ಬೆಂಗಳೂರು; ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳನ್ನು ಸಂಗ್ರಹಿಸಲು ಕೇಂದ್ರ ಸರ್ಕಾರದ ಯೋಜನೆಯನ್ನು ಬದಿಗಿರಿಸಿ ಇ ಡಿ ಜಿ ಎಸ್ (ಎಲೆಕ್ಟ್ರಾನಿಕ್ ಡಾಕ್ಯುಮೆಂಟ್ ಜನರೇಷನ್ ಸಿಸ್ಟಂ) ಯೋಜನೆ ಅನುಷ್ಠಾನಗೊಳಿಸಲು ಕುಲಪತಿಗಳಿಗೆ ಬರೆದಿದ್ದ ಪತ್ರವನ್ನು ರಾಜ್ಯಪಾಲರು ಹಿಂಪಡೆದಿದ್ದಾರೆ.
ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳನ್ನು ಉಚಿತವಾಗಿ ಡಿಜಿ ಲಾಕರ್-ನ್ಯಾಡ್‌ನಲ್ಲಿ ಸಂಗ್ರಹಿಸಲು ಕೇಂದ್ರ ಸರ್ಕಾರ ಆರಂಭಿಸಿದ್ದ ಯೋಜನೆಯನ್ನು ಬದಿಗೊತ್ತಿದ್ದನ್ನು ‘ದಿ ಫೈಲ್’ ಮತ್ತು ವಾರ್ತಾಭಾರತಿ ಪತ್ರಿಕೆಯು ಹೊರಗೆಡವಿತ್ತು. ಈ ಕುರಿತು ವರದಿ ಪ್ರಕಟವಾಗುತ್ತಿದ್ದಂತೆ ಕುಲಪತಿಗಳಿಗೆ ಬರೆದಿದ್ದ ಪತ್ರವನ್ನು ರಾಜ್ಯಪಾಲರ ಕಚೇರಿಯು ಹಿಂಪಡೆದಿದೆ. ಈ ಸಂಬಂಧ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ 2022ರ ಫೆ.8ರಂದು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಪತ್ರವನ್ನು ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಕೇಂದ್ರ ಸರ್ಕಾರವು ಜಾರಿಗೊಳಿಸಿದ್ದ ಉಚಿತ ಯೋಜನೆಯನ್ನು ಅನುಷ್ಠಾನಗೊಳಿಸಿ ಮಾದರಿಯಾಗಬೇಕಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇ ಡಿ ಜಿ ಎಸ್ ಯೋಜನೆ ಹೆಸರಿನಲ್ಲಿ ದೊಡ್ಡಮಟ್ಟದ ಹಗರಣಕ್ಕೆ ನಾಂದಿ ಹಾಡಲು ಮುಂದಾಗಿದ್ದರು. ಸದ್ಯ ಪತ್ರವನ್ನು ಹಿಂಪಡೆದಿರುವ ರಾಜ್ಯಪಾಲರ ಕಚೇರಿಯು ಸರ್ಕಾರದ ಬೊಕ್ಕಸಕ್ಕೆ ಸಂಭವಿಸಬಹುದಾಗಿದ್ದ 465 ಕೋಟಿ ಹೊರೆಯನ್ನು ತಪ್ಪಿಸಿದಂತಾಗಿದೆ.
2022ರ ಜನವರಿ 31ರಂದು ಎಲ್ಲಾ ಕುಲಪತಿಗಳಿಗೆ ಬರೆದಿದ್ದ ಪತ್ರವನ್ನು ಹಿಂಪಡೆದು 2022ರ ಜನವರಿ 14ರಂದು ಉನ್ನತ ಶಿಕ್ಷಣ ಇಲಾಖೆಯು ಹೊರಡಿಸಿದ್ದ ಸುತ್ತೋಲೆಯನ್ನು ಪಾಲಿಸಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ.
ರಾಜ್ಯಪಾಲರ ನಿರ್ದೇಶನ ಪಾಲಿಸಿದ್ದಲ್ಲಿ ಕಿಯೋನಿಕ್ಸ್ ಮೂಲಕ ಪ್ರವೇಶಿಸುವ ಹೊರಗುತ್ತಿಗೆ ಕಂಪನಿಯೊಂದಕ್ಕೆ ವರ್ಷಕ್ಕೆ 93 ಕೋಟಿಯಂತೆ 5 ವರ್ಷಕ್ಕೆ 465 ಕೋಟಿ ರು. ಪಾವತಿಸಬೇಕಾಗಿತ್ತು.
ಪ್ರಕರಣದ ವಿವರ
ನಕಲಿ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳ ಹಾವಳಿ ತಪ್ಪಿಸಿ ಪರೀಕ್ಷಾ ಪದ್ಧತಿಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಆಧಾರ್ ಸಂಖ್ಯೆ ಆಧಾರಿತ ಡಿಜಿಟಲ್ (e-sign) ಅಂಕಪಟ್ಟಿ ಮತ್ತ ಪದವಿ ಪ್ರಮಾಣ ಪತ್ರಗಳನ್ನು ಆನ್‌ಲೈನ್ ಮೂಲಕ ವಿತರಿಸುವ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ ಹಿಂದಿನ ರಾಜ್ಯಪಾಲ ವಜುಭಾಯ್ ವಾಲಾ ಅವರ ಸೂಚನೆ ಮೇರೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಸರ್ಕಾರವು 2019ರ ಮೇ 31ರಂದು ಆದೇಶ ಹೊರಡಿಸಿತ್ತು.
‘ರಾಜ್ಯದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಡಿಯಲ್ಲಿನ ತಾಂತ್ರಿಕ ಕಾಲೇಜುಗಳು, ತಾಂತ್ರಿಕ ಶಿಕ್ಷಣ ಇಲಾಖೆಯಡಿಯಲ್ಲಿರುವ ಎಲ್ಲಾ ಪಾಲಿಟೆಕ್ನಿಕ್‌ಗಳು, ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು, ಉನ್ನತ ಶಿಕ್ಷಣ ಇಲಾಖೆಯ ಅಧೀನ ಇಲಾಖೆಗಳಲ್ಲಿ ಆಧಾರ್ ಸಂಖ್ಯೆ ಆಧರಿತ ಡಿಜಿಟಲ್ ಅಂಕಪಟ್ಟಿ ಮತ್ತು ಪದವಿ ಪ್ರಮಾಣಪತ್ರಗಳನ್ನು ಕಿಯೋನಿಕ್ಸ್ ಮೂಲಕ ಇಡಿಜಿಎಸ್ ತಂತ್ರಾಂಶ ಯೋಜನೆಯನ್ನು ಬಳಸಿಕೊಂಡು ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳನ್ನು ಆನ್‌ಲೈನ್/ಡಿಜಿಟಲ್ ಮಾದರಿಯಲ್ಲಿ ತಯಾರಿಸಿ ವಿತರಿಸಬೇಕು. ಹಾಗೂ ನ್ಯಾಡನಲ್ ಅಕಾಡೆಮಿಕ್ ಡಿಪಾಸಿಟರಿ (ನ್ಯಾಡ್) ಮಾದರಿಯಲ್ಲಿ ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದಲ್ಲಿ(ಕೆಎಸ್‌ಡಿಸಿ)ಯಲ್ಲಿ ಶೇಖರಿಸಿ ಯೋಜನೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು,’ ಎಂದು ಆದೇಶಿಸಿತ್ತು.
ವಿದ್ಯಾರ್ಥಿಗಳ ಮೂಲ ಅಂಕಪಟ್ಟಿ, ತಿದ್ದುಪಡಿ ಅಂಕಪಟ್ಟಿ, ನಕಲು ಅಂಕಪಟ್ಟಿ, ಕ್ರೋಢೀಕೃತ ಅಂಕಪಟ್ಟಿ, ತಾತ್ಕಾಲಿಕ ಅಂಕಪಟ್ಟಿ, ಘಟಿಕೋತ್ಸವ ಮೂಲ ಮತ್ತು ತಿದ್ದುಪಡಿ ಪ್ರಮಾಣ ಪತ್ರ, ವಲಸೆ ಪ್ರಮಾಣಪತ್ರ, ವಿದ್ಯಾರ್ಥಿವೇತನ ಪ್ರಮಾಣಪತ್ರ, ವರ್ಗಾವಣೆ ಪ್ರಮಾಣಪತ್ರ, ನಡತೆ ಪ್ರಮಾಣ ಪತ್ರ, ಅರ್ಹತಾ ಪ್ರಮಾಣಪತ್ರ ಸೇರಿದಂತೆ ಒಟ್ಟಾರೆ 35 ಪ್ರಮಾಣಪತ್ರಗಳನ್ನು ಕಿಯೋನಿಕ್ಸ್ ಒದಗಿಸುವ ಇಡಿಜಿಎಸ್ ತಂತ್ರಾಂಶದ ಮೂಲಕ ಸಿದ್ಧಪಡಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿತ್ತು.
ಖಾಸಗಿ ಕಂಪನಿಗೆ 425 ಕೋಟಿ ಲಾಭ; ಸರ್ಕಾರದ ಸೂಚನೆ ಬದಿಗಿರಿಸಿ ಹಗರಣಕ್ಕೆ ನಾಂದಿ ಹಾಡಿದ ರಾಜ್ಯಪಾಲ?
ಒಂದು ದಾಖಲಾತಿಗೆ 155 ರು.
ಕಿಯೋನಿಕ್ಸ್ ಒದಗಿಸುತ್ತಿರುವ ಇಡಿಜಿಎಸ್ ತಂತ್ರಾಂಶದ ಮೂಲಕ ವಿದ್ಯಾರ್ಥಿಗಳ ಒಂದು ದಾಖಲಾತಿಯನ್ನು ಡಿಜಿಟಲ್ ರೂಪದಲ್ಲಿ ತಯಾರಿಸಿ, ಸಂಗ್ರಹಿಸಿ ಮತ್ತು ವಿತರಿಸಲು ಜಿಎಸ್‌ಟಿ ಸೇರಿ ಒಟ್ಟು 155 ರು. (132.00 +ಶೇ.18 ಜಿಎಸ್‌ಟಿ) ಭರಿಸಬೇಕು. ಇದನ್ನು ವಿಶ್ವವಿದ್ಯಾಲಯಗಳು ಈಗಾಗಲೇ ಸಂಗ್ರಹಿಸುವ ಪರೀಕ್ಷಾ ಶುಲ್ಕದಡಿಯಲ್ಲಿಯೇ ಭರಿಸಬೇಕು ಎಂದೂ ಆದೇಶದಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಕಿಯೋನಿಕ್ಸ್ ಸಂಸ್ಥೆಯವರೊಂದಿಗಿನ ಈ ಒಪ್ಪಂದವು ಮುಂದಿನ 5 ವರ್ಷಗಳವರೆಗೆ ಜಾರಿಯಲ್ಲಿರುತ್ತದೆ.
ತಪ್ಪಿದ 425 ಕೋಟಿ ಹೊರೆ
ರಾಜ್ಯದ ತಲಾ ವಿಶ್ವವಿದ್ಯಾಲಯದಲ್ಲಿ ಒಂದು ಸೆಮಿಸ್ಟರ್‌ಗೆ 15 ಲಕ್ಷದಂತೆ ವರ್ಷಕ್ಕೆ 2 ಸೆಮಿಸ್ಟರ್‌ನಂತೆ ಒಟ್ಟು 30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಪರೀಕ್ಷೆ ಬರೆದ ಪ್ರತಿ ವಿದ್ಯಾರ್ಥಿಗೆ ಅಂಕಪಟ್ಟಿ ಕೊಡಲೇಬೇಕು. ಹೀಗಾಗಿ ವರ್ಷದಲ್ಲಿ ಅಂದಾಜು 5 ಲಕ್ಷ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನೂ ಸೇರಿದಂತೆ ಒಟ್ಟಾರೆ 35 ಲಕ್ಷ ಪ್ರಮಾಣಪತ್ರ (ಅಂಕಪಟ್ಟಿ-ಪದವಿ ಪ್ರಮಾಣ ಪತ್ರ ಸೇರಿ)ಗಳನ್ನು ಇಡಿಜಿಎಸ್ ತಂತ್ರಾಂಶದ ಮೂಲಕ ಸಂಗ್ರಹಿಸಲಾಗುತ್ತದೆ.
ಒಂದು ದಾಖಲಾತಿಗೆ 155 ರು. ಲೆಕ್ಕಾಚಾರದ ಪ್ರಕಾರ 35 ಲಕ್ಷ ದಾಖಲಾತಿಗಳಿಗೆ ಸುಮಾರು 55 ಕೋಟಿ ರು. ವೆಚ್ಚ ಮಾಡಬೇಕು. ಇದು 5 ವರ್ಷಕ್ಕೆ 275 ಕೋಟಿ ರು. ವೆಚ್ಚವಾಗಲಿದೆ. ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರ ಹೊರತುಪಡಿಸಿದಂತೆ 2019ರಲ್ಲಿ ಹೊರಡಿಸಿರುವ ಆದೇಶದ ಪ್ರಕಾರ ಒಟ್ಟು ಒಬ್ಬ ವಿದ್ಯಾರ್ಥಿಯ 35 ದಾಖಲಾತಿಗಳೂ ಸೇರಿದರೆ ಒಟ್ಟಾರೆ 60 ಲಕ್ಷ ದಾಖಲಾತಿಗಳನ್ನು ಇಡಿಜಿಎಸ್ ತಂತ್ರಾಂಶದ ಮೂಲಕ ಸಂಗ್ರಹಿಸಬೇಕು. 155 ರು.ನಂತೆ 60 ಲಕ್ಷ ದಾಖಲಾತಿಗಳಿಗೆ ವರ್ಷಕ್ಕೆ 93 ಕೋಟಿ ರು. ವೆಚ್ಚ ಮಾಡಬೇಕು. 5 ವರ್ಷಕ್ಕೆ 465 ಕೋಟಿ ರು. ವೆಚ್ಚವಾಗಲಿದೆ.
ಉದಾಹರಣೆಗೆ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವೊಂದರಲ್ಲಿ 2 ಲಕ್ಷ ವಿದ್ಯಾರ್ಥಿಗಳ ಅಂಕಪಟ್ಟಿವೊಂದಕ್ಕೆ ವರ್ಷವೊಂದಕ್ಕೆ 3 ಕೋಟಿ ರು. ವೆಚ್ಚ ಮಾಡಬೇಕು. 5 ವರ್ಷಕ್ಕೆ ಸುಮಾರು 12.50 ಕೋಟಿ ರು. ವೆಚ್ಚ ಮಾಡಬೇಕು. ಈ ಹಣವನ್ನು ವಿದ್ಯಾರ್ಥಿಯ ಪರೀಕ್ಷಾ ಶುಲ್ಕದಿಂದಲೇ ಭರಿಸಬೇಕು ಎಂದು ಹೇಳಿರುವುರಿಂದ ಸಹಜವಾಗಿ ಪರೀಕ್ಷಾ ಶುಲ್ಕದಲ್ಲಿಯೂ ಹೆಚ್ಚಳ ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕಲಿದೆ. ಇದು ಅಂತಿಮವಾಗಿ ವಿದ್ಯಾರ್ಥಿಗಳಿಗೆ ಹೊರೆ. ಒಬ್ಬ ವಿದ್ಯಾರ್ಥಿಯು ತನ್ನ ಪದವಿ ಪಡೆಯಲು ಈ ಸಂಬಂಧ ಕನಿಷ್ಟ 1,000 ರು. ಹೆಚ್ಚುವರಿಯಾಗಿ ನೀಡಬೇಕು.
ವಿ ವಿ ಗಳ ಮೇಲೆ ರಾಜ್ಯಪಾಲರ ಕಚೇರಿ ಒತ್ತಡಕ್ಕೆ ತಡೆ
2019ರಲ್ಲಿ ಸರ್ಕಾರ ಹೊರಡಿಸಿದ್ದ ಆದೇಶವನ್ನೇ ಪಾಲಿಸಬೇಕು ಎಂದು ರಾಜ್ಯಪಾಲರ ಕಚೇರಿಯು ಎಲ್ಲಾ ವಿಶ್ವವಿದ್ಯಾಲಯಗಳ ಮೇಲೆ ಒತ್ತಡ ಹೇರುವ ಭಾಗವಾಗಿಯೇ ರಾಜ್ಯಪಾಲರು 2022ರ ಜನವರಿ 31ರಂದು ಕುಲಪತಿಗಳಿಗೆ ಪತ್ರ ಬರೆದಿದ್ದರು. ರಾಜ್ಯಪಾಲರ ಒತ್ತಡಕ್ಕೆ ವಿಶ್ವವಿದ್ಯಾಲಯಗಳು ಮಣಿದಿದ್ದರೆ ವಿಶ್ವವಿದ್ಯಾಲಯಗಳು ವರ್ಷವೊಂದಕ್ಕೆ ಸುಮಾರು 55ರಿಂದ 60 ಕೋಟಿ ರು.ವೆಚ್ಚ ಮಾಡಬೇಕಿತ್ತು.
ರಾಜ್ಯಪಾಲರ ಒತ್ತಡಕ್ಕೆ ಮಣಿದಿದ್ದರೆ ಖಾಸಗಿ ಕಂಪನಿಗೆ 425 ಕೊಟಿ ಲಾಭ?
ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳ ಸಂಗ್ರಹಣೆ ಕೆಲಸದ ಸಂಪೂರ್ಣ ಜವಾಬ್ದಾರಿಯು ಮತ್ತು ಕೆಲಸದ ನಿರ್ವಹಣೆಯು ವಿಶ್ವವಿದ್ಯಾಲಯದ ಮೇಲಿದೆ. ಕಿಯೋನಿಕ್ಸ್ ಸಂಸ್ಥೆಯು ಈ ದಾಖಲೆಗಳನ್ನು ಅಂತರ್ಜಾಲದಲ್ಲಿ ಶೇಖರಿಸುತ್ತದಷ್ಟೆ. ಕಿಯೋನಿಕ್ಸ್ ಸಂಸ್ಥೆಗೆ ಸ್ವಲ್ಪವೂ ಕೆಲಸವಿಲ್ಲದೇ ವರ್ಷಕ್ಕೆ 100 ಕೋಟಿ ಯನ್ನು ಸಂಗ್ರಹಿಸಲು ಅಧಿಕಾರ ನೀಡಿದಂತಾಗಿದೆ. ಅಲ್ಲದೆ ಕಿಯೋನಿಕ್ಸ್ ಸಂಸ್ಥೆಯು ಈ ಕಾರ್ಯ ನಿರ್ವಹಿಸಲು ಖಾಸಗಿ ಕಂಪನಿಗೆ ಗುತ್ತಿಗೆ ನೀಡುತ್ತದೆ. ಕಿಯೋನಿಕ್ಸ್ ನೀಡುವ ಪ್ರತಿ ಹೊರಗುತ್ತಿಗೆಗೆ ಸೇವಾ ಶುಲ್ಕ ಹೆಸರಿನಲ್ಲಿ ಶೇ. 15ರಷ್ಟು ಪಡೆಯುತ್ತದೆ. ಇದರ ಪ್ರಕಾರ 5 ವರ್ಷಕ್ಕೆ 75 ಕೋಟಿ ರು. ಸೇವಾ ಶುಲ್ಕವನ್ನು ಕಿಯೋನಿಕ್ಸ್ ಸಂಗ್ರಹಿಸಿದರೆ, ಹೊರಗುತ್ತಿಗೆ ಕಂಪನಿಗೆ 5 ವರ್ಷಕ್ಕೆ 425 ಕೋಟಿ ರು.ಗಳು ಪಾವತಿ ಮಾಡಿದಂತಾಗುತ್ತಿತ್ತು.
ಕೇಂದ್ರ ಸರ್ಕಾರವು ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ನೀಡುವ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳನ್ನು ಉಚಿತವಾಗಿ ಸಂಗ್ರಹಿಸುವ ಮತ್ತು ಉಚಿತವಾಗಿ ವಿದ್ಯಾರ್ಥಿಗಳಿಗೆ ನೀಡುವ ಯೋಜನೆಯನ್ನು ಡಿಜಿ ಲಾಕರ್-ನ್ಯಾಡ್ (DigiLocker-NAD) ನಲ್ಲಿ ಸಂಗ್ರಹಿಸಲು 2020-21ನೇ ಸಾಲಿನಿಂದ ಆರಂಭಿಸಿದೆ. ಹೀಗಾಗಿ ಕಿಯೋನಿಕ್ಸ್ ಸಂಸ್ಥೆಯವರ ಇ ಡಿ ಜಿ ಎಸ್ (ಎಲೆಕ್ಟ್ರಾನಿಕ್ ಡಾಕ್ಯುಮೆಂಟ್ ಜನರೇಷನ್ ಸಿಸ್ಟಂ) ಯೋಜನೆಯನ್ನು ಮುಂದಿನ ಸೂಚನೆಯವರೆಗೆ ತಡೆಹಿಡಿಯುವಂತೆ ಹಾಗೂ ಡಿಜಿ ಲಾಕರ್-ನ್ಯಾಡ್‌ನಲ್ಲಿ ಸಂಗ್ರಹಿಸುವ ಯೋಜನೆಯನ್ನು ಮುಂದುವರೆಸಬೇಕು ಎಂದು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಕುಮಾರ್ ನಾಯಕ್ ಅವರು ವಿಶ್ವವಿದ್ಯಾಲಯಗಳ ಎಲ್ಲಾ ಕುಲಸಚಿವರಿಗೆ 2022ರ ಜನವರಿ 14ರಂದು ಪತ್ರ ಬರೆದಿದ್ದನ್ನು ಸ್ಮರಿಸಬಹುದು.