ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ; 671 ಕೋಟಿ ರು.ಮೊತ್ತದ ಕಾರ್ಯಯೋಜನೆ ಕಡತಗಳು ನಾಶ!

Photo Credit;deccanhearld

ಬೆಂಗಳೂರು; ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ಅಂತರ್ಜಲ ಅಭಿವೃದ್ಧಿಗಾಗಿ ಮತ್ತು ಕುಡಿಯುವ ನೀರಿನ ಸಲುವಾಗಿ ಕೆರೆಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ 670 ಕೋಟಿ ರು. ಮೊತ್ತದ ಯೋಜನೆಗೆ ಸಂಬಂಧಿಸಿದ ಡಿಪಿಆರ್ ಮೂಲ ಕಡತಗಳನ್ನು ಮಾಹಿತಿ ಹಕ್ಕಿನಲ್ಲಿ ನೀಡಲು ಮಾಹಿತಿ ಹಕ್ಕು ಹೋರಾಟಗಾರರನ್ನು ಜಲ ಸಂಪನ್ಮೂಲ ಇಲಾಖೆಯು ಅಲೆದಾಡಿಸುತ್ತಿದೆ.

 

ಸಾಮಾಜಿಕ ಕಾರ್ಯಕರ್ತ ಎಚ್‌ ಎಂ ವೆಂಕಟೇಶ್‌ ಅವರು ಯೋಜನೆಗೆ ಸಂಬಂಧಿಸಿದ ಡಿಪಿಆರ್‌ ಕಡತಗಳನ್ನು ಮಾಹಿತಿ ಹಕ್ಕಿನಲ್ಲಿ ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಕಡತಗಳನ್ನು ಒದಗಿಸುತ್ತಿಲ್ಲ. ಇಲಾಖೆಯ ಅಧಿಕಾರಿಗಳು ಕಡತಗಳನ್ನು ನಾಶಪಡಿಸಿರುವ ಸಾಧ್ಯತೆ ಇದೆ. ಇದರ ಹಿಂದೆ ಭಾರೀ ಭ್ರಷ್ಟಾಚಾರ ಮತ್ತು ಅವ್ಯವಹಾರಗಳು ನಡೆದಿದೆ ಎಂದು ಎಚ್‌ ಎಂ ವೆಂಕಟೇಶ್‌ ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

 

ಕೂಡ್ಲಿಗಿ ತಾಲೂಕಿನ 74ಕೆರೆಗಳಿಗೆ ಅಂತರ್ಜಲ ಅಭಿವೃದ್ಧಿಗಾಗಿ ಮತ್ತು ಕುಡಿಯುವ ನೀರಿನ ಸಲುವಾಗಿ ತುಂಗಭದ್ರಾ ನದಿಯಿಂದ ಕೆರೆಗೆ ನೀರು ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ ಡಿಪಿಆರ್ ಮೂಲ ಕಡತಗಳನ್ನು ಪಡೆಯಲು 2021ರ ಡಿಸೆಂಬರ್‌ 6ರಂದು ಮಾಹಿತಿ ಹಕ್ಕು ಅಧಿನಿಯಮದಲ್ಲಿ ಕಡತಗಳನ್ನು ನೀಡುವಂತೆ ಅರ್ಜಿ ಸಲ್ಲಿಸಿದ್ದರು.

 

ಆದರೆ ಹೂವಿನಹಡಗಲಿ ವ್ಯಾಪ್ತಿಯ ಕಾರ್ಯಪಾಲಕ ಅಭಿಯಂತರರು ಕಡತಗಳನ್ನು ಹಸ್ತಾಂತರಿಸಬೇಕು ಎಂದು ಮುಂಡರಗಿಯ ಏತನೀರಾವರಿ ಯೋಜನೆ ನಿರ್ವಹಿಸುತ್ತಿರುವ ವಿಭಾಗಕ್ಕೆ 2021ರ ಡಿಸೆಂಬರ್‌ 27ರಂದು ಪತ್ರ ಬರೆದು ಕೈತೊಳೆದುಕೊಂಡಿದ್ದಾರೆ. ಮುಂಡರಗಿಯ ಏತನೀರಾವರಿ ಯೋಜನೆಯ ವಿಭಾಗವು ಮೂಲ ಕಡತಗಳನ್ನು ಇದುವರೆಗೂ ಹಸ್ತಾಂತರಿಸಿಲ್ಲ ಎಂಬುದು ಇಲಾಖೆಯ ಆಂತರಿಕ ವ್ಯವಹಾರ ಪತ್ರಗಳಿಂದ ತಿಳಿದು ಬಂದಿದೆ.

 

 

ಇದಾದ ನಂತರ 2022ರ ಫೆ.23ರಂದು ಹೂವಿನಹಡಗಲಿಯ ಕಾರ್ಯಪಾಲಕ ಅಭಿಯಂತರರು ಮೂಲ ಕಡತಗಳನ್ನು ಹಸ್ತಾಂತರಿಸಬೇಕು ಎಂದು ಬರೆದಿದ್ದ ನೆನಪೋಲೆಗಳಿಗೂ ಯಾವುದೇ ಉತ್ತರ ಬಂದಿಲ್ಲ.
‘ಡಿಪಿಆರ್ ಮೂಲ ಕಡತಗಳನ್ನು ಹಸ್ತಾಂತರಿಸಬೇಕು ಎಂದು ಹೂವಿನಹಡಗಲಿ ಪತ್ರ ಬರೆದಿದ್ದರು ಸಹ ಕಡತಗಳನ್ನು ನೀಡಿಲ್ಲ. ಇದರಿಂದ ಅಧಿಕಾರಿಗಳು ವಿಫಲರಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

 

ಸಾರ್ವಜನಿಕರ ತೆರಿಗೆ ಹಣದಿಂದ ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಯನ್ನು ಸರ್ಕಾರ ರೂಪಿಸಿದ್ದು ಇದಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದೆ. ಯೋಜನೆಯ ಮೂಲ ಕಡತಗಳು ನಾಶ ಮಾಡಿದ್ದಾರೆ,’ ಎಂದು ಸಾಮಾಜಿಕ ಕಾರ್ಯಕರ್ತ ಎಚ್‌ ಎಂ ವೆಂಕಟೇಶ್‌ ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

 

ಸಾರ್ವಜನಿಕರ ತೆರಿಗೆ ಹಣದಿಂದ ಈ ಯೋಜನೆ ರೂಪುಗೊಂಡಿದೆ. ಯೋಜನೆಗೆ ಸಂಬಂಧಿಸಿದ ಮೂಲ ಕಡತಗಳನ್ನು ನಾಶಪಡಿಸಿರುವ ಮುಂಡರಗಿ ಮತ್ತು ಹೂವಿನಹಡಗಲಿ ಕಾರ್ಯಪಾಲಕ ಅಭಿಯಂತರರು ಹಾಗೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಬೇಕು ಎಂದು ನೀಡಿದ್ದ ದೂರನ್ನೂ ಕಸದಬುಟ್ಟಿಗೆ ಎಸೆದಿದ್ದಾರೆ.

 

‘ತಕ್ಷಣ ತಪ್ಪಿತಸ್ಥರ ಮೇಲೆ ಕಾನೂನು ಕ್ರಮಗಳನ್ನು ಕೈಗೊಂಡು ಸಾರ್ವಜನಿಕ ಕಡತಗಳು ಸರ್ಕಾರದ ಕೋಟ್ಯಾಂತರ ರೂಪಾಯಿಗಳ ಖರ್ಚುವೆಚ್ಚಗಳ ದಾಖಲೆಗಳನ್ನು ಕಣ್ಮರೆ ಮಾಡಿರುವ ಹಿಂದೆ ಭಾರೀ ಭ್ರಷ್ಟಾಚಾರ ಮತ್ತು ಅವ್ಯವಹಾರಗಳು ನಡೆದಿರುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿಯೇ ದಾಖಲೆಗಳು ನಾಶ ಮಾಡಿರುವ ಸಾಧ್ಯತೆ ಹೆಚ್ಚಾಗಿ ಇರುವುದರಿಂದ ಅಧಿಕಾರಿಗಳನ್ನು ತಕ್ಷಣ ಅಮಾನತಿನಲ್ಲಿಟ್ಟು ತನಿಖೆ ಮಾಡಬೇಕು,’ ಎಂದು ವೆಂಕಟೇಶ್‌ ಅವರು ದೂರು ಸಲ್ಲಿಸಿದ್ದಾರೆ. ಈ ಕುರಿತು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೂ ದಾಖಲೆ ಸಮೇತ ದೂರು ಸಲ್ಲಿಸಿದ್ದಾರೆ. ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ ಎಂದು ಗೊತ್ತಾಗಿದೆ.

 

ಕೂಡ್ಲಿಗಿಯಲ್ಲಿ 27 ದೊಡ್ಡ ಮತ್ತು 28 ಸಣ್ಣ ಕೆರೆಗಳಿವೆ. ದೊಡ್ಡ ಕೆರೆಗಳ ಒಟ್ಟು ನೀರಿನ ಸಾಮರ್ಥ್ಯ 1455.89 ಎಂಸಿಎಫ್‌ ಇದ್ದರೆ ಸಣ್ಣ ಕೆರೆಗಳ ಸಾಮರ್ಥ್ಯ 278.24 ಎಂಸಿಎಫ್‌ಟಿ ಇದೆ. ಉಳಿದಂತೆ 19 ಸಣ್ಣಪುಟ್ಟ ಕೆರೆಗಳಿವೆ.

SUPPORT THE FILE

Latest News

Related Posts