ಬೆಂಗಳೂರು; ಐ ಮಾನಿಟರಿ ಅಡ್ವೈಸರಿ (ಐಎಂಎ) ಹಗರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ರೋಷನ್ ಬೇಗ್ ಅವರ ವಿರುದ್ಧ ಕೆಪಿಐಡಿ ಅಡಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು 81ನೇ ಹೆಚ್ಚುವರಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಸಬೇಕೇ ಅಥವಾ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಸೃಜಿಸಿರುವ ರಾಜ್ಯಸಭೆ, ಲೋಕಸಭೆ ಸದಸ್ಯರ ಪ್ರಕರಣಗಳ ನ್ಯಾಯಾಲಯದಲ್ಲಿ ಮುಂದುವರೆಸಬೇಕೇ ಎಂಬ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರವು ಇದುವರೆಗೂ ಯಾವುದೇ ನಿಲುವು ತಳೆದಿಲ್ಲ. ಈ ಸಂಬಂಧ ಎರಡು ತಿಂಗಳ ಹಿಂದೆಯೇ ಸಲ್ಲಿಸಿರುವ ಕಡತಕ್ಕೂ ಕಾನೂನು ಸಚಿವರು ಅನುಮೋದನೆಯನ್ನೂ ನೀಡಿಲ್ಲ.
ಅದೇ ರೀತಿ ರೋಷನ್ ಬೇಗ್ ವಿರುದ್ಧ ಬಡ್ಸ್ ಕಾಯ್ದೆಯಡಿಯಲ್ಲಿ ದಾಖಲಿಸಿರುವ ಕ್ರಿಮಿನಲ್ ಪ್ರಕರಣವನ್ನು ಯಾವ ನ್ಯಾಯಾಲಯದಲ್ಲಿ ಮುಂದುವರೆಸಬೇಕು ಎನ್ನುವ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಯಾವುದೇ ಪ್ರಸ್ತಾವನೆ ಕಾನೂನು ಇಲಾಖೆಗೆ ಬಂದಿಲ್ಲ. ಈ ಕುರಿತು ಕಾನೂನು ಇಲಾಖೆಯು 2021ರ ನವೆಂಬರ್ 29ರಂದು ನೀಡಿರುವ ಅಭಿಪ್ರಾಯದ ಟಿಪ್ಪಣಿ ಹಾಳೆಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಐಎಂಎ ಹಾಗೂ ಇತರೆ ಕಂಪನಿ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನೇಮಕವಾಗಿರುವ ಸಕ್ಷಮ ಪ್ರಾಧಿಕಾರವು ಮಾಜಿ ಸಚಿವ ರೋಷನ್ ಬೇಗ್ ಅವರ ವಿರುದ್ಧ ಕೆಪಿಐಡಿ ಮತ್ತು ಬಡ್ಸ್ ಕಾಯ್ದೆ ಅಡಿಯದಲ್ಲಿ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣವನ್ನು 92ನೇ ಅಪರ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ (ವಿಶೇಷ ನ್ಯಾಯಾಲಯ)ದಲ್ಲಿ ಮುಂದುವರೆಸಬೇಕೇ ಅಥವಾ ಇವರು ಮಾಜಿ ಸಚಿವರಾಗಿರುವ ಕಾರಣ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಸೃಜಿಸಲಾಗಿರುವ ರಾಜ್ಯಸಭೆ/ಲೋಕಸಭೆ ಸದಸ್ಯರ ಪ್ರಕರಣಗಳ ನ್ಯಾಯಾಲಯಲದಲ್ಲಿ ಮುಂದುವರೆಸಬೇಕೇ ಎನ್ನುವ ಬಗ್ಗೆ ಸಕ್ಷಮ ಪ್ರಾಧಿಕಾರ ಹಾಗೂ ವಿಶೇಷ ಅಧಿಕಾರಿಯು ಕಾನೂನು ಇಲಾಖೆಯ ಅಭಿಪ್ರಾಯ ಕೋರಿದ್ದರು.
ಕೆಪಿಐಡಿ ಮತ್ತು ಎಂಎಂಡಿಆರ್ ಕಾಯ್ದೆಗಳಡಿಯಲ್ಲಿ ಕ್ರಿಮಿನಲ್ ಪ್ರಕರಣಗಳನ್ನು 81ನೇ ಅಪರ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ (ಸಿಸಿಎಚ್ 82)ದಲ್ಲಿ ನಡೆಸಲು ಆದೇಶವನ್ನು ಕೋರಿ ಕಾನೂನು ಸಚಿವರ ಅನುಮೋದನೆಗೆ ಕಡತ ( ಕಡತ ಸಂಖ್ಯೆ; LAW-LCE/114/2021 -03-09-2021) ಸಲ್ಲಿಕೆಯಾಗಿರುವುದು ತಿಳಿದು ಬಂದಿದೆ. ಆದರೆ 2 ತಿಂಗಳಾದರೂ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಅವರು ಈ ಸಂಬಂಧ ಇದುವರೆಗೂ ಅನುಮೋದನೆ ನೀಡಿಲ್ಲ ಎಂಬುದು ತಿಳಿದು ಬಂದಿದೆ.
‘ಅನುಮೋದನೆ ದೊರೆತ ನಂತರ ಮಾಜಿ ಸಚಿವ ರೋಷನ್ ಬೇಗ್ ಅವರ ವಿರುದ್ಧ ಕೆಪಿಐಡಿ ಕಾಯ್ದೆಯಡಿಯಲ್ಲಿ ದಾಖಲಿಸಿರುವ ಕ್ರಿಮಿನಲ್ ಪ್ರಕರಣವನ್ನು ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ (ಸಿಸಿಎಚ್-82)ದಲ್ಲಿ ಮುಂದುವರೆಸಬೇಕಾಗುತ್ತದೆ. ಆದರೆ ಇವರ ವಿರುದ್ಧ ಬಡ್ಸ್ ಕಾಯ್ದೆಯಡಿಯಲ್ಲಿ ದಾಖಲಿಸಿರುವ ಕ್ರಿಮಿನಲ್ ಪ್ರಕರಣವನ್ನು ಯಾವ ನ್ಯಾಯಾಲಯದಲ್ಲಿ ಮುಂದುವರೆಸಬೇಕೆನ್ನುವ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಯಾವುದೇ ಪ್ರಸ್ತಾವನೆಯು ಕಾನೂನು ಇಲಾಖೆಗೆ ಬಾರದ ಹೊರತು ಆ ಬಗ್ಗೆ ಯಾವುದೇ ಆದೇಶವಾಗಿಲ್ಲ,’ ಎಂದು ಕಾನೂನು ಇಲಾಖೆಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಡಿ ಪುಟ್ಟಸ್ವಾಮಿ ಅವರು 2021ರ ನವೆಂಬರ್ 29ರಂದು ಅಭಿಪ್ರಾಯ ನೀಡಿರುವುದು ಗೊತ್ತಾಗಿದೆ.
ರೋಷನ್ ಬೇಗ್ ಅವರ ಚರ ಮತ್ತು ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ಆದೇಶ ಹೊರಡಿಸಲಾಗಿದೆ’ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಈಗಾಗಲೇ ಮಾಹಿತಿ ನೀಡಿದೆ. ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ಕೆಪಿಐಡಿ) ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ 2021ರ ಜು. 6ರಂದು ಅಧಿಸೂಚನೆ ಹೊರಡಿಸಲಾಗಿದೆ. 2018ರ ವಿಧಾನಸಭೆ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ಬೇಗ್ ಸಲ್ಲಿಸಿದ್ದ ಅಫಿಡವಿಟ್ ಆಧರಿಸಿ ಆಸ್ತಿ ವಿವರದ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ವಿವರ ಸಲ್ಲಿಸಿತ್ತು.
‘ಜಂಟಿ ಅಭಿವೃದ್ಧಿ ಒಪ್ಪಂದಲ್ಲಿ ಹೊಸೂರು ರಸ್ತೆಯಲ್ಲಿ ಅಭಿವೃದ್ಧಿಪಡಿಸಿರುವ ವಾಣಿಜ್ಯ ಕಟ್ಟಡ (ಶೇ 33ರಷ್ಟು ಪಾಲು), ರೆಸಿಡೆನ್ಸಿ ರಸ್ತೆಯಲ್ಲಿನ ವಾಣಿಜ್ಯ ಕಟ್ಟಡ, ಸ್ಯಾಂಡರ್ಸ್ ರಸ್ತೆ ಮತ್ತು ಕ್ಲೀವ್ ಲ್ಯಾಂಡ್ ರಸ್ತೆಯಲ್ಲಿನ ಮನೆಗಳು, ಎಚ್‌ಬಿಆರ್ ಲೇಔಟ್, ಫ್ರೇಸರ್ ಟೌನ್ ಮತ್ತು ಕ್ಲೀವ್ ಲ್ಯಾಂಡ್ ರಸ್ತೆಯಲ್ಲಿನ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು’ ಎಂದು ವಿವರಿಸಿತ್ತು.
ಕೆಪಿಐಡಿ ಕಾಯ್ದೆಯಡಿ ರಚನೆಯಾದ ಸಕ್ಷಮ ಪ್ರಾಧಿಕಾರದ ವರದಿ ಮತ್ತು ಸಿಬಿಐ ಸಲ್ಲಿಸಿದ ದೋಷಾರೋಪ ಪಟ್ಟಿ ಆಧರಿಸಿ ಈ ತೀರ್ಮಾನ ಕೈಗೊಳ್ಳಲಾಗಿದತ್ತು. ಐಎಂಎ ಸಂಸ್ಥೆಯ ಪ್ರಚಾರ ಮತ್ತು ವ್ಯವಹಾರದಲ್ಲಿ ಬೇಗ್ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಆರ್ಥಿಕ ಲಾಭ ಗಳಿಸಿದ್ದರು ಎಂಬುದನ್ನು ತನಿಖಾ ಸಂಸ್ಥೆಗಳು ಪತ್ತೆ ಹೆಚ್ಚಿವೆ ಎಂದೂ ಸರ್ಕಾರ ತಿಳಿಸಿತ್ತು.
ಈ ಅಧಿಸೂಚನೆಯನ್ನು ಪರಿಶೀಲಿಸಿದ್ದ ಹಿಂದಿನ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಶಿವಾಜಿನಗರದ ಸರ್ಕಾರಿ ಶಾಲೆಗೆ ಐಎಂಎ ಸಮೂಹ ನೀಡಿರುವ ₹12.82 ಕೋಟಿ ದೇಣಿಗೆ ಮರಳಿಸುವ ಸಂಬಂಧ ಸೂಕ್ತ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದ್ದನ್ನು ಸ್ಮರಿಸಬಹುದು.
ಅಲ್ಲದೆ ಆರ್.ರೋಷನ್ ಬೇಗ್ ಆಸ್ತಿ ಜಪ್ತಿಗೆ ವಿಳಂಬ ಮಾಡಿದ್ದ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಲಾಕ್ಡೌನ್ ಕಾರಣದಿಂದ ಆಸ್ತಿ ಜಪ್ತಿ ಸಾಧ್ಯವಾಗುತ್ತಿಲ್ಲ ಎನ್ನುವ ಸರ್ಕಾರದ ವಾದವನ್ನು ಹೈಕೋರ್ಟ್ ಒಪ್ಪಿರಲಿಲ್ಲ. ಲಾಕ್ಡೌನ್ಗೂ ಆಸ್ತಿ ಜಪ್ತಿ ವಿಳಂಬಕ್ಕೂ ಸಂಬಂಧವಿಲ್ಲ. ಈ ಮಧ್ಯದಲ್ಲಿ ಅವರು ಆಸ್ತಿಗಳನ್ನು ಪರಭಾರೆ ಮಾಡಿದರೆ ಯಾರು ಹೊಣೆ ಎಂದು ಹೈಕೋರ್ಟ್ ಪ್ರಶ್ನಿಸಿತ್ತು.