ಹತ್ತನೇ ತರಗತಿ ಪರೀಕ್ಷೆ; 19,826 ಪ್ರಕರಣಗಳಲ್ಲಿ 06 ಅಂಕ ವ್ಯತ್ಯಾಸ ಮಾಡಿದ ಮೌಲ್ಯಮಾಪಕರ ವಿರುದ್ಧ ಕೇಸಿಲ್ಲ

ಬೆಂಗಳೂರು; 2020ರ ಜುಲೈ ಮತ್ತು ಸೆಪ್ಟಂಬರ್‌ನಲ್ಲಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಮೌಲ್ಯಮಾಪಕರು ಮಾಡಿದ್ದ ಅಸಮರ್ಪಕ ಮೌಲ್ಯಮಾಪನದಿಂದಾಗಿ ಒಟ್ಟು 19,826 ಪ್ರಕರಣಗಳಲ್ಲಿ 06 ಅಂಕಗಳು ವ್ಯತ್ಯಾಸಗಳು ಕಂಡು ಬಂದಿದ್ದವು ಎಂಬ ಸಂಗತಿಯನ್ನು ಇದೀಗ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಅವರು ಬಹಿರಂಗಗೊಳಿಸಿದ್ದಾರೆ.

 

ಅಂಕಗಳಲ್ಲಿ ವ್ಯತ್ಯಾಸಕ್ಕೆ ಕಾರಣವಾಗಿರುವ ಮೌಲ್ಯಮಾಪಕರ ವಿರುದ್ಧ ಕೇಸು ದಾಖಲಿಸಲು ಅವಕಾಶವಿಲ್ಲವೆಂದು ಉತ್ತರಿಸಿರುವ ಸಚಿವ ನಾಗೇಶ್‌ ಅವರು ಅಸಮರ್ಪಕ ಮೌಲ್ಯಮಾಪನ ಮಾಡಿರುವ 4,317  ಮೌಲ್ಯಮಾಪಕರಿಂದ ಕೇವಲ ದಂಡ ವಿಧಿಸಲು ಮಾತ್ರ ಅವಕಾಶವಿದೆ. 06 ಅಂಕಗಳ ವ್ಯತ್ಯಾಸಕ್ಕೆ ಕಾರಣವಾಗಿರುವ ಮೌಲ್ಯಮಾಪಕರಿಂದ ಕೇವಲ 800 ರು. ಮಾತ್ರ ದಂಡ ವಿಧಿಸಲಾಗಿದೆ ಎಂದು ಮಾಹಿತಿ ಒದಗಿಸಿದ್ದಾರೆ.

 

ಸಚಿವ ಬಿ ಸಿ ನಾಗೇಶ್‌ ಅವರು ನೀಡಿರುವ ಉತ್ತರದ ಪ್ರತಿ

 

ಅಸಮರ್ಪಕ ಮೌಲ್ಯಮಾಪನ ಮಾಡಿರುವ ಕುರಿತು ಲೆಕ್ಕ ಪರಿಶೋಧನಾ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಈ ವರದಿಯನ್ನಾಧರಿಸಿ ‘ದಿ ಫೈಲ್‌ ಮತ್ತು ವಾರ್ತಾಭಾರತಿ’ ವಿಶೇಷ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

 

2020ರ ಜುಲೈ ಮತ್ತು ಸೆಪ್ಟಂಬರ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಸಮರ್ಪಕ ಮೌಲ್ಯಮಾಪನ ಮಾಡಿದ ಮೌಲ್ಯಮಾಪಕರಿಂದ ವಸೂಲು ಮಾಡಿದ ದಂಡ ಮತ್ತು ಅವರ ವಿರುದ್ಧ ಕ್ರಿಮಿನಲ್‌ ಕೇಸು ದಾಖಲಿಸುವ ಸಂಬಂಧ ವಿಧಾನಪರಿಷತ್‌ ಸದಸ್ಯ ಎನ್‌ ರವಿಕುಮಾರ್‌ ಅವರು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆ ( 211-1702)ಗೆ ಪ್ರಾಥಮಿಕ, ಪ್ರೌಢಶಿಕ್ಷಣ, ಸಕಾಲ ಸಚಿವ ಬಿ ಸಿ ನಾಗೇಶ್‌ ಅವರು ಅಸಮರ್ಪಕ ಮೌಲ್ಯಮಾಪನ ಮಾಡಿದವರ ಮೇಲೆ ದಂಡ ವಿಧಿಸಲು ಮಾತ್ರ ಅವಕಾಶವಿದೆ ಎಂದು ಉತ್ತರ ಒದಗಿಸಿದ್ದಾರೆ. ಈ ಅವಧಿಯಲ್ಲಿ ಎಸ್‌ ಸುರೇಶ್‌ಕುಮಾರ್‌ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

 

19,826 ಪ್ರಕರಣಗಳಲ್ಲಿ 06 ಅಂಕಗಳ ವ್ಯತ್ಯಾಸ

 

ಮರು ಮೌಲ್ಯಮಾಪನಕ್ಕೆ ಒಟ್ಟು 19,826 ಅರ್ಜಿಗಳು ದಾಖಲಾಗಿವೆ. ಈ ಪೈಕಿ 06ಕ್ಕಿಂತ ಕಡಿಮೆ ಅಂಕ ವ್ಯತ್ಯಾಸವಾಗಿರುವ ಪ್ರಕರಣಗಳು 15,591 ಸಂಖ್ಯೆಯಲ್ಲಿವೆ. ಅದೇ ರೀತಿ 06ಕ್ಕಿಂತ ಹೆಚ್ಚು ಅಂಕ ವ್ಯತ್ಯಾಸವಿರುವ ಪ್ರಕರಣಗಳು 4,235 ಸಂಖ್ಯೆಯಲ್ಲಿವೆ. ಈ ರೀತಿಯ ವ್ಯತ್ಯಾಸಗಳನ್ನು ಮರು ಮೌಲ್ಯಮಾಪನದಲ್ಲಿ ಸರಿಪಡಿಸಿರುವುದು ಸಚಿವ ನಾಗೇಶ್‌ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

 

‘ಈ ರೀತಿ ಅಸಮರ್ಪಕ ಮೌಲ್ಯಮಾಪನ ಮಾಡಿರುವ ಮೌಲ್ಯಮಾಪಕರುಗಳಿಗೆ ದಂಡ ವಿಧಿಸಲು ಕ್ರಮ ವಹಿಸಲಾಗಿದೆ. ಮತ್ತು 06ಕ್ಕಿಂತ ಹೆಚ್ಚು ಅಂಕ ವ್ಯತ್ಯಾಸವಾಗಿರುವ ವಿದ್ಯಾರ್ಥಿಗಳಿಗೆ ಪಾವತಿಸಿರುವ ಶುಲ್ಕವನ್ನು ಸಹ ಮರುಭರಣ ಮಾಡಲಾಗಿದೆ,’ ಎಂದು ಮಾಹಿತಿ ಒದಗಿಸಿದ್ದಾರೆ.

 

06ರಿಂದ 10 ಅಂಕಗಳ ವ್ಯತ್ಯಾಸಕ್ಕೆ ಮೌಲ್ಯಮಾಪಕರಿಗೆ 800 ರು. ದಂಡ ವಿಧಿಸಲಾಗಿದೆ. ಅದೇ ರೀತಿ 11ರಿಂದ 15 ಅಂಕಗಳ ವ್ಯತ್ಯಾಸಕ್ಕೆ 1,000 ರು., 16ರಿಂದ 20 ಅಂಕಗಳ ವ್ಯತ್ಯಾಸಕ್ಕೆ 1,500 ರು., 21ಕ್ಕಿಂತ ಹೆಚ್ಚು ಅಂಕಗಳ ವ್ಯತ್ಯಾಸಕ್ಕೆ 2,000 ರು.ಗಳ ದಂಡ ವಿಧಿಸಿರುವುದು ಉತ್ತರದಿಂದ ಗೊತ್ತಾಗಿದೆ.

 

‘ಅಸಮರ್ಪಕ ಮೌಲ್ಯಮಾಪನ ಮಾಡಿದ ಒಟ್ಟು 4,317 ಶಿಕ್ಷಕರುಗಳಿಗೆ ಅಂಕಗಳ ವ್ಯತ್ಯಾಸದ ಅನುಸಾರ 51,26,600 ರು.ಗಳ ದಂಡ ವಿಧಿಸಲಾಗಿದೆ. ಈ ದಂಡದ ಮೊತ್ತದಲ್ಲಿ ಈವರೆಗೆ 10,56,400 ರು.ಗಳು ವಸೂಲಾಗಿದೆ. ಕೋವಿಡ್‌ 19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಶಾಲೆಗಳು 2020-21ನೇ ಸಾಲಿನಲ್ಲಿ ಮುಚ್ಚಲ್ಪಟ್ಟಿದ್ದ ಕಾರಣದಿಂದ ದಡಂದ ವಸೂಲಾತಿಯ ಪ್ರಮಾಣವು ಕಡಿಮೆಯಾಗಿದೆ,’ ಎಂದು ದಂಡ ವಸೂಲಾತಿಯ ವಿಳಂಬಕ್ಕೆ ಕಾರಣವನ್ನು ಒದಗಿಸಿದೆ.

 

‘ವಿದ್ಯಾರ್ಥಿಯ ಜೀವನದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಒಂದು ಉನ್ನತ ಶಿಕ್ಷಣದ ಹೆಬ್ಬಾಗಿಲಾಗಿದೆ. ಇಲ್ಲಿ ಮೌಲ್ಯಮಾಪಕರು ಎಡವಿದರೆ ಅವರಿಂದ ದಂಡ ವಸೂಲಿ ಮಾಡಿ ಸರ್ಕಾರ ಕೈತೊಳೆದುಕೊಳ್ಳಬಹುದು. ವಿದ್ಯಾರ್ಥಿಯ ಭವಿಷ್ಯ ಮತ್ತು ಅವನ ಮುಂದಿನ ಶೈಕ್ಷಣಿಕ ಜೀವನದ ಮೇಲೆ ಆಗುವ ಪರಿಣಾಮ ದಿಂದ ಖಿನ್ನತೆಗೆ ಒಳಗಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದರಿಂದ ವಿದ್ಯಾರ್ಥಿಯ ಪೋಷಕರು ಮತ್ತು ಕುಟುಂಬದವರು ಮತ್ತು ಸಮಾಜದ ಮೇಲೆ ಅತ್ಯಂತ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಅಸಮರ್ಪಕ ಮೌಲ್ಯಮಾಪನ ಮಾಡುವ ಬೇಜವಾಬ್ದಾರಿ ಶಿಕ್ಷಕರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡುವಂತೆ ಕಾನೂನಿಗೆ ತಿದ್ದುಪಡಿ ತರುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ,’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಎಚ್‌ ಎಂ ವೆಂಕಟೇಶ್‌.

 

ವರದಿಯಲ್ಲೇನಿತ್ತು?

 

ಜುಲೈ ಮತ್ತು 2020ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಸಮರ್ಪಕ ಮೌಲ್ಯಮಾಪನ ಕಾರ್ಯ ಮಾಡಿದ ಮೌಲ್ಯಮಾಪಕರಿಂದ ವಸೂಲು ಮಾಡಿರುವ ದಂಡದ ಮೊತ್ತದಲ್ಲಿ ವ್ಯತ್ಯಾಸ ಕಂಡು ಬಂದಿದೆ. ದಂಡದ ಮೊತ್ತ ವಸೂಲು ಮಾಡುವ ಶಾಖೆಯ ಲೆಕ್ಕದಂತೆ 3,49,700 ರು. ಇದ್ದರೆ ಮಂಡಳಿಯು ಲೆಕ್ಕ ಪರಿಶೋಧಕರಿಗೆ ನೀಡಿರುವ ಮಾಹಿತಿಯಂತೆ 13,18, 849 ರು. ಮತ್ತು ಸನ್ನದು ಲೆಕ್ಕ ಪರಿಶೋಧಕರ ವರದಿ ಪ್ರಕಾರ 12, 05,065 ರು. ಇದೆ ಎಂದು ಲೆಕ್ಕಪರಿಶೋಧನೆ ವರದಿಯಲ್ಲಿ ವಿವರಿಸಲಾಗಿದೆ.

 

2017-18ನೇ ಸಾಲಿನಿಂದ 2019-20ನೇ ಸಾಲಿನವರೆಗೆ ಒಟ್ಟು 98,96,500 ರು.ಗಳ ದಂಡ ವಿಧಿಸಲಾಗಿತ್ತು. ಈಪೈಕಿ 75, 87, 254 ರು. ವಸೂಲು ಮಾಡಲಾಗಿದೆಯಾದರೂ ಇನ್ನೂ 23.09,246 ರು.ಗಳನ್ನು ವಸೂಲು ಮಾಡಿಲ್ಲ.

 

2017-18ರಲ್ಲಿ ನಡೆದ ಪರೀಕ್ಷೆ ವೇಳೆಯಲ್ಲಿ ಅಸಮರ್ಪಕವಾಗಿ ಮೌಲ್ಯಮಾಪನ ಮಾಡಿರುವ ಮೌಲ್ಯಮಾಪಕರಿಗೆ 24,95,800 ರು. ದಂಡ ಮೊತ್ತವನ್ನು ವಿಧಿಸಿದ್ದರೆ ಇದರಲ್ಲಿ 21,16,600 ರು ವಸೂಲು ಮಾಡಿರುವ ಮಂಡಳಿಯು ಇನ್ನೂ 3,79,200 ರು.ನ್ನು ವಸೂಲಿ ಮಾಡಿಲ್ಲ. 2018ರಲ್ಲಿ 33,38,500 ರು. ದಂಡ ಮೊತ್ತ ವಿಧಿಸಿದ್ದರೆ ಈ ಪೈಕಿ 27,42,100 ರು. ವಸೂಲು ಮಾಡಿ ಇನ್ನೂ 5,96,400 ರು.ಗಳನ್ನು ಬಾಕಿ ಇರಿಸಿಕೊಂಡಿದೆ. 2019-20ರಲ್ಲಿ 40,62,200 ರು. ದಂಡ ವಿಧಿಸಿದ್ದರೆ ಇದರಲ್ಲಿ 27, 28,554 ರು. ವಸೂಲು ಮಾಡಿರುವ ಮಂಡಳಿಯು ಇನ್ನೂ 13,33,646 ರು. ಸೇರಿದಂತೆ ಒಟ್ಟು 23, 09, 246 ರು.ಗಳನ್ನು ವಸೂಲಿಗೆ ಬಾಕಿ ಇರಿಸಿರುವುದು ವರದಿಯಿಂದ ತಿಳಿದು ಬಂದಿತ್ತು.

 

2020-21ನೇ ಸಾಲಿನಲ್ಲಿ ಮುಖ್ಯ ಪರೀಕ್ಷೆ ಮತ್ತು ಪೂರಕ ಪರೀಕ್ಷೆಯಲ್ಲಿ ಅಸಮರ್ಪಕ ಮೌಲ್ಯಮಾಪನ ಮಾಡಿರುವ ಸಂಬಂಧ 6,106 ಇದ್ದರೆ 2020 ಸೆಪ್ಟಂಬರ್‌ನಲ್ಲಿ 514 ಪ್ರಕರಣಗಳಿದ್ದವು. ಈ ಎಲ್ಲಾ ಪ್ರಕರಣಗಳಿಂದ ಒಟ್ಟಾರೆಯಾಗಿ 51,26,600 ರು. ದಂಡ ವಿಧಿಸಲಾಗಿತ್ತು. ಆದರೆ 2021ರ ಮಾರ್ಚ್‌ ಅಂತ್ಯದವರೆಗೂ ಈ ದಂಡದ ಮೊತ್ತವನ್ನು ವಸೂಲಿ ಮಾಡಿಲ್ಲ.

 

‘2021ರ ಮಾರ್ಚ್‌ 31ರ ಅಂತ್ಯಕ್ಕೆ 514 ಪ್ರಕರಣಗಳಿಂದ ಒಟ್ಟಾರೆಯಾಗಿ 51, 26, 600 ರು.ಗಳ ದಂಡದ ಮೊತ್ತವನ್ನು ವಸೂಲಿಸದಿರುವುದು ಕಂಡು ಬಂದಿರುತ್ತದೆ. ವರ್ಷದ ದಂಡ ಮೊತ್ತ ಮೊತ್ತ 51,26,600 ರು.ಗಳನ್ನು ವಸೂಲಾತಿಗೆ ತೀವ್ರಗತಿಯ ಕ್ರಮ ವಹಿಸುವುದು. ವಸೂಲಿಸಿ ಖಾತೆಗೆ ಜಮೆಯಾಗುವರಿಗೆ 51,26,600 ರು.ಗಳನ್ನು ವಸೂಲಾತಿಗೆ ಸೂಚಿಸಿದೆ,’ ಎಂದು ಲೆಕ್ಕಪರಿಶೋಧಕರು ವರದಿಯಲ್ಲಿ ವಿವರಿಸಿದ್ದರು.

 

ಇಂತಹ ಪ್ರಕರಣಗಳಲ್ಲಿ ವಿಧಿಸುವ ದಂಡದ ಮೊತ್ತವನ್ನು ವಿಧಿಸುವುದು ಮತ್ತು ವಸೂಲು ಮಾಡದಿರುವ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಿಗೆಯಾಗುತ್ತಿದೆ. 2016-17ರಲ್ಲಿ 3,049 ಶಿಕ್ಷಕರು, 2017-18ರಲ್ಲಿ 4,171 ಶಿಕ್ಷಕರು, 2018-19ರಲ್ಲಿ 5,374 ಶಿಕ್ಷಕರು, 2019-20ರಲ್ಲಿ 6,620 ಶಿಕ್ಷಕರು ಅಸಮರ್ಪಕ ಮೌಲ್ಯಮಾಪನ ಕಾರ್ಯ ಮಾಡಿದ್ದಾರೆ. ಆದರೆ ಈ ಯಾವ ಶಿಕ್ಷಕರ ವಿರುದ್ಧವೂ ಶಿಸ್ತು ಕ್ರಮ ಜರುಗಿಸಿರುವುದು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ ಎಂಬುದು ವರದಿಯಿಂದ ತಿಳಿದು ಬಂದಿತ್ತು.

 

ಅಸಮರ್ಪಕ ಮೌಲ್ಯಮಾಪನ ಮಾಡಿರುವ ಮೌಲ್ಯಮಾಪಕರಿಗೆ ವಿಧಿಸಿದ್ದ ದಂಡ ಮತ್ತು ವಸೂಲಾತಿಯಲ್ಲಿನ ವ್ಯತ್ಯಾಸಗಳ ಕುರಿತು ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಮಾಜಿ ಸಚಿವ ಎಸ್‌ ಸುರೇಶ್‌ಕುಮಾರ್‌ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದನ್ನು ಸ್ಮರಿಸಬಹುದು.

 

‘ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಉತ್ತರಪತ್ರಿಕೆಗಳ ಅಸಮರ್ಪಕ ಮೌಲ್ಯಮಾಪನದಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಪರೀಕ್ಷಾ ಮಂಡಳಿಯು ಮೌಲ್ಯಮಾಪಕ ರಿಂದ ದಂಡ ವಸೂಲಿ ಮಾಡುವುದಾಗಿ ಹೇಳುತ್ತಿದೆ. ಆದರೆ ದಂಡ ಏನೋ ವಸೂಲಿ ಆಗಬಹುದು ಆದರೆ ವಿದ್ಯಾರ್ಥಿಗಳ ಭವಿಷ್ಯವನ್ನು ಸರಿಪಡಿಸುವವರು ಯಾರು,’ ಎಂದು ಪ್ರಶ್ನಿಸುತ್ತಾರೆ ಸಾಮಾಜಿಕ ಕಾರ್ಯಕರ್ತ ಎಚ್‌ ಎಂ ವೆಂಕಟೇಶ್‌

the fil favicon

SUPPORT THE FILE

Latest News

Related Posts