ಸಿಎಂ ಪ್ರಧಾನ ಕಾರ್ಯದರ್ಶಿ ಸೇರಿ 80 ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆ; ಕಾಲಮಿತಿ ಉಲ್ಲಂಘನೆ

ಬೆಂಗಳೂರು; ವಿವಿಧ ರೀತಿಯ ಅಕ್ರಮ, ದುರ್ನಡತೆ ಎಸಗಿರುವ ಆರೋಪಗಳಡಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹಾಲಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌, ನಿವೃತ್ತ ಐಎಎಸ್‌ ಅಧಿಕಾರಿ ಕೆ ಶಿವರಾಂ ಸೇರಿದಂತೆ 8 ಮಂದಿ ಐಎಎಸ್‌, ಹೇಮಂತ್‌ ನಿಂಬಾಳ್ಕರ್‌ ಸೇರಿದಂತೆ 5 ಮಂದಿ ಐಪಿಎಸ್‌, 9 ಮಂದಿ ಐಎಫ್‌ಎಸ್‌, 44 ಮಂದಿ ಕೆಎಎಸ್‌ ಸೇರಿದಂತೆ ಸಚಿವಾಲಯದ ವಿವಿಧ ಸ್ತರಗಳಲ್ಲಿ ಒಟ್ಟು 80 ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆ ನಡೆಸುವ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿರುವುದು ಇದೀಗ ಬಹಿರಂಗವಾಗಿದೆ.

 

2022ರ ಫೆ.15ರಂದು ನಡೆದ ವಿಧಾನಸಭೆ ಅಧಿವೇಶನದಲ್ಲಿ ಕೃಷ್ಣಬೈರೇಗೌಡ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಲಾಖೆ ವಿಚಾರಣೆಗೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಒಟ್ಟು 80 ಅಧಿಕಾರಿಗಳ ವಿರುದ್ಧ ಪ್ರಸ್ತಾವನೆ ಬಂದಿವೆ ಎಂದು ಪಟ್ಟಿಯನ್ನು ಒದಗಿಸಿದ್ದಾರೆ. ಈ ಪಟ್ಟಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕೃಷ್ಣಬೈರೇಗೌಡ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿರುವ ಉತ್ತರದ ಪ್ರತಿ

 

ಕಳೆದ 2 ವರ್ಷದ ಹಿಂದೆಯೇ ಇಲಾಖೆ ವಿಚಾರಣೆಗೆ ಗುರಿಯಾಗಿರುವ ಮಂಜುನಾಥ್‌ ಪ್ರಸಾದ್‌ ಅವರನ್ನೇ ಪ್ರಧಾನ ಕಾರ್ಯದರ್ಶಿಯನ್ನಾಗಿ ಬಸವರಾಜ ಬೊಮ್ಮಾಯಿ ಅವರು ನೇಮಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಐಎಎಸ್‌, ಐಪಿಎಸ್‌, ಐಎಫ್‌ಎಸ್‌, ಕೆಎಎಸ್‌ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಲು ಪ್ರಸ್ತಾವನೆಯನ್ನು ಸ್ವೀಕರಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಈ ಯಾವ ಪ್ರಕರಣಗಳನ್ನೂ ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸಿಲ್ಲ.

 

ಹಲವು ಐಎಎಸ್‌, ಐಪಿಎಸ್‌, ಐಎಫ್‌ಎಸ್‌, ಕೆಎಎಸ್‌ ಅಧಿಕಾರಿಗಳು ಇಲಾಖೆ ವಿಚಾರಣೆಗೆ ಗುರಿಯಾಗದೆಯೇ ನಿವೃತ್ತಿಯಾಗಿರುವುದಕ್ಕೆ ಕಳೆದ ಹತ್ತಿಪ್ಪತ್ತು ವರ್ಷಗಳಿಂದಲೂ ಪ್ರಕರಣಗಳಲ್ಲಿ ವಿಚಾರಣೆ ನಡೆಸುವ ಸಂಬಂಧ ತೀರ್ಮಾನ ಕೈಗೊಳ್ಳಲು ವಿಳಂಬ, ಭಂಡ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ಇನ್ನು ಕೆಲ ಅಧಿಕಾರಿಗಳು ಇಲಾಖಾ ಮುಖ್ಯಸ್ಥರ ಮೇಲೆ ಪ್ರಭಾವ ಬೀರಿ ಇಲಾಖೆ ವಿಚಾರಣೆಯನ್ನೇ ವಿಳಂಬ ಮಾಡಿ ಆಯಕಟ್ಟಿನ ಜಾಗದಲ್ಲಿ ಈಗಲೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.

 

ಸರ್ಕಾರಿ ನೌಕರರ ಅಕ್ರಮಗಳು, ದುರ್ನಡತೆಗಳು ಶಿಸ್ತು ಪ್ರಾಧಿಕಾರದ ಗಮನಕ್ಕೆ ಬಂದ ದಿನಾಂಕದಿಂದ ದೋಷಾರೋಪಣೆ ಪಟ್ಟಿಯನ್ನು ತಯಾರಿಸುವುದು ಮತ್ತು ವಿಚಾರಣೆ ಮುಕ್ತಾಯಗೊಳಿಸಿ ಶಿಕ್ಷೆ ವಿಧಿಸುವ ಸಂಬಂಧ ಸರ್ಕಾರ ನಿಗದಿಪಡಿಸಿದ್ದ ಗರಿಷ್ಠ ಕಾಲಮಿತಿಯ ಸೂಚನೆಗಳನ್ನು ಹಿರಿಯ ಅಧಿಕಾರಿಗಳು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ವಿಶೇಷವೆಂದರೆ ಗರಿಷ್ಠ ಕಾಲಮಿತಿ ಮೀರಿರುವ ಪ್ರಕರಣಗಳ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯೂ ಸೇರಿದಂತೆ ಯಾವೊಬ್ಬ ಉನ್ನತ ಅಧಿಕಾರಿಯ ವಿರುದ್ಧವೂ ಕ್ರಮ ಕೈಗೊಂಡಿಲ್ಲ ಎಂಬುದು ಪಟ್ಟಿಯಿಂದ ತಿಳಿದು ಬಂದಿದೆ.

 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌ ಅವರ ವಿರುದ್ಧ ವಿಚಾರಣೆಗೆ ಸಂಬಂಧಿಸಿದಂತೆ 2019ರ ಅಕ್ಟೋಬರ್‌ 25ರಂದು ದೋಷಾರೋಪಣೆ ಪಟ್ಟಿಯನ್ನು ಜಾರಿಗೊಳಿಸಲಾಗಿದೆ. ಈ ಪ್ರಕರಣವು ಎರಡು ವರ್ಷಕ್ಕೂ ಮೇಲ್ಪಟ್ಟಿದೆಯಲ್ಲದೆ ಗರಿಷ್ಠ ಕಾಲಮಿತಿಯನ್ನು ಮೀರಿದೆ. ಆದರೂ ವಿಚಾರಣೆ ಪ್ರಕರಣದಲ್ಲಿ ಕಳೆದ 2 ವರ್ಷದಿಂದಲೂ ಯಾವುದೇ ತೀರ್ಮಾನ ಕೈಗೊಳ್ಳದೆಯೇ ವಿಳಂಬ ಎಸಗಿರುವುದು ಪಟ್ಟಿಯಿಂದ ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಪ್ರಕರಣ ಸಂಬಂಧ ‘ಅಧಿಕಾರಿಯವರಿಂದ ಉತ್ತರ ಬಾರದ ಕಾರಣ ನೆನಪೋಲೆಯನ್ನು ಕಳಿಸಲಾಗಿದೆ. ಆಡಳಿತ ಇಲಾಖೆಯ ಉತ್ತರ ನಿರೀಕ್ಷಿಸಿದೆ,’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರಿಸಿರುವುದು ಗೊತ್ತಾಗಿದೆ.

 

ಅದೇ ರೀತಿ ನಿವೃತ್ತ ಐಎಎಸ್‌ ಅಧಿಕಾರಿ ಎ ಕೆ ಮೋನಪ್ಪ ಅವರ ವಿರುದ್ಧ 2004ರ ಜೂನ್‌ 23ರಂದು ದೋಷಾರೋಪಣೆ ಪಟ್ಟಿಯನ್ನು ಜಾರಿಗೊಳಿಸಲಾಗಿದೆ. ವಿಚಾರಣೆ ಪ್ರಕ್ರಿಯೆಯು 2004ರ ಆಗಸ್ಟ್‌ 10ರಂದು ಆರಂಭಗೊಂಡಿದೆಯಾದರೂ 17 ವರ್ಷಗಳಿಂದಲೂ ವಿಚಾರಣೆ ಇನ್ನೂಇತ್ಯರ್ಥವಾಗಿಲ್ಲ. ‘ಅಧಿಕಾರಿಯವರಿಗೆ ಶಿಕ್ಷೆ ವಿಧಿಸುವ ಸಂಬಂಧ ಭಾರತ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಏಕಗವಾಕ್ಷಿ ವ್ಯವಸ್ಥೆ ಅಡಿಯಲ್ಲಿ ಭಾರತ ಸರ್ಕಾರವು ಸೂಚಿಸಿರುವಕೊರತೆಗಳನ್ನು ಸರಿಪಡಿಸಿ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ. (2017ರ ಏಪ್ರಿಲ್‌ 5ರ ಪತ್ರ ) ಏಕಗವಾಕ್ಷಿ ವ್ಯವಸ್ಥೆಯಡಿಯಲ್ಲಿ ಪ್ರಸ್ತಾವನೆಯನ್ನು ಸಲ್ಲಿಸುವುದು ಬಾಕಿ ಇದೆ ಎಂದು ಪಟ್ಟಿಯಿಂದ ತಿಳಿದು ಬಂದಿದೆ.

 

ಹಾಗೆಯೇ ಮತ್ತೊಬ್ಬ ನಿವೃತ್ತ ಐಎಎಸ್‌ ಅಧಿಕಾರಿ ಕೆ ಎಸ್‌ ಪ್ರಭಾಕರ್‌ ಅವರ ವಿರುದ್ಧ 2013ರ ಜೂನ್‌ 26ರಂದು ದೋಷಾರೋಪಣೆ ಪಟ್ಟಿಯನ್ನು ಜಾರಿಗೊಳಿಸಲಾಗಿದೆ. ಈ ಅಧಿಕಾರಿ ವಿರುದ್ಧ 2013ರ ಡಿಸೆಂಬರ್‌ 30ರಂದು ವಿಚಾರಣೆ ಪ್ರಕ್ರಿಯೆಯು ಆರಂಭಗೊಂಡಿದೆ. ಇದು ಕೂಡ 8 ವರ್ಷಗಳಿಗೂ ಮೇಲ್ಪಟ್ಟಿದೆ. ಈ ಪ್ರಕರಣದ ಬಗ್ಗೆ ವಿಚಾರಣಾಧಿಕಾರಿ 2016ರ ಮಾರ್ಚ್‌ 4ರಂದು ನೀಡಿರುವ ವರದಿಯನ್ನು ಪರಿಶೀಲಿಸಿ ಅಂಗೀಕರಿಸುವ ಬಗ್ಗೆ ಸ್ಪಷ್ಟ ಅಭಿಪ್ರಾಯ ನೀಡವಂತೆ ವಾಣಿಜ್ಯ ಮತ್ತುಕೈಗಾರಿಕೆ ಇಲಾಖೆಯನ್ನು ಕೋರಲಾಗಿದೆ. ಆದರೆ ಇನ್ನೂ ಈ ಬಗ್ಗೆ ಆಡಳಿತ ಇಲಾಖೆಯಿಂದ ಪ್ರತಿಕ್ರಿಯೆಯನ್ನು ನಿರೀಕ್ಷಿಸುವ ಹೆಸರಿನಲ್ಲಿ ಕಾಲಹರಣವಾಗುತ್ತಿದೆ.

 

ನಿವೃತ್ತ ಐಎಎಸ್‌ ಅಧಿಕಾರಿ ಎಂ ಎಸ್‌ ರವಿಶಂಕರ್‌ ಅವರ ವಿರುದ್ಧ 2008ರ ಜುಲೈ 24ರಂದು ದೋಷಾರೋಪಣೆ ಪಟ್ಟಿ ಜಾರಿಗೊಳಿಸಲಾಗಿದೆ. 2009ರ ಜುಲೈ 7ರಂದು ವಿಚಾರಣೆ ಪ್ರಕ್ರಿಯೆಯು ಆರಂಭಗೊಂಡಿದೆಯಾದರೂ ಪ್ರಕರಣವು 13 ವರ್ಷಗಳಿಂದಲೂ ತೆವಳುತ್ತಲೇ ಇದೆ. ವಿಚಾರಣಾಧಿಕಾರಿ ನೇಮಿಸಿ ಸರ್ಕಾರ ಹೊರಡಿಸಿದ್ದ ಆದೇಶದ ವಿರುದ್ಧ ರವಿಶಂಕರ್‌ ಅವರು ಅರ್ಜಿ (ಸಂಖ್ಯೆ 363/2009- 11.02.2013) ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿವರಣೆ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಪಡೆದುಕೊಳ್ಳುವಂತೆ ಕೋರಲಾಗಿತ್ತು.

 

ಆದರೂ ನೋಟೀಸ್‌ಗೆ ಉತ್ತರ ಸಲ್ಲಿಸದ ಕಾರಣ ಇವರ ವಿರುದ್ಧ ಶಿಸ್ತುಕ್ರಮವನ್ನು ಹೊಸದಾಗಿ ಆರಂಭಿಸಲು ಕ್ರಮ ವಹಿಸಲಾಗಿತ್ತು. ಆದರೆ ಈ ಅಧಿಕಾರಿ ಈಗಾಗಲೇ ನಿವೃತ್ತರಾಗಿದ್ದಾರೆ. ನಿವೃತ್ತಿ ಸೌಲಭ್ಯಗಳನ್ನು ಬಿಡುಗಡೆ ಮಾಡುವ ಬಗ್ಗೆ 502/2017ರಲ್ಲಿ ಕೇಂದ್ರ ಆಡಳಿತ ಮಂಡಳಿ ಮುಂದೆ ಅರ್ಜಿ ಸಲ್ಲಿಸಿದ್ದರು. ಕೇಂದ್ರ ಆಡಳಿತ ಮಂಡಳಿಯು 2018ರ ಆಗಸ್ಟ್‌ 16ರಂದು ಹೊರಡಿಸಿದ್ದ ಆದೇಶದ ವಿರುದ್ಧ ಇವರು ಉಚ್ಛ ನ್ಯಾಯಾಲಯದಲ್ಲಿ ರಾಜ್ಯ ಸರ್ಕಾರವು ರಿಟ್‌ ಅರ್ಜಿ ಸಲ್ಲಿಸಿದೆ. ಹೀಗಾಗಿ ಈ ಪ್ರಕರಣವು ಇನ್ನೂ ವಿಚಾರಣೆಯಲ್ಲಿದೆ.

 

ನಿವೃತ್ತ ಐಎಎಸ್‌ ಅಧಿಕಾರಿಕೆ ಆರ್‌ ಸುಂದರ್‌ ವಿರುದ್ಧ 2017ರ ಅಕ್ಟೋಬರ್‌ 4ರಂದು ದೋಷಾರೋಪಣೆ ಪಟ್ಟಿ ಜಾರಿಗೊಳಿಸಲಾಗಿದೆ. 2020ರ ಜುಲೈ 10ರಂದು ವಿಚಾರಣೆ ಪ್ರಾರಂಭವಾಗಿದೆ. ಇದು 4 ವರ್ಷಗಳಿಗೂ ಮೇಲ್ಪಟ್ಟಿದೆ. 2017ರಲ್ಲಿ ಜಾರಿಗೊಳಿಸಿದ್ದ ದೋಷಾರೋಪಣೆ ಪಟ್ಟಿಗೆ ನೀಡಿದ್ದ ವಿವರಣೆಯನ್ನು ಸರ್ಕಾರವು ಒಪ್ಪಿಲ್ಲ. ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಪಿಜಿಎಂ ಪಾಟೀಲ್‌ ಅವರನ್ನು ವಿಚಾರಣಾಧಿಕಾರಿಯನ್ನಾಗಿ 2020ರ ಜುಲೈ 10ರಂದು ನೇಮಿಸಿ ಆದೇಶ ಹೊರಡಿಸಿದೆ.

 

ನಿವೃತ್ತ ಐಎಎಸ್‌ ಅಧಿಕಾರಿ ಕೆ ರಾಮಣ್ಣ ಅವರ ವಿರುದ್ಧ 2011ರ ಫೆ.28ರಂದು ದೋಷಾರೋಪಣೆ ಪಟ್ಟಿ ಜಾರಿಗೊಳಿಸಲಾಗಿದೆ. ಪ್ರಕರಣದ ಬಗ್ಗೆ ಇವರು ನೀಡಿರುವ ವಿವರಣೆಯ ಬಗ್ಗೆ ವಾಣಿಜ್ಯ ಕೈಗಾರಿಕೆ ಇಲಾಖೆಯು ನೀಡಿರುವ ಅಭಿಪ್ರಾಯವು ಪರಿಶೀಲನೆಯಲ್ಲಿದೆ ಎಂದು ತಿಳಿದು ಬಂದಿದೆ.

 

ಮತ್ತೊಬ್ಬ ನಿವೃತ್ತ ಐಎಎಸ್‌ ಅಧಿಕಾರಿ ಕೆ ಶಿವರಾಂ ಅವರ ವಿರುದ್ಧ 2014ರ ಮಾರ್ಚ್‌ 19ರಂದು ದೋಷಾರೋಪಣೆ ಪಟ್ಟಿಯನ್ನು ಜಾರಿಗೊಳಿಸಲಾಗಿದೆ. ಇದು 8 ವರ್ಷಗಳಿಗೂ ಮೇಲ್ಪಟ್ಟಿದೆ. ಇವರ ವಿರುದ್ಧ ಇಲಾಖೆ ವಿಚಾರಣೆಯನ್ನು ಮುಂದುವರೆಸಬೇಕೇ ಬೇಡವೇ ಎಂಬ ಬಗ್ಗೆ ಆಡಳಿತ ಇಲಾಖೆಯ ಸ್ಪಷ್ಟ ನಿಲುವನ್ನು ತಿಳಿಸಬೆಕು ಎಂದು ಕೋರಲಾಗಿದ್ದು, ವಾಣೀಜ್ಯ ಮತ್ತು ಕೈಗಾರಿಕೆ ಇಲಾಖೆಯಿಂದ ಉತ್ತರವನ್ನು ನಿರೀಕ್ಷಿಸಿರುವುದು ಗೊತ್ತಾಗಿದೆ.

 

ಎಸ್‌ ಎಂ ರಾಜು (ಬಿಹಾರ್‌ ಕೇಡರ್‌) ಇವರ ವಿರುದ್ಧ 2005 ಏಪ್ರಿಲ್‌ 28ರಂದು ದೋಷಾರೋಪಣೆ ಪಟ್ಟಿ ಜಾರಿಗೊಳಿಸಲಾಗಿದೆ. 2005ರ ಜುಲೈ 30ರಂದು ವಿಚಾರಣೆ ಪ್ರಾರಂಭವಾಗಿದೆ. ಇದು 16 ವರ್ಷಗಳಿಗೂ ಮೇಲ್ಪಟ್ಟಿದೆ. ಇವರ ಪ್ರಕರಣದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ರಂಜನಿ ಶ್ರೀಕುಮಾರ್‌ ಅವರು ವಿಚಾರಣಾಧಿಕಾರಿಯಾಗಿ ಮುಂದುವರೆಸಲು ಇಚ್ಛಿಸಿಲ್ಲ. ಈ ಬಗ್ಗೆ ಪೂರ್ಣ ಪ್ರಮಾಣದ ವಿಚಾರಣೆ ನಡೆಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಕೇಶವನಾರಾಯಣ ಅವರನ್ನು 2020ರ ಸೆ.3ರಂದು ನೇಮಿಸಿರುವುದು ತಿಳಿದು ಬಂದಿದೆ.

 

ಐಪಿಎಸ್‌ ಅಧಿಕಾರಿಗಳ ಪೈಕಿ ಹೇಮಂತ್‌ ನಿಂಬಾಳ್ಕರ್‌, ಅನುಪಮ್‌ ಅಗರ್‌ವಾಲ್‌, ಭೀಮಾಶಂಕರ್‌ ಗುಳೇದ್‌, ಅಜಯ್‌ ಹಿಲ್ಹೋರಿ ಅವರ ವಿರುದ್ಧವೂ ಇಲಾಖೆ ವಿಚಾರಣೆ ನಡೆಸಲು ಪ್ರಸ್ತಾವನೆ ಬಂದಿವೆ. ಆದರೆ ಈ ಯಾವ ಪ್ರಸ್ತಾವನೆಗಳಿಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಅಂತಿಮ ತೀರ್ಮಾನ ಕೈಗೊಂಡಿಲ್ಲ. ಹೇಮಂತ್‌ ನಿಂಬಾಳ್ಕರ್‌ ಮತ್ತು ಅಜಯ್‌ ಹಿಲ್ಹೋರಿ ಅವರ ವಿರುದ್ಧ ಐಎಂಎ ಪ್ರಕರಣದಲ್ಲಿ ಗುರುತರವಾದ ಆರೋಪ ಕೇಳಿ ಬಂದಿತ್ತು.

 

ಜಯಪ್ರಕಾಶ್‌ ವಿ ನಾಯಕ್‌ (ನಿವೃತ್ತ) (9 ವರ್ಷ 3 ತಿಂಗಳು), ಅನುಪಮ್‌ ಅಗರ್‌ವಾಲ್‌ (2 ವರ್ಷ), ಭೀಮಾಶಂಕರ್‌ ಗುಳೇದ್‌ (4 ತಿಂಗಳು), ಹೇಮಂತ್‌ ನಿಂಬಾಳ್ಕರ್‌ (3 ತಿಂಗಳು), ಅಜಯ್‌ ಹಿಲೋರಿ (3 ತಿಂಗಳು)

 

ಐಎಫ್‌ಎಸ್‌ ಅಧಿಕಾರಿಗಳ ಪೈಕಿ ಬ್ರಿಜೇಶ್‌ಕುಮಾರ್‌ ಮತ್ತು ಎಸ್‌ ವೆಂಕಟೇಶನ್‌ (3 ವರ್ಷ 4 ತಿಂಗಳು), ರಂಗೇಗೌಡ (ನಿವೃತ್ತ- 3 ರ್ಷ 6ತಿಂಗಳೂ), ಜಿ ಎಸ್‌ ಸುದರ್ಶನ್‌, ಅನಿತ ಎಸ್‌ ಅರೇಕರ್‌ (2ವರ್ಷ 7 ತಿಂಗಳು), ಆರ್‌ ಉದಯ್‌ಕುಮಾರ್‌ ( 5 ವರ್ಷ 11 ತಿಂಗಳು), ಕೆ ಎಂ ನಾರಾಯಣಸ್ವಾಮಿ (2 ವರ್ಷ 10 ತಿಂಗಳು), ಮುತ್ತಯ್ಯ, ಮನೋಜ್‌ಕುಮಾರ್‌ ಶುಕ್ಲಾ ( 9 ವರ್ಷ) ಅವರ ವಿರುದ್ಧ ವಿಚಾರಣೆ ನಡೆಸಬೇಕು ಎಂಬ ಬಗ್ಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಶಿಸ್ತುಕ್ರಮ ಪ್ರಾರಂಭವಾದ ನಂತರದಲ್ಲಿ ಕೆಲವು ಪ್ರಕರಣಗಳಲ್ಲಿ ಅಧಿಕಾರಿ, ನೌಕರರು ಸಂಬಂಧಿಸಿದ ನ್ಯಾಯಾಲಯಗಳಲ್ಲಿ ತಡೆಯಾಜ್ಞೆ ತಂದಿದ್ದಾರೆ. ಹೀಗಾಗಿ ನ್ಯಾಯಾಲಯಗಳಲ್ಲಿ ಹಾಗೂ ಅಧಿಕಾರಿಗಳ ಪ್ರತಿ ರಕ್ಷಣಾ ಹೇಳಿಕೆ ಸಲ್ಲಿಕೆ, ವಿಚಾರಣೆ ವರದಿ ಸಲ್ಲಿಕೆಯ ನಂತರ ಆಡಳಿತ ಇಲಾಖೆಯ ಸ್ಪಷ್ಟೀಕರಣ, ಅಭಿಪ್ರಾಯ ಕೋರಿರುವ ಕೆಲವು ಪ್ರಕರಣಗಳಲ್ಲಿ ಆಡಳಿತ ಇಲಾಖೆಯು ಸಂಬಂಧಿಸಿದ ಕ್ಷೇತ್ರ ಇಲಾಖೆಗಳಿಂದ ಮಾಹಿತಿ, ಅಭಿಪ್ರಾಯ ಪಡೆಯುವುದರಲ್ಲಿಯೇ ಕಾಲಹರಣ ಮಾಡಲಾಗುತ್ತಿದೆ. ವರದಿ ನೀಡಬೇಕಾದ ಕೆಲವು ಪ್ರಕರಣಗಳಲ್ಲಿ ಆಡಳಿತಾತ್ಮಕವಾಗಿ ಪತ್ರ ವ್ಯವಹಾರ ಆಗುವುದರಿಂದ ಕಾಲಮಿತಿ ಅನ್ವಯ ಕ್ರಮ ಕೈಗೊಳ್ಳಲು ಸಾಧ್ಯವಾಗಿರುವುದಿಲ್ಲ ಎಂದು ತಿಳಿದು ಬಂದಿದೆ.

 

ಕಾಲಮಿತಿಯೊಳಗೆ ವಿಚಾರಣೆ ತನಿಖೆಗಳನ್ನು ಪೂರೈಸಲು ಯಾವುದೇ ಉದ್ದೇಶಪೂರ್ವಕವಾಗಿ ವಿಳಂಬವಾಗಿರುವುದಿಲ್ಲ. ವಿಳಂಬವನ್ನು ತಡೆಗಟ್ಟುವ ಸಂಬಂಧ ನಿಯಮಿತವಾಗಿ ವಿವಿದ ಹಂತಗಳಲ್ಲಿ ಪರಿಶೀಲನೆ ಮಾಡಿ ತ್ವರಿತಗತಿಯಲ್ಲಿ ಪ್ರಕರಣಗಳ ಬಗ್ಗೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಅವರು ಉತ್ತರಿಸಿದ್ದಾರೆ.

the fil favicon

SUPPORT THE FILE

Latest News

Related Posts