ಅನುಮೋದನೆಯಿಲ್ಲದೆಯೇ ವೈದ್ಯಕೀಯ ಸಂಸ್ಥೆಗಳಲ್ಲಿ ಹೆಚ್ಚುವರಿ ವೆಚ್ಚ

ಬೆಂಗಳೂರು; ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಸರ್ಕಾರಿ ವೈದ್ಯಕೀಯ ಸಂಸ್ಥೆಗಳು ಸಾಮಾನ್ಯ ವೆಚ್ಚಗಳಿಗಾಗಿ ಆಯವ್ಯಯದಲ್ಲಿ ನಿಗದಿಪಡಿಸಿದ್ದ ಅಂದಾಜು ಮಿತಿಗಿಂತಲೂ ಗಣನೀಯ ಪ್ರಮಾಣದಲ್ಲಿ ವೆಚ್ಚ ಮಾಡುತ್ತಿವೆ. ಸರ್ಕಾರದ ಅನುಮೋದನೆ ಇಲ್ಲದೆಯೇ ಹೆಚ್ಚುವರಿ ವೆಚ್ಚ ಮಾಡುತ್ತಿದ್ದರೂ ವೈದ್ಯಕೀಯ ಶಿಕ್ಷಣ ಇಲಾಖೆಯು ಇದುವರೆಗೂ ಯಾರೊಬ್ಬರ ಮೇಲೂ ಶಿಸ್ತು ಕ್ರಮವನ್ನು ಜರುಗಿಸಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.

ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಸ್ವಾಯತ್ತ ಸಂಸ್ಥೆಗಳು ಹಾಗೂ ಇದಕ್ಕೆ ಹೊಂದಿಕೊಂಡಿರುವ ಆಸ್ಪತ್ರೆಗಳ ಸಿಬ್ಬಂದಿ ವೇತನ, ಭತ್ಯೆ, ಕಚೇರಿ ವೆಚ್ಚ, ನಿರ್ವಹಣೆ ಹಾಗೂ ಇನ್ನಿತರೆ ವೆಚ್ಚಗಳಿಗಾಗಿ ಸೆಪ್ಟಂಬರ್‌-ಅಕ್ಟೋಬರ್‌ ತಿಂಗಳ ಅನುದಾನವನ್ನು ಬಿಡುಗಡೆ ಮಾಡಿ ಹೊರಡಿಸಿರುವ ಆದೇಶದಲ್ಲಿ ಸರ್ಕಾರದ ಅನುಮೋದನೆ ಇಲ್ಲದೆಯೇ ಹೆಚ್ಚುವರಿ ವೆಚ್ಚ ಮಾಡುತ್ತಿರುವುದನ್ನು ಪ್ರಸ್ತಾಪಿಸಲಾಗಿದೆ. 2021ರ ನವೆಂಬರ್‌ 25ರಂದು ಹೊರಡಿಸಿರುವ ಆದೇಶದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ಕೆಲವೊಂದು ಸಂಸ್ಥೆಗಳು ಸಾಮಾನ್ಯ ವೆಚ್ಚಗಳಿಗಾಗಿ ಗುತ್ತಿಗೆ-ಹೊರಗುತ್ತಿಗೆ ನೌಕರರ ವೇತನ ಪಾವತಿಗಾಗಿ (221–115) ಆಯವ್ಯಯದಲ್ಲಿ ಒದಗಿಸಲಾದ ಅಂದಾಜು ಮಿತಿಗಿಂತಲೂ ಗಣನೀಯ ಪ್ರಮಾಣದ್ಲಿ ಹೆಚ್ಚಿನ ವೆಚ್ಚ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಈ ರೀತಿಯ ವೆಚ್ಚ ಮಾಡುತ್ತಿರುವುದರಿಂದ ಸರ್ಕಾರವು ಹೆಚ್ಚುವರಿ ವೆಚ್ಚ ಭರಿಸಲು ಸಾಧ್ಯವಾಗದೇ ಪದೇ ಪದೇ ಆರ್ಥಿಕ ಇಲಾಖೆಯ ತೀವ್ರ ಆಕ್ಷೇಪಣೆಗೆ ಒಳಪಡುವಂತಾಗಿದೆ. ಹೆಚ್ಚುವರಿ ವೆಚ್ಚದ ಅಗತ್ಯವಿದ್ದಲ್ಲಿ ಮೊದಲಿಗೆ ಸರ್ಕಾರದ ಹಾಗೂ ಆರ್ಥಿಕ ಇಲಾಖೆ ಅನುಮೋದನೆ ಪಡೆದ ನಂತರವೇ ಹೆಚ್ಚುವರಿ ವೆಚ್ಚ ಮಾಡಲು ಕ್ರಮ ವಹಿಸಬೇಕು. ತಪ್ಪಿದಲ್ಲಿ ಇದಕ್ಕೆ ಸಂಸ್ಥೆಯ ಮುಖ್ಯಸ್ಥರನ್ನೇ ಜವಾಬ್ದಾರರನ್ನಾಗಿಸಿ ಶಿಸ್ತು ಕ್ರಮ ಕೈಗೊಳ್ಳಲು ಕ್ರಮವಹಿಸಲಾಗುವುದು,’ ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ.

ಅನುದಾನ ಬಿಡುಗಡೆ ವಿವರ

ಪಿಎಂಎಸ್‌ಎಸ್‌ವೈ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ- 2.30 ಕೋಟಿ(ವೇತನ) 20.33 ಲಕ್ಷ (ಪಿಂಚಣಿ)


ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ- 39.62 ಕೋಟಿ (ವೇತನ)- 2.01 ಕೋಟಿ (ಪಿಂಚಣಿ


ಬೌರಿಂಗ್‌, ಲೇಡಿ ಕರ್ಜನ್‌ ವೈದ್ಯಕೀಯ ಮಹಾವಿದ್ಯಾಲಯ- 4.21 ಕೋಟಿ (ವೇತನ)- 18.31 ಲಕ್ಷ (ಪಿಂಚಣಿ)


ಎಸ್‌ಡಿಎಸ್‌ ಕ್ಷಯ ರೋಗ ಸಂಶೋಧನಾ ಕೇಂದ್ರ ಮತ್ತು ರಾಜೀವ್‌ಗಾಂಧಿ ಎದೆರೋಗಗಳ ಸಂಸ್ಥೆ – 1.34 ಕೋಟಿ (ವೇತನ) 8.50 ಲಕ್ಷ (ಪಿಂಚಣಿ)


ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ – 11.24 ಕೋಟಿ (ವೇತನ)- 74.83 ಲಕ್ಷ (ವಿಶ್ರಾಂತಿ ವೇತನ)


ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ – 12.16 ಕೋಟಿ (ವೇತನ) – 96.65 ಲಕ್ಷ (ವಿಶ್ರಾಂತಿ ವೇತನ)


ಕರ್ನಾಟಕ ಇನ್ಸಿಟಿಟ್ಯೂಟ್‌ ಆಫ್‌ ಎಂಡೋಕ್ರೈನಾಲಜಿ ಅಂಡ್‌ ರೀಸರ್ಚ್‌ ಸಂಸ್ಥೆ- 4.33 ಲಕ್ಷ (ವೇತನ)


ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ – 5.77 ಕೋಟಿ (ವೇತನ)- 45.16 ಲಕ್ಷ (ವಿಶ್ರಾಂತಿ ವೇತನ)


ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ – 16.46 ಕೋಟಿ (ವೇತನ) – 4.50 ಕೋಟಿ (ವಿಶ್ರಾಂತಿ ವೇತನ)


ಫೆರಿಫೆರಲ್‌ ಕ್ಯಾನ್ಸರ್‌ ಕೇಂದ್ರ – 53.33 ಲಕ್ಷ (ವೇತನ)- 13.50 ಲಕ್ಷ (ವಿಶ್ರಾಂತಿ ವೇತನ)


ಸರ್ಕಾರಿ ದಂತ ವೈದ್ಯಕೀಯ ಕಾಲೇಜು – 4.61 ಕೋಟಿ (ವೇತನ) – 18.02 ಲಕ್ಷ (ಪಿಂಚಣಿ)


ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ – 9.09 ಕೋಟಿ (ವೇತನ) 85.33 ಲಕ್ಷ ( ಪಿಂಚಣಿ)


ರಾಜೀವ್‌ಗಾಂಧಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ (ಓಪೆಕ್‌) – 43.83 ಲಕ್ಷ (ವೇತನ), 4.16 ಲಕ್ಷ (ಪಿಂಚಣಿ)


ಗ್ಯಾಸ್ಟ್ರೋ ಎಂಟ್ರಾಲಜಿ ಸೈನ್ಸ್‌ಸ್‌ – 34.33 ಲಕ್ಷ (ವೇತನ),


ಧಾರವಾಡ ಮಾನಸಿಕ ಆರೋಗ್ಯ ಸಂಸ್ಥೆ (ಡಿಮ್ಹಾನ್ಸ್‌) – 2.29 ಕೋಟಿ (ವೇತನ), 18.78ಲಕ್ಷ (ಪಿಂಚಣಿ)


ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ಉಪ ಯೋಜನೆ ಅಡಿಯಲ್ಲಿಯೂ ಅನುದಾನ ಬಿಡುಗಡೆ ಮಾಡಲಾಗಿದೆ. ವೈದ್ಯಕೀಯ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌, ಸ್ಟೆತೋಸ್ಕೋಪ್‌, ವೈದ್ಯಕೀಯ ಪುಸ್ತಕಗಳ ಖರೀದಿ, ಭೋಜನಾ ವೆಚ್ಚ, ರೋಗಿಗಳಿಗೆ ಉಚಿತ ಚಿಕಿತ್ಸೆ, ಶುಲ್ಕ ಮರುಪಾವತಿಗೂ ಅನುದಾನ ಬಿಡುಗಡೆ ಮಾಡಲಾಗಿದೆ.

ಒದಗಿಸಿರುವ ಅನುದಾನಕ್ಕಿಂತಲೂ ಹೆಚ್ಚುವರಿಯಾಗಿ ವೆಚ್ಚ ಮಾಡುತ್ತಿದ್ದರೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್‌ ಅವರು ಗಂಭೀರವಾಗಿ ಪರಿಗಣಿಸಿಲ್ಲ. ಸರ್ಕಾರದ ಅನುಮೋದನೆಯಿಲ್ಲದೇಯೇ ಹೆಚ್ಚುವರಿ ವೆಚ್ಚ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದ ಕಾರಣ ಇದು ಭ್ರಷ್ಟಾಚಾರಕ್ಕೆ ದಾರಿಮಾಡಿಕೊಡುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

SUPPORT THE FILE

Latest News

Related Posts