6,500 ಕೋಟಿ ರು.ಕಾಮಗಾರಿ ಟೆಂಡರ್‌ನಲ್ಲಿ ಭ್ರಷ್ಟಾಚಾರ; ಕಾಯ್ದೆ ಉಲ್ಲಂಘಿಸಿ ನಿರ್ದಿಷ್ಟ ಗುತ್ತಿಗೆದಾರರಿಗೆ ಅನುಕೂಲ?

photo credit-indiatoday

ಬೆಂಗಳೂರು; ಜಲಜೀವನ್‌ ಮಿಷನ್‌ ಮತ್ತು ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿಯಲ್ಲಿ ಒಟ್ಟು 6,500 ಕೋಟಿ ರು. ಮೊತ್ತದಲ್ಲಿ ಕಾಮಗಾರಿ ಕೈಗೊಳ್ಳುವ ಸಂಬಂಧ ಕರೆದಿರುವ ಟೆಂಡರ್‌ನಲ್ಲಿ ಅಕ್ರಮ, ಭ್ರಷ್ಟಾಚಾರಗಳು ನಡೆದಿವೆ ಎಂಬ ಗುರುತರವಾದ ಆರೋಪಗಳು ಕೇಳಿ ಬಂದಿವೆ.

 

ಅಲ್ಲದೆ 50.00 ಕೋಟಿ ರು. ಮೊತ್ತ ಮೀರಿದ ಕಾಮಗಾರಿಗಳ ಟೆಂಡರ್‌ನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಟೆಂಡರ್ ಪರಿಶೀಲನಾ ಸಮಿತಿಯ ಪರಿಶೀಲನೆ ವ್ಯಾಪ್ತಿಗೆ ಒಳಪಡಬೇಕು ಎಂದು ಆರ್ಥಿಕ ಇಲಾಖೆಯು 2021ರ ಡಿಸೆಂಬರ್‌ 21ರಂದು ಹೊರಡಿಸಿದ್ದ ಸುತ್ತೋಲೆಯೂ ಉಲ್ಲಂಘನೆಯಾಗಿದೆ ಎಂಬ ಆಪಾದನೆ ಕೇಳಿ ಬಂದಿದೆ. ಟೆಂಡರ್‌ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾಗಿರುವ ಉಲ್ಲಂಘನೆ, ಅಕ್ರಮಗಳಿಗೆ ಸಂಬಂಧಿಸಿದಂತೆ ಕೆಲ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಶೇ. 40ರಷ್ಟು ಕಮಿಷನ್‌ಗೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪಕ್ಕೆ ಗುರಿಯಾಗಿರುವ ಕೆ ಎಸ್‌ ಈಶ್ವರಪ್ಪ ಅವರು ರಾಜೀನಾಮೆಗೂ ಮುನ್ನ ಈ ಟೆಂಡರ್‌ ಪ್ರಕ್ರಿಯೆ ನಡೆದಿದೆ. ಇದರಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

 

ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ, ಶಿವಮೊಗ್ಗ ನಗರ ಮತ್ತು ಗೋಪಿಶೆಟ್ಟಿಕೊಪ್ಪ, ಯಾದಗಿರಿ, ರಾಯಚೂರು ಜಿಲ್ಲೆಯ ನಾರಾಯಣಪುರ ಜಲಾಶಯ ವ್ಯಾಪ್ತಿಯಲ್ಲಿನ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜಲಜೀವನ್‌ ಮಿಷನ್‌ ಮತ್ತು ಬಹುಗ್ರಾಮ ಕುಡಿಯುವ ನೀರು ಯೋಜನೆಗೆ 6,500 ಕೋಟಿ ರು. ಮೊತ್ತದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು 2022ರ ಏಪ್ರಿಲ್‌ 5 ಮತ್ತು 8ರಂದು ಆಹ್ವಾನಿಸಿತ್ತು. (RWSSD/2022-23/WS/WORK_INDENT40057,RWSSD/2021-22/WS/WORK_INDENT39829,RWSSD/2021-22/WS/WORK_INDENT39816,RWSSD/2021-22/WS/WORK_INDENT39811,RWSSD/2022-23/WS/WORK_INDENT40015,RWSSD/2022-23/WS/WORK_INDENT40048,RWSSD/2022-23/WS/WORK_INDENT40037) ಈ ಟೆಂಡರ್‌ನಲ್ಲಿ ನಿರ್ದಿಷ್ಟ ಗುತ್ತಿಗೆದಾರರು ಮತ್ತು ಕಂಪನಿಗಳಷ್ಟೇ ಭಾಗವಹಿಸಲು ಅನುಕೂಲ ಮಾಡಿಕೊಟ್ಟಿದೆ ಎಂಬ ಆರೋಪಗಳು ಕೇಳಿ ಬಂದಿವೆ.

 

ಇ-ಪ್ರೊಕ್ಯೂರ್‌ಮೆಂಟ್‌ನಲ್ಲಿ ಆಹ್ವಾನಿಸಿರುವ ಟೆಂಡರ್‌

 

ಕೆಟಿಪಿಪಿ ಕಾಯ್ದೆ 5ನೇ ಅಧ್ಯಾಯದ ಪ್ರಕಾರ 2 ಕೋಟಿ ರು.ಮೊತ್ತಕ್ಕೂ ಮೀರಿದ ಕಾಮಗಾರಿಗಳ ಟೆಂಡರ್‌ನಲ್ಲಿ ಬಿಡ್‌ ಮಾಡಲು ಮತ್ತು ಟೆಂಡರ್‌ಗೆ ಲಗತ್ತಿಸಬೇಕಾದ ದಾಖಲೆಗಳನ್ನು ಒದಗಿಸಲು ಕನಿಷ್ಠ 30 ದಿನಗಳ ಕಾಲಾವಕಾಶ ನೀಡಬೇಕು. ಆದರೆ ಇಲಾಖೆಯು ತರಾತುರಿಯಲ್ಲಿ ಟೆಂಡರ್‌ ಆಹ್ವಾನಿಸಿ ಕೇವಲ 5-8 ದಿನಗಳ ಕಾಲಾವಕಾಶ ಮಾತ್ರ ನೀಡಿದೆ ಎಂಬ ಆಪಾದನೆ ಕೇಳಿ ಬಂದಿದೆ.

 

ಅಲ್ಲದೆ ಕಾಮಗಾರಿ ವಿನ್ಯಾಸ ಮತ್ತು ಈ ಸಂಬಂಧದ ವರದಿಯನ್ನು 5-8 ದಿನದಲ್ಲಿ ಸಿದ್ಧಪಡಿಸಲು ಗುತ್ತಿಗೆದಾರರಿಗೆ ಅಸಾಧ್ಯವಾಗಿದೆ. ಇದೊಂದು ಸಿವಿಲ್‌ ಕಾಮಗಾರಿಯಾಗಿದ್ದು ಇದನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಕನಿಷ್ಠ 30 ತಿಂಗಳು ಬೇಕಾಗಲಿದೆ. ಹೀಗಾಗಿ ವರದಿ ಸಿದ್ಧಪಡಿಸಲು ಕಾಲಾವಕಾಶ ಬೇಕಿದೆ. ಆದರೆ 5-8 ದಿನಗಳು ಮಾತ್ರ ಕಾಲಾವಕಾಶ ನೀಡುವ ಮೂಲಕ ಆಯ್ದ ಮತ್ತು ನಿರ್ದಿಷ್ಟ ಗುತ್ತಿಗೆದಾರರು/ಕಂಪನಿಗಳು ಮಾತ್ರ ಭಾಗವಹಿಸಲು ಅವಕಾಶ ನೀಡಿರುವುದರ ಹಿಂದೆ ದೊಡ್ಡಮಟ್ಟದ ಕಮಿಷನ್‌ ವ್ಯವಹಾರ ನಡೆದಿದೆ ಎಂದು ಕೆಲ ಗುತ್ತಿಗೆದಾರರು ‘ದಿ ಫೈಲ್‌’ಗೆ ಪ್ರತಿಕ್ರಿಯಿಸಿದ್ದಾರೆ.

 

ಇನ್ನು, ಅನರ್ಹ ಗುತ್ತಿಗೆದಾರರು/ಕಂಪನಿಗಳೂ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುಕೂಲ ಮಾಡಿಕೊಡಲಾಗಿದೆ. ಜಲಜೀವನ್‌ ಮಿಷನ್‌ ಯೋಜನೆಯಡಿಯಲ್ಲಿ ಕಾಮಗಾರಿ ನಿರ್ವಹಿಸಲು ಜಂಟಿ ಸಹಭಾಗಿತ್ವದಡಿಯಲ್ಲಿ ಶೇ. 25ರಷ್ಟು ಕಾಮಗಾರಿ ನಡೆಸಿ ಪ್ರಗತಿ ಸಾಧಿಸಿರಬೇಕು. ಅಲ್ಲದೆ ಹಣಕಾಸು ಮತ್ತು ತಾಂತ್ರಿಕ ಸಾಮರ್ಥ್ಯ ಹೊಂದಿರಬೇಕು. ನಿಗದಿತ ಕಾಲಾವಧಿ ಮತ್ತು ಗುರಿಯೊಳಗೆ ಕಾಮಗಾರಿ ನಿರ್ವಹಿಸಿರುವ ಅನುಭವ ಇರಬೇಕು. ಆದರೆ ಟೆಂಡರ್‌ನಲ್ಲಿ ಈಗ ಬಿಡ್‌ ಮಾಡಿರುವ ಕಂಪನಿ, ಗುತ್ತಿಗೆದಾರರ ಪೈಕಿ ಬಹುತೇಕರಿಗೆ ಅನುಭವ, ಅರ್ಹತೆ, ತಾಂತ್ರಿಕ ಮತ್ತು ಹಣಕಾಸು ಸಾಮರ್ಥ್ಯವೇ ಇಲ್ಲ ಎಂದು ಗೊತ್ತಾಗಿದೆ.

 

ಜಲಜೀವನ್‌ ಮಿಷನ್‌, ಬಹುಗ್ರಾಮ ಕುಡಿಯುವ ನೀರು ಸರಬರಾಜು ಕಾಮಗಾರಿ ಟೆಂಡರ್‌ನಲ್ಲಿ ವಿಧಿಸಿರುವ ನಿಯಮಗಳ ಪ್ರಕಾರ ಯಾರು ಬೇಕಾದರೂ ಬಿಡ್‌ ಮಾಡಲು ಅವಕಾಶ ಕಲ್ಪಿಸಿರುವುದು ಅಕ್ರಮಕ್ಕೆ ದಾರಿಮಾಡಿಕೊಡಲಾಗಿದೆ ಎಂದು ಆರೋಪಗಳು ಕೇಳಿ ಬರುತ್ತಿವೆ.

 

‘ತಕ್ಷಣವೇ ಟೆಂಡರನ್ನು ರದ್ದುಗೊಳಿಸಬೇಕು. ಜಂಟಿ ಸಹಭಾಗಿತ್ವದಡಿಯಲ್ಲಿ ಭಾಗವಹಿಸಿರುವ ಕಂಪನಿ, ಗುತ್ತಿಗೆದಾರರಿಗೆ ತಾಂತ್ರಿಕ, ಅನುಭವ ಹೊಂದಿರಬೇಕು ಎಂಬ ಷರತ್ತು ವಿಧಿಸಬೇಕು. 2021ರ ಡಿಸೆಂಬರ್‌21ರಂದು ಆರ್ಥಿಕ ಇಲಾಖೆ ಹೊರಡಿಸಿರುವ ಸುತ್ತೋಲೆ ಪ್ರಕಾರ ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಟೆಂಡರ್‌ ಪರಿಶೀಲನಾ ಸಮಿತಿಯು ಪರಿಶೀಲಿಸಬೇಕು. ಬಿಡ್‌ ಮಾಡಲು ಕನಿಷ್ಟ 30 ದಿನಗಳ ಕಾಲಾವಕಾಶ ನೀಡಬೇಕು. ಅಲ್ಲದೆ ಈ ಅಕ್ರಮದಲ್ಲಿ ಭಾಗಿಯಾಗಿರುವ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ಸಾರ್ವಜನಿಕರ ಹಣವನ್ನು ರಕ್ಷಿಸಬೇಕು,’ ಎನ್ನುತ್ತಾರೆ ಗುತ್ತಿಗೆದಾರರೊಬ್ಬರು.

the fil favicon

SUPPORT THE FILE

Latest News

Related Posts