ಬೆಂಗಳೂರು; ಹದಿನೈದನೇ ಹಣಕಾಸು ಆಯೋಗ 2020–21ನೇ ಸಾಲಿನ ವರದಿಯಲ್ಲಿ ಕರ್ನಾಟಕಕ್ಕೆ ಆರೋಗ್ಯ ವಲಯಕ್ಕೆ 2021-22ರಿಂದ 2025-26ರ ವರ್ಷದಲ್ಲಿ 2,929 ಕೋಟಿ ರು. ಶಿಫಾರಸ್ಸು ಮಾಡಿದೆಯಾದರೂ 2021-22ನೇ ಸಾಲಿಗೆ ಸಂಬಂಧಿಸಿದಂತೆ 552.00 ಕೋಟಿ ರು. ಈವರೆವಿಗೂ ಬಿಡುಗಡೆಗೊಂಡಿಲ್ಲ.
ಕೋವಿಡ್ ನಿರ್ವಹಣೆ ಸಂಬಂಧ ರಾಜ್ಯ ಸರ್ಕಾರವು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ. ಇಂತಹ ಹೊತ್ತಿನಲ್ಲಿ 15ನೇ ಹಣಕಾಸು ಆಯೋಗವು ಆರೋಗ್ಯ ವಲಯಕ್ಕೆ ಮಾಡಿದ್ದ ಶಿಫಾರಸ್ಸಿನಂತೆ 552.00 ಕೋಟಿ ರು. ಬಿಡುಗಡೆ ಮಾಡದೆಯೇ ಶಿಫಾರಸ್ಸು ಕಾಗದದ ಮೇಲಷ್ಟೇ ಉಳಿಸಿಕೊಂಡಿದೆ. ಕೇಂದ್ರ ಸರ್ಕಾರವು ಅನುದಾನವನ್ನು ಇದುವರೆಗೂ ಬಿಡುಗಡೆ ಮಾಡದಿದ್ದರೂ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರು ದನಿ ಎತ್ತಿಲ್ಲ.
2021-22ನೆ ಸಾಲಿಗೆ 552.00 ಕೋಟಿ, 2022-23ಕ್ಕೆ 552.00 ಕೋಟಿ, 2023-24ನೇ ಸಾಲಿಗೆ 579 ಕೋಟಿ, 2024-25ನೇ ಸಾಲಿಗೆ 608 ಕೋಟಿ, 2025-26ಕ್ಕೆ 638 ಕೋಟಿ ಸೇರಿದಂತೆ ಒಟ್ಟು 2,929 ಕೋಟಿ ರು.ಗಳನ್ನು 15ನೇ ಹಣಕಾಸು ಆಯೋಗವು ರಾಜ್ಯದ ಆರೋಗ್ಯ ವಲಯಕ್ಕೆ ಶಿಫಾರಸ್ಸು ಮಾಡಿದೆ.
2021-22ನೇ ಸಾಲಿಗೆ ಶಿಫಾರಸ್ಸಾಗಿರುವ 552 ಕೋಟಿ ರು. ಕೇಂದ್ರ ಸರ್ಕಾರದಿಂದ ಇನ್ನೂ ಬಿಡುಗಡೆಯಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಈ ಮೊತ್ತವನ್ನು ಕೇಂದ್ರದಿಂದ ಪಡೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ನೀಡಬೇಕು ಎಂದು ಆರ್ಥಿಕ ಇಲಾಖೆಯು ಆರೋಗ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದೆ ಎಂದು ತಿಳಿದು ಬಂದಿದೆ.
ಸಾಂಕ್ರಾಮಿಕ ಪ್ರಭಾವದ ತೀವ್ರತೆಯಿಂದ ವಿವಿಧ ರಾಜ್ಯಗಳು ವಿವಿಧ ಹಂತಗಳಲ್ಲಿ ಸುಧಾರಿಸಿಕೊಳ್ಳುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ಬಡವರಿಗೆ ಮತ್ತು ಇತರ ಹಣಕಾಸು ಏಜೆಂಟರಿಗೆ ಆರ್ಥಿಕ ಬೆಂಬಲ ನೀಡಬೇಕಿದೆ. ರಾಜ್ಯ ಸರ್ಕಾರವು ಈಗಾಗಲೇ ಸಾಕಷ್ಟು ಖರ್ಚಿನ ಹೊರೆ ಹೊಂದಿದೆ. ಆರ್ಥಿಕ ಕುಂಠಿತ ಚಟುವಟಿಕೆಯಿಂದಾಗಿ ದೊಡ್ಡಪ್ರಮಾಣದಲ್ಲಿ ತೆರಿಗೆ ಮತ್ತು ಇತರ ಆದಾಯದ ಕೊರತೆಯೂ ಸೃಷ್ಟಿಯಾಗಿದೆ.
ಈ ಹೊತ್ತಿನ ಬಿಕ್ಕಟ್ಟಿಗೆ ಹಣಕಾಸಿನ ಸ್ಪಂದನೆ ಹೆಚ್ಚು ಸೂಕ್ಷ್ಮವಾಗಿರಬೇಕು. ಹಣಕಾಸಿನ ಸಹಾಯ ಪ್ರಕ್ರಿಯೆಯ ಗಾತ್ರವನ್ನು ಮಾತ್ರವಲ್ಲದೆ ವಿಧಿವಿಧಾನಗಳನ್ನು ಗಮನವಿಟ್ಟು ಎಚ್ಚರಿಕೆಯಿಂದ ನೋಡಬೇಕು. ಆದರೆ ಕೇಂದ್ರ ಸರ್ಕಾರವು ಆರೋಗ್ಯ ವಲಯಕ್ಕೆ ಶಿಫಾರಸ್ಸು ಮಾಡಿರುವ ಹಣಕಾಸನ್ನು ಬಿಡುಗಡೆ ಮಾಡದಿರುವುದು ಹೊಣೆಗಾರಿಕೆ ನಿಭಾಯಿಸುವಲ್ಲಿ ದೊಡ್ಡ ಹಿನ್ನಡೆ ಅನುಭವಿಸುತ್ತಿದೆ.
15ನೇ ಹಣಕಾಸು ಆಯೋಗ 2020–21ನೇ ಸಾಲಿನ ವರದಿಯಲ್ಲಿ ಕರ್ನಾಟಕಕ್ಕೆ ರೂ.5,495 ಕೋಟಿ ನೀಡಲು ಶಿಫಾರಸು ಮಾಡಿದೆ. ಈ ಶಿಫಾರಸ್ಸನ್ನು ಒಪ್ಪಿಕೊಂಡು 2021–22 ಸಾಲಿನ ಬಜೆಟ್‌ನಲ್ಲಿ ವಿಶೇಷ ಅನುದಾನ ಪ್ರಕಟಿಸಬೇಕು ಎಂದು ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿತ್ತು. ಆದರೆ ಆಗಸ್ಟ್ ಮತ್ತು ಸೆಪ್ಟಂಬರ್‌ವರೆಗಿನ ಅವಧಿಯಲ್ಲಿ ಶೇ. 32ರಷ್ಟು ಮಾತ್ರ ಅನುದಾನ ಬಿಡುಗಡೆಯಾಗಿದೆ ಎಂದು ಗೊತ್ತಾಗಿದೆ.
ಆಗಸ್ಟ್ 4ರ ಅಂತ್ಯಕ್ಕೆ ರಾಜ್ಯ ಸರ್ಕಾರವು 2,114.5 ಕೋಟಿ ರು.ಗಳನ್ನು 6 ಲೆಕ್ಕ ಶೀರ್ಷಿಕೆಗಳಿಗೆ ಬಿಡುಗಡೆ ಮಾಡಿದೆ. ರಾಜ್ಯ ವಿಪತ್ತು ನಿರ್ವಹಣೆ ನಿಧಿಗೆ ಅಂದಾಜು 1,000 ಕೋಟಿ ರು.ಗಳನ್ನು ರಾಷ್ಟ್ರೀಯ ವಿಪತ್ತು ನಿಧಿ ಅಡಿಯಲ್ಲಿ ಬಿಡುಗಡೆಯಾಗಿದೆ.
ಕಳೆದ ವರ್ಷದ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಭೀಕರ ಪ್ರವಾಹ ಎದುರಾದಾಗ ಕೇಂದ್ರ ಸರ್ಕಾರ ರಾಜ್ಯಕ್ಕೆ ಮೊದಲ ಹಂತದಲ್ಲಿ 1,369 ಕೋಟಿ ಹಾಗೂ ಎರಡನೇ ಹಂತದಲ್ಲಿ 2,261 ಕೋಟಿ ಬಿಡುಗಡೆ ಮಾಡಿತ್ತು.