ತೇಜಸ್ವಿ ಸೂರ್ಯ ಸೇರಿ ಹಲವರ ವಿರುದ್ಧ ಕ್ರಿಮಿನಲ್‌ ಪ್ರಕರಣ; ಶಿಕ್ಷೆಯಿಂದ ಪಾರಾಗಿದ್ದವರಿಗೆ ಕಂಟಕ

ಬೆಂಗಳೂರು; ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಉಲ್ಲಂಘನೆ ಆರೋಪದಡಿಯಲ್ಲಿ ರಾಜ್ಯದಾದ್ಯಂತ 5,846 ಮಂದಿ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಿದ್ದ ಪೊಲೀಸರು, ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಸಚಿವ ಗೋಪಾಲಯ್ಯ, ಸಂಸದ ಪಿ ಸಿ ಮೋಹನ್‌ , ಇನ್ನಿತರೆ ಶಾಸಕರೂ ಸಹ ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದರೂ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸದೇ ಪಾರು ಮಾಡಿದ್ದ ಪ್ರಕರಣಗಳು ಇದೀಗ ಮರು ಜೀವ ಪಡೆದುಕೊಂಡಿವೆ.

ಸರ್ಕಾರವೇ ಮಧ್ಯ ಪ್ರವೇಶ ಮಾಡಿ ಅವರನ್ನೆಲ್ಲಾ ಕ್ರಿಮಿನಲ್‌ ಕಾಯ್ದೆಗಳಿಂದ ಪಾರು ಮಾಡಿದ್ದ ಪ್ರಕರಣಗಳು ಮುನ್ನೆಲೆಗೆ ಬಂದಿವೆ. ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದನ್ನು ಒಪ್ಪಿ ಕೇವಲ ಅತ್ಯಲ್ಪ ಪ್ರಮಾಣದ ದಂಡ ಪಾವತಿಸಿ ಜೈಲು ಶಿಕ್ಷೆಯಿಂದ ಪಾರಾಗಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಪಿ ಸಿ ಮೋಹನ್‌, ಸಚಿವ ಗೋಪಾಲಯ್ಯ ಶಾಸಕ ಕೆ ಶ್ರೀನಿವಾಸಗೌಡ ಸೇರಿ ನಾಲ್ವರು ಶಾಸಕರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020 ರಡಿಯಲ್ಲಿ ದೂರು ದಾಖಲಿಸಲು ಜನಾಧಿಕಾರ ಸಂಘರ್ಷ ಪರಿಷತ್‌ ಸಜ್ಜಾಗಿದೆ.

ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020 ಪರಿಷ್ಕೃತವಾಗುವ ಮುನ್ನವೇ ಚುನಾಯಿತ ಜನಪ್ರತಿನಿಧಿಗಳು ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ದಂಡವನ್ನೂ ಪಾವತಿಸಿರುವುದರಿಂದ ಈ ಅಧಿನಿಯಮದಡಿ ಕ್ರಮ ಕೈಗೊಳ್ಳಬೇಕು ಎಂದು ಜನಾಧಿಕಾರ ಸಂಘರ್ಷ ಪರಿಷತ್‌ ಪೊಲೀಸ್‌ ಠಾಣೆ ಮೆಟ್ಟಿಲೇರಲು ನಿರ್ಧರಿಸಿದೆ. ವೈಯಾಲಿಕಾವಲ್‌ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದೆ. ಈ ಕುರಿತು ಪರಿಷತ್‌ನ ಸಹ ಅಧ್ಯಕ್ಷ ಆದರ್ಶ ಐಯ್ಯರ್‌ ಅವರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ.

ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ತಪ್ಪೆಸಗಿರುವವರಿಗೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020ರ ಕಲಂ 5 ರಡಿಯಲ್ಲಿ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಹೀಗಾಗಿಯೇ ಚುನಾಯಿತ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದಿದ್ದ ಸರ್ಕಾರವು ಈ ಅಧಿನಿಯಮವನ್ನು ಪರಿಷ್ಕೃತಗೊಳಿಸಿ ಅವರನ್ನು ಜೈಲು ಶಿಕ್ಷೆಯಿಂದ ಪಾರು ಮಾಡಿತ್ತು. ಆದರೀಗ ಜನಾಧಿಕಾರ ಸಂಘರ್ಷ ಪರಿಷತ್‌ ಇದನ್ನು ಕಾನೂನಿನ ಚೌಕಟ್ಟಿನಡಿಯಲ್ಲಿ ಪ್ರಕರಣವನ್ನು ಮುಂದುವರೆಸಲು ಸಜ್ಜಾಗಿದೆ.

ಅಧಿನಿಯಮದಲ್ಲೇನಿದೆ?

ಇದರ ಪ್ರಕಾರ ಯಾವೊಬ್ಬ ವ್ಯಕ್ತಿ, ಸಂಸ್ಥೆ ಅಥವಾ ಕಂಪನಿಯು 4ನೇ ಪ್ರಕರಣದ ಯಾವುದೇ ಉಪಬಂಧಗಳನ್ನು ಈ ಅಧಿನಿಯಮದಡಿಯಲ್ಲಿ ಮಾಡಲಾಧ ನಿಯಮಗಳು, ವಿನಿಮಯ ಅಥವಾ ಆದೇಶವನ್ನು ಉಲ್ಲಂಘಿಸತಕ್ಕದ್ದಲ್ಲ ಅಥವಾ ಅವಿಧೇಯತೆಯನ್ನು ತೋರಿಸತಕ್ಕದ್ದಲ್ಲ ಎಂದು ಅಧಿನಿಯಮದಲ್ಲಿ ಹೇಳಲಾಗಿದೆ.

ಅದೇ ರೀತಿ ಈ ಅಧಿನಿಯಮದ ಅಥವಾ ಅದರಡಿಯಲ್ಲಿ ಮಾಡಲಾದ ನಿಯಮಗಳೂ, ವಿನಿಯಮಗಳು ಅಥವಾ ಆದೇಶಗಳ ಯಾವುದೇ ಉಪಬಂಧಗಳ ಅನುಸರಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಥವಾ ಕಾರ್ಯನಿರ್ವಹಿಸುತ್ತಿರುವನೆಂದು ಅಥವಾ ಕರ್ತವ್ಯವನ್ನು ನಿರ್ವಹಿಸುತ್ತಿರುವ ಯಾವೊಬ್ಬ ಅಧಿಕಾರಿ ಅಥವಾ ಯಾವೊಬ್ಬ ಸಾರ್ವಜನಿಕ ನೌಕರನಿಗೆ ಯಾವೊಬ್ಬ ವ್ಯಕ್ತಿಯು ಅಡಚಣೆಯನ್ನು ಮಾಡತಕ್ಕದ್ದಲ್ಲ ಎಂದು ವಿವರಿಸಲಾಗಿದೆ.

ಹಾಗೆಯೇ (1) (2) ಅಥವಾ (3)ನೇ ಉಪಪ್ರಕರಣದ ಯಾವುದೇ ಉಪಬಂಧಗಳನ್ನು ಉಲ್ಲಂಘಿಸುವ ಯಾವೊಬ್ಬನು ಅಪರಾಧ ನಿರ್ಣಯವಾದ ಮೇಲೆ ಮೂರು ತಿಂಗಳಿಗೆ ಕಡಿಮೆಯಿಲ್ಲ ಆದರೆ ಐದು ವರ್ಷಗಳಿಗೆ ವಿಸ್ತರಿಸಬಹುದಾದ ಅವಧಿಯ ಕಾರವಾಸದೊಂದಿಗೆ ಮತ್ತುಐವತ್ತು ಸಾವಿರ ರು.ಗಳಿಗೆ ಕಡಿಮೆಯಲ್ಲ ಆದರೆ ಎರಡು ಲಕ್ಷ ರೂಪಾಯಿಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆಯೊಂದಿಗೆ ದಂಡಿತನಾಗತಕ್ಕದ್ದು ಎಂದಿದೆ.

ಈ ಅಧಿನಿಯಮವು ಚಾಲ್ತಿಯಲ್ಲಿರುವಾಗಲೇ ಸಂಸದ ತೇಜಸ್ವಿ ಸೂರ್ಯ, ಪಿ ಸಿ ಮೋಹನ್‌, ಸಚಿವ ಗೋಪಾಲಯ್ಯ, ಕೆ ಶ್ರೀನಿವಾಸಗೌಡ, ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಪ್ಪ, ವಿಧಾನಪರಿಷತ್‌ ಸದಸ್ಯ ರಮೇಶ್‌ಗೌಡ, ಮಾಜಿ ಶಾಸಕ ಎಲ್‌ ಆರ್‌ ಶಿವರಾಮೇಗೌಡ ಮತ್ತು ಇತರರು ಉಲ್ಲಂಘಿಸಿದ್ದರು. ಆದರೆ ಸಕ್ಷಮ ಪ್ರಾಧಿಕಾರವು ಇವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದರು. ಅಲ್ಲದೆ ಈ ಪ್ರಕರಣವು ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದ್ದಾಗಲೇ ಇವರ ರಕ್ಷಣೆಗೆ ಧಾವಿಸಿದ್ದ ಸರ್ಕಾರವು ಅಧಿನಿಯಮವನ್ನು ಪರಿಷ್ಕೃತಗೊಳಿಸಿತ್ತು.

ತೇಜಸ್ವಿ ಸೂರ್ಯ ಪ್ರಕರಣದ ವಿವರ

ಸಂಸದ ತೇಜಸ್ವಿ ಸೂರ್ಯ ಅವರು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾದ ನಂತರ 2020ರ ಸೆಪ್ಟಂಬರ್‌ 30ರಂದು ತಮ್ಮ ಬೆಂಬಲಿಗರೊಂದಿಗೆ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರೆದ ವಾಹನದಲ್ಲಿ ಮೆರವಣಿಗೆಯೊಂದಿಗೆ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಮಧ್ಯಾಹ್ನ 15-15ರಿಂದ 16-30ರ ಮಧ್ಯೆ ಬಂದಿದ್ದರು.

ಆ ಸಮಯದಲ್ಲಿ ವೈಯಾಲಿಕಾವಲ್‌ ಪೊಲೀಸ್‌ ಠಾಣೆ ಸರಹದ್ದಿನ ರಸ್ತೆಯಲ್ಲಿ ತೇಜಸ್ವಿ ಸೂರ್ಯಾ ವರ ಬೆಂಬಲಿಗರು ಸುಮಾರು 100 ಜನರು ಗುಂಪು ಸೇರಿದ್ದು ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿ ಆ ಜನರಿಗೆ ಕೋವಿಡ್‌-19 ಹರಡದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದು ಮತ್ತು ಎಲ್ಲರೂ ಸರಿಯಾದ ರೀತಿಯಲ್ಲಿ ಮಾಸ್ಕ್‌ ಧರಿಸಬೇಕು ಎಂದು ತಿಳಿಸಿದ್ದರೂ ಅವರೆಲ್ಲರೂ ನಿರ್ಲಕ್ಷ್ಯ ವಹಿಸಿದ್ದರು ಎಂದು ವೈಯಾಲಿಕಾವಲ್‌ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಅವರು ನ್ಯಾಯಾಲಯಕ್ಕೆ 2020ರ ನವೆಂಬರ್‌ 4ರಂದು ವರದಿ ಮಾಡಿದ್ದರು.

ಅಷ್ಟೇ ಅಲ್ಲದೆ ತೇಜಸ್ವಿ ಸೂರ್ಯ ಮತ್ತು ಬಿಜೆಪಿ ಪಕ್ಷದ ಇತರೆ ಕಾರ್ಯಕರ್ತರುಗಳು 2020ರ ಸೆಪ್ಟಂಬರ್‌ 30ರಂದು ನಡೆದಿದ್ದ ಬೈಕ್‌ ಜಾಥಾದಲ್ಲಿ ಮಾಸ್ಕ್‌ ಧರಿಸಿರಲಿಲ್ಲ ಮತ್ತು ಸಾಮಾಜಿಕ ಅಂತರ ಕಾಪಾಡಿರಲಿಲ್ಲ. ಆದರೂ ಪೊಲೀಸ್‌ ಅಧಿಕಾರಿಗಳು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020 ರಡಿ ಕ್ರಮ ಕೈಗೊಂಡಿಲಿಲ್ಲ. ಬದಲಿಗೆ ಅತ್ಯಲ್ಪ ಪ್ರಮಾಣದ ಅಂದರೆ 250 ರು. ದಂಡ ವಿಧಿಸಿದ್ದರು. ತೇಜಸ್ವಿ ಸೂರ್ಯ (ರಶೀದಿ ಸಂಖ್ಯೆ; EZ202011070511428603)ಸೇರಿ ಬಿಜೆಪಿಯ ಇತರೆ ಕಾರ್ಯಕರ್ತರು 250 ರು. ದಂಡ ಪಾವತಿಸಿದ್ದರು.

ಅದೇ ರೀತಿ ಕೆಂಪೇಗೌಡರ ಕಂಚಿನ ಪ್ರತಿಮೆ ಸ್ಥಾಪನೆ ಸಂಬಂಧ ನಡೆದಿದ್ದ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚುನಾಯಿತ ಜನಪ್ರತಿನಿಧಿಗಳು ಮಾಸ್ಕ್‌, ಸಾಮಾಜಿಕ ಅಂತರ ಸೇರಿದಂತೆ ಇತರೆ ನಿಯಮಗಳನ್ನು ಉಲ್ಲಂಘಿಸಿರುವ ಆರೋಪಕ್ಕೆ ಗುರಿಯಾಗಿದ್ದರು. ಈ ಸಂಬಂಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್‌ ಠಾಣೆಯ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಅವರು ಹೈಕೋರ್ಟ್‌ಗೆ ಪಾಲನಾ ವರದಿ ಸಲ್ಲಿಸಿದ್ದರು.

ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಕೋಲಾರ ಶಾಸಕ ಕೆ ಶ್ರೀನಿವಾಸಗೌಡ, ಸಚಿವ ಕೆ ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್‌ ಶಾಸಕ), ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಪ್ಪ, ಸಂಸದ ಪಿ ಸಿ ಮೋಹನ್‌, ವಿಧಾನಪರಿಷತ್‌ ಸದಸ್ಯ ರಮೇಶ್‌ಗೌಡ, ಮಾಜಿ ಶಾಸಕ ಎಲ್‌ ಆರ್‌ ಶಿವರಾಮೇಗೌಡ, ಬಿಜೆಪಿ ಮುಖಂಡ ಆನಂದ್‌, ಬೆಂಗಳೂರಿನ ರಂಝಿತ್‌, ಬಿಐಎಲ್ ಉದ್ಯೋಗಿ ಬಿರಾದಾರ್‌, ಮೋಹನ್‌ ಆರಾಧ್ಯ, ರೂಪಿಣಿ ಅವರ ವಿರುದ್ಧ ಕ್ರಮ ಜರುಗಿಸಿದ್ದರು.

ಒಟ್ಟು 12 ಮಂದಿ ವಿರುದ್ಧ 2020ರ ಅಕ್ಟೋಬರ್‌ 15ರಂದು ಪ್ರಕರಣ ದಾಖಲಿಸಿಕೊಂಡು ಅವರಿಂದ 1,200 ರು. ದಂಡ ಪಾವತಿಸಿಕೊಂಡಿದ್ದರು.

ಇದೇ ಅವಧಿಯಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದರು ಎಂಬ ಆರೋಪದಡಿಯಲ್ಲಿ ರಾಜ್ಯಾದಾದ್ಯಂತ ಒಟ್ಟು 2,52,904 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಈ ಪೈಕಿ 12,344 ಮಂದಿಯನ್ನು ಬಂಧಿಸಲಾಗಿತ್ತು. 1,13,154 ವಾಹನಗಳನ್ನು ಜಫ್ತಿ ಮಾಡಿಕೊಳ್ಳಲಾಗಿತ್ತಲ್ಲದೆ 5,846 ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು. ಅದೇ ರೀತಿ 7,38,74,890 ರು. ಗಳ ದಂಡವನ್ನೂ ವಿಧಿಸಲಾಗಿತ್ತು ಎಂದು ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಮಾಹಿತಿಯನ್ನು ನೀಡಿತ್ತು.

ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದನ್ನು ಒಪ್ಪಿಕೊಂಡಿದ್ದ ಚುನಾಯಿತ ಜನಪ್ರತಿನಿಧಿಗಳನ್ನು ಶಿಕ್ಷಿಸಲು ಸಿದ್ಧವೇ ಎಂಬುದನ್ನು ರಾಜ್ಯ ಸರ್ಕಾರವು ಸ್ಪಷ್ಟಪಡಿಸಬೇಕು ಎಂದು ಹೈಕೋರ್ಟ್‌ ಸೂಚಿಸಿತ್ತು. ಸಂಸದ ತೇಜಸ್ವಿ ಸೂರ್ಯ ಮತ್ತು ಇತರ ಎಂಟು ಮಂದಿಯ ಪ್ರಕರಣವನ್ನುಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ನೇತೃತ್ವದ ವಿಭಾಗೀಯ ಪೀಠ, ಕ್ರಿಮಿನಲ್‌ ಪ್ರಕರಣವನ್ನು ಏಕೆ ದಾಖಲಿಸಿಲ್ಲ ಎಂದು ಪ್ರಶ್ನಿಸಿತು. ಈ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿರುವುದಾಗಿಯೂ ಹೇಳಿದ್ದನ್ನು ಸ್ಮರಿಸಬಹುದು.

ಮಾರ್ಗಸೂಚಿ ಉಲ್ಲಂಘಿಸುವ ರಾಜಕಾರಣಿಗಳು ಮತ್ತು ಅವರ ಬೆಂಬಲಿಗರ ವಿರುದ್ಧ ಅಸಂಜ್ಞೇಯ ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡುವುದರ ಹೊರತಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಅಂತಹವರ ವಿರುದ್ಧ ಕ್ರಿಮಿನಲ್‌ ಕಾಯ್ದೆಗಳನ್ನು ಏಕೆ ಬಳಸಿಲ್ಲ? ಈ ಕುರಿತು ಮುಂದಿನ ವಿಚಾರಣೆ ವೇಳೆ ರಾಜ್ಯ ಸರ್ಕಾರ ವಿವರಣೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿತ್ತು.

SUPPORT THE FILE

Latest News

Related Posts