ಬೆಂಗಳೂರು; ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅಂತಿಮಗೊಳಿಸಿರುವ ಎಲ್ಲ ಟೆಂಡರ್‌ಗಳ ತನಿಖೆ ಮತ್ತು ಶೇ. 40ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘದ ಪತ್ರವನ್ನಾಧರಿಸಿ ತನಿಖೆಗೆ ಆದೇಶಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ತಮ್ಮದೇ ಕಚೇರಿಯಲ್ಲಿ ಶೇ.4ರಷ್ಟು ಲಂಚಕ್ಕೆ ಬೇಡಿಕೆ ಇರಿಸುತ್ತಿದ್ದಾರೆ ಎಂದು ಭವಾನಿ ಮಠ ಅವರು ನೀಡಿದ್ದ ದೂರು ಮುನ್ನೆಲೆಗೆ ಬಂದಿದೆ. ಅಲ್ಲದೆ ಈ ದೂರಿನ ಕುರಿತು ಯಾವುದೇ ಕ್ರಮ ಕೈಗೊಳ್ಳದಿರುವುದು ಸಂಶಯಕ್ಕೆ ದಾರಿಮಾಡಿಕೊಟ್ಟಿದೆ.
ಹಾಗೆಯೇ ಟೆಂಡರ್‌ಗಳಿಗೆ ಶೇ. 40ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘವು ಪ್ರಧಾನಿ ಕಚೇರಿಗೆ ಬರೆದಿದ್ದ ಪತ್ರವನ್ನಾಧರಿಸಿ ಸರ್ಕಾರ ವಜಾಗೊಳಿಸಿ ಎಂದು ಒತ್ತಾಯಿಸಿರುವ ಪ್ರತಿಪಕ್ಷ ಕಾಂಗ್ರೆಸ್ , ಮುಖ್ಯಮಂತ್ರಿ ಕಚೇರಿಯಲ್ಲಿ ಶೇ. 4 ರಷ್ಟು ಲಂಚಕ್ಕೆ ಬೇಡಿಕೆ ಇರಿಸುತ್ತಿದ್ದಾರೆ ಎಂದು ತನ್ನದೇ ಪಕ್ಷದ ಕಾರ್ಯಕರ್ತ ಹಾಗೂ ಕೊಪ್ಪಳ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ ಭವಾನಿ ಮಠ ಅವರು ದೂರನ್ನು ಗಮನಿಸಿಯೇ ಇಲ್ಲ.
ಕೃಷ್ಣಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ ಚಿಣಿ ಅವರು ಗುತ್ತಿಗೆದಾರರಿಂದ ಬಿಲ್ ಮೊತ್ತದಲ್ಲಿ ಶೇ.4ರಷ್ಟು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಹೇಳಿದ್ದರು. ಕೊಪ್ಪಳ ಜಿಲ್ಲಾ ಪಂಚಾಯ್ತಿಯ ಮಾಜಿ ಅಧ್ಯಕ್ಷ ಮುಕುಂದರಾವ್ ಭವಾನಿಮಠ ಅವರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿರುವ ದೂರಿನಲ್ಲಿ ಶೇ. 4ರಷ್ಟು ಲಂಚಕ್ಕೆ ಬೇಡಿಕೆ ಇಡುತ್ತಿರುವ ಬಗ್ಗೆ ದೂರಿನಲ್ಲಿ ಪ್ರಸ್ತಾಪಿಸಿದ್ದರು.
‘ಗುತ್ತಿಗೆದಾರರೊಬ್ಬರು ನಿರ್ವಹಿಸಿದ ಎಸ್‌ಸಿಪಿ ಮತ್ತು ಟಿ ಎಸ್ ಪಿ ಕಾಮಗಾರಿಯ ಬಿಲ್‌ಗೆ ಸಂಬಂಧಪಟ್ಟಂತೆ ಅನುದಾನ ಬಿಡುಗಡೆ ಮಾಡಲು ವ್ಯವಸ್ಥಾಪಕ ನಿರ್ದೇಶಕರಿಗೆ ಮೊಬೈಲ್ ಮೂಲಕ ವಿನಂತಿ ಮಾಡಿದ್ದೆ. ಆಗ ವ್ಯವಸ್ಥಾಪಕ ನಿರ್ದೇಶಕರು ನನ್ನನ್ನು ಉದ್ದೇಶಿಸಿ ಬಿಲ್ ಪಾವತಿಸಲು ಬಿಲ್ ಮೊತ್ತಕ್ಕೆ ಶೇ.4 ರಷ್ಟು ಲಂಚವನ್ನು ಗುತ್ತಿಗೆದಾರರಿಗೆ ನೀಡಲು ತಿಳಿಸಲು ಹೇಳಿದರು,’ ಎಂದು ಮುಕುಂದರಾವ್ ಭವಾನಿಮಠ ಅವರು ನೀಡಿರುವ ದೂರಿನಲ್ಲಿ ವಿವರಿಸಿದ್ದರು. ಈ ದೂರು ಖುದ್ದು ಮುಖ್ಯಮಂತ್ರಿ ಗಮನದಲ್ಲಿದ್ದರೂ ಕ್ರಮ ವಹಿಸಿಲ್ಲ.
ಅಲ್ಲದೆ ‘ ಇದಕ್ಕೆ ಪ್ರತ್ಯುತ್ತರವಾಗಿ ನಾನು ಎಸ್‌ಸಿಪಿ ಟಿಎಸ್‌ಪಿ ಕಾಮಗಾರಿ ಆಗಿರುವುದರಿಂದ ಲಂಚ ತೆಗೆದುಕೊಳ್ಳಬಾರದು ಎಂದು ತಿಳಿಸಿದೆ. ಆಗ ಅವರು ಸಲುಗೆಯಿಂದ ನನ್ನನ್ನುಉದ್ದೇಶಿಸಿ ನಾನು ಈ ಹಣವನ್ನು ಸಂಗ್ರಹಿಸಿ ಮುಖ್ಯಮಂತ್ರಿ ಕಚೇರಿಗೆ ಮುಟ್ಟಿಸಬೇಕು ಎಂದ ಹೇಳಿ ಕಡೆಗೆ ಶೇ. 2ರಷ್ಟಾದರೂ ಕೊಡಲಿಕ್ಕೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ತಿಳಿಸಿ,’ ಎಂದು ಪ್ರಭಾಕರ್ ಚಿಣಿ ಅವರು ಹೇಳಿದ್ದರು ಎಂದು ಭವಾನಿಮಠ ಅವರು ಲಿಖಿತ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದರೂ ಈ ದೂರನ್ನಾಧರಿಸಿ ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ ಎಂದು ತಿಳಿದು ಬಂದಿದೆ.
ನಿಗಮದ ವ್ಯಾಪ್ತಿಯಲ್ಲಿ ಬರುವ ಕೆಲ ಅತ್ಯಂತ ಪ್ರಭಾವಿ ಶಾಸಕರುಗಳಿಗೆ ಸಹ ಪರ್ಸೆಂಟೇಜ್ ನೀಡಿ ಕಾಮಗಾರಿ ಮಂಜೂರು ಮಾಡಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದಾರೆ ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ. ಇಂತಹ ಅಧಿಕಾರಿಗೆ ಇತ್ತೀಚೆಗೆ ನಡೆದ ನಿಗಮದ ನಿರ್ದೇಶಕ ಮಂಡಳಿ ಸಭೆಯಲ್ಲಿ ಇನ್ನೂ 3 ತಿಂಗಳಲ್ಲಿ ನಿವೃತ್ತಿಯಾಗುವ ಇವರಿಗೆ ಆರ್ಥಿಕ ವಿತ್ತೀಯ ದತ್ತಾಧಿಕಾರದ ಪ್ರಾಧಿಕಾರವನ್ನು ಉಪಯೋಗಿಸಿಕೊಳ್ಳಲು ಅನುಮತಿ ಹಾಗೂ ಕರ್ನಾಟಕ ಪಾರದರ್ಶಕತೆ ಅಧ್ಯಾದೇಶ ಅಧ್ಯಾಯ 02ರ ಕ್ರಮ ಸಂಖ್ಯೆ 13ರಿಂದ ವಿನಾಯಿತಿ ನೀಡುವುದನ್ನು ಅನುಮೋದಿಸಲಾಗಿದೆ ಎಂದು ನಿಮ್ಮ ಗಮನಕ್ಕೆ ತಂದಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯಕ್ಕೆ ಅನುಕೂಲವಾಗದ ಮತ್ತು ಅವರ ಅಭಿವೃದ್ಧಿಗೆ ಪೂರಕವಾಗದ ಹಾಗೂ ಫಲಾನುಭವಿಗಳೇ ಇಲ್ಲದ ಕಾಮಗಾರಿಗಳನ್ನು ನಿರ್ವಹಿಸಿರುವ ಅರುಣ್ ಡಿ ಉಪ್ಪಾರ್ ಒಡೆತನದ ಎಡಿಯು ಇನ್ಫ್ರಾ ಕಂಪನಿಗೆ ನಿಯಮಬಾಹಿರ ಮತ್ತು ಕಾನೂನಿನ ನಿರ್ದೇಶನಗಳನ್ನು ಉಲ್ಲಂಘಿಸಿ 1,141 ಕೋಟಿ ರು. ಪಾವತಿಸುವ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯಕ್ಕೆ ಅನ್ಯಾಯವೆಸಗಿದ್ದಾರೆ ಎಂಬ ಆರೋಪವನ್ನೂ ಮುಕುಂದರಾವ್ ಭವಾನಿಮಠ ಅವರು ಮಾಡಿದ್ದಾರೆ.
850 ಕೋಟಿ ದುರ್ಬಳಕೆ
2017-18ನೇ ಸಾಲಿನಿಂದ ಕೃಷ್ಣ ಭಾಗ್ಯ ಜಲನಿಗಮದಲ್ಲಿ ಭೂ ಸ್ವಾಧೀನ ಮತ್ತು ಪುನರ್‌ವಸತಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅನುಷ್ಠಾನಗೊಳಿಸಲು ಪ್ರತ್ಯೇಕ ಲೆಕ್ಕಶೀರ್ಷಿಕೆಯಡಿ ಎಸ್‌ಸಿಸಪಿ ಟಿಎಸ್‌ಪಿ ಯೋಜನೆ ಒಳಗೊಂಡಂತೆ ಅನುದಾನ ಕಲ್ಪಿಸಲಾಗಿದೆ. ಆದರೆ ಇದುವರೆಗೂ ಎಸ್‌ಸಿ ಎಸ್‌ಟಿ ಸಮುದಾಯಗಳಿಗೆ ಮನೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಂಬಂಧಪಟ್ಟ ಅನುದಾನವನ್ನು ಖರ್ಚು ಮಾಡಿಲ್ಲ ಎಂದು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.
2017-18ನೇ ಸಾಲಿನಿಂದ 2019-20ನೇ ಸಾಲಿನವರೆಗೆ ಬಿಡುಗಡೆ ಮಾಡಲಾದ ಅನುದಾನ 631.59 ಕೋಟಿ ಪೈಕಿ 214.16 ಕೋಟಿ ರು. 7(ಡಿ) ಅಡಿ ವೆಚ್ಚ ಮಾಡಲಾಗಿದೆ. ಇದಲ್ಲದೆ 91 ಕೋಟಿ ರು.,ನಲ್ಲಿ ರಸ್ತೆ, ಚರಂಡಿ, ಸಮುದಾಯ ಭವನ ಕಾಮಗಾರಿಗಳಿಗೆ ಅನಮೋದನೆ ನೀಡಲಾಗಿದೆ. ಒಟ್ಟು 305.10 ಕೋಟಿ ಅನುದಾನ ಉಪಯೋಗಿಸಲಾಗಿದೆ. ಆದರೆ ಕಳೆದ 2 ವರ್ಷಗಳಿಂದ ಮನೆಗಳ ನಿರ್ಮಾಣದ ಕುರಿತು ಫಲಾನುಭವಿಗಳ ಪಟ್ಟಿಯನ್ನು ಸಂಬಂಧದಪಟ್ಟ ವಿಭಾಗದಿಂದ ಮತ್ತು ಸಕ್ಷಮ ಪ್ರಾಧಿಕಾರದಿಂದ ಅಂತಿಮಗೊಳಿಸದೇ ಇರುವುದರಿಂದ ಈ ಮನೆಗಳ ನಿರ್ಮಾಣಕ್ಕಾಗಿ ಇನ್ನೂ ಸಹ ಟೆಂಡರ್ ಕರೆದಿಲ್ಲ ಹೀಗಾಗಿ ಅನುದಾನ ಖರ್ಚು ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಭವಾನಿಮಠ ಅವರು ದೂರಿನಲ್ಲಿ ವಿವರಿಸಿದ್ದಾರೆ.
ಈ ಪ್ರಕರಣದಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯ ಎಲ್ಲಾ ನಿಯಮಾವಳಿಗಳನ್ನು ಮತ್ತು ಕಾನೂನುಗಳನ್ನು ಅತ್ಯಂತ ಚಾಣಾಕ್ಷತನದಿಂದ ಉಲ್ಲಂಘಿಸಲಾಗಿದೆ. 401.77ಕೋಟಿ ಮತ್ತು 384.86 ಕೋಟಿ ರು.ಗಳ ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಯಾವುದೇ ಅನುಕೂಲವಾಗದ ಅವರ ಅಭಿವೃದ್ಧಿಗೆ ಪೂರಕವಾಗದ ಮತ್ತು ಫಲಾನುಭವಿಗಳೇ ಇಲ್ಲದ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ ಎಂಬ ದೂರನ್ನೂ ನೀಡಿದ್ದಾರೆ.
ಭೂ ಸ್ವಾಧೀನ ಮತ್ತು ಪುನರ್ ವಸತಿ ಹಾಗೂ ಪುನರ್ ನಿರ್ಮಾಣ ಕೆಲಸಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲು 2018ರ ಡಿಸೆಂಬರ್ 31ರಂದು ನಿಗಮದಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆದರೆ ಸರ್ಕಾರಕ್ಕೆ ಈ ಕುರಿತು ಪತ್ರ ಬರೆದು ಸುಮಾರು 2 ವರ್ಷ 8 ತಿಂಗಳು ಗತಿಸಿದರೂ ಮತ್ತು ವಿಷಯವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಸಂಬಂಧಿಸಿದ್ದರೂ ಸಹ ಕ್ರಮ ಕೈಗೊಂಡಿಲ್ಲ ಎಂದು ಗೊತ್ತಾಗಿದೆ.