ಬೆಂಗಳೂರು; 2019-20ರಲ್ಲಿ 14 ಉದ್ದೇಶ ಶೀರ್ಷಿಕೆಯಡಿ ಆಯವ್ಯಯ ಹಂಚಿಕೆಯಡಿ ಶೇ.90ಕ್ಕಿಂತ ಹೆಚ್ಚು ಹಣ ಬಳಕೆ ಮಾಡಿದ್ದ ರಾಜ್ಯ ಬಿಜೆಪಿ ಸರ್ಕಾರವು ವಿದ್ಯಾರ್ಥಿ ವೇತನ ಮತ್ತು ಪ್ರೋತ್ಸಾಹಕಗಳಿಗೆ ನಿಗದಿಪಡಿಸಿದ್ದ ವೆಚ್ಚವನ್ನು ಬಳಸಿಕೊಳ್ಳಲಿಲ್ಲ. ಹೀಗಾಗಿ ಫಲಾನುಭವಿಗಳು ಸೌಲತ್ತುಗಳಿಂದ ವಂಚಿತರಾದರು ಎಂಬ ಸಂಗತಿಯನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿಯು ಹೊರಗೆಡವಿದೆ.
2020ರ ಮಾರ್ಚ್ ಅಂತ್ಯಕ್ಕೆ ಸಂಬಂಧಿಸಿದಂತೆ ರಾಜ್ಯದ ಹಣಕಾಸಿನ ವ್ಯವಹಾರಗಳ ಕುರಿತು ರಾಜ್ಯ ವಿಧಾನಮಂಡಲಕ್ಕೆ ಸಲ್ಲಿಸಿರುವ ಸಿಎಜಿ ವರದಿಯು ವಿದ್ಯಾರ್ಥಿಗಳ ಮೇಲಿನ ರಾಜ್ಯ ಬಿಜೆಪಿ ಸರ್ಕಾರದ ಕಾಳಜಿ ಹೇಗಿತ್ತು ಎಂಬುದನ್ನು ಬಹಿರಂಗಗೊಳಿಸಿದೆ.
2019-20ರಲ್ಲಿ ವಿವಿಧ ಉದ್ದೇಶ ಶೀರ್ಷಿಕೆಗಳಡಿ 2,63,804.67 ಕೋಟಿಗಳ ಒಟ್ಟು ಆಯವ್ಯಯದಲ್ಲಿ 2,33,978.23 ಕೋಟಿ ಗಳು (ಶೇ.88.69) ವೆಚ್ಚವಾಗಿದೆ. ಆದರೆ ವಿದ್ಯಾರ್ಥಿ ವೇತನ, ಪ್ರೋತ್ಸಾಹಕಗಳು ಸೇರಿದಂತೆ ಒಟ್ಟು 17 ಉದ್ದೇಶ ಶೀರ್ಷಿಕೆಗಳಡಿ ಯಾವುದೇ ಶೀರ್ಷಿಕೆಯಡಿ ಆಯವ್ಯಯ ಹಂಚಿಕೆಯನ್ನು ಪೂರ್ಣವಾಗಿ ಖರ್ಚು ಮಾಡಿಲ್ಲ ಎಂದು ಸಿಎಜಿ ವರದಿ ಮುನ್ನೆಲೆಗೆ ತಂದಿದೆ.
ಉಳಿದ 154 ಉದ್ದೇಶ ಶೀರ್ಷಿಕೆಗಳಡಿ ಹಂಚಿಕೆಯು ಶೇ.90ಕ್ಕಿಂತ ಹೆಚಚು ಹಣ ಬಳಕೆಯಾಗಿದೆಯಾದರೂ ವಿದ್ಯಾರ್ಥಿ ವೇತನ, ಪ್ರೋತ್ಸಾಹಕಗಳು, ಗುತ್ತಿಗೆ, ಹೊರಗುತ್ತಿಗೆ ಮತ್ತು ಬಂಡವಾಳ ವೆಚ್ಚಗಳ ಮೂರು ಶೀರ್ಷಿಕೆಗಳಡಿ ಕ್ರಮವಾಗಿ ಶೇ.49, 88 ಮತ್ತು 75ರಷ್ಟು ಬಳಕೆಯಾಗಿದೆ. ವಿದ್ಯಾರ್ಥಿ ವೇತನ ಮತ್ತು ಪ್ರೋತ್ಸಾಹಕಗಳಿಗೆಂದು ಆಯವ್ಯಯದಲ್ಲಿ ನಿಗದಿಪಡಿಸಿದ್ದ 336.94 ಕೋಟಿ ರು. ಪೈಕಿ 165.00 ಕೋಟಿಯಷ್ಟು ಮಾತ್ರ (ಶೇ. 48.97) ವೆಚ್ಚ ಮಾಡಿತ್ತು.
‘ವಿದ್ಯಾರ್ಥಿ ವೇತನ ಮತ್ತು ಪ್ರೋತ್ಸಾಹಕಗಳಿಗೆ ನಿಗದಿಪಡಿಸಿದ್ದ ವೆಚ್ಚವನ್ನು ರಾಜ್ಯವು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ ಫಲಾನುಭವಿಗಳು ಸವಲತ್ತುಗಳಿಂದ ವಂಚಿತರಾದರು,’ ಎಂದು ಸಿಎಜಿ ವರದಿ ಉಲ್ಲೇಖಿಸಿದೆ.
ಹಾಗೆಯೇ 2018-19 ಮತ್ತು 2019-20ರ ಅವಧಿಯಲ್ಲಿನ ರಾಜಸ್ವ ವೆಚ್ಚದಲ್ಲಿನ ವ್ಯತ್ಯಾಸವನ್ನೂ ಸಿಎಜಿ ವರದಿಯು ವಿಶ್ಲೇಷಿಸಿದೆ. ನೀರು ಸರಬರಾಜು ಮತ್ತು ನೈರ್ಮಲ್ಯದ ಅಡಿಯಲ್ಲಿನ ರಾಜಸ್ವ ವೆಚ್ಚವು ಕುಸಿಯಿತು ಎಂದು ಹೇಳಿರುವ ಸಿಎಜಿ ವರದಿಯು ಇದು ಮುಖ್ಯವಾಗಿ ಗ್ರಾಮೀಣ ನೀರು ಸರಬರಾಜು ಕಾರ್ಯಕ್ರಮಗಳ ಅಡಿಯಲ್ಲಿ ಕಡಿಮೆಯಾದ್ದರಿಂದ ಇದು ಉಂಟಾಗಿದೆ. ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣದ ವೆಚ್ಚವು ಹಿಂದಿನ ವರ್ಷಕ್ಕೆ ಹೋಲಿಸಿದರೆ 2019-20ರಲ್ಲಿ ಇಳಿಕೆಯನ್ನು ದಾಖಲಿಸಿದೆ.
2018-19ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ 8,487.81 ಕೋಟಿ ರು.ಗಳು ವೆಚ್ಚವಾಗಿದ್ದರೆ 2019-20ರಲ್ಲಿ 7,167.25 ಕೋಟಿ ರು.ವೆಚ್ಚವಾಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 1,320.56 ಕೋಟಿಯಷ್ಟು ವ್ಯತ್ಯಾಸವಿರುವುದು ಸಿಎಜಿ ವರದಿಯಿಂದ ಕಂಡು ಬಂದಿದೆ.
ವೇತನದ ಮೇಲಿನ ವೆಚ್ಚವು 2015-16ರಲ್ಲಿ 20,774 ಕೋಟಿಯಿದ್ದು 2019-20ರಲ್ಲಿ 31,521 ಕೋಟಿ ರು.ಗೇರಿದೆ. ಇದು ಹಿಂದಿನ ವರ್ಷಕ್ಕಿಂತ ಶೇ.12ರಷ್ಟು ಹೆಚ್ಚಾಗಿದೆ. ಈ ವೆಚ್ಚವು ಪಂಚಾಯತ್ ರಾಜ್ ಸಂಸ್ಥೆಗಳ ವೇತನವನ್ನು ಒಳಗೊಂಡಿದೆಯೇ ವಿನಃ ಸ್ಥಳೀಯ ಸಂಸ್ಥೆಗಳದ್ದಲ್ಲ. ಅಲ್ಲದೆ 2019-20ರಲ್ಲಿ ರಾಜಸ್ವ ವೆಚ್ಚದ ಶೇ. 18ರಷ್ಟಿದ್ದು ಹಿಂದಿನ ವರ್ಷಕ್ಕಿಂತ ಶೇ.ಒಂದರಷ್ಟು ಹೆಚ್ಚಾಗಿದೆ. ಆದರೆ ಪಂಚಾಯತ್‌ರಾಜ್ ಸಂಸ್ಥೆಗಳ ವೇತನ (16,960 ಕೋಟಿ) ವೆಚ್ಚವನ್ನು ದಾಖಲಿಸಿಲ್ಲ. ಈ ಸಂಸ್ಥೆಗಳಿಗೆ ಸಂಬಂಧಿಸಿದ ವೇತನವನ್ನು ಸಹಾಯಾನುದಾನವಾಗಿ ಬಿಡುಗಡೆ ಮಾಡಿರುವುದರಿಂದ ಒಟ್ಟು ವೇತನ ವೆಚ್ಚವು ಹಣಕಾಸು ಲೆಕ್ಕಗಳಲ್ಲಿ ಪ್ರತಿಫಲಿಸಿಲ್ಲ.
2019-20ರಲ್ಲಿ ದಿನಗೂಲಿ ಮತ್ತು ಗುತ್ತಿಗೆ/ಹೊರಗುತ್ತಿಗೆ ನೌಕರರ ವೆಚ್ಚವು 922.63 ಕೋಟಿ ಇದ್ದು ಇದು ಹಿಂದಿನ ವರ್ಷಕ್ಕಿಂತ 209 ಕೋಟಿಯಷ್ಟು ಹೆಚ್ಚಾಗಿದೆ. ಅಲ್ಲದೆ 2019-20ರಲ್ಲಿ ನಿವೃತ್ತಿ ವೇತನ ವೆಚ್ಚವು 18,404 ಕೋಟಿಯಷ್ಟಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ 3,295 ಕೋಟಿಯಷ್ಟು ಅಧಿಕವಾಗಿದೆ ಎಂದು ಸಿಎಜಿ ವರದಿ ಹೇಳಿದೆ.
ರಾಜ್ಯ ಬಿಜೆಪಿ ಸರ್ಕಾರವು ಇದೀಗ ಹೊರಗುತ್ತಿಗೆ, ದಿನಗೂಲಿ ನೌಕರರ ವೇತನ ಸೇರಿದಂತೆ ಒಟ್ಟು 6 ವಿಭಾಗಗಳಲ್ಲಿನ 1.28 ಲಕ್ಷ ಕೋಟಿ ರು. ಮೊತ್ತದ ಅನುತ್ಪಾದಕ ವೆಚ್ಚವನ್ನು ಕಡಿತಗೊಳಿಸಲು ಮುಂದಾಗಿದೆ. ಹೊರಗುತ್ತಿಗೆ, ದಿನಗೂಲಿ ವೇತನ 5157783.58 ಲಕ್ಷ ರು., (ಶೇ.20.95) ಪಿಂಚಣಿ ಮತ್ತು ನಿವೃತ್ತಿ ಭತ್ಯೆ 2421183.74 ಲಕ್ಷ ರು.(ಶೇ.9.83) ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಇತ್ತೀಚೆಗಷ್ಟೇ ಸರ್ಕಾರದ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳಿಗೆ ಬರೆದಿದ್ದ ಪತ್ರವನ್ನು ಸ್ಮರಿಸಬಹುದು.