ಔಷಧ ಸಂಗ್ರಹಣೆ; ಕೇಂದ್ರದ ಸೂಚನೆಯನ್ನೂ ನಿರ್ಲಕ್ಷ್ಯಿಸಿ ಮೈಮರೆತ ಬಿಜೆಪಿ ಸರ್ಕಾರ

ಬೆಂಗಳೂರು; ಕೋವಿಡ್‌ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಪ್ಯಾರಸಿಟಮಾಲ್‌ ಮತ್ತು ರೋಗ ನಿರೋಧಕ ಔಷಧಗಳ ದಾಸ್ತಾನು ಮಾಡಿಕೊಳ್ಳಲು ಕೇಂದ್ರ ಆರೋಗ್ಯ ಸಚಿವಾಲಯವು ಎರಡು ತಿಂಗಳ ಹಿಂದೆಯೇ ಸೂಚಿಸಿದ್ದರೂ ಪ್ಯಾರಸಿಟಮಲ್‌ ಸೇರಿದಂತೆ ಹಲವು ಔಷಧಗಳನ್ನು ಸೂಕ್ತ ಪ್ರಮಾಣದಲ್ಲಿ ದಾಸ್ತಾನಿನಲ್ಲಿ ಸಂಗ್ರಹಿಸಿಟ್ಟುಕೊಳ್ಳುವಲ್ಲಿ ರಾಜ್ಯ ಬಿಜೆಪಿ ಸರ್ಕಾರವು ವಿಫಲವಾಗಿದೆ.

ಕೋವಿಡ್‌ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತೆಯಾಗಿ ಔಷಧಗಳನ್ನು ಶೇಖರಿಸಿಡುವ ಸಂಬಂಧ 2021ರ ಜುಲೈ 13ರಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಕೇಂದ್ರ ಸರ್ಕಾರವು ಕಳೆದ 2 ತಿಂಗಳ ಹಿಂದೆಯೇ ಪತ್ರ ಬರೆದಿದ್ದರೂ ಸಚಿವ ಸುಧಾಕರ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಬರೆದಿರುವ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಕೊರೊನಾ ನಿರ್ವಹಣೆಯಲ್ಲಿ ರಾಜ್ಯಕ್ಕೆ ಸಂದಿರುವ ಪ್ರಶಸ್ತಿ ಬಗ್ಗೆ ಸಚಿವ ಡಾ ಕೆ ಸುಧಾಕರ್‌ ಅವರು ಹರ್ಷ ವ್ಯಕ್ತಪಡಿಸಿದ್ದರ ಬೆನ್ನಲ್ಲೇ ಕೋವಿಡ್‌ ಮತ್ತು ಕೋವಿಡೇತರ ಔಷಧಗಳ ಕೊರತೆ ಕಂಡುಬಂದಿರುವುದು ಮುನ್ನೆಲೆಗೆ ಬಂದಿದೆ.

ಔಷಧಗಳ ದಾಸ್ತಾನು ಮತ್ತು ಔ‍ಷಧಗಳನ್ನು ಪೂರೈಸಿರುವ ಕಂಪನಿಗಳಿಗೆ ಮುಂಗಡ ಪಾವತಿ ಕುರಿತು ಪತ್ರದಲ್ಲಿ ಒತ್ತಿ ಹೇಳಿದ್ದರೂ ರಾಜ್ಯ ಸರ್ಕಾರವು ಸೂಕ್ತ ಕ್ರಮ ವಹಿಸಿಲ್ಲ. ನಿಗದಿತ ಅವಧಿಯಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸುತ್ತಿಲ್ಲ. ಔಷಧ ಸರಬರಾಜುದಾರರಿಗೆ ಹಲವು ತಿಂಗಳಾದರೂ ಬಾಕಿ ಮೊತ್ತವನ್ನು ಪಾವತಿಸಿಲ್ಲ. ಹೀಗಾಗಿಯೇ ಸರಬರಾಜುದಾರರು ಔಷಧವನ್ನು ಸರಬರಾಜು ಮಾಡುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಉಂಟಾಗಲು ಇದು ಕೂಡ ಒಂದು ಕಾರಣ ಎಂದು ಗೊತ್ತಾಗಿದೆ.

ಪ್ರಮುಖವಾಗಿ ಕೋವಿಡ್‌ ಔಷಧಗಳನ್ನು ಉಗ್ರಾಣಗಳಲ್ಲಿ ತುರ್ತು ಸಂಗ್ರಹಿಸಿಡುವ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯವು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಆದರೆ ಆ ಮಾರ್ಗಸೂಚಿಗಳನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪಾಲಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

‘ಕೋವಿಡ್‌ 19ರ ಚಿಕಿತ್ಸೆಯಲ್ಲಿ ಬಳಸಲಾಗುವ ಗುಣಮಟ್ಟದ ಔಷಧಗಳನ್ನು ಉತ್ಪಾದಿಸಲು ಭಾರತದ ಔಷಧ ಉದ್ಯಮವು ಸಮರ್ಥವಾಗಿದೆ. ಆದರೆ ಕೋವಿಡ್‌ 2ನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಉಲ್ಬಣಗೊಳ್ಳುವ ಸಂದರ್ಭದಲ್ಲಿ ಕೆಲವು ಔಷಧಗಳ ಅಗತ್ಯ ಪ್ರಮಾಣವನ್ನು ಸಕಾಲಕ್ಕೆ ಲಭ್ಯವಾಗಿಸಲು ಸಾಧ್ಯವಾಗಲಿಲ್ಲ. ಮುಂಜಾಗ್ರತೆ ವಹಿಸದ ಪರಿಣಾಮ ಔಷಧಗಳ ಬೇಡಿಕೆಯು ಹಠಾತ್‌ ಹೆಚ್ಚಳವಾಯಿತು. ಔಷಧಗಳ ತಯಾರಿಕೆಗೆ ಪೂರಕವಾಗಿರುವ ಕಚ್ಛಾ ಪದಾರ್ಥಗಳ ಕೊರತೆ ಮತ್ತು ಆಮದು ಮಾಡಿಕೊಂಡ ವಸ್ತುಗಳು ಮತ್ತು ಪ್ಯಾಕಿಂಗ್‌ ಮಾಡುವಲ್ಲಿ ವಿಳಂಬವಾಯಿತು, ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಅವರು ಜುಲೈ 13ರಂದು ಬರೆದಿದ್ದ ಪತ್ರದಲ್ಲಿ ವಿವರಿಸಿದ್ದಾರೆ.

ಅಲ್ಲದೆ ಬೇಡಿಕೆಯಲ್ಲಿ ಉಂಟಾದ ಹಠಾತ್‌ ಹೆಚ್ಚಳ ಮತ್ತು ದೊಡ್ಡಮಟ್ಟದ ಬೇಡಿಕೆ ನಿರೀಕ್ಷೆಯಲ್ಲಿ ದೊಡ್ಡ ಪ್ರಮಾಣದಲ್ಲಿ ದಾಸ್ತಾನು ನಿರ್ವಹಿಸುವುದು ಕಷ್ಟಕರ ಮತ್ತು ಆರ್ಥಿಕವಾಗಿ ಲಾಭದಾಯಕವಲ್ಲ. ಹೀಗಾಗಿ ಉದ್ಯಮವು ಔಷಧಗಳನ್ನು ತಯಾರಿಸಲು ಮತ್ತು ಸಾಕಷ್ಟು ದಾಸ್ತಾನು ಮಾಡಲು ಸಾಧ್ಯವಾಗದಿರಬಹುದು. ಅದೇ ರೀತಿ ಕೋವಿಡ್‌ 19ರ ಪ್ರಕರಣಗಳು 2ನೇ ಅಲೆಯಲ್ಲಿ ಉಲ್ಬಣಗೊಳ್ಳುವಾಗಲೂ ಉದ್ಯಮಕ್ಕೆ ಅಗತ್ಯವಾದ ಹೂಡಿಕೆ ಮಾಡಲು ಮತ್ತು ನಿರ್ದಿಷ್ಟವಾಗಿ ಔಷಧಗಳ ಉತ್ಪಾದನೆ ಹೆಚ್ಚಿಸಲು ಮುಂಗಡ ಪಾವತಿ ರೂಪದಲ್ಲಿ ಸರ್ಕಾರದ ಬೆಂಬಲ ಅಗತ್ಯವಿದೆ ಎಂದೂ ಪತ್ರದಲ್ಲಿ ಹೇಳಲಾಗಿತ್ತು.

ಆದರೆ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈಗಾಗಲೇ ಕೋವಿಡ್‌ ಔಷಧಗಳನ್ನು ಸರಬರಾಜು ಮಾಡಿರುವ ಕಂಪನಿಗಳಿಗೆ ಕೋಟ್ಯಂತರ ರುಪಾಯಿ ಮೊತ್ತವನ್ನು ಪಾವತಿ ಮಾಡದೇ ಬಾಕಿ ಇಟ್ಟುಕೊಂಡಿದೆ. ಇದು ಮುಂದಿನ ದಿನಗಳಲ್ಲಿ ಕಂಪನಿಗಳು ಸಕಾಲದಲ್ಲಿ ಔಷಧಗಳನ್ನು ಪೂರೈಸಲು ಹಿಂದೇಟು ಹಾಕುವ ಸಾಧ್ಯತೆಗಳೇ ಹೆಚ್ಚಿವೆ ಎನ್ನಲಾಗಿದೆ.

ಔಷಧಗಳ ಹಠಾತ್‌ ಏರಿಕೆ ಸಂದರ್ಭದಲ್ಲೂ ಪೂರೈಕೆಯನ್ನು ನಿರಂತರವಾಗಿ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಸೂಚಿಸಿತ್ತಲ್ಲದೆ ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ನಕಲಿ ಔಷಧಗಳ ಉತ್ಪಾದನೆ ಆಗುವ ಸಾಧ್ಯತೆಯೂ ಇರುವುದರಿಂದ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಔಷಧಗಳ ದಾಸ್ತಾನು ಸಾಮರ್ಥ್ಯವನ್ನು ಹೆಚ್ಚಳಗೊಳಿಸಬೇಕು ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಔಷಧಗಳ ಪೂರೈಕೆಯು ಅನಿಯಮಿತವಾಗಿದೆಯಲ್ಲದೆ ಅದರ ಪೂರೈಕೆಯು ಕಡಿಮೆ ಪ್ರಮಾಣದಲ್ಲಿದೆ ಎಂದು ‘ದ ಹಿಂದೂ’ ವರದಿ ಮಾಡಿತ್ತು. ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಔಷಧಗಳ ಲಭ್ಯತೆ ಇಲ್ಲದ ಕಾರಣ ಹೊರಗಿನಿಂದ ಖರೀದಿಸಲು ಚೀಟಿ ಬರೆದುಕೊಡುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಔಷಧಗಳ ಬೇಡಿಕೆ ಸಲ್ಲಿಸಿದ 4 ತಿಂಗಳಾದರೂ ಆಸ್ಪತ್ರೆಗಳಿಗೆ ಸರಬರಾಜಾಗುತ್ತಿಲ್ಲ. ಹೊಲಿಗೆ ಮತ್ತು ಬ್ಯಾಂಡೇಜ್ ಮೆಟೀರಿಯಲ್, ಕೈಗವಸು (ಗ್ಲೌಸ್) ಮತ್ತು ಮೂಲ ಔಷಧಗಳು ಸೇರಿದಂತೆ ಎಲ್ಲಾ ಅಗತ್ಯ ವೈದ್ಯಕೀಯ ಸಾಮಗ್ರಿಗಳು ಮೇ ತಿಂಗಳಿನಿಂದಲೂ ಕೊರತೆಯಲ್ಲಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. “ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಜೂನ್-ಜುಲೈನಿಂದ ಕೋವಿಡ್-ಅಲ್ಲದ ಸೇವೆಗಳು ಪುನರಾರಂಭಗೊಂಡಿರುವುದರಿಂದ ದೈನಂದಿನ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಮತ್ತು ಇದು ಕೋವಿಡ್ ಪೂರ್ವದ ದಿನಗಳಲ್ಲಿ ಕಂಡು ಬಂದಿದ್ದಕ್ಕೆ ಸಮನಾಗಿದೆ.

ಆದರೆ ‘ನಮ್ಮಲ್ಲಿ ಅಗತ್ಯವಿರುವ ಔಷಧಗಳು ಇಲ್ಲ ಮತ್ತು ರೋಗಿಗಳು ಹೊರಗಿನಿಂದ ಖರೀದಿಸಲು ಹೊರಗಡೆ ಖರೀದಿಸಲು ಬರೆದು ಕೊಡುವಾಗ ರೋಗಿಗಳ ಕುಟುಂಬದವರ ಆಕ್ರೋಶಕ್ಕೆ ಗುರಿಯಾಗುತ್ತಿದ್ದೇವೆ, ‘ ಎಂದು ಉತ್ತರ ಕರ್ನಾಟಕದ ಜಿಲ್ಲಾ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರ ಹೇಳಿಕೆಯನ್ನೂ ‘ದ ಹಿಂದೂ’ ಪ್ರಕಟಿಸಿದೆ.

ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (ಕೆಎಸ್‌ಎಂಎಸ್‌ಸಿಎಲ್) ನಿಂದ ಟೆಂಡರ್‌ಗಳನ್ನು ನೀಡದಿರುವುದು ಔಷಧಗಳ ಕೊರತೆಗೆ ಕಾರಣವಾಗಿದೆ ಎಂಬ ಆರೋಪವೂ ವೈದ್ಯ ಸಮೂಹದಿಂದ ಕೇಳಿ ಬಂದಿದೆ. “ಇದರ ಹೊರತಾಗಿ, ಸ್ಥಳೀಯ ಆಸ್ಪತ್ರೆಗಳಲ್ಲಿ ಔಷಧಿಗಳನ್ನು ಖರೀದಿಸಲು ಜಿಲ್ಲಾ ಆಸ್ಪತ್ರೆಗಳಿಗೆ ರಾಷ್ಟ್ರೀಯ ಉಚಿತ ಔಷಧ ಸೇವೆ (NFDS) ನಿಧಿಯನ್ನು ಕಳೆದ ಆರು ತಿಂಗಳಲ್ಲಿ ಬಿಡುಗಡೆ ಮಾಡಲಾಗಿಲ್ಲ” ಎಂದು ಜಿಲ್ಲಾ ಆಸ್ಪತ್ರೆಯ ಹಿರಿಯ ಅರಿವಳಿಕೆ ತಜ್ಞರು ವೈದ್ಯರೊಬ್ಬರು ಹೇಳುತ್ತಾರೆ.

ಈ ಯೋಜನೆಯಡಿ ಜಿಲ್ಲಾ ಆಸ್ಪತ್ರೆಗಳಿಗೆ 25 ಲಕ್ಷ ಮತ್ತು ತಾಲ್ಲೂಕು ಆಸ್ಪತ್ರೆಗಳಿಗೆ ₹ 10 ಲಕ್ಷದ ಸಾಮಾನ್ಯ ಹಂಚಿಕೆಯಲ್ಲಿಯೇ ಕಡಿತಗೊಳಿಸಲಾಗಿದೆ. ಕ್ರಮವಾಗಿ ಜಿಲ್ಲಾ ಆಸ್ಪತ್ರೆಗಳಿಗ 10 ಲಕ್ಷ ಮತ್ತು ತಾಲೂಕು ಆಸ್ಪತ್ರೆಗಳಿಗೆ ₹ 5 ಲಕ್ಷಕ್ಕೆ ಇಳಿಸಲಾಗಿದೆ ಎಂದು ತಿಳಿದು ಬಂದಿದೆ.

“ಪ್ರತಿದಿನ 1,500 ಕ್ಕಿಂತ ಹೆಚ್ಚು ರೋಗಿಗಳು ಬರುತ್ತಿದ್ದಾರೆ ಮತ್ತು ಇದೇ ಸಮಯದಲ್ಲಿ 350 ಕ್ಕೂ ಹೆಚ್ಚು ಒಳರೋಗಿಗಳಾಗಿ ದಾಖಲಾಗುತ್ತಿದ್ದಾರೆ. ಎನ್‌ಎಫ್‌ಡಿಎಸ್‌ ಅಡಿ ನೀಡುತ್ತಿರುವ 10 ಲಕ್ಷ ರು. ಗಳು ಒಂದು ವಾರದವರೆಗೂ ಔಷಧದ ಅಗತ್ಯವನ್ನು ಪೂರೈಸಲು ಸಾಕಾಗುವುದಿಲ್ಲ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ವೈದ್ಯಾಧಿಕಾರಿಯೊಬ್ಬರು.

SUPPORT THE FILE

Latest News

Related Posts