ಐಟಿ ದಾಳಿ ಬೆನ್ನಲ್ಲೇ ಹೆಟಿರೋ ರೆಮ್‌ಡಿಸಿವಿರ್‌ ವಹಿವಾಟು ಬಹಿರಂಗ; ಸಾವಿರ ಕೋಟಿ ವಹಿವಾಟು!

ಬೆಂಗಳೂರು; 550 ಕೋಟಿ ಮೊತ್ತದ ದಾಖಲೆ ರಹಿತ ಆದಾಯವನ್ನು ಹೊಂದಿರುವ ಹೈದರಾಬಾದ್‌ ಮೂಲದ ಹೆಟಿರೋ ಫಾರ್ಮಾಸ್ಯುಟಿಕಲ್ಸ್‌ ಸಮೂಹ ಸಂಸ್ಥೆಗೆ ಕೋವಿಡ್‌ 2ನೇ ಅಲೆಯ ಸಂದರ್ಭದಲ್ಲಿ ಅಂದಾಜು 1,036 ಕೋಟಿ ರು. ಮೌಲ್ಯದ 29.65 ಲಕ್ಷ ರೆಮ್‌ಡಿಸಿವರ್‌ ವಯಲ್‌ಗಳನ್ನು ಸರಬರಾಜು ಮಾಡಲು ಕೇಂದ್ರ ಆರೋಗ್ಯ ಸಚಿವಾಲಯವು ಹಂಚಿಕೆ ಮಾಡಲು ಗುರಿ ನಿಗದಿಪಡಿಸಿತ್ತು.

ಅಲ್ಲದೆ ಕರ್ನಾಟಕಕ್ಕೆ  3,46,000 ವಯಲ್‌ಗಳನ್ನು ಹಂಚಿಕೆ ಮಾಡಲು ಕೇಂದ್ರ ಗುರಿ ನಿಗದಿಪಡಿಸಿದ್ದರೂ ಒಂದೇ ಒಂದು ವಯಲ್‌ನ್ನೂ ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡದೆಯೇ ರಾಜ್ಯದೊಳಗಿನ ಮುಕ್ತ ಮಾರುಕಟ್ಟೆಗೆ 1,89,906 ವಯಲ್‌ಗಳನ್ನು ಬಿಡುಗಡೆ ಮಾಡಿತ್ತು ಎಂಬ ಅಂಶ ಇದೀಗ ಮುನ್ನೆಲೆಗೆ ಬಂದಿದೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ಕಂಪನಿಯ ಮೇಲೆ ದಾಳಿ ನಡೆಸಿದ್ದ ವೇಳೆಯಲ್ಲಿ 550 ಕೋಟಿ ಮೊತ್ತದ ದಾಖಲೆ ರಹಿತ (ಲೆಕ್ಕವಿಲ್ಲದ) ಆದಾಯವನ್ನು ಪತ್ತೆ ಮಾಡಿದ್ದರ ಬೆನ್ನಲ್ಲೇ ಈ ಕಂಪನಿಯು ರೆಮ್‌ಡಿಸಿವಿರ್‌ನ್ನು ಸರಬರಾಜು ಮಾಡಿದ್ದ  ವಿವರಗಳು ಬಹಿರಂಗವಾಗಿವೆ.

ಏಪ್ರಿಲ್‌ ಮತ್ತು ಮೇ ತಿಂಗಳ ಮಧ್ಯದಲ್ಲಿ ರೆಮ್‌ಡಿಸಿವಿರ್‌ ವಯಲ್‌ಗೆ ತೀವ್ರ ಬೇಡಿಕೆ ಇದ್ದುದ್ದರಿಂದ ಹೆಟಿರೋ ಕಂಪನಿ ಸೇರಿದಂತೆ ಹಲವು ಕಂಪನಿಗಳು ವಯಲ್‌ಗೆ ಗರಿಷ್ಠ 5,400 ರು. ವರೆಗೆ ನಿಗದಿಪಡಿಸಿತ್ತು. ಭಾರತೀಯ ಔಷಧ ಪ್ರಾಧಿಕಾರವು ಮಧ್ಯ ಪ್ರವೇಶಿಸಿದ ನಂತರ ಕಂಪನಿಗಳು ತಮ್ಮ ದರವನ್ನು ಪರಿಷ್ಕರಿಸಿದ್ದವು. ಈ ಪೈಕಿ ಹೆಟಿರೋ ಕಂಪನಿಯು 5,400 ರು. ಗಳಿಂದ 3,490 ರು.ಗಳಿಗೆ (100 ಎಂಜಿ ವಯಲ್‌) ಇಳಿಸಿತ್ತು.

ಏಪ್ರಿಲ್‌ 21ರಿಂದ ಮೇ 31ರವರೆಗೆ ದೇಶದ ಎಲ್ಲಾ ರಾಜ್ಯಗಳಿಗೂ ರೆಮ್‌ಡಿಸಿವಿರ್‌ ಹಂಚಿಕೆ ಮಾಡಲು ಹೆಟಿರೋ ಕಂಪನಿಗೆ ಗುರಿ ನಿಗದಿಪಡಿಸಿದ್ದ 29.65 ಲಕ್ಷ ವಯಲ್‌ಗೆ ಪ್ರತಿ ವಯಲ್‌ಗೆ 3,490 ರು ಲೆಕ್ಕಾಚಾರದ ಪ್ರಕಾರ 1,036 ಕೋಟಿ ರು.ಮೌಲ್ಯದ್ದಾಗಿತ್ತು. ಒಟ್ಟು 29.65 ಲಕ್ಷ ವಯಲ್‌ಗಳ ಪೈಕಿ ದೇಶದ ರಾಜ್ಯಗಳಿಗೆ ಏಪ್ರಿಲ್‌ 21ರಿಂದ ಮೇ 9ರವರೆಗೆ 11, 21, 550 ವಯಲ್‌ಗಳನ್ನು ಹಂಚಿಕೆ ಮಾಡಿತ್ತು. ಇದರ ಮೊತ್ತ 560, 77, 50, 000 ರು. ಎಂದು ಗೊತ್ತಾಗಿದೆ.

ರಾಜ್ಯದ ಮುಕ್ತಮಾರುಕಟ್ಟೆಗೆ 66.77 ಕೋಟಿ ಮೌಲ್ಯದ ವಯಲ್‌ ಬಿಡುಗಡೆ

ವಿಶೇಷವೆಂದರೆ ಹೆಟಿರೋ ಫಾರ್ಮಾಸ್ಯುಟಿಕಲ್ಸ್‌ ಕಂಪನಿಯು ರಾಜ್ಯ ಸರ್ಕಾರಕ್ಕೆ 2021ರ ಏಪ್ರಿಲ್‌ 21ರಿಂದ ಮೇ 31ರವರೆಗೆ ಒಂದೇ ಒಂದು ವಯಲ್‌ನ್ನು ಬಿಡುಗಡೆ ಮಾಡಿರಲಿಲ್ಲ. ಆದರೆ ಮುಕ್ತ ಮಾರುಕಟ್ಟೆಗೆ 1,89,906 ವಯಲ್‌ಗಳನ್ನು ಪೂರೈಕೆ ಮಾಡಿತ್ತು. ಇದರ ಮೊತ್ತವೇ 66.77 ಕೋಟಿ ರು. ಎಂದು ತಿಳಿದು ಬಂದಿದೆ.

ಅಲ್ಲದೆ ಆಂಧ್ರ ಪ್ರದೇಶದಲ್ಲಿ ಈ ಕಂಪನಿಯು 9.60 ಕೋಟಿ ರು. ಮೌಲ್ಯದ 2,59,600 ವಯಲ್‌ ಮತ್ತು 4.65 ಕೋಟಿ ರು.ಮೌಲ್ಯದ 1,33,300 ವಯಲ್‌ಗಳನ್ನು ತೆಲಂಗಾಣಕ್ಕೆ ಬಿಡುಗಡೆ ಮಾಡಿತ್ತು ಎಂಬುದು ಕೇಂದ್ರ ಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿದ್ದ ದಾಖಲೆಯಿಂದ ಗೊತ್ತಾಗಿದೆ.

ಹೈದರಾಬಾದ್‌ ಮೂಲದ ಹೆಟಿರೊ ಫಾರ್ಮಸುಟಿಕಲ್ಸ್‌ ಸಮೂಹ ಸಂಸ್ಥೆಯು ಅಮೆರಿಕ, ಯುರೋಪ್, ದುಬೈ ಮತ್ತು ಇತರ ಆಫ್ರಿಕನ್ ದೇಶಗಳಿಗೆ ಹೆಚ್ಚಿನ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಈ ಕಂಪನಿ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು, ₹550 ಕೋಟಿ ಮೊತ್ತದ ದಾಖಲೆ ರಹಿತ ಆದಾಯವನ್ನು (ಲೆಕ್ಕವಿಲ್ಲದ) ಪತ್ತೆ ಮಾಡಿದ್ದರು. ಅಲ್ಲದೆ ₹142 ಕೋಟಿಗೂ ಅಧಿಕ ನಗದನ್ನು ವಶಪಡಿಸಿಕೊಂಡಿರುವ ಬಗ್ಗೆ ಆದಾಯ ತೆರಿಗೆ ಇಲಾಖೆ ಪ್ರಕಟಣೆ ನೀಡಿದ್ದನ್ನು ಸ್ಮರಿಸಬಹುದು.

ಮೈಲಾನ್‌ ಸೇರಿದಂತೆ ಒಟ್ಟು 7 ಕಂಪನಿಗಳು 2021ರ ಏಪ್ರಿಲ್‌ 21ರಿಂದ ಮೇ 31ರವರೆಗೆ ರಾಜ್ಯಕ್ಕೆ 10,11,431 ವಯಲ್ಸ್‌ಗಳನ್ನು ಪೂರೈಕೆ ಮಾಡಿತ್ತು. ಈ ಪೈಕಿ ಸರ್ಕಾರಕ್ಕೆ 4,26,784 ವಯಲ್‌ ಹಂಚಿಕೆ ಮಾಡಿದ್ದರೆ ಮುಕ್ತ ಮಾರುಕಟ್ಟೆಗೆ 5,84,647 ವಯಲ್‌ಗಳನ್ನು ಬಿಡುಗಡೆ ಮಾಡಿತ್ತು. ಸರ್ಕಾರಕ್ಕೆ 268,51,88,000 ರು. ಮೌಲ್ಯ ಮತ್ತು ಮುಕ್ತ ಮಾರುಕಟ್ಟೆಯಲ್ಲಿ 226, 02,66,050 ಕೋಟಿ ರು. ಮೌಲ್ಯದ ರೆಮ್‌ಡಿಸಿವೀರ್‌ ವಯಲ್‌ಗಳನ್ನು ಬಿಡುಗಡೆ ಮಾಡಿದ್ದವು.

ಮೈಲಾನ್‌ ಕಂಪನಿಯು (4,800 ರು.ದರ) 67,18,32,000 ರು.ಮೌಲ್ಯದ ರೆಮ್‌ಡಿಸಿವಿರ್‌ 1,39,965 ವಯಲ್‌ಗಳನ್ನು ಸರ್ಕಾರಕ್ಕೆ ಪೂರೈಕೆ ಮಾಡಿದ್ದರೆ ಮುಕ್ತ ಮಾರುಕಟ್ಟೆಗೆ 39, 12, 91,200 ರು. ಮೌಲ್ಯದ 81,519 ವಯಲ್‌ಗಳನ್ನು ಬಿಡುಗಡೆ ಮಾಡಿತ್ತು.

ಅದೇ ರೀತಿ ಸಿನ್‌ಜಿನ್‌ ಕಂಪನಿಯು 57,79,96,000 ರು. ಮೌಲ್ಯದ 1,44,499 ವಯಲ್‌ಗಳನ್ನು ಸರ್ಕಾರಕ್ಕೆ 66,07,80,000 ರು. ಮೌಲ್ಯದ 1,65,195 ವಯಲ್‌ಗಳನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಜ್ಯುಬಿಲಿಯೆಂಟ್‌ ಕಂಪನಿಯು 20,53,60,000 ರು. ಮೌಲ್ಯದ 60,4000 ವಯಲ್‌ಗಳನ್ನು ಸರ್ಕಾರಕ್ಕೆ 4,19,93,400 ರು. ಮೌಲ್ಯದ 12,351 ವಯಲ್‌ಗಳನ್ನು ಮುಕ್ತ ಮಾರುಕಟ್ಟೆಗೆ ಸರಬರಾಜು ಮಾಡಿತ್ತು.

ಇನ್ನು, ಡಾ ರೆಡ್ಡೀಸ್‌ ಲ್ಯಾಬ್‌ 16,69,15,150 ರು.ಮೌಲ್ಯದ 42,257 ವಯಲ್‌ಗಳನ್ನು ಮುಕ್ತ ಮಾರುಕಟ್ಟೆಗೆ ಪೂರೈಕೆ ಮಾಡಿತ್ತು. ಕ್ಯಾಡಿಲಾ ಕಂಪನಿಯು 4,97,56,000 ರು. ಮೌಲ್ಯದ 17,770 ವಯಲ್‌ಗಳನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.

ಮೈಲಾನ್‌ ಕಂಪನಿಯು ದೇಶದ ರಾಜ್ಯಗಳಿಗೆ 248,30,40,000 ರು. ಮೌಲ್ಯದ 5,17,300 ವಯಲ್‌ಗಳನ್ನು ಸರಬರಾಜು ಮಾಡಿದೆ. ಸಿಪ್ಲಾ ಕಂಪನಿಯು 185,56,00,000 ಮೌಲ್ಯದ 4,63,900 ವಯಲ್‌, ಸಿನ್‌ಜಿನ್‌ ಕಂಪನಿಯು 69,83,60,000 ರು.ಮೌಲ್ಯದ 1,76,800 ವಯಲ್‌, ಜ್ಯುಬಿಲಿಯೆಂಟ್‌ ಕಂಪನಿಯು 77,96,20,000 ರು.ಮೌಲ್ಯದ 2,29,300 ವಯಲ್‌, ಡಾ ರೆಡ್ಡೀಸ್‌ ಲ್ಯಾಬ್‌ 70,13,22,500 ಕೋಟಿ ರು. ಮೌಲ್ಯದ 1,77,550 ವಯಲ್‌, ಕ್ಯಾಡಿಲಾ ಕಂಪನಿಯು 213,80,80,000 ರು.ಮೌಲ್ಯದ 7,63,600 ವಯಲ್‌ಗಳನ್ನು ಏಪ್ರಿಲ್‌ 21ರಿಂದ ಮೇ 9ರವರೆಗೆ ಪೂರೈಕೆ ಮಾಡಿದ್ದನ್ನು ಸ್ಮರಿಸಬಹುದು.

ಸರಿಯಾದ ಸಮಯಕ್ಕೆ ರೆಮ್‌ಡಿಸಿವಿರ್‌ ಚುಚ್ಚುಮದ್ದು ದೊರೆಯದ ಕಾರಣ ಕೋವಿಡ್‌ ರೋಗಿಗಳು ಮತ್ತು ಅವರ ಕುಟುಂಬ ಸದಸ್ಯರು ಪರದಾಡುತ್ತಿದ್ದರೆ ಇತ್ತ ರೆಮ್‌ಡಿಸಿವಿರ್‌ ತಯಾರಿಕೆ ಕಂಪನಿಗಳು ಸರ್ಕಾರಕ್ಕಿಂತಲೂ ಮುಕ್ತ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸರಬರಾಜು ಮಾಡಿದ್ದವು.

the fil favicon

SUPPORT THE FILE

Latest News

Related Posts