ಬಂಗಾರಪ್ಪ, ಪವಾರ್‌, ಜಯಲಲಿತಾಗೆ ಸೇರಿದ ರಹಸ್ಯ ಕಡತಗಳನ್ನು ಗೌಡರಿಗೆ ರವಾನಿಸಿದ್ದರೇ ರಾವ್‌?

ಬೆಂಗಳೂರು; ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ, ತಮಿಳುನಾಡಿನ ಜೆ ಜಯಲಲಿತಾ, ಮಹಾರಾಷ್ಟ್ರದ ಶರದ್‌ ಪವಾರ್‌, ಉತ್ತರ ಪ್ರದೇಶದ ಮುಲಾಯಂ ಸಿಂಗ್‌ ಯಾದವ್‌ ಅವರಿಗೆ ಸಂಬಂಧಿಸಿದ ರಹಸ್ಯ ಕಡತಗಳನ್ನು ಮಾಜಿ ಪ್ರಧಾನಿ ನರಸಿಂಹರಾವ್‌ ಅವರು ತಮ್ಮ ಬಳಿ ಇರಿಸಿಕೊಂಡಿದ್ದರು ಎಂಬ ಸ್ಪೋಟಕ ಮಾಹಿತಿಯನ್ನು ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರ ಕುರಿತಾದ ಪುಸ್ತಕವು ಬಹಿರಂಗಗೊಳಿಸಿದೆ.

ಖ್ಯಾತ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಎಚ್‌ ಡಿ ದೇವೇಗೌಡ ಅವರ ಕುರಿತು ಇಂಗ್ಲಿಷ್‌ನಲ್ಲಿ ರಚಿಸಿರುವ ಫರೋಸ್‌ ಇನ್‌ ಎ ಫೀಲ್ಡ್‌ ಕೃತಿಯಲ್ಲಿ ಈ ಸ್ಫೋಟಕ ಮಾಹಿತಿ ಇದೆ. ಪೆಂಗ್ವಿನ್ ರಾಂಡಮ್ ಹೌಸ್‌ ಪ್ರಕಟಿಸಿರುವ ಈ ಕೃತಿ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಫರೋಸ್‌ ಇನ್‌ ಫೀಲ್ಡ್‌ ಕೃತಿ ಆಧರಿಸಿ ರಹಸ್ಯ ಕಡತಗಳ ಕುರಿತು ಇಂಗ್ಲೀಷ್‌ನ ಸುದ್ದಿ ಜಾಲತಾಣ ದಿ ಪ್ರಿಂಟ್‌ ವರದಿ ಪ್ರಕಟಿಸಿದೆ.

ನರಸಿಂಹರಾವ್‌ ಅವರ ನಂತರ ಪ್ರಧಾನಿಯಾದ ಎಚ್‌ ಡಿ ದೇವೇಗೌಡ ಅವರಿಗೆ ರಹಸ್ಯ ಕಡತಗಳನ್ನು ರವಾನಿಸಿದ್ದರು. ಆ ಕಡತಗಳನ್ನು ದೇವೇಗೌಡರು ತಮ್ಮ ಜಂಟಿ ಕಾರ್ಯದರ್ಶಿ ಎಸ್‌ ಎಸ್‌ ಮೀನಾಕ್ಷಿ ಸುಂದರಂ ಅವರ ವಶಕ್ಕೆ ನೀಡಿದ್ದರು ಎಂಬುದನ್ನು ದೇವೇಗೌಡರಿಗೆ ಜಂಟಿ ಕಾರ್ಯದರ್ಶಿಯಾಗಿದ್ದ ಎಸ್‌ ಎಸ್‌ ಮೀನಾಕ್ಷಿ ಸುಂದರಂ ಅವರು ಸುಗತ ಶ್ರೀನಿವಾಸರಾಜು ಅವರಿಗೆ ಪುಸ್ತಕಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಮಾಹಿತಿ ಒದಗಿಸಿದ್ದಾರೆ ಎಂದು ದಿ ಪ್ರಿಂಟ್‌ ವರದಿ ಮಾಡಿದೆ.

ಅಲ್ಲದೆ ದೇವೇಗೌಡರ ನಂತರ ಪ್ರಧಾನಿಗಳಾಗಿದ್ದ ಐ ಕೆ ಗುಜ್ರಾಲ್‌ ಮತ್ತು ವಾಜಪೇಯಿ ಅವರ ಅವಧಿಯಲ್ಲಿ ರಹಸ್ಯ ಕಡತಗಳನ್ನು ಪ್ರಧಾನಿ ಕಾರ್ಯಾಲಯದಲ್ಲಿ ಇರಿಸಲಾಗಿತ್ತು. ಆದರೆ ಆ ಕಡತಗಳು ಪ್ರಧಾನಿ ಕಾರ್ಯಾಲಯದಲ್ಲಿಯೇ ಇವೆಯೇ ಅಥವಾ ವಾಜಪೇಯಿ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ನಂತರ ವಿಲೇವಾರಿ ಮಾಡಲಾಗಿದೆಯೇ ಎಂಬುದು ತಿಳಿದಿಲ್ಲ.

‘ಫೈಲ್‌ಗಳು ಅಣು ಬಾಂಬ್‌ ಇದ್ದಂತೆ. ರಾವ್ ಅವರು ತಮ್ಮ ಸಂಪುಟದ ಒಳಗೆ ಮತ್ತು ಹೊರಗೆ ಇದ್ದ ಪ್ರಮುಖ ವ್ಯಕ್ತಿಗಳ ಹತ್ತಕ್ಕೂ ಹೆಚ್ಚು ಫೈಲ್‌ಗಳನ್ನು ನನಗೆ ನೀಡಿದರು. ನನಗೆ ಸರಿಯಾಗಿ ನೆನಪಿದ್ದರೆ ಮುಲಾಯಂ ಸಿಂಗ್ ಯಾದವ್, ಜೆ.ಜಯಲಲಿತಾ, ಎಸ್.ಬಂಗಾರಪ್ಪ, ಶರದ್ ಪವಾರ್ ಮತ್ತಿತರರ ಕಡತಗಳಿದ್ದವು’ ಎಂದು ಮೀನಾಕ್ಷಿಸುಂದರಂ ಅವರು ಸುಗತ ಶ್ರೀನಿವಾಸರಾಜು ರಚಿಸಿರುವ ಫರೋಸ್‌ ಇನ್ ಎ ಫೀಲ್ಡ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿಯನ್ನಾಗಿಸಲು ಶರದ್‌ ಪವಾರ್‌ ಅವರನ್ನು ಮನವೊಲಿಸಲು 1993ರಲ್ಲಿ ಯತ್ನ ನಡೆದಿತ್ತು. ಆಗ ನರಸಿಂಹರಾವ್‌ ಸರ್ಕಾರದಲ್ಲಿ ಪವಾರ್‌ ಅವರು 20 ತಿಂಗಳುಗಳ ಕಾಲ ರಕ್ಷಣಾ ಸಚಿವರಾಗಿದ್ದರು. ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್‌ ಯಾದವ್‌ ಅವರು ದೇವೇಗೌಡರ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದರು. ಅದೇ ರೀತಿ ರಾಜೀವ್‌ಗಾಂಧಿ ಅವರ ಆಶೀರ್ವಾದದಿಂದ ಎಸ್‌ ಬಂಗಾರಪ್ಪ ಅವರು 1990ರಿಂದ 1992ರವರೆಗೆ ಮುಖ್ಯಮಂತ್ರಿಯಾಗಿದ್ದರು. ಹಾಗೆಯೇ ಇದೇ ಅವಧಿಯಲ್ಲಿ ಜಯಲಲಿತಾ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿದ್ದರು. ಆಗ ನರಸಿಂಹರಾವ್‌ ಅವರು ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಇವರಿಗೆ ಸಂಬಂಧಿಸಿದ ರಹಸ್ಯ ಕಡತಗಳನ್ನು ರಾವ್‌ ಅವರು ತಮ್ಮ ಬಳಿ ಇರಿಸಿಕೊಂಡಿದ್ದರು. “ರಾವ್ ಅವರು ರಾಜಕೀಯ ವ್ಯಕ್ತಿಗಳ ಮೇಲೆ ಕೆಲವು ರಹಸ್ಯ ಕಡತಗಳನ್ನು ಇಟ್ಟುಕೊಂಡಿದ್ದರು, ಅವರು ತೊಂದರೆಗಳನ್ನು ಉಂಟುಮಾಡಬಹುದು … ಅವರು ಅನುಚಿತವಾಗಿ ವರ್ತಿಸಿದರೆ ಬಳಸಬಹುದಾದ ಕಡತಗಳಾಗಿದ್ದವು ” ಎಂದು ಮೀನಾಕ್ಷಿ ಸುಂದರಂ ಅವರು ಫೆರೋಸ್‌ ಇನ್‌ ಎ ಫೀಲ್ಡ್‌ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.

‘ಆ ಕಡತಗಳನ್ನು ಹಸ್ತಾಂತರಿಸಲು ರಾವ್‌ ಮುಂದಾಗಿದ್ದರು. ಇದಕ್ಕೆ ನಂಬುವ ಅಧಿಕಾರಿ ಹೆಸರು ಸೂಚಿಸಬೇಕು ಎಂದು ರಾವ್‌ ಅವರು ಗೌಡರನ್ನು ಕೇಳಿದ್ದರು. ಆಗ ಗೌಡರು ತಮ್ಮನ್ನು ಅವರ ಬಳಿಗೆ ಕಳಿಸಿದ್ದರು. ಆ ಕಡತಗಳು ಅಣುಬಾಂಬ್‌ನಂತಿದ್ದವು,’ ಎಂದು ಸಂದರ್ಶನದಲ್ಲಿ ಮೀನಾಕ್ಷಿ ಸುಂದರಂ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆದರೆ ಆ ಕಡತಗಳನ್ನು ತೋರಿಸಲು ಮೀನಾಕ್ಷಿ ಸುಂದರಂ ಅವರು ನಿರಾಕರಿಸಿದರು ಎಂದು ಕೃತಿಯಲ್ಲಿ ಉಲ್ಲೇಖಿಸಲಾಗಿದೆ.

ಆಗಿನ ಪಿಎಂಒ ಅಧಿಕಾರಿ ಅವರು ಪಿಎಂಒನಲ್ಲಿರುವವರೆಗೂ ಆ ಕಡತಗಳು ತಮ್ಮ ಬಳಿ ಇದ್ದವು ಎಂದೂ ಹೇಳಿರುವ ಮೀನಾಕ್ಷಿಸುಂದರಂ ಅವರು “ವಾಜಪೇಯಿ ಅಧಿಕಾರ ವಹಿಸಿಕೊಂಡಾಗ ನಾನು ಅವರನ್ನು ಅಶೋಕ್ ಸೈಕಿಯಾ ಅವರಿಗೆ (ವಾಜಪೇಯಿ ಅವರ ಪಿಎಂಒ ಜಂಟಿ ಕಾರ್ಯದರ್ಶಿ) ಹಸ್ತಾಂತರಿಸಿದೆ … ಈ ಮಧ್ಯೆ, ಗುಜ್ರಾಲ್ ಪ್ರಧಾನಿಯಾದಾಗ ಕಡತಗಳ ಬಗ್ಗೆ ತಿಳಿಸಿದ್ದರು. “ಗುಜ್ರಾಲ್ ಕೂಡ ನಂಬಿಕಸ್ಥ ಅಧಿಕಾರಿಯನ್ನು ಹೊಂದಿಲ್ಲದ ಕಾರಣ ಆ ರಹಸ್ಯ ಕಡತಗಳನ್ನು ತಮ್ಮ ಬಳಿಯೇ ಇರಲಿ ಎಂದು ನನ್ನನ್ನು ಕೇಳಿದ್ದರು. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಬ್ರಜೇಶ್‌ ಮಿಶ್ರಾ ಅವರಿಗೂ ರಹಸ್ಯ ಕಡತಗಳ ಬಗ್ಗೆ ಮಾಹಿತಿ ಒದಗಿಸಿದ್ದೆ. ಆದರೆ ಅವರೂ ಸಹ ಕಡತಗಳು ತಮ್ಮ ಬಳಿಯೇ ಇರಲಿ ಎಂದು ಕೇಳಿದ್ದರು,’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

‘ಕಡತಗಳನ್ನು ಹಸ್ತಾಂತರಿಸಲು ಬಯಸಿದ್ದೆ. ಆಗ ಅಶೋಕ್‌ ಅವರು ಮುನ್ನೆಲೆಗೆ ಬಂದರು. ವಾಜಪೇಯಿ ಅಧಿಕಾರದಿಂದ ಕೆಳಗಿಳಿದ ನಂತರ ಅಶೋಕ್ ಅವರು ಕಡತಗಳನ್ನು ಬೇರೆಯವರಿಗೆ ಕೊಟ್ಟಿದ್ದಾರೋ ಇಲ್ಲವೋ, ನನಗೆ ಯಾವುದೇ ಮಾಹಿತಿ ಇಲ್ಲ.’ ಎಂದು ಲೇಖಕ ಸುಗತ ಅವರಿಗೆ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ದಿ ಪ್ರಿಂಟ್‌ ವರದಿ ಮಾಡಿದೆ.
2004ರಲ್ಲಿ ಡಾ.ಮನಮೋಹನ್ ಸಿಂಗ್ ಪ್ರಧಾನಿಯಾದ ನಂತರ ಆ ಕಡತಗಳು ಏನಾಯಿತು ಎಂಬುದು ಊಹಾಪೋಹದ ವಿಷಯವಾಗಿಯೇ ಉಳಿದಿದೆ. ಅಶೋಕ್ ಸೈಕಿಯಾ 2007 ರಲ್ಲಿ ನಿಧನರಾದರು ಎಂಬ ಅಂಶವು ಕೃತಿಯಲ್ಲಿ ಪ್ರಸ್ತಾಪವಾಗಿದೆ.

ರಹಸ್ಯ ಕಡತಗಳ ಕುರಿತು ‘ದಿ ಪ್ರಿಂಟ್‌’ 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿಯಾದ ನೃಪೇಂದ್ರ ಮಿಶ್ರಾ ಅವರನ್ನು ಸಂಪರ್ಕಿಸಿದ್ದು, “ನಾನು ಅಂತಹ ಯಾವುದೇ ಫೈಲ್‌ಗಳ ಬಗ್ಗೆ ಕೇಳಿಲ್ಲ ಅಥವಾ ಯಾರೂ ಅವುಗಳ ಬಗ್ಗೆ ಮಾತನಾಡಿಲ್ಲ.” ಎಂದು ಪ್ರತಿಕ್ರಿಯಿಸಿದ್ದಾರೆ. ಅದೇ ರೀತಿ ಶರದ್ ಪವಾರ್ ಅವರನ್ನು ಸಂಪರ್ಕಿಸಲು ಯತ್ನಿಸಿದ್ದರೂ ಅದು ಸಾಧ್ಯವಾಗಿಲ್ಲ ಎಂದು ದಿ ಪ್ರಿಂಟ್‌ ಹೇಳಿದೆ.

SUPPORT THE FILE

Latest News

Related Posts