ಬೆಂಗಳೂರು; ರಾಜ್ಯದಲ್ಲಿರುವ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ನಿರ್ವಹಿಸುತ್ತಿರುವ ಒಬ್ಬೊಬ್ಬ ಸನ್ನದು ಲೆಕ್ಕ ಪರಿಶೋಧಕರು 100ಕ್ಕಿಂತ ಹೆಚ್ಚಿನ ಸಂಖ್ಯೆಯ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ನಿರ್ವಹಿಸುತ್ತಿದ್ದಾರೆ. ಹೀಗಾಗಿಯೇ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಗುಣಮಟ್ಟ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂಬ ಸಂಗತಿ ಇದೀಗ ಬಹಿರಂಗವಾಗಿದೆ.
ಸಹಕಾರ ಸಂಘಗಳ ಲೆಕ್ಕಪರಿಶೋಧನೆಗಾಗಿ ಸಂಘಗಳ ವ್ಯಾಪ್ತಿ ಮಿತಿಗೊಳಿಸುವ ಸಂಬಂಧ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರು ನ.6ರಂದು ಹೊರಡಿಸಿರುವ ಸುತ್ತೋಲೆ ಬಗ್ಗೆ ಸಹಕಾರ ಕ್ಷೇತ್ರದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸನ್ನದು ಲೆಕ್ಕ ಪರಿಶೋಧಕರು 100ಕ್ಕಿಂತ ಹೆಚ್ಚಿನ ಸಂಖ್ಯೆ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ನಡೆಸುತ್ತಿರುವುದು ಮುನ್ನೆಲೆಗೆ ಬಂದಿದೆ.
ನಿರ್ದೇಶಕರ ಪ್ಯಾನಲ್‌ನಲ್ಲಿರುವ ಸನ್ನದು ಲೆಕ್ಕ ಪರಿಶೋಧಕರು ರಾಜ್ಯದಲ್ಲಿನ ಯಾವುದೇ ಜಿಲ್ಲೆಯಲ್ಲಿರುವ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ಕೈಗೊಳ್ಳಬಹುದು. ಈ ರೀತಿ ಹಲವು ಸನ್ನದು ಲೆಕ್ಕ ಪರಿಶೋಧಕರು ಬೇರೆ ಬೇರೆ ಜಿಲ್ಲೆಗಳಲ್ಲಿ ಲೆಕ್ಕ ಪರಿಶೋಧನೆ ಕಖೈಗೊಂಡಿರುವ ಸಹಕಾರ ಸಂಘಗಳ ಅಂಕಿ ಸಂಖ್ಯೆಗಳನ್ನು ಕ್ರೋಢೀಕರಿಸಿದಲ್ಲಿ ಇದು 200 ಸಹಕಾರ ಸಂಘಗಳಿಗಿಂತಲೂ ಅಧಿಕ ಸಂಖ್ಯೆಯಲ್ಲಿವೆ.
‘ರಾಜ್ಯದಲ್ಲಿ ಸಹಕಾರ ಸಂಘಗಳ ಲೆಕ್ಕಪರಿಶೋಧನೆ ನಿರ್ವಹಿಸುತ್ತಿರುವ ಸನ್ನದು ಲೆಕ್ಕಪರಿಶೋಧಕರು 100ಕ್ಕಿಂತ ಹೆಚ್ಚಿನ ಸಂಖ್ಯೆಯ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ನಡೆಸುತ್ತಿದ್ದು ಇದರಿಂದಾಗಿ ಲೆಕ್ಕಪರಿಶೋಧನಾ ಗುಣಮಟ್ಟ ಗಣನೀಯವಾಗಿ ಕಡಿಮೆಯಾಗುತ್ತದೆ,’ ಎಂದು ಇಲಾಖೆ ಅಭಿಪ್ರಾಯಿಸಿದೆ.
ಹೀಗಾಗಿಯೇ ಬಹುತೇಕ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ವರದಿಗಳು ವರ್ಷಾಂತ್ಯದವರೆಗೂ ಇಲಾಖೆಗೆ ಸಲ್ಲಿಕೆಯಾಗುತ್ತಿಲ್ಲ ಎಂದು ಸಹಕಾರ ಸಂಘಗಳ ಇಲಾಖೆಯು ಪ್ರತಿಪಾದಿಸಿದೆ. ಈ ಸಂಬಂಧ ಸಿದ್ಧಪಡಿಸಿರುವ ವಿವರಣಾತ್ಮಕ ಟಿಪ್ಪಣಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
![](https://the-file.in/wp-content/uploads/2021/12/audtiors-1-759x1024.jpg)
100ಕ್ಕೂ ಹೆಚ್ಚು ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ನಡೆಸಿರುವವರ ಪಟ್ಟಿ (2020-21)
ಡಿ ಟಿ ಪೂರ್ಣಚಂದ್ರ (ಮೈಸೂರು) – 126
ಸುಬ್ರಹ್ಮಣ್ಯ, ವೇಣುಗೋಪಾಲ್‌ರಾವ್ (ಮೈಸೂರು) – 153
ಎಚ್ ಆರ್ ಜಗನ್ನಾಥ್ (ಮೈಸೂರು)- 156
ಹರೀಶ್ ಗೌಡ (ಹಾಸನ) – 149
ಎಂ ಕೆ ಚಂದ್ರ (ಹಾಸನ) – 112
ಲಾವಣ್ಯ ಅಂಡ್ ಕೋ (ಹಾಸನ ) – 172
ಎನ್ ಬಿ ಮಠದ (ಬೆಳಗಾವಿ) – 183
ಸೈದಪ್ಪಾ ಗದಾಡಿ (ಬೆಳಗಾವಿ) – 186
ವಿ ಐ ಕರಾಡಕರ್ (ಬೆಳಗಾವಿ) – 137
ಜಿ ಎ ಮೆಕ್ಕಳಕಿ (ಬೆಳಗಾವಿ) – 128
ಅಶೋಕ್ ಸಂಕಣ್ಣನವರ್ (ಬೆಳಗಾವಿ) – 157
ಡಿ ವಿ ಡಾಗಾ ಅಂಡ್ ಕೋ (ಬಾಗಲಕೋಟೆ) -151
ಪ್ರವೀಣ್ ಕುಮಾರ್ (ಮಂಡ್ಯ) -167
ವಿಜಯಕುಮಾರ್ (ಮಂಡ್ಯ) – 164
ಕೆ ಗೋಪಾಲಕೃಷ್ಣ (ಬಳ್ಳಾರಿ ) 110
ವಿಶ್ವನಾಥ್ ಅಂಡ್ ಕೋ (ತುಮಕೂರು) 115
ಲೆಕ್ಕಪರಿಶೋಧನೆಗಾಗಿ ಸಂಘಗಳ ವ್ಯಾಪ್ತಿ ಮಿತಿಗೊಳಿಸುವ ಸಂಬಂಧ ಹೊರಡಿಸಿರುವ ಸುತ್ತೋಲೆಯನ್ನು ಸಮರ್ಥಿಸಿಕೊಂಡಿರುವ ಇಲಾಖೆಯು ಸುತ್ತೋಲೆ ಕಾರಣದಿಂದ ಲೆಕ್ಕ ಪರಿಶೋಧನಾ ಪ್ರಗತಿಯಲ್ಲಿ ಕುಂಠಿತವಾಗುವುದಿಲ್ಲ ಎಂದು ಪ್ರತಿಪಾದಿಸಿದೆ.
ಹೆಚ್ಚಿನ ಲಭ್ಯ ಇರುವ ಶಾಸನಬದ್ಧ ಲೆಕ್ಕ ಪರಿಶೋಧಕರನ್ನು ಬಳಸಿಕೊಂಡು ಹೆಚ್ಚಿನ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆಯನ್ನು ಗುಣಾತ್ಮಕವಾಗಿ ನಿರ್ವಹಿಸುವುದೇ ಹೊರತು ಆಯ್ಕೆಗೆ ಸಂಬಂಧಿಸಿದಂತೆ ಸಹಕಾರ ಸಂಘಗಳಿಗೆ ಮಿತಿಗೊಳಿಸಿಲ್ಲ ಎಂಬುದು ಇಲಾಖೆಯ ಅಭಿಪ್ರಾಯ.
‘ಸಹಕಾರ ಸಂಘಗಳ ಲೆಕ್ಕ ಪರಿಶೋಧನೆಗೂ ಮಾನವ ದಿನಗಳನ್ನು ನಿಗದಿಪಡಿಸಲಾಗಿದೆ. ಕೆಲಸ ನಿರ್ವಹಿಸಲು ಸಮಯದ ನಿಗದಿ ಅವೈಜ್ಞಾನಿಕವೆಂದಾದಲ್ಲಿ ಕೆಲವು ಸನ್ನದು ಲೆಕ್ಕ ಪರಿಶೋಧಕರು ಒಂದು ದಿನಕ್ಕೆ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ನಿರ್ವಹಿಸಿರುವುದು ವೈಜ್ಞಾನಿಕವೇ,’ ಎಂದು ಇಲಾಖೆಯು ಪ್ರಶ್ನಿಸಿದೆ.
![](https://the-file.in/wp-content/uploads/2021/12/auditors-3-783x1024.jpg)
ಅಲ್ಲದೆ ಒಬ್ಬ ಸನ್ನದು ಲೆಕ್ಕ ಪರಿಶೋಧಕರಿಂದ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ನಿರ್ವಹಿಸಲು 03 ದಿನಗಳನ್ನು ನಿಗದಿಪಡಿಸಿರುವುದು ಸಮಂಜಸವಾಗಿದೆ ಎಂಬ ವಾದವನ್ನು ಮುಂದೊಡ್ಡಿದೆ. ಇದೇ ವಾದವನ್ನು ಸಚಿವ ಎಸ್ ಟಿ ಸೋಮಶೇಖರ್ ಕೂಡ ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.
![](https://the-file.in/wp-content/uploads/2021/12/audtiotrs-2-771x1024.jpg)
ಕನಿಷ್ಠ ವ್ಯವಹಾರವಿರುವ ಒಂದು ಸಹಕಾರ ಸಂಘಕ್ಕೂ ಸಹ 03 ದಿನಗಳ ಅಗತ್ಯವಿರುತ್ತದೆ. ಸನ್ನದು ಲೆಕ್ಕ ಪರಿಶೋಧಕರ ಸಹಾಯಕರು ಯಾವುದೇ ಅನುಭವವಿಲ್ಲದೇ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆಯನ್ನೂ ಅವರೇ ನಿರ್ವಹಿಸಿ ಆ ಅಧಾರದಲ್ಲಿ ಸನ್ನದು ಲೆಕ್ಕ ಪರಿಶೋಧಕರು ವರದಿ ಮತ್ತು ಹಣಕಾಸು ತ:ಖ್ತೆಗಳಿಗೆ ಸಹಿ ಮಾಡಿದಲ್ಲಿ ಅದು ದೋಷಪೂರ್ಣ ಲೆಕ್ಕ ಪರಿಶೋಧನೆಯಾಗುತ್ತದೆ. ಈ ಕಾರಣದಿಂದಾಗಿ ಬಹಳಷ್ಟು ಸಹಕಾರ ಸಂಘಗಳಲ್ಲಿ ದುರುಪಯೋಗ, ಅವ್ಯವಹಾರ ಕಾಲಕಾಲಕ್ಕೆ ಲೆಕ್ಕ ಪರಿಶೋಧನೆಯಲ್ಲಿ ಪತ್ತೆಯಾಗುತ್ತಿಲ್ಲ ಎಂದು ಇಲಾಖೆಯು ಅಭಿಪ್ರಾಯಿಸಿದೆ.