ಸಿಎಂ ಅನಿಲ ಭಾಗ್ಯ ಯೋಜನೆ ಕೈ ಬಿಡಲು ನಿರ್ಣಯ; ಉಜ್ವಲದಿಂದ ಹೊರಗುಳಿದವರ ಪಾಡೇನು?

ಬೆಂಗಳೂರು; ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಸಡ್ಡು ಹೊಡೆದು ಸಿದ್ದರಾಮಯ್ಯ ಅವರ ಸರ್ಕಾರ ಆರಂಭಿಸಿದ್ದ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯನ್ನು ಇದೀಗ ರಾಜ್ಯ ಬಿಜೆಪಿ ಸರ್ಕಾರವು ರದ್ದುಗೊಳಿಸಲು ನಿರ್ಣಯ ಕೈಗೊಂಡಿದೆ.

2021ರ ಸೆಪ್ಟಂಬರ್‌ 29ರಿಂದ ಅಕ್ಟೋಬರ್‌ 12ರವರೆಗೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳೊಂದಿಗೆ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ನೂರು ದಿನಗಳನ್ನು ಪೂರ್ಣಗೊಳಿಸುತ್ತಿರುವ ಹೊಸ್ತಿಲಲ್ಲೇ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯನ್ನೂ ಮುಕ್ತಾಯಗೊಳಿಸಲು ಕೈಗೊಂಡಿರುವ ನಿರ್ಣಯವು ಸಾರ್ವಜನಿಕರ ಟೀಕೆಗೆ ಗುರಿಯಾಗುವ ಸಾಧ್ಯತೆಗಳಿವೆ.

ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆ ಅಡಿ 2020ರಲ್ಲಿ 98,079 ಫಲಾನುಭವಿಗಳಿಗೆ 3 ಅನಿಲ ಸಿಲಿಂಡರ್‌ಗಳನ್ನು ಉಚಿತವಾಗಿ ವಿತರಿಸಲು ಕ್ರಮ ವಹಿಸಲಾಗಿತ್ತು. ಆದರೆ ವರ್ಷ ಕಳೆಯುವುದರೊಳಗೆ ಅನಿಲ ಭಾಗ್ಯ ಯೋಜನೆಯನ್ನೇ ರದ್ದುಗೊಳಿಸಲು ಆಹಾರ, ನಾಗರಿಕ ಸರಬರಾಜು ಇಲಾಖೆಯು ನಿರ್ಣಯ ಕೈಗೊಂಡಿದೆ.

ಅದೇ ರೀತಿ ಎಲ್ಲಾ ಗ್ರಾಹಕ ಚಟುವಟಿಕೆಗಳಿಗೆ ಸಂಬಂಧಿಸಿದ ಯೋಜನೆಗಳನ್ನು ವಿಲೀನಗೊಳಿಸಲು ಇಲಾಖೆಯು ಪ್ರಸ್ತಾಪವನ್ನು ಮುಂದಿಟ್ಟಿದೆ. ಕಾನೂನು ಮಾಪನಶಾಸ್ತ್ರ ಎಲ್ಲಾ ಸಣ್ಣ ಯೋಜನೆ ಮತ್ತು ಎಲ್ಲಾ ಸಹಾಯ ಧನ ಯೋಜನೆಗಳನ್ನು ಒಂದೇ ಲೆಕ್ಕ ಶೀರ್ಷಿಕೆಯಡಿಯಲ್ಲಿ ವಿಲೀನಗೊಳಿಸಲು ಮುಂದಾಗಿದೆ. ಇದಕ್ಕೆ ಸಚಿವ ಉಮೇಶ್‌ ಕತ್ತಿ ಕೂಡ ಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆಗೆ ತೈಲ ಕಂಪನಿಗಳು ಕೊಕ್ಕೆ ಹಾಕಿದ್ದವು. ‘ಮುಖ್ಯಮಂತ್ರಿ ಅನಿಲ ಭಾಗ್ಯ‘ ಯೋಜನೆಯಡಿ 10 ಲಕ್ಷ ಫಲಾನುಭವಿಗಳಿಗೆ ಅಡುಗೆ ಅನಿಲದ ಸಂಪರ್ಕ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತಾದರೂ ತೈಲ ಕಂಪನಿಗಳ ನಿರ್ಧಾರದಿಂದ ಯೋಜನೆ ಅನುಷ್ಠಾನದಲ್ಲಿ ಹಿಂದುಳಿದಿತ್ತು. ಒಂದು ಲಕ್ಷಕ್ಕಿಂತ ಹೆಚ್ಚಿನ ಸಂಪರ್ಕ ನೀಡಲು ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಅನುಮತಿ ಪಡೆಯಬೇಕು ಎಂದೂ ಕಂಪನಿಗಳು ಸ್ಪಷ್ಟಪಡಿಸಿದ್ದವು

‘ಅನಿಲ ಸಂಪರ್ಕ ಕೇಂದ್ರದ ಸ್ವಾಮ್ಯಕ್ಕೆ ಸಂಬಂಧಿಸಿತ್ತು. ಹೀಗಾಗಿ ಇದರಲ್ಲಿ ರಾಜ್ಯ ಸರ್ಕಾರವು ಮಧ್ಯಪ್ರವೇಶಿಸಲು ಅವಕಾಶವಿರಲಿಲ್ಲ. ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆಯಡಿ ಗ್ಯಾಸ್‌ ಸಂಪರ್ಕ ನೀಡಲು ಅವಕಾಶ ಇಲ್ಲ’ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಸ್ಪಷ್ಟಪಡಿಸಿದ್ದರು. ಬಹುಶಃ ಇದೇ ಕಾರಣದಿಂದಲೇ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯನ್ನು ರಾಜ್ಯ ಬಿಜೆಪಿ ಸರ್ಕಾರವು ರದ್ದುಗೊಳಿಸಲು ಪ್ರಸ್ತಾಪಿಸಿದೆ ಎಂದು ಹೇಳಲಾಗುತ್ತಿದೆ.

‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆಯಡಿ 3.24 ಲಕ್ಷ ಅರ್ಜಿಗಳು ಸಲ್ಲಿಕೆ ಆಗಿದ್ದವು. 85,592 ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲು ಬ್ಯಾಂಕ್‌ ಡಿಮ್ಯಾಂಡ್‌ ಡ್ರಾಫ್ಟ್‌ ತೆಗೆಯಲಾಗಿತ್ತು. ಈ ಪೈಕಿ, 65 ಸಾವಿರ ಫಲಾನುಭವಿಗಳಿಗೆ ಸಂಪರ್ಕ ನೀಡಲಾಗಿತ್ತು. ಆದರೆ, ಯೋಜನೆಯಡಿ ವಿತರಿಸಲು ಎಂಎಸ್‌ಐಎಲ್‌ ಮೂಲಕ ಆಹಾರ ಇಲಾಖೆ ಒಂದು ಲಕ್ಷ ಗ್ಯಾಸ್‌ ಸ್ಟೌ ಖರೀದಿಸಿತ್ತು.

ಅಡುಗೆ ಅನಿಲ ಸಂಪರ್ಕರಹಿತ ಎಲ್ಲ ಬಿಪಿಎಲ್‌ ಕುಟುಂಬಗಳಿಗೆ ಸಂಪರ್ಕ ಕಲ್ಪಿಸಲು, ಕೇಂದ್ರ ಸರ್ಕಾರ 2016ರಲ್ಲಿ ಪಿಎಂಯುವೈ ಆರಂಭಿಸಿತ್ತು. 2011ರ ಸಾಮಾಜಿಕ ಆರ್ಥಿಕ ಸಮೀಕ್ಷೆಯಡಿ ಗುರುತಿಸಿದ್ದ ಬಿಪಿಎಲ್‌ ಕುಟುಂಬಗಳಿಗೆ ಆ ಯೋಜನೆಯಡಿ ಗ್ಯಾಸ್‌ ಸಂಪರ್ಕ ನೀಡಿತ್ತು ಎಂದು ತಿಳಿದು ಬಂದಿದೆ.

ಪಿಎಂ ಉಜ್ವಲ’ ಯೋಜನೆಯಡಿ ಸಿಲಿಂಡರ್‌ ಠೇವಣಿ ಮತ್ತು ರೆಗ್ಯುಲೇಟರ್‌ ವೆಚ್ಚ ಸೇರಿ ಒಟ್ಟು 1,600 ರೂ. ಸಬ್ಸಿಡಿ ಭರಿಸಲಾಗುತ್ತಿತ್ತು. ‘ಸಿಎಂ ಅನಿಲ ಭಾಗ್ಯ’ ಯೋಜನೆಯಡಿ ಸಿಲಿಂಡರ್‌, ಕನೆಕ್ಟರ್‌, ರೆಗ್ಯುಲೇಟರ್‌ ಹಾಗೂ ಸ್ಟೌ ಸೇರಿ 2,920 ರೂ.ಗಳನ್ನು ಭರಿಸಲು ತೀರ್ಮಾನಿಸಿದ್ದ ಹಿಂದಿನ ಕಾಂಗ್ರೆಸ್‌ ಸರಕಾರ ಈ ಯೋಜನೆಯನ್ನು ಜಾರಿಗೊಳಿಸಿತ್ತು.

ಉಜ್ವಲ ಯೋಜನೆ ಸೌಲಭ್ಯದಿಂದ ಹೊರಗುಳಿದ ಬಡ ಕುಟುಂಬಗಳಿಗೆ ರಾಜ್ಯ ಸರಕಾರದ ಸಿಎಂ ಅನಿಲ ಭಾಗ್ಯ ಯೋಜನೆ ಸೌಲಭ್ಯ ಸಿಗಲಿದ್ದು, ಫಲಾನುಭವಿಗಳು ಯಾವುದಾದರೊಂದು ಯೋಜನೆ ಆಯ್ಕೆ ಮಾಡಿಕೊಳ್ಳಬೇಕಿತ್ತು.

SUPPORT THE FILE

Latest News

Related Posts