ಇಂದ್ರಕಲಾ ಪ್ರಕರಣ; ಸುಪ್ರೀಂ ತೀರ್ಪನ್ನೂ ನಿರ್ಲಕ್ಷ್ಯಿಸಿ ಸಿಬಿಐಗೆ ವರ್ಗಾಯಿಸಿದ್ದೇಕೆ?

ಬೆಂಗಳೂರು; ಸಂವಿಧಾನಾತ್ಮಕ ಸಂಸ್ಥೆಗಳಲ್ಲಿನ ಉನ್ನತ ಹುದ್ದೆಗಳನ್ನು ಪಡೆಯುವ ಸಲುವಾಗಿ 8.27 ಕೋಟಿ ರುಪಾಯಿಯನ್ನು ಯುವರಾಜಸ್ವಾಮಿ ಎಂಬಾತನಿಗೆ ಲಂಚದ ರೂಪದಲ್ಲಿ ನೀಡಿದ್ದಾರೆ ಎಂಬ ಆರೋಪಕ್ಕೆ ಒಳಗಾಗಿರುವ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಇಂದ್ರಕಲಾ ಮತ್ತು ಎನಿತ್‌ ಕುಮಾರ್‌ ಎಂ ಸಿ ಅವರ ವಿರುದ್ಧ ಸಲ್ಲಿಕೆಯಾಗಿದ್ದ ದೂರಿನ ಆಧಾರದ ಮೇಲೆ ಎಫ್‌ಐಆರ್‌ ದಾಖಲಿಸದೆಯೇ ಸಿಬಿಐಗೆ ವರ್ಗಾಯಿಸಿರುವ ಭ್ರಷ್ಟಾಚಾರ ನಿಗ್ರಹ ದಳವು ತನ್ನ ಜವಾಬ್ದಾರಿಯಿಂದ ಪಲಾಯನಗೈದಿದೆ ಎಂಬ ಗುರುತರವಾದ ಆರೋಪಕ್ಕೆ ಗುರಿಯಾಗಿದೆ.

ಇಂದ್ರಕಲಾ ಮತ್ತು ಎನಿತ್‌ಕುಮಾರ್‌ ಅವರ ವಿರುದ್ಧ ಭ್ರಷ್ಟಾಚಾರ ತಡೆ (ತಿದ್ದುಪಡಿ) ಕಾಯ್ದೆ 2018ರ ಕಲಂ 8ರ ಅನ್ವಯ ಕ್ರಮ ಕೈಗೊಳ್ಳುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದ್ದ ಜನಾಧಿಕಾರ ಸಂಘರ್ಷ ಸಮಿತಿಯು ಈ ಆರೋಪವನ್ನು ಮಾಡಿದೆ. ಈ ಸಂಬಂಧ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಈ ಎರಡೂ ಪ್ರಕರಣಗಳು ಭ್ರಷ್ಟಾಚಾರ ನಿಗ್ರಹ ದಳದ ವ್ಯಾಪ್ತಿಯಲ್ಲಿ ಇದ್ದರೂ ಸಿಬಿಐಗೆ ವರ್ಗಾಯಿಸುವ ಮೂಲಕ ತಮ್ಮ ಜವಾಬ್ದಾರಿಯಿಂದ ಪಲಾಯನಗೈದಿದೆ. ಇವರಿಬ್ಬರ ಮೇಲೆ ಎಫ್‌ಐಆರ್‌ ದಾಖಲಿಸಿ ಮತ್ತು ವಿಚಾರಣೆ ನಡೆಸಲು ಸ್ಪಷ್ಟ ಕಾರಣಗಳು ಇದ್ದರೂ ತೆರೆಮರೆಯಲ್ಲಿ ಯಾವ ಪ್ರಬಲ ಶಕ್ತಿಯು ಎಸಿಬಿ ಅಧಿಕಾರಿಗಳನ್ನು ಎಫ್‌ಐಆರ್‌ ದಾಖಲಿಸಿ ವಿಚಾರಣೆ ನಡೆಸಲು ತಡೆಯುತ್ತಿದೆ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ ಪ್ರಶ್ನಿಸಿದೆ.

‘ದೂರುಗಳನ್ನು ಎಸಿಬಿಯಿಂದ ಸಿಬಿಐಗೆ ವರ್ಗಾಯಿಸಿರುವುದು ಕಾನೂನಿನ ಅನ್ವಯ ಸಮರ್ಥನೀಯವಲ್ಲ. ಎಸಿಬಿಯ ಪೋಲಿಸ್ ಅಧೀಕ್ಷಕರು ಹಾಗೂ ಕಾನೂನು ಸಲಹೆಗಾರರ ಜೊತೆ ನಮ್ಮ ಭೇಟಿಯ ಸಂದರ್ಭದಲ್ಲಿ ಎ.ಸಿ.ಬಿ.ಯ ಕಾರ್ಯವ್ಯಾಪ್ತಿಯ ಬಗ್ಗೆ ಗಹನವಾದ ಚರ್ಚೆ ನಡೆಸಲಾಗಿತ್ತು. ಕೇಂದ್ರದ ಹುದ್ದೆ ಹಾಗೂ ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷರ ಹುದ್ದೆಗಾಗಿ ಲಂಚ ನೀಡಲಾಗಿದೆ ಎಂಬ ಆರೋಪವಿರುವುದರಿಂದ ಈ ದೂರುಗಳು ಸಿ.ಬಿ.ಐ. ವ್ಯಾಪ್ತಿಗೆ ಬರುತ್ತವೆ ಎಂದು ಎ.ಸಿ.ಬಿ. ಅಧಿಕಾರಿಗಳು ನಿಲುವು ತಳೆದಿದ್ದರು, ‘ ಎಂದು ಪರಿಷತ್‌ ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದೆ.

ಎ.ಸಿ.ಶರ್ಮ v/s ದೆಹಲಿ ಆಡಳಿತ (ಎಐಆರ್ 1973 ಎಸ್‍ಸಿ 913, ಪುಟ 915-20, 1973 ಸಿಆರ್‍ಎಲ್‍ಜೆ 902) ಸಂಪೂರ್ಣ ಪ್ರತಿಯನ್ನು ಎ.ಸಿ.ಬಿ.ಯ ಪೋಲಿಸ್ ಅಧೀಕ್ಷಕರು ಹಾಗೂ ಕಾನೂನು ಸಲಹೆಗಾರರಿಗೆ ಜನಾಧಿಕಾರ ಸಂಘರ್ಷ ಪರಿಷತ್‌ ನೀಡಿತ್ತು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ತೀರ್ಪಿನ ಸಂಬಂಧಿಸಿದಂತೆ ಈ ಉಪವಿಭಾಗವು ಉಲ್ಲೇಖಿತ ಅಪರಾಧಗಳನ್ನೊಳಗೊಂಡ ವಿಚಾರಣೆಗಳನ್ನು ಮಾಡಲು ನಿಯತ ಪೋಲಿಸ್ ಬಲವನ್ನು ಹೊರತುಪಡಿಸಿ ಡಿ.ಎಸ್.ಪಿ.ಎ.ಗೆ ಏಕೈಕ ಅಧಿಕಾರ ಕೊಟ್ಟಿಲ್ಲ ಎಂಬ ಅಂಶವಿದೆ. (11ನೇ ಪುಟ): (“This sub-section, therefore, does not confer sole power on D.S.P.E. to investigate into the offences mentioned therein to the complete exclusion of the regular police force.”)

ಈ ಕುರಿತು ಪೋಲಿಸ್ ಅಧೀಕ್ಷಕರು ಮತ್ತು ಕಾನೂನು ಸಲಹೆಗಾರರು ಜೊತೆಯ ಚರ್ಚೆಯ ನಂತರ ಈ ಎರಡು ದೂರುಗಳು ಸಹ ಅಂದರೆ ಇಂದ್ರಕಲಾ ಮತ್ತು ಎನಿತ್ ಕುಮಾರ್ ಎಂ.ಸಿ.ಯ ವಿರುದ್ಧ ದೂರುಗಳ ವ್ಯಾಪ್ತಿ ಎ.ಸಿ.ಬಿ.ಗೆ ಬರುವುದೆಂಬ ವಿಷಯದಲ್ಲಿ ಅವರಿಬ್ಬರೂ ತಕ್ಕ ಮಟ್ಟಿಗೆ ಸಹಮತವನ್ನು ಹೊಂದಿದ್ದರು. ಆದರೆ ನಂತರದಲ್ಲಿ ಈ ಪ್ರಕರಣಗಳು ತಮ್ಮ ಕಾರ್ಯವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣವನ್ನು ಮುಂದೊಡ್ಡಿ ಸಿ.ಬಿ.ಐ.ಗೆ ವರ್ಗಾಯಿಸಲಾಗಿದೆ ಎಂಬ ಹಿಂಬರಹವನ್ನು ಎ.ಸಿ.ಬಿ. ಅಧಿಕಾರಿಗಳು ಕಳುಹಿಸಿರುವುದು ಈ ಇಬ್ಬರು ಅಧಿಕಾರಿಗಳ ಉದ್ದೇಶ ಹಾಗೂ ಕಾರ್ಯವೈಖರಿಯನ್ನು ಪ್ರಶ್ನಿಸುವಂತಾಗಿದೆ ಎಂದು ಪರಿಷತ್‌ ತನ್ನ ಹೇಳಿಕೆಯಲ್ಲಿ ವಿವರಿಸಿದೆ.

ಅಲ್ಲದೆ ಎ.ಸಿ.ಶರ್ಮಾ ಪ್ರಕರಣದ ಕುರಿತು ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪನ್ನು ಹಲವು ರಾಜ್ಯಗಳ ಉಚ್ಚ ನ್ಯಾಯಾಲಯದ ತೀರ್ಪುಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗೂ ಅಳವಡಿಸಿಕೊಳ್ಳಲಾಗಿದೆ. ಅನೇಕ ರಾಜ್ಯ ಭ್ರಷ್ಟಾಚಾರ ನಿಗ್ರಹದ ಸಂಸ್ಥೆಗಳು ಈ ತೀರ್ಪನ್ನು ಅನುಸರಿಸುತ್ತಿವೆ. ಆಶ್ಚರ್ಯವೆಂದರೆ, ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳವು ಮಾತ್ರ ಸರ್ವೋಚ್ಚ ನ್ಯಾಯಾಲಯ ಉಲ್ಲೇಖಿಸಿದ ತೀರ್ಪಿನ ಬಗ್ಗೆ ಅರಿವಿಲ್ಲ. ಹಾಗೂ ಇಂತಹ ಪ್ರಕರಣಗಳಲ್ಲಿ ತನ್ನ ಕಾರ್ಯಾಚರಣೆಯಲ್ಲಿ ಅಳವಡಿಸಿಕೊಳ್ಳಲು ಒಲವು ತೋರುತ್ತಿಲ್ಲ ಎಂಬುದು ಇಂದ್ರಕಲಾ ಮತ್ತು ಎನಿತ್‌ಕುಮಾರ್‌ ಪ್ರಕರಣದಿಂದ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪರಿಷತ್‌ ಆರೋಪಿಸಿದೆ.

ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಹಲವಾರು ರಾಜ್ಯಗಳ ಉಚ್ಚ ನ್ಯಾಯಾಲಯಗಳು ತಮ್ಮ ತೀರ್ಪುಗಳಲ್ಲಿ ಉಲ್ಲೇಖಿಸಿ ಅಳವಡಿಸಿಕೊಳ್ಳಲಾಗಿರುವ ಕೆಲ ತೀರ್ಪುಗಳನ್ನು ಪರಿಷತ್‌ ಹೇಳಿಕೆಯಲ್ಲಿ ಉದ್ಧರಿಸಿದೆ.

ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯವು ಸುಧಾ ಗುಪ್ತ ವಿರುದ್ಧ ಹಿಮಾಚಲ ಪ್ರದೇಶ ರಾಜ್ಯ, 4 ಜನವರಿ 2020, ಸಿ.ಎಮ್‍ಎಮ್‍ಒ ಸಂ. 307/2016ರಲ್ಲಿ ನೀಡಿರುವ ತೀರ್ಪು, ಮಧ್ಯ ಪ್ರದೇಶದ ಉಚ್ಚ ನ್ಯಾಯಾಲಯವು ರಾಮಕುಮಾರ್ ವಿಶ್ವಕರ್ಮ ವಿರುದ್ಧ ಮಧ್ಯಪ್ರದೇಶ ರಾಜ್ಯ, 1 ಆಗಸ್ಟು 2019. ಎಮ್‍ಸಿಆರ್‍ಸಿ ಸಂ: 36179/2018ರಲ್ಲಿ ನೀಡಿರುವ ತೀರ್ಫು, ಅಶೋಕ ಕುಮಾರ್ ಕಿರ್ತಿವಾರ್ ಮತ್ತು ಇನ್ನೊಬ್ಬ ವಿರುದ್ಧ ಮಧ್ಯಪ್ರದೇಶ ರಾಜ್ಯ, 7 ಮಾರ್ಚಿ, 2001 ರಲ್ಲಿ ತೀರ್ಪುನೀಡಿದೆ. (2001 ಕ್ರಿಎಲ್‍ಜೆ 2785, 2001 (3) ಎಂಪಿಎಚ್‍ಟಿ 286.)

ಅದೇ ರೀತಿ ಮದ್ರಾಸ್‌ನ ಉಚ್ಚ ನ್ಯಾಯಾಲಯವು ಎಂ.ಅಸೋಕನ್ ವಿರುದ್ಧ ಆರಕ್ಷಕ ನಿರೀಕ್ಷಕರಿಂದ ಪ್ರತಿನಿಧಿಸಲಾದ ರಾಜ್ಯ, (21 ಆಗಸ್ಟ್‌, 2015, ಸಿಆರ್‍ಎಲ್.ಒ.ಪಿ.ಸಂ. 21037/2015.) ಎ. ಅಶೋಕ ಆನಂದ ವಿರುದ್ಧ ಸಿಬಿಐ ನಿಂದ ಪ್ರತಿನಿಧಿಸಲಾದ ರಾಜ್ಯ (29 ಅಕ್ಟೋಬರ್, 2014, ಸಿಆರ್‍ಎಲ್.ಒ.ಪಿ.ಸಂ. 22500/2014.) ದೆಹಲಿ ಉಚ್ಚ ನ್ಯಾಯಾಲಯವು ಅನಿಲ್ ಕುಮಾರ್ ವಿರುದ್ಧ ಜಿಎನ್‍ಸಿಟಿ, ದೆಹಲಿ (20 ಮೇ, 2015, ಜಾಮೀನು ಅರ್ಜಿ 878/2015) ನೀಡಿರುವ ತೀರ್ಪುಗಳನ್ನು ಪರಿಷತ್‌ ನೀಡಿರುವ ಹೇಳಿಕೆಯಲ್ಲಿ ವಿವರಿಸಿದೆ.

ಒಬ್ಬ ಹಾಲಿ ನ್ಯಾಯಾಧೀಶರಿಗೆ ಅನ್ವಯವಾಗುವ ನ್ಯಾಯಾಧೀಶರ (ರಕ್ಷಣೆ) ಕಾಯ್ದೆ, 1985ರನ್ನು ನಿವೃತ್ತ ನ್ಯಾಯಾಧೀಶೆಯಾದ ಇಂದ್ರಕಲಾರವರಿಗೂ ಅನ್ವಯವಾಗುತ್ತದೆ ಎಂದು ಎಸಿಬಿ ಅಧಿಕಾರಿಗಳು ಸಮರ್ಥಿಸಿಕೊಂಡಿರುವುದು ನಿಜಕ್ಕೂ ದಿಗ್ಭ್ರಮೆ ಉಂಟು ಮಾಡಿದೆ. ಈ ಕಾನೂನು ಒಬ್ಬ ನ್ಯಾಯಾಧೀಶರ ಕಾರ್ಯದಲ್ಲಿ ನಡೆದ ಕೃತ್ಯಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ತಕ್ಷಣವೇ ವಿವರಿಸಿದರೂ ಸಹ ಒಬ್ಬ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾದ ಮಾತ್ರಕ್ಕೆ ಇಂದ್ರಕಲಾರವರ ಮೇಲೆ ಎಫ್‌ಐಆರ್‌ ದಾಖಲಿಸಲು ಹಿಂದೇಟು ಹಾಕಿದ್ದಾರೆ.

ಸಿ.ಬಿ.ಐ. ಹಾಗೂ ರಾಜ್ಯ ಪೋಲಿಸ್‍ನ ಕಾರ್ಯವ್ಯಾಪ್ತಿಯ ಬಗೆಗಿನ ಸಿ.ಬಿ.ಐ. ಮಾನ್ಯುಲ್‍ನ ಸಂಬಂಧಿತ ಭಾಗವನ್ನು ಹೇಳಿಕೆಯಲ್ಲಿ ಪ್ರಸ್ತುತಪಡಿಸಿದೆ.

1.10 ಕೇಂದ್ರ ಸರ್ಕಾರವು ಸೂಚಿಸಿದ ಎಲ್ಲಾ ಅಪರಾಧಗಳನ್ನು ತನಿಖೆ ಮಾಡಲು ಡಿಎಸ್‍ಪಿಇ ಕಾಯ್ದೆ, 1946ರ ಕಲಂ 3ರ ಪ್ರಕಾರ ಸಿ.ಬಿ.ಐ./ಡಿಎಸ್‍ಪಿಇಗೆ ಅಧಿಕಾರ ನೀಡಿದ್ದರೂ ಸಹ, ತನ್ನ ಸೀಮಿತ ಸಂಪನ್ಮೂಲಗಳನ್ನು ಇಟ್ಟುಕೊಂಡು ಅಂತಹ ಎಲ್ಲಾ ಪ್ರಕರಣಗಳನ್ನು ತೆಗೆದುಕೊಳ್ಳುವುದಿಲ್ಲ ಮತ್ತು ರಾಜ್ಯ ಪೊಲೀಸ್ ಪಡೆಗಳೊಂದಿಗೆ ಏಕಕಾಲದಲ್ಲಿ ಮತ್ತು ಸಹಬಾಳ್ವೆಯಿಂದ ಕೂಡಿದ್ದು, ರಾಜ್ಯ ಪೊಲೀಸ್‍ನೊಂದಿಗೆ ಸಮನ್ವಯವಿಲ್ಲದೆ ಕೆಲಸ ಮಾಡಿದರೆ, ಸಂಘರ್ಷ ಮತ್ತು ಪ್ರಯತ್ನಗಳ ನಕಲುಗಳಿಗೆ ಕಾರಣವಾಗಬಹುದು, ಅಂತಹ ನಕಲುಗಳನ್ನು ತಪ್ಪಿಸಲು ರಾಜ್ಯ ಪೊಲೀಸ್ ಪಡೆಗಳೊಂದಿಗೆ ಸಿಬಿಐಯಿಂದ ಆಡಳಿತಾತ್ಮಕ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.

ಅದರ ಪ್ರಕಾರ:-
1.10.1 ಕೇಂದ್ರ ಸರ್ಕಾರಿ ನೌಕರರ ವಿರುದ್ಧ ಗಣನೀಯವಾಗಿ ಮತ್ತು ಮೂಲಭೂತವಾಗಿರುವ ಪ್ರಕರಣಗಳು ಅಥವಾ ಕೇಂದ್ರ ಸರ್ಕಾರದ ವ್ಯವಹಾರಗಳನ್ನೊಳಗೊಂಡ ವಿಷಯಗಳ ಬಗ್ಗೆ, ಕೆಲ ರಾಜ್ಯ ಸರ್ಕಾರದ ನೌಕರರನ್ನು ಒಳಗೊಂಡಿದ್ದರೂ ಸಹ ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ಸಿ.ಬಿ.ಐ.) ವಿಚಾರಣೆ ಮಾಡುವುದು. ರಾಜ್ಯ ಸರ್ಕಾರದ ನೌಕರರು ಅಪರಾಧದಲ್ಲಿ ಒಳಗೊಂಡಿರುವ ಪ್ರಕರಣದ ವಿಷಯವನ್ನು ತಿಳಿಸಿದ ಪಕ್ಷದಲ್ಲಿ ರಾಜ್ಯ ಪೊಲೀಸ್ ಅಥವಾ ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳದ/ಜಾಗೃತಿ ದಳದವರು ಅಂತಹ ಪ್ರಕರಣದ ವಿಚಾರಣೆ ಹಾಗೂ ಕಾನೂನು ಕ್ರಮವನ್ನು ಜರುಗಿಸುವಲ್ಲಿ ಸಿಬಿಐಗೆ ಸೂಕ್ತ ನೆರವನ್ನು ನೀಡಲಾಗುವುದು ಎಂದಿದೆ.

1.10.2 ರಾಜ್ಯ ಸರ್ಕಾರಿ ನೌಕರರ ವಿರುದ್ಧ ಮೂಲಭೂತವಾಗಿ ಮತ್ತು ಗಣನೀಯವಾಗಿ ಇರುವ ಪ್ರಕರಣಗಳು ಅಥವಾ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರದ ನೌಕರರು ಸಹ ಆರೋಪಿಗಳಾಗಿದ್ದಾರೆ ಎಂಬ ವಿಷಯವನ್ನು ಪರಿಗಣಿಸದೆ ರಾಜ್ಯ ಸರ್ಕಾರವೇ ವಿಚಾರಣೆ ನಡೆಸುವುದು. ಈ ಪ್ರಕರಣಗಳ ಬಗ್ಗೆ ಸಿ.ಬಿ.ಐ.ಗೆ ತಿಳಿಸಿದ ಪಕ್ಷದಲ್ಲಿ, ಸಿ.ಬಿ.ಐ. ತಂಡವು ರಾಜ್ಯ ಪೊಲೀಸ್ ಅಥವಾ ರಾಜ್ಯ ಭ್ರಷ್ಟಾಚಾರ ನಿಗ್ರಹ/ಜಾಗೃತಿ ದಳಕ್ಕೆ ವಿಚಾರಣೆ ಮುಕ್ತಾಯಗೊಳಿಸಲು ಸೂಕ್ತ ನೆರವನ್ನು ನೀಡಬಹುದು ಎಂದೂ ಹೇಳಿದೆ.

ಈ ಮೇಲೆ ಉಲ್ಲೇಖಿಸಿರುವ ಅಂಶಗಳ ಆಧಾರಿಸಿ, ಸಿ.ಬಿ.ಐ. ಮಾನ್ಯುಯಲ್‌ನ 1.10.2ರ ಪ್ರಕಾರ ಕೇಂದ್ರ ಸರ್ಕಾರದ ನೌಕರರಲ್ಲದ ಇಂದ್ರಕಲಾ ಬಿ.ಎಸ್. ಹಾಗೂ ಎನಿತ್ ಕುಮಾರ್ ಎಂ.ಸಿ.ರವರ ಮೇಲಿನ ದೂರುಗಳು ಸಿಬಿಐನ ಕಾರ್ಯವ್ಯಾಪ್ತಿಯ ಅಡಿಯಲ್ಲಿ ಬರುವುದಿಲ್ಲ ಮತ್ತು ಕರ್ನಾಟಕ ರಾಜ್ಯದ ಎ.ಸಿ.ಬಿ. ಅಡಿಯಲ್ಲಿಯೇ ಬರಲಿದೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತದೆ ಎಂದು ಪರಿಷತ್‌ ಹೇಳಿಕೆಯಲ್ಲಿ ವಿವರಿಸಿದೆ.

the fil favicon

SUPPORT THE FILE

Latest News

Related Posts