ಬೆಂಗಳೂರು; ಕಾನೂನು ಸುವ್ಯವಸ್ಥೆ ನಿರ್ವಹಣೆ ಸೇರಿದಂತೆ ಇನ್ನಿತರೆ ಉದ್ದೇಶಗಳಿಗಾಗಿ ಸಂಪನ್ಮೂಲ ಕ್ರೋಢೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ರಾಜ್ಯ ಬಿಜೆಪಿ ಸರ್ಕಾರವು ಅಭಿವೃದ್ಧಿ ಮತ್ತು ಅಭಿವೃದ್ಧಿಯೇತರ ಚಟುವಟಿಕೆಗಳಿಗಾಗಿ ಸರ್ಕಾರಿ ಕಂಪನಿ, ಸರ್ಕಾರೇತರ ಸಂಸ್ಥೆ ಸೇರಿದಂತೆ ಇನ್ನಿತರೆ ಸಂಸ್ಥೆಗಳಿಗೆ ನೀಡಿದ್ದ ಸಾಲ ವಸೂಲಾತಿ ಮತ್ತು ಬಾಕಿ ಸಂಗ್ರಹಣೆಗಿಳಿದಿದೆ.
ಆರ್ಥಿಕ ಇಲಾಖೆಯನ್ನೂ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತೀಯ ಗೂಂಡಾಗಿರಿ ಕುರಿತು ಇತ್ತೀಚೆಗಷ್ಟೇ ನೀಡಿದ್ದ ಹೇಳಿಕೆಯ ನಂತರ ತುಮಕೂರು ಸೇರಿದಂತೆ ವಿವಿಧೆಡೆ ಅಲ್ಲಲ್ಲಿ ಕೋಮು ಸಾಮರಸ್ಯ ಹದಗೆಡಿಸುವಂತಹ ಚಟುವಟಿಕೆಗಳು ನಡೆದಿವೆ. ಇದು ಕಾನೂನು ಸುವ್ಯವಸ್ಥೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿರುವ ಬೆನ್ನಲ್ಲೇ ಕಾನೂನು ಸುವ್ಯವಸ್ಥೆ ನಿರ್ವಹಣೆಗೂ ಸಂಪನ್ಮೂಲ ಸಂಗ್ರಹಣೆಗಿಳಿದಿರುವುದು ಮಹತ್ವ ಪಡೆದುಕೊಂಡಿದೆ.
2022-23ನೇ ಸಾಲಿನ ರಾಜಸ್ವ ಜಮೆ ತಯಾರಿಸುವುದು ಮತ್ತು ಬಾಕಿ ಸಂಗ್ರಹಣೆಯೂ ಸೇರಿದಂತೆ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ 2021ರ ಅಕ್ಟೋಬರ್ 18ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆಗೂ ಸಂಪನ್ಮೂಲ ಸಂಗ್ರಹಣೆ ಮಾಡಲು ಸೂಚಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಏಕ್‌ರೂಪ್ ಕೌರ್ ಅವರು 2021ರ ಅಕ್ಟೋಬರ್ 18ರಂದು ಹೊರಡಿಸಿರುವ ಸುತ್ತೋಲೆಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಈ ಹಿಂದೆ ಸಾಕಷ್ಟು ಸಾಲಗಳನ್ನು ಮಂಜೂರು ಮಾಡಲಾಗಿದ್ದು, ಅವುಗಳು ವಸೂಲಾಗದೆ ಇನ್ನೂ ಬಾಕಿ ಉಳಿದಿದೆ. ಅಭಿವೃದ್ಧಿ, ಅಬಿವೃದ್ಧಿಯೇತರ ಚಟುವಟಿಕೆಗಳಿಗಾಗಿ ಸರ್ಕಾರಿ ಕಂಪನಿಗಳು, ಕಾರ್ಪೋರೇಷನ್‌ಗಳು, ಸ್ಥಳೀಯ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳು, ಸಹಕಾರಿ ಸಂಘಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಇತ್ಯಾದಿಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ನೀಡಲಾಗಿದೆ. ಆದರೆ ಬಾಕಿ ಉಳಿದಿರುವ ಸಾಲದ ಪ್ರಮಾಣ ಹೆಚ್ಚಾಗಿದೆ. ಮತ್ತು ಸಾಲಗಳ ವಸೂಲಾತಿಯು ಹೆಚ್ಚಾಗದೇ ಸ್ಥಿರವಾಗಿದೆ ಎಂಬ ಅಂಶವು ಸುತ್ತೋಲೆಯಿಂದ ತಿಳಿದು ಬಂದಿದೆ.
ಈ ಮಧ್ಯೆ ಸರ್ಕಾರವು ಹೂಡಿಕೆಗಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯಲ್ಲಿ ಸಾಲ ಪಡೆಯುತ್ತಿದೆ. ಈ ಹೂಡಿಕೆಗಳ ಮೇಲಿನ ಮರು ಪಾವತಿಯ ಶೇಕಡವಾರು ಪ್ರಮಾಣವು ತುಂಬಾ ಕಡಿಮೆಯಾಗಿದೆ ಎಂಬುದು ತಿಳಿದು ಬಂದಿದೆ. ಅದೇ ರೀತಿ ಬಾಕಿ ಇರುವ ಸಾಲಗಳು, ಸಾಲಗಳ ನಿಬಂಧನೆಗಳು ಮತ್ತು ಷರತ್ತುಗಳನ್ವಯ 2022-23ರಲ್ಲಿ ನಿರೀಕ್ಷಿಸಲಾದ ವಸೂಲಾತಿಯ ಆಧಾರದ ಮೇಲೆ ಸಾಲ ಸ್ವೀಕೃತಿಗಳ ಅಂದಾಜುಗಳನ್ನು ತಯಾರಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
‘ಸಾಲಗಳು, ಬಂಡವಾಳ ಹೂಡಿಕೆ ಮತ್ತು ಮರು ಪಾವತಿ ಅವಧಿಯ ಷರತ್ತು ಮತ್ತು ನಿಬಂಧನೆಗಳನ್ವಯ ವಿವಿಧ ಸಾರ್ವಜನಿಕ ಉದ್ದಿಮೆಗಳು, ಸಹಕಾರಿ ಸಂಘಗಳು, ಸ್ವಾಯತ್ತ ಸಂಸ್ಥೆಗಳಿಂದ ಬಡ್ಡಿ ಸ್ವೀಕೃತಿ, ಲಾಭಾಂಶಗಳು, ಬಂಡವಾಳ ವಸೂಲು ಮತ್ತು ಇತರೆ ಇಲಾಖೆ ಸಾಲಗಳನ್ನು ವಸೂಲು ಮಾಡಬೇಕು,’ ಎಂದು ಸೂಚಿಸಿರುವುದು ಸುತ್ತೋಲೆಯಿಂದ ತಿಳಿದು ಬಂದಿದೆ.
ಬಾಕಿ ಸಂಗ್ರಹಣೆ
ವಾರ್ಷಿಕ ಯೋಜನೆಗಳಿಗೆ, ಹಿಂದಿನ ಯೋಜನಾ ಅವಧಿಯ ಬದ್ಧತಾ ವೆಚ್ಚಗಳಿಗೆ, ಕಾಲಕಾಲಕ್ಕೆ ತುಟ್ಟಿಭತ್ಯೆಯ ಹೆಚ್ಚಳ, ಕಾನೂನು, ಸುವ್ಯವಸ್ಥೆಯ ನಿರ್ವಹಣೆ ಮತ್ತು ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಪರಿಹಾರ ಕಾಮಗಾರಿಗಳು ಮತ್ತು ಸಮಾಜ ಕಲ್ಯಾಣ ಕಾರ್ಯಗಳಿಗೆ ಹಣ ಒದಗಿಸಲು ಸಂಪನ್ಮೂಲ ಸಂಗ್ರಹಿಸಲು ಆದೇಶಿಸಿದೆ. ಅಲ್ಲದೆ ಈ ಉದ್ದೇಶಗಳಿಗಾಗಿ ಇಲಾಖಾ ಮುಖ್ಯಸ್ಥರುಗಳು ಬಾಕಿ ವಸೂಲಾತಿಗೆ ಕಟ್ಟುನಿಟ್ಟಿನ ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ರಾಜಸ್ವ ಸ್ವೀಕೃತಿಯಲ್ಲಿ ಇಳಿಮುಖ
ರಾಜಸ್ವ ಸ್ವೀಕೃತಿಯಲ್ಲಿ ತೆರಿಗೆಯೇತರ ರಾಜಸ್ವದ ಪಾಲು ಕಳೆದ ಹಲವು ವರ್ಷಗಳಿಂದಲೂ ಇಳಿಮುಖಗೊಂಡಿದೆ. ವೆಚ್ಚ ವಸೂಲಾತಿ ದರದಲ್ಲಿ ಇಳಿಕೆ ಮತ್ತು ಕ್ಷೀಣತೆ, ಸಾರ್ವಜನಿಕ ಉದ್ದಿಮೆಗಳ ಕಳಪೆ ಕಾರ್ಯನಿರ್ವಹಣೆ ಹಾಗೂ ಲಾಭಕರವಲ್ಲದ ದುಬಾರಿ ಸಹಾಯಧನಗಳಿಂದಾಗಿ ಜಿಎಸ್‌ಡಿಪಿಗೆ ಹೋಲಿಸಿದಲ್ಲಿ ತೆರಿಗೆಯೇತರ ರಾಜಸ್ವದದ ಪ್ರಮಾಣವು ನಗಣ್ಯವಾಗಿದೆ.
ತೆರಿಗೆಯೇತರ ರಾಜಸ್ವ ಇಳಿಮುಖವಾಗಲು ಬಳಕೆ ಶುಲ್ಕಗಳ ಪರಿಷ್ಕರಣೆಯಾಗದಿರುವುದು ಮತ್ತು ಆಡಳಿತ ಇಲಾಖೆಗಳ ಮೇಲ್ವಿಚಾರಣೆಯ ಕೊರತೆಯು ಕೂಡ ಕಾರಣ. ಹೀಗಾಗಿ ರಾಜಸ್ವವನ್ನು ಹೆಚ್ಚಿಸಲು ಬಳಕೆದಾರರ ಶುಲ್ಕಗಳನ್ನು ನಿಯಮಿತವಾಗಿ ಪರಿಷ್ಕರಣೆ ಮಾಡಲು ಆರ್ಥಿಕ ಇಲಾಖೆಯು ಮುಂದಾಗಿದೆ.
ಮಾರುಕಟ್ಟೆಯ ಸಾಲವೂ ಸೇರಿದಂತೆ ಇನ್ನಿತರೆ ಮೂಲಗಳಿಂದ ಪಡೆಯುವ ಕೋಟ್ಯಂತರ ಮೊತ್ತದ ಸಾಲವನ್ನು ಬಂಡವಾಳ ಸೃಜನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸಬೇಕಿದ್ದ ರಾಜ್ಯ ಬಿಜೆಪಿ ಸರ್ಕಾರವು ಸಾಲದ ಬಡ್ಡಿ ಮತ್ತು ಸಾಲ ಮರುಪಾವತಿಸಲು ಬಳಸಿದೆ.
ಅಲ್ಲದೆ ಅಧಿಕ ಪ್ರಮಾಣದಲ್ಲಿ ನಗದು ಶಿಲ್ಕು ಹೊಂದಿದ್ದರೂ ಹಲವು ಸಂದರ್ಭಗಳಲ್ಲಿ ಮಾರುಕಟ್ಟೆಯಿಂದ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಪಡೆದಿದೆ. 2019-20ರಲ್ಲೇ ಸರಾಸರಿ ಶೇ. 6.38 ದರದಲ್ಲಿ 19,903 ಕೋಟಿ ರು. ಬಡ್ಡಿ ಪಾವತಿಸಿತ್ತು. ಬಹುಪಾಲು ಸಾಲವನ್ನು ತಪ್ಪಿಸಬಹುದಾಗಿದ್ದರೂ 48,499 ಕೋಟಿಯಷ್ಟು ಸಾಲ ಪಡೆದಿತ್ತು. ಅಲ್ಲದೆ ಹಿಂದಿನ ಕಾಂಗ್ರೆಸ್ ಸರ್ಕಾರದಿಂದಲೂ ಅಗತ್ಯಕ್ಕಿಂತಲೂ ಹೆಚ್ಚಿನ ಸಾಲವನ್ನು ಪಡೆದಿದೆ. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಅದರಲ್ಲೂ ತಾರ್ಕಿಕ ಕಾರಣಗಳಿಲ್ಲದಿದ್ದರೂ ಸಾವಿರಾರು ಕೋಟಿ ಸಾಲ ಪಡೆದಿದ್ದನ್ನು ಸ್ಮರಿಸಬಹುದು.
‘ಹಿಂದಿನ ವರ್ಷಗಳಿಗೆ ಹೋಲಿಸಿದರೆ 2019-20ರ ಅವಧಿಯಲ್ಲಿ ರಾಜ್ಯದ ಬಂಡವಾಳ ವೆಚ್ಚದಲ್ಲಿ ಹೆಚ್ಚಿನ ಏರಿಕೆ ಕಂಡು ಬಂದಿಲ್ಲ. ಆದ್ದರಿಂದ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಪಡೆಯಲು ಯಾವುದೇ ತಾರ್ಕಿಕ ಕಾರಣವಿರಲಿಲ್ಲ. ಶೇ.60ರಷ್ಟು ನಗದು ಶಿಲ್ಕನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನ ಮೀಸಲು ನಿಧಿಯಲ್ಲಿ ತೊಡಗಿಸಿತ್ತು. ಶೇಕಡ 60 ಭಾಗದ ಹೂಡಿಕೆಯನ್ನು ತೂಗಿಸಲು ರಾಜ್ಯ ಸರ್ಕಾರದ ಮಾಸಿಕ ನಗದು ಶಿಲ್ಕು ಸಮಾಧಾನಕರವಾಗಿದ್ದರಿಂದ ಹೆಚ್ಚಿನ ಸಾಲಗಳಿಗೆ ಮೊರೆ ಹೋಗುವ ಅಗತ್ಯವೇ ಇರಲಿಲ್ಲ. ಆದ್ದರಿಂದ ಸಾಲ ಅದರಲ್ಲೂ ಮಾರುಕಟ್ಟೆ ಸಾಲವನ್ನು ಮತ್ತು ಅದರ ಮೇಲಿನ ಬಡ್ಡಿ ಹೊರೆಯನ್ನು ತಪ್ಪಿಸಬಹುದಾಗಿತ್ತು,’ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.