ಒಂದು ಲಕ್ಷ ರು. ಸಾಲಮನ್ನಾ ಯೋಜನೆಗೆ ಕೊಕ್ಕೆ; ಅನುದಾನ ಕೋರಿಕೆ ಪ್ರಸ್ತಾವನೆ ನೆನೆಗುದಿಗೆ

ಬೆಂಗಳೂರು; ರೈತರು ಪಡೆದಿರುವ 50 ಸಾವಿರ ಮತ್ತು 1 ಲಕ್ಷ ರು. ಸಾಲವನ್ನು ಮನ್ನಾ ಮಾಡುವ ಸಂಬಂಧ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯು ರೈತರಿಗೆ ಸಂಬಂಧಿಸಿದಂತೆ ನೀಡಿರುವ ಹಸಿರು ಪಟ್ಟಿಗೆ ಆರ್ಥಿಕ ಇಲಾಖೆಯು ಕೊಕ್ಕೆ ಹಾಕಿದೆ. ಅಲ್ಲದೆ ಒಂದು ಲಕ್ಷ ರು. ಸಾಲ ಮನ್ನಾ ಯೋಜನೆ ಮುಂದುವರಿಕೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹೆಚ್ಚುವರಿ ಅನುದಾನ ಕೋರಿಕೆಯ ಪ್ರಸ್ತಾವನೆಯೂ ನೆನೆಗುದಿಗೆ ಬಿದ್ದಿದೆ. ಪ್ರಸ್ತುತ ಆರ್ಥಿಕ ನಿರ್ಬಂಧಗಳು ಜಾರಿಯಲ್ಲಿರುವ ಹಿನ್ನೆಲೆಯಲ್ಲಿ 2021ರ ಮಾರ್ಚ್‌ 6ರಂದು ತಳೆದಿದ್ದ ನಿಲುವಿಗೇ ಬದ್ಧವಾಗಿರಬೇಕು ಎಂದು ಆರ್ಥಿಕ ಇಲಾಖೆಯು ಪುನರುಚ್ಛರಿಸಿದೆ.

ವಾಯುಭಾರ ಕುಸಿತದಿಂದಾದ ಅಕಾಲಿಕ ಮಳೆ, ಪ್ರವಾಹಕ್ಕೆ ಈಗಾಗಲೇ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿರುವ ಹೊತ್ತಿನಲ್ಲಿಯೇ ಆರ್ಥಿಕ ಇಲಾಖೆಯು ಸದ್ಯ ನೀಡಿರುವ ಅಭಿಪ್ರಾಯವು ರೈತರ ಮೇಲೆ ಗದಾ ಪ್ರಹಾರ ಮಾಡಿದಂತಾಗಿದೆ. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಸಜ್ಜಾಗುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರಿಗೆ ಆರ್ಥಿಕ ಇಲಾಖೆಯು ತಳೆದಿರುವ ನಿಲುವು ತಲೆನೋವಾಗಿ ಪರಿಣಿಮಿಸುವ ಸಾಧ್ಯತೆಗಳಿವೆ.

ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ಸಹಕಾರ ಸಂಘಗಳ ನಿಬಂಧಕರು ಸಲ್ಲಿಸಿರುವ ಪ್ರಸ್ತಾವನೆ ಮತ್ತು ಆರ್ಥಿಕ ಇಲಾಖೆಯು 2021ರ ಆಗಸ್ಟ್‌ನಿಂದ ನವೆಂಬರ್‌ 29ರವರೆಗೆ ನಡೆಸಿರುವ ಪತ್ರ ವ್ಯವಹಾರ ಮತ್ತು ಟಿಪ್ಪಣಿ ಹಾಳೆ, ಈ ಸಂಬಂಧ ಸಹಕಾರ ಸಂಘಗಳ ನಿಬಂಧಕರು 2021ರ ನವೆಂಬರ್‌ 8ರಂದು ಬರೆದಿರುವ ಪತ್ರ ‘ದಿ ಫೈಲ್‌’ ಗೆ ಲಭ್ಯವಾಗಿದೆ.

1.00 ಲಕ್ಷ ರು. ಸಾಲ ಮನ್ನಾ ಯೋಜನೆಯನ್ನು 2021ರ ಮಾರ್ಚ್‌ ಅಂತ್ಯಕ್ಕೆ ಮುಕ್ತಾಯಗೊಳಿಸಬೇಕು ಎಂದು ಆರ್ಥಿಕ ಇಲಾಖೆ ಹೇಳಿತ್ತು. ಆದರೆ ಸಹಕಾರ ಸಂಘಗಳ ನಿಬಂಧಕರು 2021-22ನೇ ಆರ್ಥಿಕ ವರ್ಷದಲ್ಲಿಯೂ ಇದೇ ಯೋಜನೆಯಡಿಯಲ್ಲಿ ಹಲವು ಪ್ರಸ್ತಾವನೆಗಳನ್ನು ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಅನುದಾನ ಒದಗಿಸಿದ್ದೇ ಆದಲ್ಲಿ ಮುಂದಿನ ವರ್ಷಗಳಲ್ಲೂ ಅನುದಾನ ಒದಗಿಸಬೇಕಾದ ಅನಿವಾರ್ಯತೆ ಬರಲಿದೆ. ಹೀಗಾಗಿ 2021ರ ಮಾರ್ಚ್‌ 6ರಂದು ತಳೆದಿರುವ ನಿಲುವನ್ನೇ ಮುಂದುವರೆಸಬೇಕು ಎಂದು ಆರ್ಥಿಕ ಇಲಾಖೆಯು ಲೆಕ್ಕಾಚಾರವನ್ನು ಮುಂದಿಟ್ಟಿರುವುದು ಗೊತ್ತಾಗಿದೆ.

ಮಾರ್ಚ್‌ 6ರ ಟಿಪ್ಪಣಿಯಲ್ಲೇನಿತ್ತು?

ಸಹಕಾರ ಸಂಘಗಳ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಪರಿಶೀಲಿಸಿತ್ತು. 2020-21ನೇ ಸಾಲಿನ ಆಯವ್ಯಯದ ( ಲೆಕ್ಕ ಶೀರ್ಷಿಕೆ 2425-00-107-2-56 ರಡಿ)ಲ್ಲಿ 278.40 ಕೋಟಿ ಹಾಗೂ ಅಪೆಕ್ಸ್‌ ಬ್ಯಾಂಕ್‌ನಲ್ಲಿ 34.73 ಕೋಟಿ ಸೇರಿ ಸಾಲಮನ್ನಾ ಯೋಜನೆಯ ಹಸಿರು ಪಟ್ಟಿ ರೈತರ ಬಾಕಿ ಇರುವ 57,229 ರೈತರಿಗೆ ಸಾಲ ಮನ್ನಾ ಯೋಜನೆಗಾಗಿ 295.14 ಕೋಟಿ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯು ಸಹಮತಿ ವ್ಯಕ್ತಪಡಿಸಿತ್ತು. ಅಲ್ಲದೆ 1.00 ಲಕ್ಷ ಸಾಲ ಮನ್ನಾ ಯೋಜನೆಯನ್ನು ಇದೇ ಅರ್ಥಿಕ ವರ್ಷದಲ್ಲಿ ಮುಕ್ತಾಯಗೊಳಿಸಬೇಕು ಎಂದು ಸೂಚಿಸಿರುವುದು 2021ರ ಮಾರ್ಚ್‌ 6ರ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಿಂದ 9,146 ರೈತರಿಗೆ ಸಂಬಂಧಿಸಿದಂತೆ 4707.42 ಲಕ್ಷ ರು.ಗಳ ಸಾಲ ಮನ್ನಾ ಮಾಡಲು ಹಸಿರು ಪಟ್ಟಿ ನೀಡಿ ವರದಿ ಸಲ್ಲಿಸಿದೆ. 1.00 ಲಕ್ಷ ರು.ಗಳ ಸಾಲ ಮನ್ನಾ ಮತ್ತು 50,000 ರು. ಸಾಲ ಮನ್ನಾ ಯೋಜನೆಗೆ ಸೇರಿ ಒಟ್ಟು 361.67 ಕೋಟಿ ರು. ಗಳನ್ನು ಪೂರಕ ಅಂದಾಜಿನಲ್ಲಿ ಒದಗಿಸಲು ಸಹಕಾರ ಇಲಾಖೆಯು 2021ರ ಮಾರ್ಚ್‌ 6ರಂದು ಕೋರಿದ್ದ ಪ್ರಸ್ತಾವನೆಯನ್ನು ಆರ್ಥಿಕ ನಿರ್ಬಂಧಗಳ ಹಿನ್ನೆಲೆಯಲ್ಲಿ ತಿರಸ್ಕರಿಸಿದ್ದ ಆರ್ಥಿಕ ಇಲಾಖೆಗೆ ಸಹಕಾರ ಸಂಘಗಳ ನಿಬಂಧಕರು ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದನ್ನು ಒಪ್ಪಬೇಕೇ ಬೇಡವೇ ಎಂದು ಆರ್ಥಿಕ ಇಲಾಖೆಯು ಚರ್ಚಿಸುತ್ತಿದೆ.

‘ಅಲ್ಲದೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯು ಹಸಿರು ಪಟ್ಟಿಗಳನ್ನು ಬಿಡುಗಡೆಗೊಳಿಸುತ್ತಿದೆ. ಇದಕ್ಕೆ ಪೂರಕವೆಂಬಂತೆ ಸಹಕಾರ ಸಂಘಗಳ ನಿಬಂಧಕರ ಕಚೇರಿಯಿಂದಲೂ ಪ್ರಸ್ತಾವನೆಗಳು ಸಲ್ಲಿಕೆಯಾಗುತ್ತಿವೆ. ಮುಂಬರುವ ದಿನಗಳಲ್ಲಿ 18,965 ಸಂಖ್ಯೆಯ ರೈತರು ಹಸಿರು ಪಟ್ಟಿಗೆ ಸೇರುವುದರಿಂದ ಈ ಒಂದು ಪ್ರಕರಣದಲ್ಲಿ ಅನುದಾನ ಒದಗಿಸಿದ ಪಕ್ಷದಲ್ಲಿ ಬಹಳ ವರ್ಷಗಳವರೆಗೂ ಅನುದಾನ ಒದಗಿಸುತ್ತ ಇರಬೇಕಾಗುವುದು ಆದ್ದರಿಂದ 2021ರ ಮಾರ್ಚ್‌ 6ರಂದು ತಳೆದಿದ್ದ ನಿಲುವಿಗೇ ಬದ್ಧವಾಗಿರಬೇಕು,’ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯ ನೀಡಿದೆ.

ಸಹಕಾರ ಇಲಾಖೆಯು ಒಟ್ಟಾರೆ ಹಸಿರು ಪಟ್ಟಿ ರೈತರನ್ನು ಗುರುತಿಸುವ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಿ ಅಂತಿಮ ಪಟ್ಟಿ ತಯಾರಿಸಿದ ನಂತರ ಪರಿಷ್ಕೃತ ಅಂದಾಜು ಪಟ್ಟಿ ಸಲ್ಲಿಸುವವರೆಗೂ ಪ್ರಸ್ತಾವನೆಯನ್ನು ವಿಲೇ ಇಡಬೇಕು ಎಂದು 2021ರ ಅಕ್ಟೋಬರ್‌ನಲ್ಲಿ ಹೇಳಿದೆ.

1.00 ಲಕ್ಷ ರು.ಗಳ ಸಾಲ ಮನ್ನಾ ಯೋಜನೆಯಡಿಯಲ್ಲಿ 232.00 ಕೋಟಿ ಹಾಗೂ 50,000 ರು.ಗಳ ಸಾಲ ಮನ್ನಾ ಯೋಜನೆಗೆ 129.67 ಕೋಟಿ ಸೇರಿ ಒಟ್ಟು 361.67 ಕೋಟಿ ಅನುದಾನವನ್ನು ಆಯವ್ಯಯ ಪೂರಕ ಅಂದಾಜಿನಲ್ಲಿ ಅವಕಾಶ ಕಲ್ಪಿಸಬೇಕು ಎಂದು 2021ರ ನವೆಂಬರ್‌ 25ರಂದು ಮತ್ತೊಮ್ಮೆ ಕೋರಿದೆ. ಸದ್ಯ ಆದೇಶವು ಅನುಮೋದನೆಗಾಗಿ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮುಂದಿರುವುದು ತಿಳಿದು ಬಂದಿದೆ.

ಸದ್ಯಕ್ಕೆ 1.00 ಲಕ್ಷ ರು. ಸಾಲ ಮನ್ನಾ ಯೋಜನೆಗೆ 120. 43 ಕೋಟಿ, 47. 07 ಕೋಟಿ ಸೇರಿ ಒಟ್ಟು 167.50 ಕೋಟಿ ಬಿಡುಗಡೆ ಮಾಡಲು ಸಹಮತಿ ನೀಡಬೇಕು ಎಂದು ಸಹಕಾರ ಸಂಘಗಳ ನಿಬಂಧಕರು ಪ್ರಸ್ತಾವನೆ ಸಲ್ಲಿಸಿದ್ದಾರೆ.

2021-22ನೇ ಸಾಲಿನಲ್ಲಿಯೂ 21,857 ರೈತರಿಗೆ ಈಗಾಗಲೇ ಹಸಿರು ಪಟ್ಟಿ ನೀಡಲಾಗಿತ್ತು. ಇದಕ್ಕಾಗಿ 120.43 ಕೋಟಿ ರು. ಅನುದಾನ ಒದಗಿಸಬೇಕು ಎಂದು ಕೋರಿತ್ತು. ಅದೇ ರೀತಿ ಮುಂಬರುವ ದಿನಗಳಲ್ಲಿ 18,965 ಸಂಖ್ಯೆಯ ರೈತರಿಗೆ ಹಸಿರು ಪಟ್ಟಿ ದೊರೆಯಲಿದ್ದು, ಇದಕ್ಕಾಗಿ 111.57 ಕೋಟಿ ರು. ಅನುದಾನ ಒದಗಿಸಬೇಕು ಎಂದು ಅಂದಾಜಿಸಿತ್ತು. ಆದರೆ 2021-22ನೇ ಸಾಲಿನ ಆಯವ್ಯಯದಲ್ಲಿ (ಲೆಕ್ಕ ಶೀರ್ಷಿಕೆ 2425-00-107-2-56 ರಡಿ) ಯಾವುದೇ ಅನುದಾನ ಒದಗಿಸಿರಲಿಲ್ಲ.

ಕಳೆದ ಆರ್ಥಿಕ ವರ್ಷದಲ್ಲಿ ಎಲ್ಲಾ ಪೈಪ್‌ಲೈನ್‌ ಪ್ರಕರಣಗಳನ್ನು ತೆರವುಗೊಳಿಸಿ ಈ ಯೋಜನೆಯನ್ನು ಮುಕ್ತಾಯಗೊಳಿಸಲು ನಿರ್ದೇಶಿಸಲಾಗಿತ್ತು. ಅಲ್ಲದೆ ಹೆಚ್ಚುವರಿ ಅನುದಾನವನ್ನೂ ಒದಗಿಸಲಾಗಿತ್ತು. ಹೀಗಾಗಿ ಈ ಯೋಜನೆಯನ್ನು ಪುನರ್‌ ತೆರೆಯುವ ಹಾಗೂ ಈ ಪ್ರಕರಣಕ್ಕೆ ಹೆಚ್ಚುವರಿ ಅನುದಾನ ಒದಗಿಸುವ ಪ್ರಮೇಯವೇ ಇಲ್ಲ ಎಂದು ಆರ್ಥಿಕ ಇಲಾಖೆಯು 2021ರ ಮಾರ್ಚ್‌ 6ರಂದು ಹಿಂಬರಹ ನೀಡಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ 2021ರ ಜೂನ್‌ 25ರಂದು ಸಭೆ ನಡೆದಿತ್ತು. ಈ ಅವಧಿಯವರೆಗೆ 17,06, 049 ರೈತರಿಗೆ ಹಸಿರು ಪಟ್ಟಿ ನೀಡಲಾಗಿತ್ತು. 59,618 ರೈತರ ಅರ್ಹತೆ ಗುರುತಿಸಲು ಬಾಕಿ ಇತ್ತು. ಇದರಲ್ಲಿ 21,035 ರೈತರು ಅದೇ ದಿನಾಂಕದಂದು ಅರ್ಹತೆ ಹೊಂದಿದ್ದರು. ಈ ಪೈಕಿ ಒಂದು ಕುಟುಂಬಕ್ಕೆ 1 ಲಕ್ಷ ಹೊರತುಪಡಿಸಿ 10,000 ರೈತರು ಸಾಲ ಮನ್ನಾಗೆ ಅರ್ಹತೆ ಹೊಂದಿದ್ದರು ಎಂಬುದು ತಿಳಿದು ಬಂದಿದೆ.

2021ರ ಸೆ.7ರ ಹೊತ್ತಿಗೆ 20,697 ರೈತರ ಅರ್ಹತೆ ಗುರುತಿಸಲು ಬಾಕಿ ಇತ್ತು. ಇದರಲ್ಲಿ ಪ್ರಮುಖವಾಗಿ 12,237 ರೈತರ ಪಡಿತರ ಚೀಟಿಗಳು ರೈತರು ದಾಖಲೆ ಸಲ್ಲಿಸುವಾಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ದತ್ತಾಂಶಕ್ಕೆ ತಾಳೆ ಇತ್ತು. ಆದರೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಸಾಲ ಮನ್ನಾ ವಿಶೇಷ ಕೋಶವು ಈ ಪಡಿತರ ಚೀಟಿಗಳನ್ನು ತಂತ್ರಾಂಶದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಸರಿ ಇದೆ ಎಂದು ದೃಢೀಕರಿಸಿರಲಿಲ್ಲ.

ರೈತರು ಸಲ್ಲಿಸಿದ ಆಧಾರ್‌, ಪಡಿತರ ಚೀಟಿ ಮತ್ತು ಆರ್‌ಟಿಸಿಗಳು ತಂತ್ರಾಂಶದಲ್ಲಿನ ಕೆಲವು ನ್ಯೂನತೆಗಳಿಂದ ಸಂಬಂಧಿಸಿದ ಇಲಾಖೆಗಳ ದತ್ತಾಂಶದೊಂದಿಗೆ ತಾಳೆಯಾಗದ ಕಾರಣ ಸ್ವಯಂ ದೃಢೀಕರಿಸಿ ಇಂತಹ ಪ್ರಕರಣಗಳನ್ನು ಸರಿಪಡಿಸಲಾಗಿತ್ತು ಎಂದು ಗೊತ್ತಾಗಿದೆ.

Your generous support will help us remain independent and work without fear.

Latest News

Related Posts