ಮಾತಾಡ್‌ ಮಾತಾಡ್‌ ಕನ್ನಡ ಅಭಿಯಾನಕ್ಕೆ ಆಸಕ್ತಿ, ಕನ್ನಡ ಶಾಲೆಗಳಿಗೆ ಹುದ್ದೆ ಮಂಜೂರಾತಿಗೆ ನಿರಾಸಕ್ತಿ

ಬೆಂಗಳೂರು; ಮಾತಾಡ್‌ ಮಾತಾಡ್‌ ಕನ್ನಡ ಅಭಿಯಾನ ಆರಂಭಿಸಿ ಭರ್ಜರಿ ಪ್ರಚಾರ ಪಡೆದಿರುವ ರಾಜ್ಯ ಬಿಜೆಪಿ ಸರ್ಕಾರವು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಿಗೆ ಹುದ್ದೆಗಳ ಮಂಜೂರಾತಿ ಮತ್ತು ಬಾಕಿ ಇರುವ ಅನುದಾನವನ್ನು ಬಿಡುಗಡೆ ಮಾಡದಿರುವುದು ಇದೀಗ ಬಹಿರಂಗವಾಗಿದೆ.

ಆದರೆ ಇದೇ ಹೊತ್ತಿನಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಹುದ್ದೆಗಳ ಮಂಜೂರಾತಿ ಮತ್ತು ಬಾಕಿ ಇರುವ ಸಾವಿರಾರು ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಿದೆ. ಕೋವಿಡ್‌ ಪರಿಸ್ಥಿತಿಯನ್ನು ಮುಂದಿರಿಸಿಕೊಂಡು ಚಾಲ್ತಿಯಲ್ಲಿರುವ ಯೋಜನೆಗಳನ್ನೂ ಮುಕ್ತಾಯಗೊಳಿಸುತ್ತಿರುವ ಸರ್ಕಾರವು ಇಲಾಖೆಗಳ ನಡುವೆಯೇ ತಾರತಮ್ಯ ಎಸಗುತ್ತಿದೆ ಎಂಬ ಆರೋಪಕ್ಕೆ ಗುರಿಯಾಗಿದೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ಬಾಕಿ ಇರುವ ಅನುದಾನ ಬಿಡುಗಡೆ ಮಾಡದೆಯೇ ಉನ್ನತ ಶಿಕ್ಷಣ ಇಲಾಖೆಗೆ ಬಾಕಿ ಇದ್ದ ಸಾವಿರಾರು ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡುತ್ತಿರುವುದೇ ಸರ್ಕಾರದ ತಾರತಮ್ಯಕ್ಕೆ ನಿದರ್ಶನ ಒದಗಿಸಿದಂತಾಗಿದೆ.

ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಅವರ ಉಪಸ್ಥಿತಿಯಲ್ಲಿ 2021ರ ಅಕ್ಟೋಬರ್‌ 11ರಂದು ನಡೆದಿದ್ದ ಸಭೆಯಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಗೆ ಅನುದಾನ ಹಂಚಿಕೆಯಲ್ಲಾಗುತ್ತಿರುವ ತಾರತಮ್ಯವಾಗುತ್ತಿದೆ ಎಂದು ವಿಧಾನಪರಿಷತ್‌ ಸದಸ್ಯರು ಪ್ರಸ್ತಾಪಿಸಿರುವುದು ಸಭೆ ನಡವಳಿಯಿಂದ ತಿಳಿದು ಬಂದಿದೆ. ಈ ನಡವಳಿ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

1995ರಿಂದ 2014ನೇ ಸಾಲಿನಲ್ಲಿ ಆರಂಭವಾಗಿರುವ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿಯನ್ನು ವೇತಾನುದಾನಕ್ಕೆ ಒಳಪಡಿಸುವ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಸಭೆಯಲ್ಲಿ ಚರ್ಚಿಸಲಾಗಿದೆ. ‘2014-15ರವರೆಗೆ ಆರಂಭವಾಗಿರುವ ಕನ್ನಡ ಶಾಲೆಗಳಿಗೆ ವೇತಾನುದಾನವೂ ಇಲ್ಲ, ಬಿಸಿಯೂಟ, ಬೈಸಿಕಲ್‌ ನೀಡುವುದು ಸೇರಿದಂತೆ ಯಾವುದೇ ಸವಲತ್ತು ಸಿಗುತ್ತಿಲ್ಲ,’ ಎಂದು ಪರಿಷತ್‌ ಸದಸ್ಯ ಶ್ರೀಕಂಠೇಗೌಡ ಅವರು ಸಭೆಯಲ್ಲಿ ಪ್ರಸ್ತಾಪಿಸಿರುವುದು ಗೊತ್ತಾಗಿದೆ.

2000ವರೆಗೆ ಶಾಲಾ ಕಾಲೇಜುಗಳನ್ನು ವೇತಾನುದಾನಕ್ಕೆ ಅಳವಡಿಸಲು ಅಂದಾಜು 110 ಕೋಟಿ ರುಪಾಯಿ ವೆಚ್ಚವಾಗಲಿದೆ. ಅಲ್ಲದೆ ಬೋಧಕ-ಬೋಧಕೇತರ ಹುದ್ದೆಗಳನ್ನು ಸೇರಿಸಿದರೆ ಒಟ್ಟು 2,250 ಕೋಟಿ ಹೊರೆಯಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಭೆಗೆ ಉತ್ತರಿಸಿದ್ದಾರೆ.

ಅಲ್ಲದೆ ಕೆಲವು ಶಿಕ್ಷಣ ಸಂಸ್ಥೆಗಳು ವೇತಾನುದಾನಕ್ಕೆ ಅರ್ಜಿ ಸಲ್ಲಿಸಿಲ್ಲ. ಅರ್ಜಿ ಸಲ್ಲಿಸಿರುವ ಶಿಕ್ಷಣ ಸಂಸ್ಥೆಗಳ ಪ್ರಸ್ತಾವನೆಗೆ ಹಣಕಾಸು ಇಲಾಖೆ ಅನುಮತಿ ನೀಡಿಲ್ಲ. ಕೊರೊನಾ ಕಾರಣವನ್ನು ಮುಂದಿರಿಸಿರುವ ಹಣಕಾಸು ಇಲಾಖೆಯು ಅನುಮತಿ ನೀಡಿಲ್ಲ ಎಂದೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಭೆಗೆ ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

ಆದರೆ ಕೋವಿಡ್‌ ಪರಿಸ್ಥಿತಿ ಇದ್ದರೂ ಉನ್ನತ ಶಿಕ್ಷಣ ಇಲಾಖೆಗೆ ಹುದ್ದೆಗಳ ಮಂಜೂರಾತಿ ಮಾಡುತ್ತಿರುವುದನ್ನು ಪರಿಷತ್‌ ಸದಸ್ಯ ಪುಟ್ಟಣ್ಣ ಅವರು ಬಹಿರಂಗಪಡಿಸಿರುವುದು ನಡವಳಿಯಿಂದ ಗೊತ್ತಾಗಿದೆ.

‘ಕೋವಿಡ್‌ ಪರಿಸ್ಥಿತಿ ಇದ್ದರೂ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಹುದ್ದೆಗಳ ಮಂಜೂರಾತಿ ಹಾಗೂ ಪೆಂಡಿಂಗ್ ಇರುವ ಸಾವಿರಾರು ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಪ್ರಾಥಮಿಕ ಪ್ರೌಢಶಿಕ್ಷಣ ಇಲಾಖೆಗೆ ಮಾತ್ರ ಏಕೆ ಕೊಡುತ್ತಿಲ್ಲ, ಬಿಇಒ, ಡಿಡಿಪಿಐ ಕಚೇರಿಗಳಲ್ಲಿ ವರ್ಷಾನುಗಟ್ಟಲೇ ಕಚೇರಿಗಳಲ್ಲಿ ಕಡತಗಳನ್ನು ಉಳಿಸಿಕೊಳ್ಳುವ ಬಗ್ಗೆ ಆಕ್ಷೇಪಣೆಗಳಿವೆ,’ ಎಂದು ಪುಟ್ಟಣ್ಣ ಅವರು ಸಭೆಯಲ್ಲಿ ಸಚಿವರ ಗಮನಕ್ಕೆ ತಂದಿರುವುದು ನಡವಳಿಯಿಂದ ತಿಳಿದು ಬಂದಿದೆ.

1987ರಿಂದ 1995ರವರೆಗೆ ಉಳಿದಿರುವ ಶಾಲೆ-ಕಾಲೇಜುಗಳು ಸೇರಿ ಒಟ್ಟು 38 ಸಂಸ್ಥೆಗಳಿಗೆ ವೇತಾನುದಾನ ನೀಡುವ ಪ್ರಸ್ತಾವನೆಗಳಿವೆ. ಒಂದೇ ಬಾರಿ ಎನ್ನುವಂತೆ ಮಂಜೂರಾತಿಗೆ ಹಣಕಾಸು ಇಲಾಖೆಗೆ ಕಳಿಸಿದ್ದರೂ ಅನುಮತಿ ದೊರೆತಿಲ್ಲ ಎಂದು ಪ್ರಧಾನ ಕಾರ್ಯದರ್ಶಿ ಮಾಹಿತಿ ಒದಗಿಸಿದ್ದಾರೆ.

1987ರಿಂದ 1994-95ನೇ ಸಾಲಿನ ಅವಧಿಯಲ್ಲಿ ಆರಂಭಗೊಂಡಿರುವ ಶಾಲೆಗಳ ಪೈಕಿ 116 ಪ್ರಾಥಮಿಕ, 32 ಪ್ರೌಢಶಾಲೆ, 29 ಪದವಿ ಪೂರ್ವ ಕಾಲೇಜುಗಳು ಸೇರಿದಂತೆ ಒಟ್ಟು 177 ಶಾಲಾ ಕಾಲೇಜುಗಳನ್ನು ವೇತಾನುದಾನಕ್ಕೆ ಒಳಪಡಿಸಲು ಪ್ರಸ್ತಾವನೆ ಸಲ್ಲಿಕೆಯಾಗಿವೆ. 120 ವಿದ್ಯಾರ್ಥಿಗಳ ಸಂಖ್ಯಾ ಬಲ ಇರುವ 178 ದೈಹಿಕ ಶಿಕ್ಷಕರ ಉಪನ್ಯಾಸಕರ ಹುದ್ದೆಗಳನ್ನು ವೇತನ ಅನುದಾನಕ್ಕೆ ಒಳಪಡಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

SUPPORT THE FILE

Latest News

Related Posts