Thursday | September 17, 2026 |

ಪಠ್ಯ ಪರಿಷ್ಕರಣೆ ಪರಿಣಾಮ ; 2.5 ಕೋಟಿ ನಷ್ಟ, ಮುದ್ರಿತ 6.76 ಲಕ್ಷ ಪುಸ್ತಕಗಳು ಅನುಪಯುಕ್ತ, ಹರಾಜಿಗೂ ನಕಾರ

ಬೆಂಗಳೂರು; ಆರರಿಂದ ಹತ್ತನೇ ತರಗತಿ ಸಮಾಜ ವಿಜ್ಞಾನದ ವಿಷಯದ ಪಠ್ಯಪುಸ್ತಕಗಳನ್ನು ಹಠಕ್ಕೆ ಬಿದ್ದು ಪರಿಷ್ಕರಿಸಿರುವುದರ ಪರಿಣಾಮ 2.5 ಕೋಟಿ ರು. ನಷ್ಟವಾಗಿದೆ. ಈ ಬಗ್ಗೆ ಆರ್ಥಿಕ ಇಲಾಖೆ ಜತೆ ಸಮಾಲೋಚಿಸಬೇಕು ಎಂದು ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ನೀಡಿದ್ದ ಅಭಿಪ್ರಾಯವನ್ನೂ ಸರ್ಕಾರವು ಬದಿಗೆ ಸರಿಸಿದೆ. 2.5 ಕೋಟಿ ರು. ನಷ್ಟವಾಗಿರುವ ಕುರಿತು ಆರ್ಥಿಕ ಇಲಾಖೆಯೊಂದಿಗೆ ಇದುವರೆಗೂ ಸಮಾಲೋಚಿಸಿಲ್ಲ.

 

ಹೊಸಧರ್ಮಗಳ ಉದಯಕ್ಕೆ ಕಾರಣಗಳು ಮತ್ತು ಟಿಪ್ಪು ಸುಲ್ತಾನ್‌ ಸಾಧನೆ ಮತ್ತು ಕೊಡುಗೆಗಳನ್ನು ವಿವರಿಸುವ ಪಾಠಾಂಶಗಳನ್ನು ಪಠ್ಯದಿಂದ ತೆಗೆದುಹಾಕುವ ಮುನ್ನವೇ 2021-22ನೇ ಸಾಲಿಗೆ ಒಟ್ಟು 83 ಶೀರ್ಷಿಕೆಗಳ ಒಟ್ಟು 6,76,997 ಪಠ್ಯಪುಸ್ತಕಗಳನ್ನು ಮುದ್ರಿಸಲಾಗಿತ್ತು. ಇಷ್ಟೊಂದು ಸಂಖ್ಯೆಯಲ್ಲಿರುವ ಪಠ್ಯಪುಸ್ತಕಗಳು 2022-23ನೇ ಸಾಲಿಗೆ ಅನುಪಯುಕ್ತವಾಗಿವೆ. ಈ ಪುಸ್ತಕಗಳನ್ನು ಹರಾಜು ಹಾಕಲೂ ಇಲಾಖೆ ಒಪ್ಪಿಲ್ಲ. ಬದಲಿಗೆ ಈ ಪುಸ್ತಕಗಳು ಯಾರ ಕೈಗೂ ದೊರೆಯಬಾರದು, ಒಂದೊಮ್ಮೆ ದೊರೆತರೆ ಪಠ್ಯಪುಸ್ತಕ ಪರಿಷ್ಕರಣೆಯ ಯಶಸ್ವಿಗೆ ತಡೆಯಾಗಬಹುದು ಎಂಬ ತಕರಾರನ್ನೂ ತೆಗೆದಿದೆ.

 

ಈ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿರುವ ವರದಿಗೆ ಸಂಬಂಧಿಸಿದಂತೆ ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನು ಪಡೆದುಕೊಂಡಿದೆ.

 

‘2021-22ನೇ ಸಾಲಿಗೆ ಮುದ್ರಿಸಿ ಸರಬರಾಜು ಮಾಡಿರುವ 83 ಶೀರ್ಷಿಕೆಗಳ ಒಟ್ಟು 6,76,997 ಪಠ್ಯಪುಸ್ತಕಗಳು ಬ್ಲಾಕ್‌ ಹಂತದಲ್ಲಿ ಉಳಿದು 2022-23ನೇ ಸಾಲಿಗೆ ಅನುಪಯುಕ್ತಗೊಂಡಿವೆ. ಇದರ ಅಂದಾಜು ಮೌಲ್ಯ 2.5 ಕೋಟಿ ರು.ನಷ್ಟವಾಗುವ ಹಿನ್ನೆಲೆಯಲ್ಲಿ ಈ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚಿಸಬಹುದು. 2022-23ನೇ ಸಾಲಿಗೆ ಇಷ್ಟು ಪ್ರಮಾಣದ ಪಠ್ಯಪುಸ್ತಕಗಳನ್ನು ಮುದ್ರಣ ಮಾಡಿ ವಿದ್ಯಾರ್ಥಿಗಳಿಗೆ ಹಂಚಿಕೆಯಾಗುವ ಹೊತ್ತಿಗೆ ಶೈಕ್ಷಣಿಕ ವರ್ಷ ಪ್ರಾರಂಭವಾಗುವುದರಿಂದ ಪಠ್ಯಪುಸ್ತಕ ವಿತರಣೆ ಕಾರ್ಯ ವಿಳಂಬವಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಲಿದೆ,’ ಎಂದು ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಇಲಾಖೆ ಅಧಿಕಾರಿಗಳು ನೀಡಿದ್ದ ಅಭಿಪ್ರಾಯಕ್ಕೆ ಸರ್ಕಾರದ ಉಪ ಕಾರ್ಯದರ್ಶಿ ಕೆ ಏಕೇಶ್‌ಬಾಬು ಅವರು ‘ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ಸಲ್ಲಿಸಿರುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಮತ್ತು 2.3 ಕೋಟಿ ರು. ನಷ್ಟವಾಗುವ ಕುರಿತು ಪ್ರತ್ಯೇಕವಾಗಿ ಆರ್ಥಿಕ ಇಲಾಖೆಯ ಅಭಿಪ್ರಾಯವನ್ನು ಪಡೆದು ಪರಿಶೀಲಿಸಬಹುದಾಗಿರುತ್ತದೆ,’ ಎಂದು ಅಭಿಪ್ರಾಯಿಸಿದ್ದರು.

 

ಆರ್ಥಿಕ ಇಲಾಖೆ ಜತೆ ಸಮಾಲೋಚಿಸಬೇಕು ಎಂಬ ಉಲ್ಲೇಖವಿರುವ ಟಿಪ್ಪಣಿ ಹಾಳೆಯ ಪ್ರತಿ

 

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ ಎಸ್‌ ಸೆಲ್ವಕುಮಾರ್‌ ಅವರು 2.5 ಕೋಟಿ ರು. ನಷ್ಟವಾಗುತ್ತಿರುವ ಬಗ್ಗೆ ಆರ್ಥಿಕ ಇಲಾಖೆ ಜತೆ ‘ನಂತರ ವ್ಯವಹರಿಸಬಹುದಾಗಿದೆ,’ ಎಂದು ಅಭಿಪ್ರಾಯಿಸಿದ್ದರು ಎಂಬುದು ಟಿಪ್ಪಣಿ ಹಾಳೆಯಿಂಂದ ಗೊತ್ತಾಗಿದೆ. ಆ ನಂತರ ಇದಕ್ಕೆ ಸಚಿವ ಬಿ ಸಿ ನಾಗೇಶ್‌ ಅವರು ಅನುಮೋದಿಸಿರುವುದು ತಿಳಿದು ಬಂದಿದೆ.

 

ಇದಷ್ಟೇ ಅಲ್ಲ, ಪಠ್ಯ ಪುಸ್ತಕ ಪರಿಷ್ಕರಣೆಯಿಂದಾಗಿ ಈಗಾಗಲೇ ಮುದ್ರಣಗೊಂಡು ಅನುಪಯುಕ್ತವಾಗಿರುವ 6.76 ಲಕ್ಷ ಪಠ್ಯಪುಸ್ತಕಗಳನ್ನು ಹರಾಜು ಹಾಕಿ ಬಂದ ಹಣವನ್ನು ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ ಜಮಾ ಮಾಡಿಕೊಳ್ಳಲು ಅನುಮತಿ ಕೋರಿದ್ದರು. ಆದರೆ ಇದಕ್ಕೆ ಅನುಮತಿ ದೊರೆತಿಲ್ಲ. ‘ ಆದರೆ ಹರಾಜು ಹಾಕಿದರೆ ಈ ಪುಸ್ತಕಗಳನ್ನು ಬೇರೆಯವರಿಗೆ ಮರು ಮಾರಾಟವಾಗದ ರೀತಿ ಅಥವಾ ಬೇರೆಯವರಿಗೆ ದೊರಕದ ಹಾಗೇ ಕ್ರಮವಹಿಸಿದ್ದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಕಾರ್ಯ ಯಶಸ್ವಿಯಾಗುತ್ತದೆ. ತಪ್ಪಿದಲ್ಲಿ ಈ ಪುಸ್ತಕಗಳು ಓದುಗರ ಕೈ ಸೇರಿದರೆ ಸದರಿ ಕಾರ್ಯ ಯಶಸ್ವಿಗೆ ತಡೆಯಾಗಬಹುದಾದ ಸಾಧ್ಯತೆಯನ್ನು ಅಲ್ಲಗಳೆಯಲಾಗದು,’ ಎಂದು ಇಲಾಖೆಯು ತನ್ನ ಟಿಪ್ಪಣಿಯಲ್ಲಿ ಉಲ್ಲೇಖಿಸಿದೆ.

 

ಭಾರತದ ನಾಗರೀಕತೆಗಳು ಎಂಬ ಅಧ್ಯಾಯದಲ್ಲಿ ಸಿಂಧೂ ನಾಗರೀಕತೆ ಶೀರ್ಷಿಕೆಗೆ ಸರಸ್ವತಿ ಹೆಸರನ್ನೂ ಸೇರಿಸಿ ಸಿಂಧೂ-ಸರಸ್ವತಿ ನಾಗರೀಕತೆ ಎಂದು 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಪರಿಷ್ಕರಿಸಲಾಗಿದೆ. ಅಲ್ಲದೆ ಬೌದ್ಧ, ಜೈನ ದರ್ಶನಗಳು ಹೊಸ ಮತಗಳ ಉದಯಕ್ಕೆ ಕಾರಣಗಳು ಎಂಬುದಕ್ಕೆ ನಿರಾಧಾರ ಎಂದಿದ್ದ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯು ಈ ಭಾಗವನ್ನು ಕೈ ಬಿಟ್ಟಿದೆ.

 

ಅದೇ ರೀತಿ ಪಠ್ಯಪುಸ್ತಕದಲ್ಲಿ ಸಿಂಧೂ-ಸರಸ್ವತಿ ಎಂದು ಹೊಸ ಸೇರ್ಪಡೆ ಮಾಡಿದೆ. ಅಲ್ಲದೇ ಶೃಂಗೇರಿ ಮಠ, ಹಿಂದೂ ದೇವಾಲಯಗಳಿಗೆ ಟಿಪ್ಪು ಸುಲ್ತಾನ್‌ ನೀಡಿದ್ದ ದಾನದತ್ತಿ, ರಾಕೆಟ್‌ ತಂತ್ರಜ್ಞಾನ, ರೇಷ್ಮೆ ವ್ಯವಸಾಯವನ್ನು ಪರಿಚಯಿಸಿದ್ದನ್ನೂ ಇದೇ ಸಮಿತಿಯು ಪಠ್ಯದಿಂದ ತೆಗೆದುಹಾಕಿದ್ದನ್ನು ಸ್ಮರಿಸಬಹುದು.

Hot this week

ಅನಂತ್‌ ನಾಗ್‌ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ; 8 ವರ್ಷದ ಹಿಂದಿನ ವಿಸ್ತೃತ ಸಂದರ್ಶನ

ಬೆಂಗಳೂರು;  ಕನ್ನಡ ಚಿತ್ರರಂಗದ  ಹಿರಿಯ ನಟ ಅನಂತ್ ನಾಗ್ ಅವರಿಗೆ 2024ರ...

ಭೂಗತ ಸುರಂಗ ಮಾರ್ಗ; ರಿಯಾಯಿತಿ ಅವಧಿಯಲ್ಲೇ ಗರಿಷ್ಠ ಟೋಲ್‌ ಸಂಗ್ರಹಣೆ, ದರ ಪರಿಷ್ಕರಣೆಯ ಹಿಂದಿನ ರಹಸ್ಯ ಬಯಲು

ಬೆಂಗಳೂರು; ಭೂಗತ ಸುರಂಗ ಮಾರ್ಗದಲ್ಲಿ ರಿಯಾಯಿತಿ ಅವಧಿಯಲ್ಲಿ ಗರಿಷ್ಠ ಟೋಲ್‌ ಸಂಗ್ರಹಣೆ...

ಕೋವಿಡ್ ವೆಚ್ಚದಲ್ಲಿ ಅಕ್ರಮ ಆರೋಪ; ಐಎಎಸ್‌ ಗೌರವ್ ಗುಪ್ತಾ, ರಾಜೇಂದ್ರ ಚೋಳನ್ ಆರೋಪ ಮುಕ್ತ, ಕುನ್ಹಾ ವರದಿಗಿಲ್ಲ ಕಿಮ್ಮತ್ತು

ಬೆಂಗಳೂರು;  ಕೋವಿಡ್‌ 19ರ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳಿಂದ ಅನುಮೋದನೆ ಇಲ್ಲದೆಯೇ,...

ಶಿವಮೊಗ್ಗ ಜಿಲ್ಲೆಯಿಂದ ಅತೀ ಹೆಚ್ಚು, ಕಲ್ಬುರ್ಗಿ ಜಿಲ್ಲೆಯಿಂದ ಅತೀ ಕಡಿಮೆ ಅನುದಾನಕ್ಕೆ ಬೇಡಿಕೆ; ಜಿಲ್ಲಾಡಳಿತ ನಿಷ್ಕ್ರೀಯವಾಯಿತೇ?

ಬೆಂಗಳೂರು;  ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿಯ ಅನುದಾನ ಬೇಡಿಕೆ ಮುಂದಿರಿಸಿರುವ ಇಲಾಖೆಗಳ ...
Please Scan to make Your Contribution

Topics

ಅನಂತ್‌ ನಾಗ್‌ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ; 8 ವರ್ಷದ ಹಿಂದಿನ ವಿಸ್ತೃತ ಸಂದರ್ಶನ

ಬೆಂಗಳೂರು;  ಕನ್ನಡ ಚಿತ್ರರಂಗದ  ಹಿರಿಯ ನಟ ಅನಂತ್ ನಾಗ್ ಅವರಿಗೆ 2024ರ...

ಭೂಗತ ಸುರಂಗ ಮಾರ್ಗ; ರಿಯಾಯಿತಿ ಅವಧಿಯಲ್ಲೇ ಗರಿಷ್ಠ ಟೋಲ್‌ ಸಂಗ್ರಹಣೆ, ದರ ಪರಿಷ್ಕರಣೆಯ ಹಿಂದಿನ ರಹಸ್ಯ ಬಯಲು

ಬೆಂಗಳೂರು; ಭೂಗತ ಸುರಂಗ ಮಾರ್ಗದಲ್ಲಿ ರಿಯಾಯಿತಿ ಅವಧಿಯಲ್ಲಿ ಗರಿಷ್ಠ ಟೋಲ್‌ ಸಂಗ್ರಹಣೆ...

ಕೋವಿಡ್ ವೆಚ್ಚದಲ್ಲಿ ಅಕ್ರಮ ಆರೋಪ; ಐಎಎಸ್‌ ಗೌರವ್ ಗುಪ್ತಾ, ರಾಜೇಂದ್ರ ಚೋಳನ್ ಆರೋಪ ಮುಕ್ತ, ಕುನ್ಹಾ ವರದಿಗಿಲ್ಲ ಕಿಮ್ಮತ್ತು

ಬೆಂಗಳೂರು;  ಕೋವಿಡ್‌ 19ರ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳಿಂದ ಅನುಮೋದನೆ ಇಲ್ಲದೆಯೇ,...

ಶಿವಮೊಗ್ಗ ಜಿಲ್ಲೆಯಿಂದ ಅತೀ ಹೆಚ್ಚು, ಕಲ್ಬುರ್ಗಿ ಜಿಲ್ಲೆಯಿಂದ ಅತೀ ಕಡಿಮೆ ಅನುದಾನಕ್ಕೆ ಬೇಡಿಕೆ; ಜಿಲ್ಲಾಡಳಿತ ನಿಷ್ಕ್ರೀಯವಾಯಿತೇ?

ಬೆಂಗಳೂರು;  ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿಯ ಅನುದಾನ ಬೇಡಿಕೆ ಮುಂದಿರಿಸಿರುವ ಇಲಾಖೆಗಳ ...

ಪೆರಿಫೆರಲ್ ರಿಂಗ್‌ ರೋಡ್‌- 2; 4,500 ಕೋಟಿ ಭೂ ಪರಿಹಾರ, 15,450 ಕೋಟಿ ಅಂದಾಜು ವೆಚ್ಚ, ಸರ್ಕಾರಕ್ಕೆ ಪರಿಷ್ಕೃತ ಯೋಜನೆ ಸಲ್ಲಿಕೆ

ಬೆಂಗಳೂರು; ರೈತರು ಮತ್ತು  ಸ್ಥಳೀಯರ ವಿರೋಧದ ನಡುವೆಯೂ ಫೆರಿಫೆರಲ್ ರಿಂಗ್‌ ರಸ್ತೆ (ಭಾಗ...

Related Articles

Popular Categories

error: Content is protected !!