಿಯಿಂದಲೇ ಭರ್ತಿ ಮಾಡಿಸಿ ಅವರನ್ನು ಆಯ್ಕೆ ಪಟ್ಟಿಗೆ ಸೇರಿಸಲಾಗುತ್ತದೆಯಲ್ಲದೆ ನಕಲಿ ಪ್ರಮಾಣಪತ್ರಗಳನ್ನೂ ಸಕ್ರಮಗೊಳಿಸಲಾಗುತ್ತಿದೆ ಎನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.
1998, 1999, 2004ನೇ ಸಾಲಿನಲ್ಲಿ ನಡೆದಿರುವ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಸಂದರ್ಭದಲ್ಲಿ ಅಭ್ಯರ್ಥಿಗಳ ಸಿಂಧುತ್ವ ಪ್ರಮಾಣಪತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಗ್ರಾಮೀಣ ವ್ಯಾಸಂಗ, ಕನ್ನಡ ಮಾಧ್ಯಮ ಹಲವು ಪ್ರಮಾಣ ಪತ್ರಗಳು ಕ್ರಮಬದ್ಧವಾಗಿರಲಿಲ್ಲ. ಅಲ್ಲದೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಮುನ್ನ ಪಡೆದಿರಲಿಲ್ಲ. ಆದರೂ ದಾಖಲಾತಿಗಳ ಪರಿಶೀಲನೆ ವೇಳೆಯಲ್ಲಿ ಆಯೋಗದ ಅಧಿಕಾರಿ, ಸಿಬ್ಬಂದಿಗಳು ಅಂತಹ ಕ್ರಮಬದ್ಧವಲ್ಲದ ದಾಖಲಾತಿಗಳನ್ನು ಸಕ್ರಮಗೊಳಿಸಿ ಅಕ್ರಮಕ್ಕೆ ದಾರಿಮಾಡಿಕೊಟ್ಟಿದ್ದರು. ಈ ಪ್ರಕರಣವು ಸಿಐಡಿ ಮತ್ತು ಹೈಕೋರ್ಟ್ ರಚಿಸಿದ್ದ ಸತ್ಯಶೋಧನಾ ಸಮಿತಿ ತನಿಖೆಯಲ್ಲಿಯೂ ಕಂಡು ಬಂದಿತ್ತು.
ದಾಖಲಾತಿ ಪರಿಶೀಲನೆ ವೇಳೆಯಲ್ಲಿ ಕ್ರಮಬದ್ಧವಲ್ಲದ ದಾಖಲಾತಿ, ಪ್ರಮಾಣಪತ್ರಗಳನ್ನು ಸಕ್ರಮಗೊಳಿಸುವ ಮೂಲಕ ಅರ್ಹ ಅಭ್ಯರ್ಥಿಗಳನ್ನು ನೇಮಕಾತಿಯಿಂದ ವಂಚಿಸಲಾಗಿತ್ತು. 1998ರಿಂದ 2017ರವರೆಗಿನ ಆಯೋಗ ನಡೆಸಿರುವ ಹಲವು ನೇಮಕಾತಿ ಪ್ರಕ್ರಿಯೆಗಳಲ್ಲಿ ದಾಖಲಾತಿ ಪರಿಶೀಲನೆ ವೇಳೆಯಲ್ಲಿಯೇ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿರುವ ನಿದರ್ಶನಗಳಿವೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಿ ಸಿ ಹೋಟಾ ಕಮಿಟಿ ಮಾಡಿರುವ ಶಿಫಾರಸ್ಸುಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತರಲು ಆಸಕ್ತಿ ವಹಿಸಿಲ್ಲ. ಹೀಗಾಗಿ ದಾಖಲಾತಿ ಪರಿಶೀಲನೆಯಲ್ಲಿ ನಿರಂತರವಾಗಿ ಭ್ರಷ್ಟಾಚಾರಕ್ಕೆ ಮತ್ತು ಹಣಕ್ಕೆ ಬೇಡಿಕೆ ಇರಿಸಲಾಗುತ್ತಿದೆ ಎನ್ನುತ್ತಾರೆ ಅಭ್ಯರ್ಥಿಯೊಬ್ಬರು.